ಸೋಮವಾರ, ಮೇ 23, 2011

ಬಾನಿನತ್ತ.....ಹಾರುತ್ತ...

ಅಷ್ಟಗಲ ಆಗಸದಿ
ಎಷ್ಟೊಂದು ಹಕ್ಕಿಗಳು
ಆಸೆಯಾಗುತಿದೆ 'ಹೇಗಾದರೂ ಮಾಡಿ
ಹೆಕ್ಕಬೇಕಿದೆ ಹಾದಿ'
ಹಾರಿ ಸೇರಲೇಬೇಕು ಮುಗಿಲ ಹಾದಿ   
ಬಾನ ಎತ್ತರಕೇರಿ
ಮೋಡದೊಳಗಡೆ ತೂರಿ
ಹಾರುವಾಸೆಯು ಎನಗೆ ಕಲಿಸಿ ಹೇಗೆ?
ಗೂಡನೊಂದನು ಕಟ್ಟಿ, ಕೊಕ್ಕಲ್ಲಿ ಹಿಡಿದು ರೊಟ್ಟಿ
ಕಂದಗೆ ತಂದುಣಿಸುವ ಕಲೆಯ ತಿಳಿಸಿ ಎನಗೆ


ನಿಮ್ಮಂತೆಯೇ ನಾನು
ಪಡೆಯಬೇಕಿದೆ ರೆಕ್ಕೆ
ಹಾರಬೇಕಿದೆ ದೂರ ದೂರ......
ಸಪ್ತಸಾಗರ ದಾಟಿ, ಎಲ್ಲ ಎಲ್ಲೆಯ ಮೀಟಿ
ಕಾಣಬೇಕಿದೆ ಹೊಸತು ಬದುಕ ಸಾ

