ಶನಿವಾರ, ಜನವರಿ 28, 2012

ನಾ ಮಹಾತ್ಮನಾಗಲಿಲ್ಲ........

ಅದೊಂದು ಉದ್ಯಾನ
ಉದ್ಯಾನದೊಳಗೊಂದು
ಮಹಾತ್ಮನ ಪ್ರತಿಮೆ

ಮಹಾತ್ಮನೆಡೆಗೆ ನಿರ್ಲಿಪ್ತ ನೋಟ 
ಬೀರುತ್ತಾ ನಿಂತಿದ್ದನಲ್ಲೊಬ್ಬ ವೃದ್ದ
ತನ್ನಲ್ಲೇ ಏನನ್ನೋ ಹೇಳಿಕೊಳ್ಳುತ್ತಾ

ಅಯ್ಯಾ ನನಗೀಗ ವಯಸ್ಸು ಎಂಭತ್ತು
ನೀ ಎಂಭತ್ತರ ಹೊಸ್ತಿಲಲ್ಲೇ ಗುಂಡೇಟಿಗೆ 
ನಿನ್ನ ಗುಂಡಿಗೆಯ ಕೊಟ್ಟೆ 

ಅಷ್ಟರಲ್ಲಾಗಲೇ ನೀ 
ಮಹಾತ್ಮನಾಗಿದ್ದೆ, ಜನಮಾನಸದಲ್ಲಿ 
ಮನೆಯ ಮಾಡಿದ್ದೆ 

ನಾನಿಂದು ಬದುಕಿದ್ದೇನೆ 
ಭೂಮಿಗೆ ಭಾರವಾಗಿ, ಮನೆಯವರಿಗೆ
ಬೇಡವಾಗಿ.......ತೊಡಕಾಗಿ 

ಸತ್ವಹೀನ ನನ್ನ ಬದುಕು-
ಸತ್ಯಕ್ಕೆ ನೀನಾದೆ ಬೆಳಕು, 
ನಿನ್ನಂತೆ ನಾ ಬದುಕಲೇ ಇಲ್ಲ.....ಬದುಕಿದ್ದೇನೆ ಅಷ್ಟೇ  

"ನೀ ಮಹಾತ್ಮನಾಗದಿದ್ದರೆ ಏನಂತೆ  ನೀ 
ದುರಾತ್ಮನಾಗಲಿಲ್ಲ, ಅದಕಿಂತ ಬೇರೇನು ಬೇಕು
 ಬದುಕಿರುವವರೆಗೂ ನೀ ನಗುನಗುತಾ ಬದುಕು"

ಅಶರೀರವಾಣಿಯೊಂದು ನುಡಿದ ಹಾಗಾಗಿ
ವೃದ್ದ ತಾ ಬೆರಗಾಗಿ ಸಾಗಿದನು ಮನೆಯತ್ತ 
ಆನಂದವಾಗಿ.............