ಸೋಮವಾರ, ಅಕ್ಟೋಬರ್ 12, 2015

ಪಕ್ಷ ಮಾಡೋದು :)

ನಮಸ್ಕಾರ , ಇವನ್ಯಾವನೋ ಅಮಾವಾಸ್ಯೆಗೊಂದ್ಸಲ ಹುಣ್ಣಿಮೆಗೊಂದ್ಸಲ ಕಾಣಿಸ್ಕೊತಾನೆ ಅಂತಾರಲ್ಲಾ ಹಾಗೇ ನಾನು ಈ ಅಮಾವಾಸ್ಯೆಯ ದಿನ ಮತ್ತೆ ಕಾಣಿಸ್ಕೊತಿದ್ದೀನಿ :) ಇರ್ಲಿ ವಿಷ್ಯಕ್ಕೆ ಬರೋಣ
ನಿನ್ನೆ ಅಂದ್ರೆ ಭಾನುವಾರದ ಸಂಜೆ ಮನೇಲಿ ಟಿವಿ ಮುಂದೆ ಕೂತು ಇಂಡಿಯಾ ಸೋಲೋದನ್ನ solo (ಏಕಾಂಗಿ) ಆಗಿ ನೋಡ್ತಾ  ಕೂತಿದ್ದೆ . ಮೊಬೈಲು ರಿಂಗಣಿಸಿತು , ಆ ಕಡೆಯಿಂದ ನನ್ನ ಚಡ್ಡಿ ದೋಸ್ತು ನಾಣಿ ಕರೆ ಮಾಡಿದ್ದ . ನಮ್ಮಿಬ್ಬರ ಮಧ್ಯೆ ನಡೆದ ಮಾತುಕತೆಯ ವಿವರ ನಿಮ್ಮ ಮುಂದೆ ಇಡ್ತಿದ್ದೀನಿ , ಮಂಡೆ ಬಿಸಿ ಮಾಡ್ಕೊಳ್ದೇ ಓದಿ . ...........

ನಾಣಿ : ಏನ್ ಗುರೂ ಎಲ್ಲಿದ್ದೀಯಾ ?
ನಾನು : ಮನೇಲಿದ್ದೀನಿ ಶಿಷ್ಯಾ , ಏನೋ ವಿಷ್ಯಾ ??
ನಾಣಿ : ಏನಿಲ್ಲಾ ಗುರೂ ......... ಅದೂ ಅದೂ ನಿನ್ನಿಂದ ಒಂದ್ ಹೆಲ್ಪ್ ಆಗ್ಬೇಕಿತ್ತು ಗುರೂ
ನಾನು : ಲೇ ಶಿಷ್ಯಾ ನನ್ ಹತ್ರ ಯಾಕೋ ಸಂಕೋಚ ಏನ್ ಹೇಳೊ
ನಾಣಿ  : ಏನಿಲ್ಲಾ ಗುರೂ ..... ಕೇಳಿದ್ಮೇಲೆ ಆಗೋಲ್ಲಾ ಅಂತ ಮಾತ್ರ ಹೇಳ್ಬೇಡ ...... ನನ್ ಮರ್ಯಾದೆ ಪ್ರಶ್ನೆ ....
ನಾನು  : ಮೊದ್ಲು ವಿಷ್ಯಾ ಏನಂತ ಹೇಳೋ , ಹುಳ ಬಿಡ್ಬೇಡ
ನಾಣಿ : ಏನಿಲ್ಲಾ ಗುರೂ , ಅರ್ಜೆಂಟಾಗಿ ಎರಡ್ ಸಾವ್ರ ದುಡ್ಡು ಬೇಕು ಗುರೂ ನಾಳೆ ಪಕ್ಷ ಮಾಡ್ಬೇಕು
ನಾನು : ಲೇ ತಗಡೂ ನನ್ಮಗನೇ ನೀನು ಪಕ್ಷ ಮಾಡ್ತೀಯಾ !!?? ತಮಾಷೆ ಮಾಡ್ತಿಲ್ಲ ತಾನೇ , ಭಾನ್ವಾರ ಯಾರಾದ್ರೂ ಓಸಿ ಎಣ್ಣೆ ಹೊಡೆಸಿದ್ರಾ ಹೆಂಗೆ !!??
ನಾಣಿ : ಏನ್ ಗುರೂ ನಮ್ಮಂಥ ಬಡವ್ರು ಪಕ್ಷ ಮಾಡ್ಬಾರ್ದಾ !!?? ನಾನು ಬಡವ ಇರ್ಬೋದು ಆದ್ರೆ ನಾಲ್ಕ್ ಜನರ ಮುಂದೆ ನಾವೂ ಹಿಂಗೆ ಪಕ್ಷ ಗಿಕ್ಷ ಮಾಡಿ ನಮ್ ಲೆವೆಲ್ ತೋರ್ಸ್ಬೇಕು ಗುರೂ
ನಾನು : ಅಲ್ಲೋ ಪಕ್ಷ ಮಾಡೋದು ಅಂದ್ರೆ ಹುಡ್ಗಾಟ ಕೆಟ್ಟೋಯ್ತಾ !!!?? ಎಂತೆಂತಾ ಘಟಾನುಘಟಿಗಳೇ ಮುಳುಗೋದ್ರು ಗೊತ್ತಾ !!?? ಅದೂ ಬರೀ ಎರಡು ಸಾವ್ರ ದುಡ್ಡಲ್ಲಿ !!!???
ನಾಣಿ : ಥೂ ಗುರೂ ಅದಲ್ಲಾ ಗುರೂ ..........
ನಾನು : ಮಾತಾಡ್ಬೇಡ ಮಗನೇ ನೀನು ........ ನಾನ್ ಹೇಳೋದ್ ಸುಮ್ನೆ ಕೇಳಿಸ್ಕೋ ಅಷ್ಟೇ
 ನಾಣಿ :    ಸರಿ ಹೇಳು ಗುರೂ .........
ನಾನು : ನಮ್ಮ ಮಾಮು (ಮಾಜಿ ಮುಖ್ಯಮಂತ್ರಿ) ಬಂಗಾರಪ್ಪ ಕಾಂಗ್ರೆಸ್ ಪಕ್ಷ ಬಿಟ್ಟು  ಪಕ್ಷ ಮಾಡಿದ್ರು "ಕರ್ನಾಟಕ ಕಾಂಗ್ರೆಸ್ ಪಕ್ಷ " ಅಂತ .......... ಆದ್ರೆ  ಅವ್ರಂಥ  ಮಾಸ್ ಲೀಡರ್ ಕೂಡಾ ಪಕ್ಷ ಬೆಳೆಸೋಕಾಗ್ದೇ ಮತ್ತೆ ಕಾಂಗ್ರೆಸ್ ಜೊತೆ ವಿಲೀನ ಮಾಡ್ಕೊಂಡ್ರು . ಅದಿರ್ಲಿ ಮೊನ್ನೆ ಮೊನ್ನೆ ನಮ್ ಯಡ್ಯೂರಪ್ಪನವ್ರು ಕೋಟ್ಯಾಂತರ ಖರ್ಚು ಮಾಡಿ ಕರ್ನಾಟಕ ಜನತಾ ಪಕ್ಷ ( ಕೆಜೆಪಿ ) ಕಟ್ಟಿ ಕೊನೆಗೆ ಸಿಕ್ಕಿದ್ದೇನು ತೆಂಗಿನಕಾಯಿ ಚಿಪ್ಪು ......... ಇನ್ನೂ  ಬೇಜಾನ್ ಜನ ಇದಾರೆ ಈ ಥರಾ ಪಕ್ಷ ಮಾಡ್ತೀವಿ ಅಂಥ ಫೋಸ್ ಕೊಟ್ಟು ಫ್ಯೂಸ್ ಕಳ್ಕೊಂಡೋರು ....... ಸದ್ಯಕ್ಕೆ ನಿಂಗೆ ಇವೆರಡು ಲೋಕಲ್ ಎಕ್ಸಾಂಪಲ್ ಸಾಕು ....... ನ್ಯಾಷನಲ್ ಲೆವೆಲ್ಲಲ್ಲಿ ಇನ್ನೂ ಬೇಜಾನ್ ಜನಾ ಇದ್ದಾರೆ ........ ಸದ್ಯಕ್ಕೆ ಇಷ್ಟ್ ಸಾಕ್ ....... ಅರ್ಥಾ ಆಯ್ತಾ (ಹುಚ್ಚ ವೆಂಕಟ್ ಸ್ಟೈಲಲ್ಲಿ )
ನಾಣಿ : ಅದ್ಸರಿ ಈ ರಾಜ್ಕೀಯದವ್ರ್ ವಿಷ್ಯಾ ನಂಗ್ಯಾಕ್ ಗುರೂ ...... ನಂಗೆ ಕಾಸು ಕೊಡಕ್ಕೆ ಆಗುತ್ತಾ ಆಗಲ್ವಾ ಅದ್ಹೇಳು ಸುಮ್ನೆ ?
ನಾನು : ರಾಜ್ಕೀಯದವ್ರ್ ವಿಷ್ಯಾ ಬೇಡಾ ಅಂತೀಯ ........ ಪಕ್ಷ ಮಾಡ್ತೀನಿ ಅಂತೀಯ .......... ರಾಜ್ಕೀಯಕ್ಕ್ ಬರ್ದೇ ಪಕ್ಷ ಕಟ್ಟಕಾಗುತ್ತಾ !!?? ನಿಂಗೇನು ತಲೆ ಕೆಟ್ಟಿದಿಯಾ ಹೆಂಗೆ ???
ನಾಣಿ : ತಲೆ ಕೆಟ್ಟಿರೋದು ನಂಗಲ್ಲಾ ಗುರೂ ನಿಂಗೆ ....... ಅದ್ಕೇ ನಾನ್ ನಿನ್ಗೆ ನ್ಯೂಸ್ ಚಾನಲ್ ಜಾಸ್ತಿ ನೋಡ್ಬೇಡ ನೀನೂ ಬುದ್ಧುಜೀವಿ ಆಗೋಯ್ತೀಯ ಅಂತ ಹೇಳೋದು
ನಾನು : ಲೇ ಶಿಷ್ಯಾ ನೀನು ಪಕ್ಷ ಮಾಡ್ಬೇಕು ಅಂಥ ದುಡ್ಡು ಕೇಳ್ದೆ ತಾನೇ ನನ್ನ
ನಾಣಿ : ಗುರೂ ನಾನ್ ದುಡ್ಡ್ ಕೇಳಿದ್ದು ರಾಜಕೀಯ ಪಕ್ಷ ಮಾಡೋಕಲ್ಲ ಗುರೂ , ನಾಳೆ ಮಹಾಲಯ ಅಮಾವಾಸ್ಯೆ ಆಲ್ವಾ ಅದ್ಕೇ "ಪಿತೃ ಪಕ್ಷ " ಮಾಡೋಕೆ ಗುರೂ .......
ನಾನು : >>>>>>>>>>>>>>>>>> <<<<<<<<<<<<<<<<<<<< ಹಲೋ ಹಲೋ ....... ಹಲೋ ..... ಏನೂ ಕೇಳಿಸ್ತಿಲ್ಲಾ ಮಗಾ ಆಮೇಲೆ ಕಾಲ್ ಮಾಡ್ತೀನಿ .........


 ಗಂಜಿಗೆ ಗತಿಯಿಲ್ಲಾ ನಂಜಿಗೆ ಬುಲಾವ್ ಅಂತಾರಲ್ಲ ಹಂಗೆ ನಾನೇ ಖಾಲಿ ಜೇಬಲ್ಲಿ ಕೂತಿದ್ದೀನಿ ಇವ್ನು ನಂಗೇ ಕಾಸ್ ಕೇಳ್ತಾನಲ್ಲ ಅದ್ಕೇ ಏನೂ ಕೇಳಿಸ್ತಿಲ್ಲ ಅಂತ ಡವ್ ಮಾಡ್ದೆ ........ ಒಂದ್ ಲೆವೆಲ್ಗೆ ನಾವೂ ಬುದ್ದುಜೇವಿಗಳೆ ಆಲ್ವಾ :)
 

 ಮಂಗಳವಾರ, ಏಪ್ರಿಲ್ 1, 2014

ಎಲೆಕ್ಷನ್ ಹನಿಗಳು


ರಾತ್ರಿ ಹನ್ನೆರಡಾದರೂ ಮಹಿಳೆ
ಒಬ್ಬಳೇ ಓಡಾಡಿದರೆ ಅದು ರಾಮರಾಜ್ಯ
ರಾತ್ರಿ ಒಂದಾದರೂ ಬಾರಿನ ಬಾಗಿಲು
ತೆರೆದೇ ಇದ್ದರೆ ಅದು " ಸಿದ್ರಾಮ" ರಾಜ್ಯ

----------------------------------


ಗೆಲ್ಲಲಿ ಮೋದಿ
ಗೆಲ್ಲಲಿ ರಾಹುಲ್ ಗಾಂಧಿ
ನಮಗೆ ಬೇಕಾಗಿರೋದು ಗಾದಿ
ಮತ್ತು ನೋಟಲ್ಲಿರೋ ಗಾಂಧೀ
ಅಂತಿದ್ದಾರೆ ಗೆದ್ದೆತ್ತಿನ ಬಾಲ ಹಿಡಿಯೋ ಮಂದಿ
------------------------
ಕನಕಪುರದಲ್ಲಿ ಕುಮಾರಣ್ಣ
ಇಟ್ಟರು ಕಣ್ಣೀರು
ಆಗಬಹುದೇ ಚಿಕ್ಕಬಳ್ಳಾಪುರದಲ್ಲಿ
ಪನ್ನೀರು !!??
-------------------------
ಐದು ವರ್ಷದ ಬಳಿಕ
ಮತ್ತೆ ಬಂದಿಹರು ಮಾಡಲೆಂದು
ಮತಯಾಚನೆ
ಮತ ನೀಡುವ ಮುನ್ನ
ಒಮ್ಮೆ ಸರಿಯಾಗಿ
ಮಾಡಿ ಯೋಚನೆ


ಶುಕ್ರವಾರ, ಜನವರಿ 10, 2014

ಬುದ್ಧಿ ಕೊಟ್ಟ ಬುದ್ಧ - ಸಣ್ಣ ಕತೆ

ಮೊನ್ನೆ ಮಧ್ಯಾಹ್ನ ಸುಮಾರು ಒಂದು ಗಂಟೆಯ ಸಮಯ.  ನಾನು ಟಿನ್ ಫ್ಯಾಕ್ಟರಿಯಿಂದ ಬಸ್ಸಲ್ಲಿ ಹೆಬ್ಬಾಳದ ಕಡೆಗೆ ಬರ್ತಿದ್ದೆ . ಬಸ್ಸು ನಾಗವಾರದ ಸಿಗ್ನಲ್ ದಾಟಿ ಮುಂದೆ ಬಂದಿತ್ತು . ನನಗೆ ಸಣ್ಣಗೆ ತೂಕಡಿಕೆ ಬಂದಿತ್ತು . ಬೈಕಿನವನ್ಯಾರೋ ಅಡ್ಡ ನುಗ್ಗಿದ ಅಂತ ಡ್ರೈವರ್ ಸಡನ್ನಾಗಿ ಬ್ರೇಕ್ ಹಾಕಿದ.ನಿದ್ದೆಯಿಂದ ಎದ್ದ ನಾನು ಹಾಗೇ ಕಿಟಕಿಯ ಕಡೆ ಕಣ್ಣು ಹಾಯಿಸಿದೆ . ದೇವರ ವಿಗ್ರಹಗಳು , ತುಳಸಿ ಕಟ್ಟೆಗಳನ್ನು ತಯಾರಿಸುವ ಅಂಗಡಿಯ ಮುಂದೆ ಬುದ್ಧನ ವಿಗ್ರಹವೊಂದು ನನ್ನ ಕಡೆ ನೋಡಿ ನಗುತ್ತಿತ್ತು . ಅಷ್ಟರಲ್ಲಿ ಬಸ್ ಮುಂದೆ ಹೊರಟಿತ್ತು. ಬುದ್ಧ ನನ್ನನ್ನು ಆವರಿಸಿದ್ದ. ಆ ನಿಷ್ಕಲ್ಮಶ ನಗು, ಆ ತೇಜಸ್ಸು ಕಂಡು ಒಂದು ಕ್ಷಣ ಬಸ್ಸನ್ನು ಅಲ್ಲಿಯೇ ನಿಲ್ಲಿಸಿ ಇಳಿದು ಬುದ್ಧನ ಬಳಿ ಓಡಬೇಕು ಅನ್ನಿಸಿತು . ಈ ಕ್ಷಣವೇ ಆ ವಿಗ್ರಹ ಕೊಂಡುಕೊಳ್ಳಬೇಕು ಅಂತ ಆಸೆಯಾಯ್ತು. ಬೆಲೆ ಒಂದಕ್ಕೆ ಎರಡಾದರೂ ಸರಿ ತಗೊಂಡೇಬಿಡಬೇಕು ಅಂತ ನಿರ್ಧಾರ ಮಾಡಿದೆ .

