ಶನಿವಾರ, ಮೇ 14, 2011

ಅ"ರಾಜಕೀಯ"

                                              ಕರ್ನಾಟಕ ರಾಜಕೀಯದಲ್ಲಿ ಮತ್ತೊಮ್ಮೆ ಅರಾಜಕತೆ, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಖುರ್ಚಿ ಮತ್ತೊಮ್ಮೆ ಅಲುಗಾಡಿದಂತೆ ಕಾಣುತ್ತಿದೆ. ಆದರೆ ಯಡಿಯೂರಪ್ಪ ಬಗ್ಗುವ ಆಸಾಮಿಯಲ್ಲ  . ಈಗಾಗಲೇ  ಅವರು ತಮ್ಮ ಸೀಟು ಉಳಿಸಿಕೊಳ್ಳಲು ಬೇಕಾದ ತಂತ್ರಗಳನ್ನು ಹೆಣೆಯುತ್ತಿದ್ದಾರೆ.
           
                                            ಬಿಜೆಪಿಯ ೧೧ ಶಾಸಕರು ಹಾಗೂ ೫ ಮಂದಿ ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಕ್ರಮವನ್ನು ಅನೂರ್ಜಿತಗೊಳಿಸಿದ ಸುಪ್ರೀಂ ಕೋರ್ಟ್ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಆಶಯ ಮೂಡಿಸಿದೆ. ಜೊತೆಜೊತೆಗೇ ಮುಂದೇನು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.

                                          ಯಡಿಯೂರಪ್ಪನವರು ತಮ್ಮ ಪಕ್ಷದ ೧೧ ಶಾಸಕರಿಗೆ ಗಾಳ ಹಾಕಲು ತಯಾರಿ ನಡೆಸಿದ್ದು ಹಣದ, ಅಧಿಕಾರದ ಆಮಿಷವೊಡ್ಡಿ ಅವರನ್ನು ತಮ್ಮ ಕಡೆಗೆ ಸೆಳೆದು"ಕೊಳ್ಳು"ವ ಪ್ರಯತ್ನದಲ್ಲಿದ್ದಾರೆ. ಅವರಿಗೆ ಇದೇನೂ ಕಷ್ಟದ ಮಾತಲ್ಲ. ಈಗಿರುವ ಸ್ಥಿತಿಗಿಂತಲೂ ಸಂಕಷ್ಟದ ಸಮಯಗಳಲ್ಲಿ ಬಚಾವಾಗಿ ಬಂದ ಅನುಭವ ಅವರಿಗಿದೆ. ಮುಖ್ಯಮಂತ್ರಿಗಳು ತಮಗಿರುವ ಹಣಬಲ, ಜನಬಲವನ್ನು
 ಉಪಚುನಾವಣೆಗಳಲ್ಲಿ, ಕಮಲದ ಆಪರೇಷನ್ನುಗಳಲ್ಲಿ ತೋರ್ಪಡಿಸಿದ್ದಾರೆ.


ಕಾವಿಯ, ಕಾಸಿನ ಬಲವಿದ್ದರೆ ಸಾಕು



ಹೈಕಮಾಂಡನ್ನೇ ಗೆಲ್ಲುವೆನು


ನೋಟಿನ ಮೂಟೆಯ ಚೆಲ್ಲಿಯಾದರೂ


ಖುರ್ಚಿಗೆ ಅಂಟಿ ಕೂರುವೆನು
 
ಎಂದು ಹೇಳುತ್ತಾ ರಾಜ್ಯವನ್ನು ಲೂಟಿ ಮಾಡುತ್ತಿರುವ ಭ್ರಷ್ಟ ಯಡ್ಡಿಯ ವರಸೆಗೆ ಬ್ರೇಕ್ ಹಾಕಲು ಸಾಧ್ಯವಾಗದೆ ಕೈಚೆಲ್ಲಿ ಕುಳಿತಿರುವ ಬಿಜೆಪಿ ಹೈಕಮಾಂಡು ಕೇಂದ್ರದ ಭ್ರಷ್ಟ ಆಡಳಿತದ ವಿರುದ್ಧ ಸಮರ ಸಾರಿದೆ. ಇದನ್ನೇನು ಹುಂಬತನ ಎನ್ನಬೇಕೋ, ವ್ಯವಸ್ಥೆಯ ದೋಷ ಎನ್ನಬೇಕೋ ತಿಳಿಯುತ್ತಿಲ್ಲ . 
 
ಇನ್ನು ಮತ್ತೊಮ್ಮೆ ಕುಮಾರಸ್ವಾಮಿಯವರಿಗೆ ಕೈತುಂಬಾ ಕೆಲಸ. ತಮ್ಮೊಡನೆ ಬರಲು ಬಯಸುವ ಶಾಸಕರನ್ನು ಗೋವಾ ಕಡಲತಡಿಯಲ್ಲಿ ನೆನೆಹಾಕಬೇಕು. ಅವರು ಕೇಳಿದಷ್ಟು ಸವಲತ್ತುಗಳನ್ನು ಪೀಕಬೇಕು. ರೆಸಾರ್ಟು ಮಾಲೀಕರುಗಳನ್ನು ಉದ್ಧಾರ ಮಾಡಬೇಕು. 
ಮೀಡಿಯಾ ಜನರಿಗಂತು ಮತ್ತೊಂದು ಹಬ್ಬ ಬಂತು. ಕ್ಷಣ ಕ್ಷಣಕ್ಕೂ ಬ್ರೇಕಿಂಗ್ ನ್ಯೂಸುಗಳು, ಚರ್ಚೆಗಳು ಮಾಡುತ್ತಾ ಟಿ ಆರ್ ಪಿ ಕಸರತ್ತಿನ ಪ್ರದರ್ಶನ. 
 



ಇವೆಲ್ಲದರ ನಡುವೆ ಹೈರಾಣಾಗುವ ಶ್ರೀಸಾಮಾನ್ಯ ತನ್ನ ನಸೀಬನ್ನು ದೂಷಿಸುತ್ತಾ ತಲೆ ಮೇಲೆ ಕೈ (ಕಾಂಗ್ರೆಸ್ಸ್ ಕೈ ಅಲ್ಲ)ಹೊತ್ತು ಕೂತು ಭ್ರಷ್ಟ ರಾಜಕಾರಣಿಗಳ ಸೋಗಲಾಡಿತನವನ್ನು ಶಪಿಸುತ್ತಾ ಕಾಯುತ್ತಾನೆ......ಬರಲಿರುವ ಚುನಾವಣೆಗಾಗಿ.....ಓಟಿಗಾಗಿ....ಗರಿಗರಿ ನೋಟಿಗಾಗಿ.......     

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