ಸೋಮವಾರ, ಮೇ 16, 2011

ಬಲಾಬಲ

ಕರ್ನಾಟಕದ ಮಹಾಜನತೆಯ ದೌರ್ಭಾಗ್ಯಕ್ಕೆ ಅಂತ್ಯವೇ ಇಲ್ಲವೇನೋ ಎನ್ನಿಸುತ್ತಿದೆ. ಕರ್ನಾಟಕದ ರಾಜಕೀಯ ವಿದ್ಯಮಾನ ದಿನಕ್ಕೊಂದು, ಕ್ಷಣಕ್ಕೊಂದು ಬಣ್ಣ ಬದಲಾಯಿಸುತ್ತಿದೆ. ರಾಜಕೀಯ ರಂಗದ ಅನಿಶ್ಚಿತತೆ, ಅರಾಜಕತೆ ಮತ್ತೊಮ್ಮೆ ತನ್ನ ವಿರಾಟ್ ರೂಪದ ಪ್ರದರ್ಶನ ನೀಡಿದೆ. ಹದಿನಾರು ಶಾಸಕರ ಅನರ್ಹತೆಯ ಆದೇಶವನ್ನು ಸುಪ್ರೀಂ ಕೋರ್ಟ್ ಅನೂರ್ಜಿತಗೊಳಿಸಿದ ಬೆನ್ನಲ್ಲೇ ಆಡಳಿತ ಪಕ್ಷ, ವಿರೋಧ ಪಕ್ಷಗಳು ತಮ್ಮ ಬಲಾಬಲ ಪ್ರದರ್ಶನಕ್ಕೆ ಸಜ್ಜಾಗಿವೆ.
ಅತ್ತ ಬಿಜೆಪಿ ಹೈಕಮಾಂಡಿನ ಹಿರಿತಲೆಗಳು ಹನ್ನೊಂದು ಮಂದಿ ಬಂಡಾಯ ಶಾಸಕರಲ್ಲಿ ಹತ್ತು ಮಂದಿಯನ್ನು ಕರೆದು ಓಲೈಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವ ಯಡಿಯೂರಪ್ಪನವರ ನಾಯಕತ್ವವನ್ನು ಪ್ರಶ್ನಿಸಿ ಬಂಡೆದಿದ್ದರೋ ಅದೇ ಯಡಿಯೂರಪ್ಪನ ಮುಂದೆ ಮಂಡಿಯೂರಿ ಶರಣಾಗಿ ನೀವೇ ನಮ್ಮ ನಾಯಕ ಎನ್ನುತ್ತಾ ತಲೆಬಾಗಿ ನಿಂತ ಇವರ ಭಂಗಿ ಅಸಹ್ಯವನ್ನುಂಟು ಮಾಡುತ್ತದೆ. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುವಲ್ಲ-ಶಾಶ್ವತ ಮಿತ್ರರಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ.ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಖುರ್ಚಿ ಉಳಿಸಿಕೊಳ್ಳುವ ಸಲುವಾಗಿ ಹೊರಾದುವುದನ್ನೇ ಆಡಳಿತ ಎಂದು ತಿಳಿದಂತಿದೆ. ಅಧಿಕಾರಕ್ಕೆ ಬಂದ ದಿನದಿಂದ ಇಂದಿನವರೆಗೂ ತಮ್ಮದೇ ಪಕ್ಷದ ನಾಯಕರಿಂದ, ಹೊರಗಿನವರಿಂದ ಪ್ರಬಲ ಪ್ರತಿರೋಧ ಎದುರಿಸುತ್ತಿದ್ದರೂ ಮುಖ್ಯಮಂತ್ರಿ ಪಟ್ಟ ಉಳಿಸಿಕೊಳ್ಳುವ ಸಲುವಾಗಿ ದಿನಕ್ಕೊಂದು ಪಟ್ಟು ಹಾಕುತ್ತಿದ್ದಾರೆ.
                            ಯಡಿಯೂರಪ್ಪನವರು ತಮ್ಮ ಕುಯುಕ್ತಿಯಿಂದ ಬಿಜೆಪಿ ಹೈಕಮಾಂಡನ್ನೇ ಹೈಜಾಕ್ ಮಾಡಿದ್ದಾರೆ. ಆಪರೇಶನ್ ಕಮಲ ಆರಂಭಿಸಿ ಹೊಸ ಬಗೆಯ ಕುದುರೆ ವ್ಯಾಪಾರವನ್ನು ಪರಿಚಯಿಸಿದ ಕೀರ್ತಿ ಯಡಿಯೂರಪ್ಪನವರದು.
ಅತ್ತ ಯಡಿಯೂರಪ್ಪನವರು ಅನರ್ಹಗೊಂಡಿದ್ದ ಹತ್ತು ಮಂದಿ ಶಾಸಕರನ್ನು ತಮ್ಮ ತೆಕ್ಕೆಗೆ ಎಳೆದುಕೊಂಡು ಮುದ್ದಾಡುತ್ತಿರುವಾಗಲೇ ಇತ್ತ ರಾಜ್ಯಪಾಲ ಹಂಸರಾಜ್ ಭಾರದ್ವಾಜರು ತಮ್ಮ ಚಾಕಚಕ್ಯತೆ ಪ್ರದರ್ಶಿಸಿದ್ದಾರೆ. ಶಾಸಕರ ಅನರ್ಹತೆ ನಿರ್ಧಾರ ತಪ್ಪು ಎಂದು ಸುಪ್ರೀಂ ಕೋರ್ಟ್ ಘೋಷಿಸಿದ ಮರುಕ್ಷಣದಿಂದಲೇ ರಾಜ್ಯಪಾಲರು ಯಡ್ಡಿಯನ್ನು ಕೆಡವಲು ಖೆಡ್ಡಾ ತೋಡಲಾರಂಭಿಸಿದರು. ಅತ್ತಲಿಂದ ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿದ್ದೇ ತಡ ಇತ್ತಲಿಂದ ರಾಜ್ಯಪಾಲರು ರಾಜ್ಯ ವಿಧಾನಸಭೆಯನ್ನು ಅಮಾನತ್ತಿನಲ್ಲಿಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಕಳಿಸಿದರು.ರಾಜ್ಯಪಾಲರ ಈ ವರ್ತನೆಯನ್ನು ಖಂಡಿಸಿ ಬಾಯಿಬಡುಕ ಈಶ್ವರಪ್ಪ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರೂ ಬೊಬ್ಬೆ ಹಾಕುತ್ತಿದ್ದಾರೆ. ರಾಜ್ಯಪಾಲರ ಈ ಕ್ರಮ ಜನಾದೇಶಕ್ಕೆ ವಿರುದ್ಧವಾಗಿದೆ ಎಂದು ಕೂಗಾಡುತ್ತಿರುವ ಈ ನಾಯಕರು ಅಂದು ಹದಿನಾರು ಮಂದಿ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಆದೇಶವನ್ನು ಮೇಜುಕುಟ್ಟಿ ಸ್ವಾಗತಿಸಿದ್ದರು. ಈಗ ತಮ್ಮ ತಂತ್ರ ತಮಗೇ ಬೂಮರಾಂಗಿನಂತೆ ವಾಪಸ್ ಬಂದಿದೆ.ಇವರ ರಾಜಕೀಯ ತಂತ್ರ- ಪ್ರತಿತಂತ್ರಗಳ ನಡುವೆ ಮತದಾರ ಹೈರಾಣಾಗಿದ್ದಾನೆ. ಆದರೆ ಬುದ್ಧಿವಂತನಾಗಿಲ್ಲ. ಮತ್ತೆ ಇದೇ ಜನ ಅಧಿಕಾರದ ಗದ್ದುಗೆ ಏರುತ್ತಾರೆ.....ವಿಕೃತ ನಗೆ ಬೀರುತ್ತಾರೆ. ಬನ್ನಿ ಗೆಳೆಯರೇ,