ಅಷ್ಟರಲ್ಲಿ .....................................................................
.................................................................
..................................................
"ಆಸೆಯೇ ದುಃಖಕ್ಕೆ ಮೂಲ " ಅನ್ನೋ ಬುದ್ಧನ ಮಾತು ನೆನಪಾಗಿ ಜ್ಞಾನೋದಯವಾಯ್ತು . ತೆಪ್ಪಗೆ ಮನೆ ಕಡೆ ಹೊರಟೆ .
ಚಿತ್ರ ಕೃಪೆ : ಅಂತರ್ಜಾಲ 


ಸೋಮವಾರ, ಡಿಸೆಂಬರ್ 23, 2013

ಅಸಾಮಾನ್ಯ ಅರವಿಂದ

ಕೊಟ್ಟ ಕುದುರೆಯ ಏರಲಾರದವ
ಶೂರನೂ ಅಲ್ಲ ಧೀರನೂ ಅಲ್ಲ
ಎಂದು ಜರಿದರು ಅಂದು
ಅಪವಿತ್ರ ಮೈತ್ರಿ ಎಂದು ಜರಿವರು ಇಂದು

ಜರಿವವರ ಜರಿಯಲು ಬಿಟ್ಟು
ಧೈರ್ಯದಿಂದ ಮುಂದಡಿಯಿಟ್ಟು
ಅಭಿವೃದ್ಧಿಪರ ಆಡಳಿತವನ್ನಿತ್ತು
ತೋರಿ ನಿಮ್ಮ ಕರಾಮತ್ತು

ಜನಲೋಕಪಾಲ ಜಾರಿಗೆ ತಂದು
ಜನಸಾಮಾನ್ಯರ ಮನವ ಗೆದ್ದು
ರಾಜಧಾನಿಯಲ್ಲಿ ರಾರಾಜಿಸಿರಿ
ಜನಜೀವನವ ಸುಧಾರಿಸಿರಿ

ಮಾದರಿ ರಾಜಕಾರಣಿ ಆಗಿ ನೀವು
ಪ್ರಗತಿ ಮಂತ್ರವ ಜಪಿಸುತ್ತ ಮರೆಸಿ ಜನರ ನೋವು
ಜಯಿಸಲಿ , ಜಗಮಗಿಸಲಿ ಜನಸಾಮಾನ್ಯ
ಉದಯಿಸಲಿ ಹೊಸದೊಂದು ರಾಮರಾಜ್ಯ
ಚಿತ್ರ ಕೃಪೆ : ಅಂತರ್ಜಾಲ 

ಬುಧವಾರ, ಅಕ್ಟೋಬರ್ 2, 2013

ಬಾ ಬೇಗ ಪ್ರಜ್ವಲಿಸು

ಸೀನ : ಏನ್ ಭಟ್ರೇ ಚೆನ್ನಾಗಿದ್ದೀರಾ? ಹೆಂಗೈತೆ ಬಿಜಿನೆಸ್ಸು?
ಭಟ್ರು  : ನೀವೆಲ್ಲ ಬಂದು ಟೀ ಕುಡ್ದು ಪುಕ್ಸಟ್ಟೆ ಪೇಪರ್ ಓದ್ಕಂಡು ಲೆಕ್ಕ ಬರಸೀ ಬರಸೀ ನನ್ ಬುಕ್ ತುಂಬೋಯ್ತು, ಈ ಹಾಳ್ ಹೊಟ್ಟೆ ಮಾತ್ರ ತುಂಬಲಿಲ್ಲ ಕಣ್ಲಾ ಸೀನ ....... ಅದಿರ್ಲಿ ಎಲ್ಲಲಾ ಹಳೇ ಬಾಕಿ?
ಸೀನ : ಅಯ್ಯೋ ಕೊಡ್ತೀವಿ ಸುಮ್ಕಿರ್ರಿ ಭಟ್ರೇ, ರೂಪಾಯ್ ರೇಟು ಬಿದ್ದೋಗಿ ನಮ್ ದೇಸಾನೇ ಸಾಲ ಮಾಡ್ಕಂಡ್ ಐತೆ ಇನ್ನು ನನ್ದು ನಿಮ್ದು ಯಾತರ ಲೆಕ್ಕ .... ಒಸೀ ಪೇಪರ್ ಕೊಡಿ ಇತ್ಲಾಗೆ
ಭಟ್ರು : "ಓಸೀ ಪೇಪರ್" ಒಸೀ ಯಾಕೆ ಪೂರಾನೆ ತಗೋ ...... ನೀ ಓದಿ ಉದ್ಧಾರ ಮಾಡೋದು ಅಷ್ಟರಲ್ಲೇ ಐತೆ
------------------------------------------------------------
-

