ಬುಧವಾರ, ಜುಲೈ 27, 2011

ಯಡ್ಯೂರಪ್ಪನಿಗೆ ನೊಬೆಲ್ ಅವಾರ್ಡು

ಎಂದಿನಂತೆ ನಮ್ಮ ಕೆಂಚ, ಸೀನ, ಸಿದ್ದ, ನಾಣಿ ಎಲ್ಲಾರೂ ಬಂದು ಅವರ ಮಾಮೂಲಿ 'ಅಡ್ಡಾ' ರಾಮಣ್ಣನ ಟೀ ಅಂಗಡಿ ಮುಂದೆ ಕೂತ್ಕೊಂಡು ಹರಟೆ ಹೊಡೀತಾ ಇದ್ರು. ನಮ್ ಸಿದ್ದ ಅಲ್ಲಿ ಇದ್ದ ಅಂದ್ಮೇಲೆ ರಾಜಕೀಯದ ಮಾತು ಬರ್ಲೇಬೇಕು.

ಸಿದ್ದ : ಲೇ ಕೆಂಚ ಇವತ್ತು ಪೇಪರ್ ನೋಡ್ದೆನ್ಲಾ ?
ಕೆಂಚ : ಹೂ ಕನ್ಲಾ ನೋಡ್ದೆ, ಪಾಪ ನಮ್ ಯಡ್ಯೂರಪ್ನೋರಿಗೆ ಶ್ಯಾನೆ ಕಾಟ ಕೊಡ್ತಾವ್ರೆ. ಈ ಸಂತೋಷ್ ಹೆಗ್ಡೆ                 ಲೋಕಾಯುಕ್ತ      ಆದಾಗಿಂದ ನಮ್ ಸಿಎಂ ಸಾಹೇಬ್ರು ಮುಖ್ದಾಗೆ ಸಂತೋಷಾನೇ ಕಾಣಾಕಿಲ್ಲ.........ಸದ್ಯ ಇನ್ನೊಂದು ವಾರಕ್ಕೆ ಆವಯ್ಯ ರಿಟೈರ್ ಆಯ್ತಾರೆ ಇನ್ನಾರಾ ನಮ್ ಸಿಎಮ್ಮು ಸುಖವಾಗಿ ಇರ್ಬೌದು ಅಂದ್ಕೊಂಡ್ರೆ ಅದೇನೋ "ಗಣಿ ಬಾಂಬ್" ಹಾಕ್ಬಿಟ್ರಲ್ಲ ಸಂತೋಷ್ ಹೆಗ್ಡೆ ಅವ್ರು.
ಸೀನ : ಅಲ್ಲಲೇ ಕೆಂಚ ನಮ್ ಸಿಎಂ ಸಾಹೇಬ್ರು ಮುಖ್ದಾಗೆ ಯಾವಾಗ್ಲಾ ಸಂತೋಷ ನೋಡಿದ್ದೇ ನೀನು!? ಆವಯ್ಯ ಯಾವಾಗಲೂ ಮುಖ ಗಂಟ್ ಹಾಕ್ಕಂಡೆ ಇರ್ತಾರೆ....... 
ಸಿದ್ದ : ನಿಜ ಕಣ್ಲಾ ಸೀನ......ಆವಯ್ಯ ನಗೋದೇ ಕಷ್ಟ ಕಣ್ಲಾ ಅದ್ಕೆ ಅವ್ರು ಸದಾನಂದ ಗೌಡ್ರುನ್ನ ಪಕ್ಕಕ್ಕೆ ಇಟ್ಕಂಡಿದ್ರು.....ಸದಾನಂದ ಗೌಡ್ರು ಯಾವಾಗ್ಲೂ ನಗ್ತಾ ಇರ್ತಾರೆ, ಆದ್ರೆ ಈಶ್ವರಪ್ಪ ಬಂದು ಸದಾನಂದ ಗೌಡ್ರುನ್ನ ಎಬ್ಬಿಸಿ ಅವ್ರ ಸೀಟ್ನಾಗೆ ಇವ್ರು ಕುಂತ್ಕಂಬುಟ್ರು. 
ಕೆಂಚ : ಅದೇನಾರಾ ಆಗ್ಲಿ ಬುಡ್ಲಾ.....ಆದ್ರೂ ನಮ್ ಯಡ್ಯೂರಪ್ನೋರು ಇಷ್ಟೆಲ್ಲಾ ಒಳ್ಳೆ ಕೆಲ್ಸ ಮಾಡುದ್ರು ......ಆದ್ರೆ ಈ ಟಿವಿನೋರು, ಪೇಪರ್ನೋರು ನಮ್ ಸಿಎಂ ಬಗ್ಗೆ ಬರೀ ಕೆಟ್ಟದ್ದೇ ಹಾಕ್ತಾರೆ..ಭಾಳಾ ಮೋಸ.