ರಾಷ್ಟ್ರಪತಿ ಭವನದಲ್ಲಿ ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರೂ, ಶಿಸ್ತಿನ (!?) ಸಿಪಾಯಿಗಳೂ ಆದ ಬಿಜೆಪಿ ಶಾಸಕರು ಪೆರೇಡ್ ಮಾಡಲಿದ್ದಾರೆ....ನೋಡಿ ಆನಂದಿಸೋಣಕೊನೆಗೂ ಹತ್ತು ಮಂದಿ

ಭಿನ್ನ ಶಾಸಕರಿಗೆ ಬುದ್ಧಿ ಬಂದಿದೆಯಂತೆ

ಪ್ರಶ್ನೆಯೊಂದು ಹಾಗೇ ಉಳಿದಿದೆ

ನಮ್ಮ ಜನರಿಗೆ ಬುದ್ಧಿ ಬಂದೀತೇ !!??

ಶನಿವಾರ, ಮೇ 14, 2011

ಅ"ರಾಜಕೀಯ"

                                              ಕರ್ನಾಟಕ ರಾಜಕೀಯದಲ್ಲಿ ಮತ್ತೊಮ್ಮೆ ಅರಾಜಕತೆ, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಖುರ್ಚಿ ಮತ್ತೊಮ್ಮೆ ಅಲುಗಾಡಿದಂತೆ ಕಾಣುತ್ತಿದೆ. ಆದರೆ ಯಡಿಯೂರಪ್ಪ ಬಗ್ಗುವ ಆಸಾಮಿಯಲ್ಲ  . ಈಗಾಗಲೇ  ಅವರು ತಮ್ಮ ಸೀಟು ಉಳಿಸಿಕೊಳ್ಳಲು ಬೇಕಾದ ತಂತ್ರಗಳನ್ನು ಹೆಣೆಯುತ್ತಿದ್ದಾರೆ.
           
                                            ಬಿಜೆಪಿಯ ೧೧ ಶಾಸಕರು ಹಾಗೂ ೫ ಮಂದಿ ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಕ್ರಮವನ್ನು ಅನೂರ್ಜಿತಗೊಳಿಸಿದ ಸುಪ್ರೀಂ ಕೋರ್ಟ್ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಆಶಯ ಮೂಡಿಸಿದೆ. ಜೊತೆಜೊತೆಗೇ ಮುಂದೇನು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.

                                          ಯಡಿಯೂರಪ್ಪನವರು ತಮ್ಮ ಪಕ್ಷದ ೧೧ ಶಾಸಕರಿಗೆ ಗಾಳ ಹಾಕಲು ತಯಾರಿ ನಡೆಸಿದ್ದು ಹಣದ, ಅಧಿಕಾರದ ಆಮಿಷವೊಡ್ಡಿ ಅವರನ್ನು ತಮ್ಮ ಕಡೆಗೆ ಸೆಳೆದು"ಕೊಳ್ಳು"ವ ಪ್ರಯತ್ನದಲ್ಲಿದ್ದಾರೆ. ಅವರಿಗೆ ಇದೇನೂ ಕಷ್ಟದ ಮಾತಲ್ಲ. ಈಗಿರುವ ಸ್ಥಿತಿಗಿಂತಲೂ ಸಂಕಷ್ಟದ ಸಮಯಗಳಲ್ಲಿ ಬಚಾವಾಗಿ ಬಂದ ಅನುಭವ ಅವರಿಗಿದೆ. ಮುಖ್ಯಮಂತ್ರಿಗಳು ತಮಗಿರುವ ಹಣಬಲ, ಜನಬಲವನ್ನು
 ಉಪಚುನಾವಣೆಗಳಲ್ಲಿ, ಕಮಲದ ಆಪರೇಷನ್ನುಗಳಲ್ಲಿ ತೋರ್ಪಡಿಸಿದ್ದಾರೆ.