ಸೀನ ಫುಲ್ ಇಂಟರೆಸ್ಟ್ ಆಗಿ ಪೇಪರ್ ಓದ್ತಿದ್ದಾನೆ ಅಷ್ಟರಲ್ಲಿ ನಮ್ ನಾಣಿ ಎಂಟ್ರಿ

ನಾಣಿ : ಏನ್ಲಾ ಸೀನ ನಂಗಿಂತ ಮುಂಚೆನೇ ಬಂದು ಕುಂತಿದ್ದೀಯ ಇವತ್ತು.
ಸೀನ : ಹ್ಞೂ ಕಣ್ಲಾ ಇತ್ತೀಚಿಗೆ ಯಾಕೋ ರಾತ್ರಿ ಹೊತ್ತು ಸರಿಯಾಗಿ ನಿದ್ದೇನೆ ಬತ್ತಿಲ್ಲ ಕಣ್ಲಾ, ಅದ್ಯಾವ್ದೋ ಲೂಸಿಯಾ ಮಾತ್ರೆ ಬಂದೈತಂತೆ!? ಎಲ್ಲ್ ಸಿಗ್ತದೆ ಅಂತ ನಿಂಗೇನಾರ ಗೊತ್ತಾ?
ನಾಣಿ : ಲೇ ಲೂಸ್ ಮೂದೇವಿ ಅದು ಪಿಚ್ಚರ್ ಹೆಸ್ರು ಕಣ್ಲಾ  ಆ ಥರ ಮಾತ್ರೆ ಸಿಗೋದೂ ಒಂಥರಾ ಕನಸು ಕಣ್ಲಾ 
ಸೀನ : ಈ ಪಿಚ್ಚರ್ನವ್ರು ಇನ್ನೂ ಏನೇನೆಲ್ಲಾ ಸ್ಟೋರಿ ತಗೀತಾರೋ ಗೊತ್ತಿಲ್ಲ, ಒಂಥರಾ ಕಾಸೂ ಹಾಳು ತಲೇನೂ ಬೋಳು ಕಣ್ಲಾ ಜನಗಳ್ದು ........
ನಾಣಿ : ಆ ಪಿಚ್ಚರ್ ನೋಡೋಕೆ ಮೊನ್ನೆ ನಾನೂ ಕೆಂಚ ಇಬ್ರೂ ಹೋಗಿದ್ದೋ, ನಾವು ಪಿಚ್ಚರ್ ನೋಡೋಕೆ ಹೋಗಿದ್ದು ನಿಜಾನಾ ಇಲ್ಲಾ ಕನಸಾ ಅಂತ ಇನ್ನೂ ಕನ್ಫ್ಯೂಸ್ ಆಗೇ ಇದ್ದೀನಿ ಕಣ್ ಸೀನಾ
ಸೀನ : ನನ್ನಂತ ಬುದ್ವಂತನ್ನ ಜೊತೆಗೆ ಕರ್ಕಂಡು ಹೋಗಿದ್ರೆ ನಾನು ಸ್ಟೋರಿ ಏನು ಅಂತ ಅರ್ಥ ಮಾಡ್ಕಂಡು ನಿಮಗೂ ಹೇಳ್ತಿದ್ದೆ, ನನ್ನೇ ಬುಟ್ಬುಟ್ಟು ಹೋಗಿದೀರಲ್ಲ ಬಡ್ದೆತ್ತವೆ ನೀವು
ನಾಣಿ : ಅದೊಂದ್ ಬಾಕಿ ಇತ್ತು ನೋಡು ನಮ್ಗೆ, ಅದೇನೋ ಅಂತಾರಲ್ಲ "ಏನೋ ಬಂದು ತಲೇಗ್ ಒಡೀತು" ಹಂಗಾಗಿರದು ನಮ್ ಕಥೆ ನೀನೂ ಬಂದಿದ್ರೆ
ಸೀನ : ಯಾಕ್ಲಾ ಹಂಗಂತೀಯ!!?? ಹೋಗ್ಲಿ ಬುಡು, ಈ ಪಿಚ್ಚರ್ ಅಂದಾಗ ಗೆಪ್ತಿಗ್ ಬಂತು. ನಮ್ ಮುಂಗಾರು ಮಳೆ ಪಿಚ್ಚರ್ ತೆಗದ್ನಲ್ಲ ಕೃಷ್ಣಪ್ಪ ಆವಯ್ಯ ನಮ್ ಗೌಡ್ರು ಪಕ್ಸಕ್ಕೆ ಪ್ರೆಸಿಡೆಂಟ್ ಆಗ್ಬುಟ್ನoತೆ!?
ನಾಣಿ : ಲೇ ನಿನ್ ಬುದ್ದಿಗ್ ನನ್ ಹಳೇ ಯಕ್ಕಡ ಹಾಕಾ, ಅದ್ಕೇ ದೊಡ್ಡೋರ್ ಏಳದು ಒಸೀ ಜನರೇಟರ್ ನಾಲೆಜ್ ಇರ್ಬೇಕು ಅಂತ. ಆ ಕೃಷ್ಣಪ್ಪನೇ ಬ್ಯಾರೆ ಈ ಕೃಷ್ಣಪ್ಪನೇ ಬ್ಯಾರೆ ಕಣ್ಲಾ
ಸೀನ : ಹೌದೇನ್ಲಾ ನಾಣಿ ನಾನು ಆ ಪಿಚ್ಚರ್ ಕ್ರಿಷ್ಣಪ್ಪನೆ ಅಂತಿದ್ದೆ ಕಣ್ಲಾ
ನಾಣಿ : ಲೇ ಸೀನಾ ಗುಬಾಲ್ ನನ್ಮಗ್ನೇ ಆ ಕೃಷ್ಣಪ್ಪ ಈ. ಕೃಷ್ಣಪ್ಪ , ಈ ಕೃಷ್ಣಪ್ಪ ಎ. ಕೃಷ್ಣಪ್ಪ ಗೊತ್ತಾಯ್ತಾ ?
ಸೀನ : ಏನ್ಲಾ ಇದು ಅ ಆ ಇ ಈ ಏಳ್ತಾ ಇದೀಯಾ, ಕಲಿಯೋ ಟೈಮಲ್ಲೇ ಕಲೀನಿಲ್ಲ ನಾವು..... ನೀನು ಇವಾಗ ಕಲ್ಸಕ್ ಬಂದಿದ್ದೀಯ. ಒಸೀ ಕರೆಟ್ಟಾಗಿ ಅರ್ಥ ಆಗಂಗೆ ಏಳಿ ಪುಣ್ಯ ಕಟ್ಕಳ್ಳ
ನಾಣಿ : ನಿಂಗೆ ಅರ್ಥ ಮಾಡ್ಸೋ ಹೊತ್ಗೆ "ಮುಂಗಾರು ಮಳೆ ಭಾಗ-೨" ಬಂದು ತೋಪೆದ್ದ್ ಓಗಿರ್ತದೆ ಬುಡು. ಆದ್ರೆ ಒಂದಂತೂ ಮೋಸ ಕಣ್ಲಾ.
ಸೀನ : ಏನ್ಲಾ ಅದು!?
ನಾಣಿ : ಅಲ್ಲಾ ನಮ್ ದೊಡ್ ಗೌಡ್ರು ಈ ಸಲ ಯಾರ್ತಾವಾನೂ ಭವಿಸ್ಯ ಕೇಳ್ದೆ ಅಧ್ಯಕ್ಸರ್ನ ಆಯ್ಕೆ ಮಾಡುದ್ರಾ ಅಂತ ನಂಗೆ ಒಸೀ ಡೌಟ್ ಅದೇ ಕಣ್ಲಾ
ಸೀನ : ಅದ್ಯಾಕಪ್ಪ ನಿಂಗೆ ಅಂತ ಡೌಟು!? ನಿನ್ ಕೋಳಿ ಕೇಳಿ ನಮ್ ಗೌಡ್ರು ಮಸಾಲೆ ರುಬ್ಬೇಕಿತ್ತಾ!?
ನಾಣಿ : ಇಲ್ಲಾ ಕಣಲೇ, ಅವೆಲ್ಲ ರಾಜ್ಕೀಯದ್ ನ್ಯಾಕು ನಿನ್ನಂತ ಎಳ್ಸುಗಳ್ಗೆ ಅರ್ಥಾ ಆಗಕಿಲ್ಲ. ಇವಾಗ ಒಸೀ ಯೋಚ್ನೆ ಮಾಡು , ಕಾಂಗ್ರೆಸ್ ಅಧ್ಯಕ್ಸರು ಯಾರು ಪರಮೇಶ್ವರ್, ಬಿಜೆಪಿ ಅಧ್ಯಕ್ಸರು ಯಾರು ಪ್ರಹ್ಲಾದ್ ಜೋಷಿ..... ಇಬ್ರ್ ಹೆಸ್ರೂ "P" ಅಕ್ಸರದಿಂದ ಸುರು ಆಯ್ತದೆ ಆಲ್ವಾ ಇವ್ರೂ ಅದೇ ಅಕ್ಸರದಿಂದ ಸುರು ಆಗೋ ಎಸ್ರು ಇರೋರ್ಗೆ  ಅಧ್ಯಕ್ಸರ ಸೀಟ್ ಕೊಡ್ಬೇಕಿತ್ತು ಅಂತ ನನ್ ಲೆಕ್ಕಾಚಾರ.
ಸೀನ : ಅಂತವ್ರ್ ಯಾರವ್ರೋ ಜೆಡಿಎಸ್ನಾಗೆ!? ಪಿ ಜಿ ಆರ್ ಸಿಂಧ್ಯಾನಾ!?
ನಾಣಿ : ನೀನೊಳ್ಳೆ ಚೆನ್ನಾಗ್ ಹೇಳ್ದೆ ಕಣ್ಲಾ, ಆವಯ್ಯ ಕನಕ್ಪುರದಾಗೆ ಪಕ್ಸ ಕಟ್ಟೋದ್ ಕಷ್ಟ ಇನ್ನು........
ಸೀನ : ಮತ್ತೆ ಇನ್ಯಾರ್ಲಾ!?
 ನಾಣಿ : ಇಲ್ವೇನ್ಲಾ ನಮ್ ಯುವ ನಾಯಕ ............ ರೇವಣ್ಣನ ಮಗ ಪ್ರಜ್ವಲ್ ಗೌಡ
ಸೀನ : ಏನ್ಲಾ ರೇವಣ್ಣನ್ ಮಗ ಅಷ್ಟು ಪೇಮಸ್ಸಾ!?
ನಾಣಿ : ಅಯ್ಯೋ ಪೇಮಸ್ ಆಗಿಲ್ಲ ಅಂದ್ರೆ ಪೇಮಸ್ ಮಾಡನ ಬುಡ್ಲಾ, ಇವಾಗ ಮೊನ್ನೆ ನಮ್ ದುನಿಯಾ ವಿಜೀದು "ಜಯಮ್ಮನ ಮಗ" ಅನ್ನೋ ಪಿಚ್ಚರ್ ಬಂದಿತ್ತು  ........  ನಮ್ ಕುಮಾರಣ್ಣ ಹೆಂಗಿದ್ರೂ ಪ್ರೊಡ್ಯೂಸರ್ರು, ನಮ್ ಭಟ್ರ ಡೈರೆಕ್ಸನ್ನಾಗೆ "ರೇವಣ್ಣನ ಮಗ" ಅನ್ನೋ ಪಿಚ್ಚರ್ ತಗಿಯೋದು. ಹೆಂಗದೆ ನನ್ ಏಡ್ಯಾ :)
ಸೀನ : ಅಲ್ಲಾ ನಮ್ ಭಟ್ರು ಟೀ ಕಾಪಿ ಮಾಡೋದೇ ಈ ಚಂದ ಇನ್ನು ಪಿಚ್ಚರ್ ಡೈರೆಕ್ಸನ್ ಎಂಗ್ಲಾ ನಾಣಿ !?
ನಾಣಿ : ಲೇ ಗುಬಾಲ್, ಭಟ್ರು ಅಂದ್ರೆ ಈ ಭಟ್ರಲ್ಲ ....... ಯೋಗ್ರಾಜ್ ಭಟ್ರು ಕಣಲೇ

ಅಷ್ಟು ಹೊತ್ತು ಸುಮ್ಮನಿದ್ದ ಭಟ್ಟರು ರಾಂಗ್ ಆದ್ರು. ಇನ್ನೂ ಸುಮ್ಮನಿದ್ರೆ ಇವ್ರು ನನ್ ಬುಡಕ್ಕೇ ಬಿಸಿ ಮುಟ್ಟಿಸ್ತಾರೆ ಅಂತ ಅವರೂ ಅಖಾಡಕ್ಕೆ ಎಂಟ್ರಿ ಆದ್ರು.