ಸಿದ್ದ : ಸಿಎಂ ಸಾಹೇಬ್ರು ನಿಂಗೂ ಏನಾರಾ ಕಾಸು-ಗೀಸು  ಕೊಟ್ರೆನ್ಲಾ ಕೆಂಚ ....ಈಪಾಟಿ ವಹಿಸ್ಕಂತ ಇದ್ದೀಯ ಆವಯ್ಯನ್ನ.
ಕೆಂಚ : ಅದ್ಕಲ್ಲಾ ಕಣ್ಲಾ ಸಿದ್ದ....ನನ್ ಹೆಂಡ್ರು ಹುಟ್ಟಿದ ಹಬ್ಬಕ್ಕೆ ಸೀರೆ ಕೊಡ್ಸು ಅಂತ ಪ್ರಾಣ ತೆಗೀತಾ ಇದ್ಲು , ಕಾಸಿಲ್ಲ ಕಣಮ್ಮಿ ಬಾರೋ ವರ್ಷ ಕೊಡುಸ್ತೀನಿ ಅಂದ್ರೆ ಜಗಳಕ್ಕೆ ಬತ್ತಿದ್ಲು. ಅದೇ ಟೈಮ್ಗೆ ನಮ್ ಸಿಎಂ ಸಾಹೇಬ್ರು ದೇವ್ರು ಬಂದಂಗೆ ಬಂದು "ಭಾಗ್ಯಲಕ್ಷ್ಮಿ" ಸ್ಕೀಮ್ನಾಗೆ ಸೀರೆ ಹಂಚುದ್ರು . ನನ್ ಮಗ್ಳು ಸೈಕಲ್ ಕೊಡ್ಸು ಇಲ್ಲಾಂದ್ರೆ ಸ್ಕೂಲಿಗೆ ಹೋಗಕಿಲ್ಲ ಅಂತಿದ್ಲು. ನಮ್ ಯಡ್ಯೂರಪ್ನೋರು ಸೈಕಲ್ ಕೊಟ್ಟು ಪುಣ್ಯ ಕಟ್ಕಂಡರು. ಕಷ್ಟಕಾಲ್ದಾಗೆ ನಮ್ ಸಿಎಂ ಸಾಹೇಬ್ರು ದ್ಯಾವ್ರು ಬಂದಂಗೆ ಬಂದು ಸಹಾಯ ಮಾಡವ್ರೆ...ಈಗ ಅವ್ರು ಕಷ್ಟದಾಗೆ ಅವ್ರೆ, ನಾವು ಸಪೋಲ್ಟ್ ಮಾಡ್ನಿಲ್ಲ ಅಂದ್ರೆ ಸಿವ ಮೆಚ್ತಾನಾ!!
ಸಿದ್ದ : ಅಲ್ಲಾ ಕಣಲೇ ಕೆಂಚ ಸೀರೆ, ಚಡ್ಡಿ ಕೊಟ್ರು ಅಂತ ಅವ್ರು ಮಾಡಿದ್ನೆಲ್ಲ ಸರೀ ಅನ್ನಕೆ ಆಯ್ತದಾ? ಅದ್ನ ನಿಮ್ ಸಿವ ಮೆಚ್ತಾನಾ!!??
ಕೆಂಚ : ಯಡ್ಯೂರಪ್ಪ ನಮ್ 'ಧಣಿ' ಕಣ್ಲಾ ಅವ್ರು ಗಣಿ ದುಡ್ದಾರಾ ತಿನ್ಲಿ ಏನಾರಾ ತಿನ್ಲಿ ನಮ್ ಸಪೋಲ್ಟು ಮಾತ್ರ ಅವರ್ಗೆ ಕಣ್ಲಾ 
ಸೀನ : ಇನ್ನೊಂದು ಇಶ್ಯ ಪೇಪರ್ನಾಗೆ ಬಂದೈತೆ ನೋಡ್ದ ಸಿದ್ದ. ನಮ್ ಸಿಎಂ ಯಡ್ಯೂರಪ್ನೋರ್ಗೆ ನೊಬೆಲ್ ಅವಾರ್ಡ್ ಕೊಡ್ಬೇಕಿತ್ತಂತೆ.

ಅಷ್ಟೊತ್ತಂಕ ಸುಮ್ನೆ ಕುಂತಿದ್ದ ನಾಣಿ ಎದ್ದು ನಿಂತ್ಕಂಡು ಒಂದೇ ಒಂದು ಪಂಚಿಂಗ್ ಡೈಲಾಗ್ ಹೊಡ್ದ " ಇಷ್ಟೆಲ್ಲಾ ಗೋಲ್ಮಾಲ್ ಮಾಡಿರೋ ನಮ್ ಸಿಎಂಗೆ ನೊಬೆಲ್ ಅವಾರ್ಡ್ ಅಲ್ಲ NO BAIL AWARD ಕೊಡ್ಬೇಕು " ಅಂದ.