ಕಾವಿಯ, ಕಾಸಿನ ಬಲವಿದ್ದರೆ ಸಾಕುಹೈಕಮಾಂಡನ್ನೇ ಗೆಲ್ಲುವೆನು


ನೋಟಿನ ಮೂಟೆಯ ಚೆಲ್ಲಿಯಾದರೂ


ಖುರ್ಚಿಗೆ ಅಂಟಿ ಕೂರುವೆನು
 
ಎಂದು ಹೇಳುತ್ತಾ ರಾಜ್ಯವನ್ನು ಲೂಟಿ ಮಾಡುತ್ತಿರುವ ಭ್ರಷ್ಟ ಯಡ್ಡಿಯ ವರಸೆಗೆ ಬ್ರೇಕ್ ಹಾಕಲು ಸಾಧ್ಯವಾಗದೆ ಕೈಚೆಲ್ಲಿ ಕುಳಿತಿರುವ ಬಿಜೆಪಿ ಹೈಕಮಾಂಡು ಕೇಂದ್ರದ ಭ್ರಷ್ಟ ಆಡಳಿತದ ವಿರುದ್ಧ ಸಮರ ಸಾರಿದೆ. ಇದನ್ನೇನು ಹುಂಬತನ ಎನ್ನಬೇಕೋ, ವ್ಯವಸ್ಥೆಯ ದೋಷ ಎನ್ನಬೇಕೋ ತಿಳಿಯುತ್ತಿಲ್ಲ . 
 
ಇನ್ನು ಮತ್ತೊಮ್ಮೆ ಕುಮಾರಸ್ವಾಮಿಯವರಿಗೆ ಕೈತುಂಬಾ ಕೆಲಸ. ತಮ್ಮೊಡನೆ ಬರಲು ಬಯಸುವ ಶಾಸಕರನ್ನು ಗೋವಾ ಕಡಲತಡಿಯಲ್ಲಿ ನೆನೆಹಾಕಬೇಕು. ಅವರು ಕೇಳಿದಷ್ಟು ಸವಲತ್ತುಗಳನ್ನು ಪೀಕಬೇಕು. ರೆಸಾರ್ಟು ಮಾಲೀಕರುಗಳನ್ನು ಉದ್ಧಾರ ಮಾಡಬೇಕು. 
ಮೀಡಿಯಾ ಜನರಿಗಂತು ಮತ್ತೊಂದು ಹಬ್ಬ ಬಂತು. ಕ್ಷಣ ಕ್ಷಣಕ್ಕೂ ಬ್ರೇಕಿಂಗ್ ನ್ಯೂಸುಗಳು, ಚರ್ಚೆಗಳು ಮಾಡುತ್ತಾ ಟಿ ಆರ್ ಪಿ ಕಸರತ್ತಿನ ಪ್ರದರ್ಶನ. 
 ಇವೆಲ್ಲದರ ನಡುವೆ ಹೈರಾಣಾಗುವ ಶ್ರೀಸಾಮಾನ್ಯ ತನ್ನ ನಸೀಬನ್ನು ದೂಷಿಸುತ್ತಾ ತಲೆ ಮೇಲೆ ಕೈ (ಕಾಂಗ್ರೆಸ್ಸ್ ಕೈ ಅಲ್ಲ)ಹೊತ್ತು ಕೂತು ಭ್ರಷ್ಟ ರಾಜಕಾರಣಿಗಳ ಸೋಗಲಾಡಿತನವನ್ನು ಶಪಿಸುತ್ತಾ ಕಾಯುತ್ತಾನೆ......ಬರಲಿರುವ ಚುನಾವಣೆಗಾಗಿ.....ಓಟಿಗಾಗಿ....ಗರಿಗರಿ ನೋಟಿಗಾಗಿ.......     

ಭಾನುವಾರ, ಮೇ 8, 2011

ಹಾಯ್ಕು - ಅಮ್ಮನಿಗಾಗಿ

ಮೊಲೆ ಉಣಿಸಿ

ಪ್ರೀತಿ ಮಳೆಗರೆದ

ಜೀವಕ್ಕೆ ಋಣಿ

____________________________

ಅಮ್ಮ ಎನ್ನುವ

ಎರಡಕ್ಷರದಲ್ಲಿ

ಅದೆಂಥಾ ಶಕ್ತಿ !!!


_______________________

ನಿನ್ನ ಮೊಗದ

ನಿಷ್ಕಲ್ಮಶ ನಗೆಯು

ಮಾಸದಿರಲಿ_________________________

ತಾಯಿ ಕರುಣೆ,

ಪ್ರೀತಿ ಮುಂದೆ ದೇವರೂ

ಶರಣಾದನು

______________________________


ನಿಷ್ಕಲ್ಮಷತೆ,

ಮುಗ್ಧತೆ ನನ್ನಮ್ಮನ

ಒಡವೆಗಳು


___________________________