ಭಟ್ರು : ಲೇ ಅಲಾಲ್ ಟೋಪಿ ನನ್ಮಕ್ಳ ಮಾಡೋಕೆ ಕ್ಯಾಮೆ ಇಲ್ವೇನ್ಲಾ ನಿಮ್ಗೆ? ನಿಮ್ಗೇನ್ಲಾ ಗೊತ್ತು ನಮ್ ದ್ಯಾವೇಗೌಡ್ರ್ ಬಗ್ಗೆ, ಅವ್ರು ಏನೇ ಯೋಚ್ನೆ ಮಾಡುದ್ರು ಕಮ್ಮಿ ಅಂದ್ರೂ ಐದ್ಹತ್ತು ವರ್ಸ ಮುಂದಿಂದು ಯೋಚನೆ ಮಾಡ್ತಾರೆ ಕಣ್ರೋ
ನಾಣಿ : ಏನ್ ಭಟ್ರೇ ಹಂಗಂದ್ರೆ, ನಮ್ ರೇವಣ್ಣನ ಮಗ ರಾಜ್ಯಾಧ್ಯಕ್ಸ ಆಗೋಕೆ ಲಾಯಕ್ಕಲ್ಲ ಅಂತೀರಾ
ಭಟ್ರು : ನಾನು ಹಂಗೆಲ್ಲಿ ಹೇಳಿದ್ನೋ , ಗೌಡ್ರ್ ಲೆಕ್ಕಾಚಾರಾನೆ ಬ್ಯಾರೆ. ಇವಾಗ ನಮ್ ರಾಷ್ಟ್ರಪತಿ ಯಾರಪ್ಪಾ ಪ್ರಣವ್ ಮುಖರ್ಜೀ ತಾನೇ
ನಾಣಿ : ಹೌದು
ಭಟ್ರು : ಅವ್ರಗಿಂತ ಮುಂಚೆ ಆಯಮ್ಮ ಪ್ರತಿಭಾ ಪಾಟೀಲು ರಾಷ್ಟ್ರಪತಿ ಆಗಿದ್ರು
ನಾಣಿ : ಓಹ್ .......... ಅರ್ಥಾ ಆಯ್ತು ಭಟ್ರೇ ................. ಅಲ್ಲಿಗೆ ನಮ್ ಮುಂದಿನ ರಾಷ್ಟ್ರಪತಿ ಪ್ರಜ್ವಲ್ ಗೌಡ್ರು ಅಂದಂಗಾಯ್ತು. ನೀವೂ ಭಲೇ ಐನಾತಿ ಭಟ್ರೇ ಬುಡಿ
ಭಟ್ರು : ನಾನು ಐನಾತಿ ಅನ್ನೋದ್ನ ನೀನೇನ್ಲಾ ನಂಗೆ ಏಳದು ........... ನಂಗೆ ಯಾವತ್ತೋ ಗೊತ್ತು ......... ಹಳೇ ಬಾಕಿ ಚುಕ್ತಾ ಮಾಡ್ತೀನಿ ಅಂದಿದ್ದಲ್ಲ ತಗೀ ಕಾಸು
ನಾಣಿ : ಲೆಕ್ಕ ಹಾಕಿ ಮಡಗಿರಿ ಭಟ್ರೇ ............ ನಮ್ ಗೌಡ್ರು ಮೊಮ್ಮಗ ರಾಷ್ಟ್ರಪತಿ ಆಯ್ತಿದ್ದಂಗೆ ಕೊಟ್ಬುಡ್ತೀನಿ ........... ಬಾರ್ಲಾ ಸೀನ "ಜಯಮ್ಮನ ಮಗ" ಪಿಚ್ಚರ್ ನೋಡ್ಕಂಬರಣ

ಹೀಗ್ ಹೇಳಿ ನಾಣಿ ಮತ್ತು ಸೀನ ಅಲ್ಲಿಂದ ಎಸ್ಕೇಪ್ ಆದ್ರು. ಭಟ್ರು ಲೆಕ್ಕದ ಬುಕ್ಕು ಪಕ್ಕಕ್ಕೆ ತೆಗೆದಿಟ್ರು.

ಚಿತ್ರಕೃಪೆ : ದಿ ಹಿಂದೂ ಪತ್ರಿಕೆ
 
ಬುಧವಾರ, ಆಗಸ್ಟ್ 28, 2013

ರೂಪಾಯಿ ಮತ್ತು ರೋಧನೆ

ಏಳು ರೂಪಾಯಿಯೇ  ಏಳು
ಮಂಕಾಗಿ ಮಲಗದಿರು ಬೇಗ ನೀ ಮೇಲೇಳು

ನಿನಗೇನು ಬೇಕು ಕೇಳು
ಪ್ರೋಟೀನು, ವಿಟಮಿನ್ನು
ಎಲ್ಲವನು ಕೊಟ್ಟೇನು
ಬೇಕು ಬೇರಿನ್ನೇನು!!??

ಏಳು ರೂಪಾಯಿಯೇ  ಏಳು
ಮಂಕಾಗಿ ಮಲಗದಿರು ಬೇಗ ನೀ ಮೇಲೇಳು

ಅನುದಿನದ ಜರೂರತ್ತುಗಳೆಲ್ಲ
ಗಗನಮುಖಿಯಾಗಿವೆಯಲ್ಲ
ನೀ ಹೀಗೆ ಹಿಡಿದರೆ ಹಾಸಿಗೆ
ಬಡವ ನಾ ಬದುಕಲಿ ಹೇಗೆ?

ಏಳು ರೂಪಾಯಿಯೇ  ಏಳು
ಮಂಕಾಗಿ ಮಲಗದಿರು ಬೇಗ ನೀ ಮೇಲೇಳು

ನನ್ನ ಬವಣೆಗಳ ಆಳುವವರರಿತಿಲ್ಲ
ಅಳುವೊಂದೇ ಉಳಿದಿದೆ ನನಗೆ
"ಸಂಭವಾಮಿ ಯುಗೇ ಯುಗೇ"
ಎಂದ ಶ್ರೀ ಕೃಷ್ಣ ಬಾ ಬೇಗ.... ಈ ಬಡವನ ಉಳಿಸೀಗ

ಏಳು ರೂಪಾಯಿಯೇ  ಏಳು
ಮಂಕಾಗಿ ಮಲಗದಿರು ಬೇಗ ನೀ ಮೇಲೇಳು

ಚಿತ್ರಕೃಪೆ: ಅಂತರ್ಜಾಲ

ಮಂಗಳವಾರ, ಜುಲೈ 23, 2013

ಡಿಕೆಶಿ ಧಮಾಕಾ ಆಫರ್

ಚಿತ್ರಕೃಪೆ : ಅಂತರ್ಜಾಲ

ಚಿತ್ರಕೃಪೆ : ಅಂತರ್ಜಾಲ
                        ಒಂದೇ ಕಲ್ಲಲ್ಲಿ ಎರಡು ಹಕ್ಕಿ ಅಂದ್ರೆ ಇದೇ ಇರಬೇಕು. ನಮ್ಮ ಮಾಮು (ಮಾಜಿ ಮುಖ್ಯಮಂತ್ರಿ) ಹೆಚ್.ಡಿ.ಕುಮಾರಸ್ವಾಮಿ ಕೃಪೆಯಿಂದ ತೆರವಾದ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆ ಕುಮಾರಸ್ವಾಮಿಯವರ ಪರಮಶತ್ರು ಡಿ.ಕೆ.ಶಿವಕುಮಾರ್ ಪಾಲಿಗೆ ವರವಾಗಿ ಪರಿಣಮಿಸಿದೆ. 'ಕಳಂಕಿತ'ರೆಂಬ ಹಣೆಪಟ್ಟಿ ಹೊತ್ತು  ಸಚಿವ ಸ್ಥಾನದಿಂದ ವಂಚಿತರಾದ ಶಿವಕುಮಾರ್ ಒಳ್ಳೆ ಒಳ್ಳೆ ಪಟ್ಟುಗಳನ್ನು ಪ್ರದರ್ಶಿಸಲು ಈಗ ಸದವಕಾಶ ದೊರೆತಿದೆ. ಇದಕ್ಕಾಗಿ ಅವರು ಕುಮಾರಸ್ವಾಮಿಯವರಿಗೆ ಒಂದು ಥ್ಯಾಂಕ್ಸ್ ಹೇಳಲೇಬೇಕು. ಡಿಕೆಶಿ ತಟಸ್ಥವಾಗಿ ಉಳಿದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಕಷ್ಟಕರ ಎಂದು ಅರಿತಿರುವ ಕಾಂಗ್ರೆಸ್ ಮುಖಂಡರು ಡಿಕೆಶಿ ತಮ್ಮನನ್ನೇ ಸ್ಪರ್ಧಾಳು ಮಾಡಿದರೆ ಆಗ ಡಿಕೆಶಿ ತಟಸ್ಥವಾಗಿ ಉಳಿಯುವ ಮಾತೆ ಇಲ್ಲ ಅಂತ ಮಾಸ್ಟರ್ ಪ್ಲಾನ್ ಮಾಡಿದರು. ಆದರೆ 'ನೀವು ಚಾಪೆ ಕೆಳಗೆ ನುಸುಳಿದರೆ ನಾನು ರಂಗೋಲಿ ಕೆಳಗೆ ನುಸುಳ್ತೀನಿ' ಅಂದ ಡಿಕೆಶಿ ನನಗೆ ಸಚಿವ ಸ್ಥಾನ ಕೊಟ್ಟರೆ ಮಾತ್ರ ನನ್ನ ತಮ್ಮನನ್ನು ಚುನಾವಣೆಗೆ ಸ್ಪರ್ಧಿಸಲು ಒಪ್ಪಿಸ್ತೀನಿ ಅಂತ ಪಟ್ಟು ಹಾಕಿದ್ದಾರೆ.