ಯಾಕೋ ವಿಷ್ಯ ಗರಂ ಆಗ್ತಾ ಇದೆ ಅಂತ ಹೆದರಿದ ಟೀ ಅಂಗಡಿ ರಾಮಣ್ಣ ನಾಲ್ಕೂ ಜನರಿಗೆ ಫ್ರೀಯಾಗಿ ಗರಮಾಗರಂ ಟೀ ಕೊಟ್ಟು ಕಳಿಸಿದ. 

ಮಂಗಳವಾರ, ಜುಲೈ 26, 2011

ಇಂದಿಗೆ ಒಂದು ವರ್ಷದ ಹರ್ಷ

                          ನನ್ನೆಲ್ಲಾ ನಲ್ಮೆಯ ಗೆಳೆಯರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು. ಇಂದು ೨೭ನೇ  ಜುಲೈ ೨೦೧೧. ಇಂದಿಗೆ ನನ್ನ "ಮನದ ಮಾತು" ಅಕ್ಷರ ರೂಪದಲ್ಲಿ ಮೂಡಲಾರಂಭಿಸಿ ಒಂದು ವರ್ಷ ಪೂರೈಸಿದೆ. ೨೭  ಜುಲೈ ೨೦೧೦ ರಂದು ನನ್ನ ಗೆಳೆಯನೊಬ್ಬನ ಇಂಗ್ಲಿಷ್ ಬ್ಲಾಗ್ ನೋಡಿ ನಾನೂ ಕನ್ನಡದಲ್ಲಿ ಒಂದು ಬ್ಲಾಗ್ ಬರೆಯೋಣ ಎಂದು ಪ್ರಾರಂಭಿಸಿದೆ. ನಾನು ಬ್ಲಾಗ್ ಬರೆಯಲು ಆರಂಭಿಸಿದ ದಿನದಿಂದ ಇಂದಿನವರೆಗೆ ಹಲವಾರು ಹಿರಿಯ ಬರಹಗಾರರು, ಗೆಳೆಯರು ನನ್ನನ್ನು ಬೆಂಬಲಿಸುತ್ತಾ, ನನ್ನ ತಪ್ಪಿದ್ದಾಗ ತಿದ್ದುತ್ತಾ, ಉತ್ತಮ ಬರಹಗಳನ್ನು ಪ್ರಶಂಶಿಸುತ್ತಾ, ಸ್ವಾರಸ್ಯಕರ ಚರ್ಚೆಗೆ ಹಚ್ಚುತ್ತಾ ನನಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನೆರವಾಗಿದ್ದಾರೆ. ಅವರೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಋಣಿ.  


                        ಇತ್ತೀಚಿಗೆ ಹಲವಾರು ದಿನಗಳಿಂದ ನಾನು ಬರವಣಿಗೆಯಲ್ಲಿ ಹೆಚ್ಚಿಗೆ ತೊಡಗಿಸಿಕೊಳ್ಳಲಾಗಿಲ್ಲ. ಇನ್ನು ಮುಂದೆ ಸಾಧ್ಯವಾದಷ್ಟೂ ನಿರಂತರವಾಗಿ ಬರೆಯಬೇಕೆಂದುಕೊಂಡಿದ್ದೇನೆ. ನಿಮ್ಮೆಲ್ಲರ ಪ್ರೀತಿ ಹೀಗೆ ಇರಲಿ ಎಂದು ಪ್ರಾರ್ಥಿಸುವೆ. 

ವಂದನೆಗಳೊಂದಿಗೆ,


ವಿಜಯ್ ಹೆರಗು ಸೋಮವಾರ, ಜುಲೈ 11, 2011

ಮೂಡಿಬಂದ ಮೋಡಿಗಾರ

ಅದೋ ನೋಡು ಮೂಡಣದಲಿ
ಮೂಡಿಹನವ ಮೋಡಿಗಾರ
ಜಗಕೆಲ್ಲ ಬೆಳಕ ನೀಡಿ
ಜಗಮಗಿಸುವ ನೇಸರ

ದಣಿವೆಯೆಂಬುದನ್ನು ಅರಿಯ

ತನ್ನ ಕಾಯಕವನ್ನು ಮರೆಯ
ಒಮ್ಮೆ ಅತ್ತ ಒಮ್ಮೆ ಇತ್ತ
ಭುವಿಯ ಸುತ್ತಿ ಬೆಳಕನಿತ್ತ

ಸೂರ್ಯೋದಯ - ಸೂರ್ಯಾಸ್ತ

ನೋಡಲೆನಿತು ಸುಂದರ
ಇವನಿಗೊಬ್ಬ ಜೊತೆಗಾರ
ಅವನೇ ಚೆಲುವ ಚಂದಿರ 


ಇವನಂದಕೆ ಇವನೇ ಉಪಮೆ
ಸಾಟಿ ಬೇರೆಯಿಲ್ಲ ಇವನಿಗೆ
ಅಂಧಕಾರವನ್ನು ಅಳಿಸಿ
ಕೊಂಡೊಯ್ಯುವ ಬೆಳಕಿನೆಡೆಗೆ