ಸೋಮವಾರ, ಅಕ್ಟೋಬರ್ 12, 2015

ಪಕ್ಷ ಮಾಡೋದು :)

ನಮಸ್ಕಾರ , ಇವನ್ಯಾವನೋ ಅಮಾವಾಸ್ಯೆಗೊಂದ್ಸಲ ಹುಣ್ಣಿಮೆಗೊಂದ್ಸಲ ಕಾಣಿಸ್ಕೊತಾನೆ ಅಂತಾರಲ್ಲಾ ಹಾಗೇ ನಾನು ಈ ಅಮಾವಾಸ್ಯೆಯ ದಿನ ಮತ್ತೆ ಕಾಣಿಸ್ಕೊತಿದ್ದೀನಿ :) ಇರ್ಲಿ ವಿಷ್ಯಕ್ಕೆ ಬರೋಣ
ನಿನ್ನೆ ಅಂದ್ರೆ ಭಾನುವಾರದ ಸಂಜೆ ಮನೇಲಿ ಟಿವಿ ಮುಂದೆ ಕೂತು ಇಂಡಿಯಾ ಸೋಲೋದನ್ನ solo (ಏಕಾಂಗಿ) ಆಗಿ ನೋಡ್ತಾ  ಕೂತಿದ್ದೆ . ಮೊಬೈಲು ರಿಂಗಣಿಸಿತು , ಆ ಕಡೆಯಿಂದ ನನ್ನ ಚಡ್ಡಿ ದೋಸ್ತು ನಾಣಿ ಕರೆ ಮಾಡಿದ್ದ . ನಮ್ಮಿಬ್ಬರ ಮಧ್ಯೆ ನಡೆದ ಮಾತುಕತೆಯ ವಿವರ ನಿಮ್ಮ ಮುಂದೆ ಇಡ್ತಿದ್ದೀನಿ , ಮಂಡೆ ಬಿಸಿ ಮಾಡ್ಕೊಳ್ದೇ ಓದಿ . ...........