                       ಸಿದ್ಧರಾಮಯ್ಯ ಸರ್ಕಾರದ ವರ್ಚಸ್ಸನ್ನು ಉಳಿಸಿಕೊಳ್ಳಲು ಹಾಗೂ ಮುಂಬರುವ ಲೋಕಸಭಾ ಚುನಾವಣೆಗೆ ಉತ್ಸಾಹದಿಂದ ಮುನ್ನುಗ್ಗಲು ಈ ಉಪಚುನಾವಣಾ ಫಲಿತಾಂಶ ಅತ್ಯಂತ ಪ್ರಮುಖವಾಗಿದ್ದು ಶತಾಯಗತಾಯ ಗೆಲ್ಲಲೇ ಬೇಕಾದ ಅನಿವಾರ್ಯತೆಗೆ ಕಾಂಗೈ ಸಿಲುಕಿದೆ. ಇದಕ್ಕಾಗಿ ಏನು ಬೇಕಾದರೂ ಮಾಡಲು ತಯಾರಿರುವ ಪಕ್ಷ ರಾಹುಲ್ ಗಾಂಧಿಯ ಸಮ್ಮುಖದಲ್ಲಿ ಡಿಕೆಶಿ ಜೊತೆ ರಾಜಿ ಮಾಡಿಕೊಂಡು ಸಂಪುಟದರ್ಜೆ ಸಚಿವ ಸ್ಥಾನಮಾನ ನೀಡಿ ಆತನ ತಮ್ಮ ಡಿ.ಕೆ.ಸುರೇಶನಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಟ್ಟೇ ಕೊಡುತ್ತದೆ.

                       ಅಲ್ಲಿಗೆ ರಾಷ್ಟ್ರೀಯ ಪಕ್ಷವೊಂದು ಕಳಂಕಿತ ಎಂಬ ಪಟ್ಟ ಹೊತ್ತ ವ್ಯಕ್ತಿಯ ಮುಂದೆ ಮಂಡಿಯೂರಿ ಶರಣಾಗುವ ಸ್ಥಿತಿಗೆ ಬಂದು ತಲುಪಿದೆ. 
                 
            

ಶನಿವಾರ, ಜೂನ್ 29, 2013

ಒಂದಿಷ್ಟು ಅಡ್ಡಾದಿಡ್ಡಿ ಹನಿಗಳು :)

ಮಳೆ ಬಂದ ದಿನ ಇಳೆ
ನೆನೆದು ಘಮ್ಮೆಂದಳು
ನಾ ನಿನ್ನ ಮುಡಿಯ
 ಮಲ್ಲಿಗೆಯ ನೆನೆದೆ
ಮೈ ಜುಮ್ಮೆಂದಿತು
--------------------------------

ಚಿನ್ನದ ಬೆಲೆ ಇಳಿಯುತ್ತಿದೆ
ನಲ್ಲೆ ಪ್ರತಿದಿನ
ಅದಕ್ಕೇ ಇನ್ನು ಮುಂದೆ
"ಪೆಟ್ರೋಲ್" ಎಂದು ಕರೆಯಲೇ ನಿನ್ನ ನಾ

-------------------------------

ನಾ ಕಂಡ ಹುಡುಗಿ ಬೆರಗಾಗಿಸುವಷ್ಟು ಬೆಡಗಿ
ಕೆನ್ನೆಯಲ್ಲಿ ಗುಳಿ ಬೀಳುವುದಿಲ್ಲ ಅವಳು ನಕ್ಕಾಗ
ಆದರೂ ನಾ ಪ್ರೀತಿಯಲ್ಲಿ ಬಿದ್ದೆ
ಮೊದಲ ಬಾರಿಗೇ ನನ್ನೆದುರು ಅವಳು ಸಿಕ್ಕಾಗ
------------------------------

ಅವಳು ತುಂಬಾ ಸಿಂಪಲ್ಲು
ಮುಖದಲ್ಲಿಲ್ಲ ಒಂದೂ ಪಿಂಪಲ್ಲು
ನಕ್ಕರೆ ಕೆನ್ನೆಯಲ್ಲಿ ಬೀಳುತ್ತೆ ಡಿಂಪಲ್ಲು
ಅವಳ ಹಿಂದೆ ಬಿದ್ದೀರಿ ಜೋಕೆ
ಅವರಣ್ಣ ಮುರಿದಾನು ನಿಮ್ಮ ಹಲ್ಲು

-----------------------------

ಸನಿಹವಿದ್ದರೂ ವಿರಹದ ಬೇಗೆ ನೀಡಿ
ಬಯಸಿದ್ದು ಬಳಿಯಿದ್ದರೂ ಸಿಗದಂತೆ ಕಾಡಿ
ತಮಾಷೆ ನೋಡುವ ದೇವನೇ
ಅರಿಯಲಾರೆಯಾ ಈ ಬಡಪಾಯಿಯ ವೇದನೆ

---------------------------------


"ನಲ್ಲೆ ನೀ ಮುನಿಸಿಕೊಂಡರೆ ಬಲು ಸೊಗಸಾಗಿ ಕಾಣುವೆ"
ಎಂದು ಹೇಳಿ ಮಾಡಿದೆ ದೊಡ್ಡದೊಂದು ಪ್ರಮಾದ
ಈಗಂತೂ ಕೋಪವೇ ನಿನ್ನ ಒಡವೆ - ಮೊಡವೆ
ನನ್ನದು ಬರಿಯ ಆರ್ತನಾದ

----------------------------------

ಕೂಡಿ ಬಾಳಿದರೆ ಸ್ವರ್ಗಸುಖ
ಎಂದು ಅವಳನ್ನು ಕೂಡಿಕೊಂಡೆ
ನನ್ನದೆಂಬುದೇನೂ ಉಳಿದಿಲ್ಲ
ಎಲ್ಲವನ್ನೂ ಕಳೆದುಕೊಂಡೆ

---------------------------------

ಖರೀದಿಸುವ ಗೋಜಿಲ್ಲ
ಯಾವುದೇ ಅಬಕಾರಿ ಮಾಲು
ನಲ್ಲೆ ಆ ನಿನ್ನ ಹೊಳೆವ ಕಣ್ಣುಗಳು
ಏರಿಸಿವೆ ನನ್ನಲ್ಲಿ ಅಮಲು

---------------------------------


ಇಷ್ಟು ಬೇಗನೆ ನಿದಿರೆಗೆ
 ಜಾರದಿರು ನೀರೆ
ಹಾಗೇನಾದರೂ ಆದರೆ
 ಕನಸಲ್ಲಾದರೂ ನೀ ಬಾರೇ

--------------------------------------

ನಲ್ಲೆ ನಿನ್ನೊಡನೆ ಮಾತಾಡಿದಷ್ಟೂ
ಮಾತು ಮುಗಿಯುವುದಿಲ್ಲ
ಅಕ್ಷಯಪಾತ್ರೆಯ ಹಾಗೆ
ನುಡಿದಷ್ಟೂ ಸವಿ - ಬಗೆದಷ್ಟೂ ಸಿಹಿ

--------------------------------------

ನಲ್ಲ, ಹೋಗೋಣವೆ ಮಧುಚಂದ್ರಕೆ?
ನಲ್ಲೆ, ನೀನಿರಲು ಮಧುವಷ್ಟೇ ಸಾಕು ಚಂದಿರನೇಕೆ?
ಚಂದಿರ ಬೇಕು ಬೆಳಕು ಬೀರೋಕೆ
ನೀನಿರಲು ಬೇರೆ ಬೆಳಕು ಬೇಕೇ?

-------------------------
ಚಿತ್ರ ಕೃಪೆ : ಅಂತರ್ಜಾಲ

ಚಿತ್ರ ಕೃಪೆ : ಅಂತರ್ಜಾಲ

ಮಂಗಳವಾರ, ಮೇ 7, 2013

ಓ ನನ್ನ ಮಗುವೇ ...............


