ಮಂಗಳವಾರ, ಜುಲೈ 23, 2013

ಡಿಕೆಶಿ ಧಮಾಕಾ ಆಫರ್

ಚಿತ್ರಕೃಪೆ : ಅಂತರ್ಜಾಲ

ಚಿತ್ರಕೃಪೆ : ಅಂತರ್ಜಾಲ
                        ಒಂದೇ ಕಲ್ಲಲ್ಲಿ ಎರಡು ಹಕ್ಕಿ ಅಂದ್ರೆ ಇದೇ ಇರಬೇಕು. ನಮ್ಮ ಮಾಮು (ಮಾಜಿ ಮುಖ್ಯಮಂತ್ರಿ) ಹೆಚ್.ಡಿ.ಕುಮಾರಸ್ವಾಮಿ ಕೃಪೆಯಿಂದ ತೆರವಾದ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆ ಕುಮಾರಸ್ವಾಮಿಯವರ ಪರಮಶತ್ರು ಡಿ.ಕೆ.ಶಿವಕುಮಾರ್ ಪಾಲಿಗೆ ವರವಾಗಿ ಪರಿಣಮಿಸಿದೆ. 'ಕಳಂಕಿತ'ರೆಂಬ ಹಣೆಪಟ್ಟಿ ಹೊತ್ತು  ಸಚಿವ ಸ್ಥಾನದಿಂದ ವಂಚಿತರಾದ ಶಿವಕುಮಾರ್ ಒಳ್ಳೆ ಒಳ್ಳೆ ಪಟ್ಟುಗಳನ್ನು ಪ್ರದರ್ಶಿಸಲು ಈಗ ಸದವಕಾಶ ದೊರೆತಿದೆ. ಇದಕ್ಕಾಗಿ ಅವರು ಕುಮಾರಸ್ವಾಮಿಯವರಿಗೆ ಒಂದು ಥ್ಯಾಂಕ್ಸ್ ಹೇಳಲೇಬೇಕು. ಡಿಕೆಶಿ ತಟಸ್ಥವಾಗಿ ಉಳಿದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಕಷ್ಟಕರ ಎಂದು ಅರಿತಿರುವ ಕಾಂಗ್ರೆಸ್ ಮುಖಂಡರು ಡಿಕೆಶಿ ತಮ್ಮನನ್ನೇ ಸ್ಪರ್ಧಾಳು ಮಾಡಿದರೆ ಆಗ ಡಿಕೆಶಿ ತಟಸ್ಥವಾಗಿ ಉಳಿಯುವ ಮಾತೆ ಇಲ್ಲ ಅಂತ ಮಾಸ್ಟರ್ ಪ್ಲಾನ್ ಮಾಡಿದರು. ಆದರೆ 'ನೀವು ಚಾಪೆ ಕೆಳಗೆ ನುಸುಳಿದರೆ ನಾನು ರಂಗೋಲಿ ಕೆಳಗೆ ನುಸುಳ್ತೀನಿ' ಅಂದ ಡಿಕೆಶಿ ನನಗೆ ಸಚಿವ ಸ್ಥಾನ ಕೊಟ್ಟರೆ ಮಾತ್ರ ನನ್ನ ತಮ್ಮನನ್ನು ಚುನಾವಣೆಗೆ ಸ್ಪರ್ಧಿಸಲು ಒಪ್ಪಿಸ್ತೀನಿ ಅಂತ ಪಟ್ಟು ಹಾಕಿದ್ದಾರೆ.

                       ಸಿದ್ಧರಾಮಯ್ಯ ಸರ್ಕಾರದ ವರ್ಚಸ್ಸನ್ನು ಉಳಿಸಿಕೊಳ್ಳಲು ಹಾಗೂ ಮುಂಬರುವ ಲೋಕಸಭಾ ಚುನಾವಣೆಗೆ ಉತ್ಸಾಹದಿಂದ ಮುನ್ನುಗ್ಗಲು ಈ ಉಪಚುನಾವಣಾ ಫಲಿತಾಂಶ ಅತ್ಯಂತ ಪ್ರಮುಖವಾಗಿದ್ದು ಶತಾಯಗತಾಯ ಗೆಲ್ಲಲೇ ಬೇಕಾದ ಅನಿವಾರ್ಯತೆಗೆ ಕಾಂಗೈ ಸಿಲುಕಿದೆ. ಇದಕ್ಕಾಗಿ ಏನು ಬೇಕಾದರೂ ಮಾಡಲು ತಯಾರಿರುವ ಪಕ್ಷ ರಾಹುಲ್ ಗಾಂಧಿಯ ಸಮ್ಮುಖದಲ್ಲಿ ಡಿಕೆಶಿ ಜೊತೆ ರಾಜಿ ಮಾಡಿಕೊಂಡು ಸಂಪುಟದರ್ಜೆ ಸಚಿವ ಸ್ಥಾನಮಾನ ನೀಡಿ ಆತನ ತಮ್ಮ ಡಿ.ಕೆ.ಸುರೇಶನಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಟ್ಟೇ ಕೊಡುತ್ತದೆ.

                       ಅಲ್ಲಿಗೆ ರಾಷ್ಟ್ರೀಯ ಪಕ್ಷವೊಂದು ಕಳಂಕಿತ ಎಂಬ ಪಟ್ಟ ಹೊತ್ತ ವ್ಯಕ್ತಿಯ ಮುಂದೆ ಮಂಡಿಯೂರಿ ಶರಣಾಗುವ ಸ್ಥಿತಿಗೆ ಬಂದು ತಲುಪಿದೆ.