ನಾಣಿ : ಏನ್ ಗುರೂ ಎಲ್ಲಿದ್ದೀಯಾ ?
ನಾನು : ಮನೇಲಿದ್ದೀನಿ ಶಿಷ್ಯಾ , ಏನೋ ವಿಷ್ಯಾ ??
ನಾಣಿ : ಏನಿಲ್ಲಾ ಗುರೂ ......... ಅದೂ ಅದೂ ನಿನ್ನಿಂದ ಒಂದ್ ಹೆಲ್ಪ್ ಆಗ್ಬೇಕಿತ್ತು ಗುರೂ
ನಾನು : ಲೇ ಶಿಷ್ಯಾ ನನ್ ಹತ್ರ ಯಾಕೋ ಸಂಕೋಚ ಏನ್ ಹೇಳೊ
ನಾಣಿ  : ಏನಿಲ್ಲಾ ಗುರೂ ..... ಕೇಳಿದ್ಮೇಲೆ ಆಗೋಲ್ಲಾ ಅಂತ ಮಾತ್ರ ಹೇಳ್ಬೇಡ ...... ನನ್ ಮರ್ಯಾದೆ ಪ್ರಶ್ನೆ ....
ನಾನು  : ಮೊದ್ಲು ವಿಷ್ಯಾ ಏನಂತ ಹೇಳೋ , ಹುಳ ಬಿಡ್ಬೇಡ
ನಾಣಿ : ಏನಿಲ್ಲಾ ಗುರೂ , ಅರ್ಜೆಂಟಾಗಿ ಎರಡ್ ಸಾವ್ರ ದುಡ್ಡು ಬೇಕು ಗುರೂ ನಾಳೆ ಪಕ್ಷ ಮಾಡ್ಬೇಕು
ನಾನು : ಲೇ ತಗಡೂ ನನ್ಮಗನೇ ನೀನು ಪಕ್ಷ ಮಾಡ್ತೀಯಾ !!?? ತಮಾಷೆ ಮಾಡ್ತಿಲ್ಲ ತಾನೇ , ಭಾನ್ವಾರ ಯಾರಾದ್ರೂ ಓಸಿ ಎಣ್ಣೆ ಹೊಡೆಸಿದ್ರಾ ಹೆಂಗೆ !!??
ನಾಣಿ : ಏನ್ ಗುರೂ ನಮ್ಮಂಥ ಬಡವ್ರು ಪಕ್ಷ ಮಾಡ್ಬಾರ್ದಾ !!?? ನಾನು ಬಡವ ಇರ್ಬೋದು ಆದ್ರೆ ನಾಲ್ಕ್ ಜನರ ಮುಂದೆ ನಾವೂ ಹಿಂಗೆ ಪಕ್ಷ ಗಿಕ್ಷ ಮಾಡಿ ನಮ್ ಲೆವೆಲ್ ತೋರ್ಸ್ಬೇಕು ಗುರೂ
ನಾನು : ಅಲ್ಲೋ ಪಕ್ಷ ಮಾಡೋದು ಅಂದ್ರೆ ಹುಡ್ಗಾಟ ಕೆಟ್ಟೋಯ್ತಾ !!!?? ಎಂತೆಂತಾ ಘಟಾನುಘಟಿಗಳೇ ಮುಳುಗೋದ್ರು ಗೊತ್ತಾ !!?? ಅದೂ ಬರೀ ಎರಡು ಸಾವ್ರ ದುಡ್ಡಲ್ಲಿ !!!???
ನಾಣಿ : ಥೂ ಗುರೂ ಅದಲ್ಲಾ ಗುರೂ ..........
ನಾನು : ಮಾತಾಡ್ಬೇಡ ಮಗನೇ ನೀನು ........ ನಾನ್ ಹೇಳೋದ್ ಸುಮ್ನೆ ಕೇಳಿಸ್ಕೋ ಅಷ್ಟೇ
 ನಾಣಿ :    ಸರಿ ಹೇಳು ಗುರೂ .........
ನಾನು : ನಮ್ಮ ಮಾಮು (ಮಾಜಿ ಮುಖ್ಯಮಂತ್ರಿ) ಬಂಗಾರಪ್ಪ ಕಾಂಗ್ರೆಸ್ ಪಕ್ಷ ಬಿಟ್ಟು  ಪಕ್ಷ ಮಾಡಿದ್ರು "ಕರ್ನಾಟಕ ಕಾಂಗ್ರೆಸ್ ಪಕ್ಷ " ಅಂತ .......... ಆದ್ರೆ  ಅವ್ರಂಥ  ಮಾಸ್ ಲೀಡರ್ ಕೂಡಾ ಪಕ್ಷ ಬೆಳೆಸೋಕಾಗ್ದೇ ಮತ್ತೆ ಕಾಂಗ್ರೆಸ್ ಜೊತೆ ವಿಲೀನ ಮಾಡ್ಕೊಂಡ್ರು . ಅದಿರ್ಲಿ ಮೊನ್ನೆ ಮೊನ್ನೆ ನಮ್ ಯಡ್ಯೂರಪ್ಪನವ್ರು ಕೋಟ್ಯಾಂತರ ಖರ್ಚು ಮಾಡಿ ಕರ್ನಾಟಕ ಜನತಾ ಪಕ್ಷ ( ಕೆಜೆಪಿ ) ಕಟ್ಟಿ ಕೊನೆಗೆ ಸಿಕ್ಕಿದ್ದೇನು ತೆಂಗಿನಕಾಯಿ ಚಿಪ್ಪು ......... ಇನ್ನೂ  ಬೇಜಾನ್ ಜನ ಇದಾರೆ ಈ ಥರಾ ಪಕ್ಷ ಮಾಡ್ತೀವಿ ಅಂಥ ಫೋಸ್ ಕೊಟ್ಟು ಫ್ಯೂಸ್ ಕಳ್ಕೊಂಡೋರು ....... ಸದ್ಯಕ್ಕೆ ನಿಂಗೆ ಇವೆರಡು ಲೋಕಲ್ ಎಕ್ಸಾಂಪಲ್ ಸಾಕು ....... ನ್ಯಾಷನಲ್ ಲೆವೆಲ್ಲಲ್ಲಿ ಇನ್ನೂ ಬೇಜಾನ್ ಜನಾ ಇದ್ದಾರೆ ........ ಸದ್ಯಕ್ಕೆ ಇಷ್ಟ್ ಸಾಕ್ ....... ಅರ್ಥಾ ಆಯ್ತಾ (ಹುಚ್ಚ ವೆಂಕಟ್ ಸ್ಟೈಲಲ್ಲಿ )
ನಾಣಿ : ಅದ್ಸರಿ ಈ ರಾಜ್ಕೀಯದವ್ರ್ ವಿಷ್ಯಾ ನಂಗ್ಯಾಕ್ ಗುರೂ ...... ನಂಗೆ ಕಾಸು ಕೊಡಕ್ಕೆ ಆಗುತ್ತಾ ಆಗಲ್ವಾ ಅದ್ಹೇಳು ಸುಮ್ನೆ ?
ನಾನು : ರಾಜ್ಕೀಯದವ್ರ್ ವಿಷ್ಯಾ ಬೇಡಾ ಅಂತೀಯ ........ ಪಕ್ಷ ಮಾಡ್ತೀನಿ ಅಂತೀಯ .......... ರಾಜ್ಕೀಯಕ್ಕ್ ಬರ್ದೇ ಪಕ್ಷ ಕಟ್ಟಕಾಗುತ್ತಾ !!?? ನಿಂಗೇನು ತಲೆ ಕೆಟ್ಟಿದಿಯಾ ಹೆಂಗೆ ???
ನಾಣಿ : ತಲೆ ಕೆಟ್ಟಿರೋದು ನಂಗಲ್ಲಾ ಗುರೂ ನಿಂಗೆ ....... ಅದ್ಕೇ ನಾನ್ ನಿನ್ಗೆ ನ್ಯೂಸ್ ಚಾನಲ್ ಜಾಸ್ತಿ ನೋಡ್ಬೇಡ ನೀನೂ ಬುದ್ಧುಜೀವಿ ಆಗೋಯ್ತೀಯ ಅಂತ ಹೇಳೋದು
ನಾನು : ಲೇ ಶಿಷ್ಯಾ ನೀನು ಪಕ್ಷ ಮಾಡ್ಬೇಕು ಅಂಥ ದುಡ್ಡು ಕೇಳ್ದೆ ತಾನೇ ನನ್ನ
ನಾಣಿ : ಗುರೂ ನಾನ್ ದುಡ್ಡ್ ಕೇಳಿದ್ದು ರಾಜಕೀಯ ಪಕ್ಷ ಮಾಡೋಕಲ್ಲ ಗುರೂ , ನಾಳೆ ಮಹಾಲಯ ಅಮಾವಾಸ್ಯೆ ಆಲ್ವಾ ಅದ್ಕೇ "ಪಿತೃ ಪಕ್ಷ " ಮಾಡೋಕೆ ಗುರೂ .......
ನಾನು : >>>>>>>>>>>>>>>>>> <<<<<<<<<<<<<<<<<<<< ಹಲೋ ಹಲೋ ....... ಹಲೋ ..... ಏನೂ ಕೇಳಿಸ್ತಿಲ್ಲಾ ಮಗಾ ಆಮೇಲೆ ಕಾಲ್ ಮಾಡ್ತೀನಿ .........


 ಗಂಜಿಗೆ ಗತಿಯಿಲ್ಲಾ ನಂಜಿಗೆ ಬುಲಾವ್ ಅಂತಾರಲ್ಲ ಹಂಗೆ ನಾನೇ ಖಾಲಿ ಜೇಬಲ್ಲಿ ಕೂತಿದ್ದೀನಿ ಇವ್ನು ನಂಗೇ ಕಾಸ್ ಕೇಳ್ತಾನಲ್ಲ ಅದ್ಕೇ ಏನೂ ಕೇಳಿಸ್ತಿಲ್ಲ ಅಂತ ಡವ್ ಮಾಡ್ದೆ ........ ಒಂದ್ ಲೆವೆಲ್ಗೆ ನಾವೂ ಬುದ್ದುಜೇವಿಗಳೆ ಆಲ್ವಾ :)
 

 ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