ಮಡಿದ ವೀರಯೋಧನ ಶವವು ಮನೆಯಂಗಳಕೆ ಬಂದಿತ್ತು
 ಅಳಲಿಲ್ಲ ಅವಳು, ಬವಳಿ ಬೀಳಲೂ ಇಲ್ಲ
ಸುತ್ತಲೂ ನೆರೆದಿದ್ದ ಗೆಳತಿಯರು ಹೇಳಿದರು
ಕಣ್ಣೀರ್ಗರೆಯಬೇಕು ಅವಳು, ಇಲ್ಲದಿರೆ ಉಳಿಯಳು

ಅಲ್ಲಿದ್ದ ಜನರೆಲ್ಲ ಹಿತಮಿತದಿ  ಅವನ ಗುಣಗಾನ
ಮಾಡಿದರು 
ಪ್ರೀತಿಗೆ ಅರ್ಹ ಎಂದವನ ಹೊಗಳಿದರು
ನಿಜವಾದ ಗೆಳೆಯ, ಶ್ರೇಷ್ಠ ಶತ್ರು ಎಂದು ಕೊಂಡಾಡಿದರು
ಅವಳು ಮಾತ್ರ ಮಾತಾಡಲಿಲ್ಲ, ನಿಂತಲ್ಲಿಂದ ಅಲುಗಾಡಲಿಲ್ಲ

ಅಲ್ಲಿಯೇ ನಿಂತಿದ್ದ ಕನ್ಯೆಯೊಬ್ಬಳು ತಾನು
ಯೋಧನ ಶವದೆಡೆಗೆ ಮುಂದಡಿಯ ಇಟ್ಟಳು
 ಮುಚ್ಚಿದ್ದ ಹೊದಿಕೆಯನು ತೆರೆದಳು
ಆಗಲೂ ಅವಳು ಅಳಲಿಲ್ಲ, ತೋಯಲಿಲ್ಲ

ಅಲ್ಲಿಯೇ ಕುಳಿತಿದ್ದ ತೊಂಭತ್ತರ ಮುದುಕಿ
ಅವನ ಕಂದಮ್ಮನನ್ನು ತಂದಿವಳ ಮಡಿಲಲ್ಲಿ ಇಡಲು
ಬಿಸಿಲ್ಗಾಲದಲಿ  ಬಿರುಗಾಳಿ ಬಂದಂತೆ ಹರಿಸಿದಳು ಅಶ್ರುಧಾರೆ
"ಓ ನನ್ನ ಮಗುವೇ ................ ನಾ ನಿನಗಾಗಿ ಉಳಿವೆ
ನಿನಗಾಗಿ ಉಳಿವೆ"

ಮೂಲ : ಆಲ್ಫ್ರೆಡ್ ಟೆನ್ನಿಸನ್
ಅನುವಾದ : ವಿಜಯ್ ಹೆರಗು

ಗುರುವಾರ, ಏಪ್ರಿಲ್ 18, 2013

ನಾಣಿ ಇನ್ ರೆಸ್ಟೋರೆಂಟ್

ಕೃಪೆ : ಅಂತರ್ಜಾಲ
ಅದೊಂದು ರೆಸ್ಟೋರೆಂಟ್. ನಮ್ ನಾಣಿ ಬಿರ್ಯಾನಿ ತಿಂತಾ ಕೂತಿದ್ದಾನೆ. ಪ್ಲೇಟಿನಲ್ಲಿ ಇನ್ನೂ ಸ್ವಲ್ಪ ಬಿರ್ಯಾನಿ ಇದೆ. ಅಷ್ಟರಲ್ಲಿ ನಾಣಿ ಮೊಬೈಲ್ ರಿಂಗಣಿಸಿತು. ನಾಣಿ ಲವರ್ ಫೋನ್ ಬಂದ ಖುಷಿಯಲ್ಲಿ ಆರಾಮಾಗಿ ಮಾತಾಡ್ತಿದ್ದಾನೆ. ಟೇಬಲ್ ಕ್ಲೀನ್ ಮಾಡೋ ಹುಡುಗ ಬಂದು ಪ್ಲೇಟ್ ತೆಗೆದ. ಪ್ಲೇಟಿನಲ್ಲಿ ಇನ್ನೂ ಸ್ವಲ್ಪ ಬಿರ್ಯಾನಿ ಇದ್ರೂ ಪ್ಲೇಟ್ ತೆಗೀತಿರೋ ಆ ಹುಡುಗನ ಮೇಲೆ ನಾಣಿಗೆ ಸಖತ್ ಕೋಪ ಬಂತು. Are You Hurry ? ಅಂತ ನಾಣಿ ಕೋಪದಲ್ಲೇ ಕೇಳಿದ. ಆ ಹುಡುಗ cool ಆಗಿ yes sir ಅಂದ. ಆ ಹುಡುಗ ಕೊಟ್ಟ ಉತ್ತರ ಕೇಳಿ ನಾಣಿಗೆ ಕೋಪ ನೆತ್ತಿಗೇರಿತು. ನಾಣಿಗೆ ಕೋಪ ಬಂದಾಗ ಇಂಗ್ಲೀಷು ಸಖತ್ ಸಲೀಸು." Call your manager right now  , I said call your manager right now " ಅಂತ ಒಂದೇ ಸಮನೆ ಕಿರುಚೋಕೆ ಶುರು ಮಾಡಿದ.

                       ರೆಸ್ಟೋರೆಂಟಲ್ಲಿದ್ದ ಗಿರಾಕಿಗಳೆಲ್ಲ ನಾಣಿ ಕಡೆ ಆಶ್ಚರ್ಯದಿಂದ ನೋಡ್ತಿದ್ದಾರೆ. ಮ್ಯಾನೇಜರ್ ಗಾಬರಿ ಬಿದ್ದು ನಾಣಿ ಕೂತಿದ್ದ ಟೇಬಲ್ ಹತ್ತಿರ ಓಡಿ ಬಂದ.
ಮ್ಯಾನೇಜರ್ : Sorry for the inconvenience sir, what happened sir? any problems?
ನಾಣಿ : ಏನ್ರೀ ಟೇಬಲ್ ಕ್ಲೀನ್ ಮಾಡೋ ಹುಡುಗನಿಗೆ ಎಷ್ಟು ಕೊಬ್ಬು?
ಮ್ಯಾನೇಜರ್ : ಏನಾಯ್ತು ಸರ್? ಏನಂದ ಆ ಹುಡುಗ?
ನಾಣಿ : ನಾನು ಮೊಬೈಲಲ್ಲಿ ಮಾತಾಡ್ತಿದ್ದೆ. ಪ್ಲೇಟಲ್ಲಿ ಇನ್ನೂ ಬಿರ್ಯಾನಿ ಇದ್ರೂ ತಗೊಂಡು ಹೋಗ್ತಿದ್ದ. Are You Hurry ? ಅಂತ ಕೇಳಿದ್ರೆ  yes sir ಅಂತ ನಂಗೇ ಉಲ್ಟಾ ಮಾತಾಡ್ತಾನೆ.
ನಿಜವಾಗ್ಲೂ ನಡೆದದ್ದು ಏನು? ನಾಣಿ ಹಾಗೆ ಕೂಗಾಡಿದ್ದು ಯಾಕೆ? ಆ ಹುಡುಗ ನಿಜಕ್ಕೂ ಉದ್ಧಟತನದ ಉತ್ತರ ಕೊಟ್ನಾ? ಮ್ಯಾನೇಜರ್ ಗೆ  ಎಲ್ಲವೂ ಅರ್ಥ ಆಯ್ತು.
ಮ್ಯಾನೇಜರ್ : Sorry  sir , ಆ ಹುಡುಗನ ಹೆಸರು "ಹರಿ" ಅಂತ.
ನಾಣಿ : ಸಾಕು ಬಿಡಿ ಎಲ್ಲಾ ಅರ್ಥ ಆಯ್ತು.

ಎಲ್ಲರನ್ನೂ ಪೆಚ್ಚು ಮಾಡೋ ನಮ್ ನಾಣಿ ತಾನೇ ಪೆಚ್ಚಾಗಿ ಕೂತ.


ಮಂಗಳವಾರ, ಮಾರ್ಚ್ 19, 2013

ಪಕ್ಷಾಂತರ ಮತ್ತು ಪೂಜಾಯಣ :)

ಕೃಪೆ:ಅಂತರ್ಜಾಲ
ಎಂದಿನಂತೆ ನಮ್ಮ ಕೆಂಚ, ಸೀನ, ಸಿದ್ದ, ನಾಣಿ ಎಲ್ಲಾರೂ ಅವರ ಮಾಮೂಲಿ 'ಅಡ್ಡಾ' ರಾಮಣ್ಣನ ಟೀ ಅಂಗಡಿ ಮುಂದೆ ಕೂತ್ಕೊಂಡು ಹರಟೆ ಹೊಡೀತಾ ಇದ್ರು. ನಮ್ ಸಿದ್ದ ಅಲ್ಲಿ ಇದ್ದ ಅಂದ್ಮೇಲೆ ರಾಜಕೀಯದ ಮಾತು ಬರಲೇಬೇಕು. 

ಸಿಧ್ಧ : ಲೋ ಕೆಂಚ ಇಷ್ಯಾ ಗೊತ್ತಾಯ್ತಾ ? ನಮ್ ಪೂಜಾ ಗಾಂಧೀಶ್ರೀರಾಮುಲು ಪಕ್ಷ ಸೇರ್ಕಂಡವ್ಳಂತೆ !!??

ಕೆಂಚ : ಅಯ್ಯೋ ಬುಡ್ಲಾ ಅದು ಹಳೇ ಸ್ಟೋರಿ .  ಆ ಸ್ಟೋರಿ ಗೊತ್ತಿಲ್ವಾ ನಿಂಗೆ. ಆಯಮ್ಮಾ ಮೊನ್ನೆ ಹೊರೆ ಹೊತ್ಕೊಂಡು ಹೋಯ್ತಾ ಇದ್ಲು. ನಮ್ ಕುಮಾರಣ್ಣ ಸಿಕ್ಕಿದ್ದೇ ಚಾನ್ಸು ಅಂತ ಆಯಮ್ಮನ ತಲೆ ಮ್ಯಾಲೆ ಶ್ಯಾನೆ ಹೊರೆ ಹೊರ್ಸ್ಬುಟ್ಟ ಅಂತ ಕಾಣ್ತದೆ. ಅದಕ್ಕೇ ಆವಮ್ಮ ಯಡ್ಡಿ ಬಾಸ್ ಹತ್ರ ಹೋಗಿ ನಾನು ಕೆಜೆಪಿ ಸೇರ್ಕತೀನಿ, ನನ್ ಕಾಲ್ ಶೀಟ್ ತಕ್ಕಳ್ಳಿ ಅಂದಿದ್ದೇ ತಡ  ಆವಯ್ಯ ಧನಂಜಯ್ ಕುಮಾರು ಅನಾಮತ್ತಾಗಿ ಒಂದು  ತೆಂಗಿನಕಾಯಿ ಚೀಲ ತಲೆ ಮೇಲೆ ಹೊರ್ಸಿದ್ನಂತೆ. ಅಲ್ಲಿ ಹುಲ್ಲಿನ ಹೊರೆ ಇಳ್ಸಿ ಇಲ್ಲಿಗ್ ಬಂದ್ರೆ ಇವ್ರು ತೆಂಗಿನ್ಕಾಯಿ ಹೊರಿಸ್ತಾರಲ್ಲಪ್ಪ ಅಂತ ಈಯಮ್ಮ ಬೆವರೋಕೆ ಶುರು ಆಯ್ತಂತೆ. ಆವಾಗ ಬಳ್ಳಾರಿ ಕಡೆಯಿಂದ ಬಿಸಿಲಲ್ಲೂ ತಂಗಾಳಿ ಬೀಸೋಕೆ ಶುರು ಆಯ್ತಂತೆ. ತಿರುಗಿ ನೋಡಿದ್ರೆ   ಶ್ರೀರಾಮುಲು ಜೊತೆ  ಯಾರೋ ಫ್ಯಾನ್ ಹಿಡ್ಕಂಡು ಇವಮ್ಮಂಗೆ ಗಾಳಿ (ಗಾಳ) ಹಾಕ್ತಿದ್ರಂತೆ . "ಯಾರಿವನು?" ಅಂತ ನೋಡಿದ್ರೆ ನಮ್ ಮದನ್ ಪಟೇಲು.   ಈಯಮ್ಮ ಖುಸಿ ತಡ್ಯಕಾಗ್ದೆ ಶ್ರೀರಾಮುಲುಗೆ ಜೈ ಅಂತ ಫ್ಯಾನ್ ಹಿಡ್ಕಂಡು ಜೈಕಾರ ಹಾಕೋಕೆ ಶುರು ಮಾಡಿದ್ಲಂತೆ. 

ನಾಣಿ : ಅದೆಲ್ಲ ಹೆಂಗಾರ ಇರ್ಲಿ, ಹಾಯಾಗಿ ಮಳೇಲಿ ನೆನ್ಕಂಡು, ಪಿಚ್ಚರಲ್ಲಿ  ಕುಣೀತಾ ಇರೋದ್ ಬುಟ್ಟು ಈಯಮ್ಮಂಗೆ ಯಾಕ್ಲಾ ಬೇಕಿತ್ತು ರಾಜ್ಕೀಯ ?
ಸಿಧ್ಧ :  ಪೂಜಾ ಗಾಂಧೀ ರಾಜ್ಕೀಯ ಸೇರಿದ್ದು ಯಾಕೆ ಅಂತ ನಂಗ್ ಗೊತ್ತು ಕಣ್ಲಾ. ಒಂದಿವ್ಸ ನಮ್ ಕುಮಾರಣ್ಣ ಶ್ಯಾನೆ ಬೇಜಾರಲ್ಲಿ ಕುಂತಿದ್ರಂತೆ. ಆಗ ನಮ್ ದೊಡ್ಡ ಗೌಡ್ರು "ಯಾಕ್ಲಾ ಮಗಾ ಹಿಂಗ್ ಕುಂತಿದ್ಯಾ? ನೀನು ಸದಾನಂದ ಗೌಡ್ರ ಥರ ಸದಾ ನಗ್ತಾ ಇರು ಅಂದ್ರೆ ಮಲ್ಲಿಕಾರ್ಜುನ ಖರ್ಗೆ ಥರಾ ಮುಸುಡಿ ಮಾಡ್ಕಂದಿದ್ಯಲ್ಲ, ನಿಂಗ್ ಏನ್ ಬೇಕು ಕೇಳು?" ಅಂತ ಅಂದ್ರಂತೆ. ಆಗ ನಮ್ ಕುಮಾರಣ್ಣ " ಅಪ್ಪಾಜಿ ಕಾಂಗ್ರೆಸ್ ಪಾರ್ಟಿಯವರ ಹತ್ರ ಸೋನಿಯಾ ಗಾಂಧೀ, ರಾಹುಲ್ ಗಾಂಧೀ ಅವ್ರೆ, ಬಿಜೆಪಿಯವರ ಹತ್ರ ಆಯಮ್ಮ ಮೇನಕಾ ಗಾಂಧೀ, ವರುಣ್ ಗಾಂಧೀ ಅವ್ರೆ.  ಆದ್ರೆ ನಮ್ ಹತ್ರ ಯಾವ್ ಗಾಂಧೀನು ಇಲ್ಲ" ಅಂತ ಗೋಳಾಡಿದ್ರಂತೆ. ಆಗ ನಮ್ ದ್ಯಾವೇ ಗೌಡ್ರು ಒಂದ್ ನಿಮ್ಸ ನಿದ್ದೆ ಮಾಡೋ ಸ್ಟೈಲಲ್ಲಿ ಯೋಚ್ನೆ ಮಾಡಿ " ಲೇ ಮಗಾ ತಲೆ ಕೆಡಿಸ್ಕೋ ಬ್ಯಾಡ ತಗೋ ನಿಂಗೂ ಒಂದು ಗಾಂಧೀ" ಅಂತ್ಹೇಳಿ "ಕುಣಿದು ಕುಣಿದು ಬಾರೇ" ಅಂತ  ಪೂಜಾ ಗಾಂಧೀನ ಪಕ್ಷಕ್ಕೆ ಕರ್ಕಂಡ್ ಬಂದ್ರಂತೆ .

ಸೀನ : ಹೌದೇನ್ಲಾ ಸಿದ್ಧ, ಆವಮ್ಮ ರಾಜ್ಕೀಯಕ್ಕೆ ಬರೋಕೆ ಇಷ್ಟೆಲ್ಲಾ ಸೀನ್ ಐತಾ? ಆದರೂ ನಂಗೆ ಒಂದ್ ವಿಷ್ಯ ಅರ್ಥ ಆಯ್ತಿಲ್ಲ. ಈ ರಾಜಕಾರಣಿಗಳು ಯಾಕೆ ಈಪಾಟಿ ಪಕ್ಷಾಂತರ ಮಾಡ್ತಾರೆ ? ಅವರ್ಗೇನು ಮಾಡೋಕೆ ಕ್ಯಾಮೆ ಇಲ್ವಾ? ಬರೀ ಆ ಪಕ್ಷ ಬುಟ್ಟು ಈ ಪಕ್ಷ, ಈ ಪಕ್ಷ ಬುಟ್ಟು ಆ ಪಕ್ಷ ಅಂತ ಕೋತಿ ಥರ ನೆಗೀತಾ  ಇರ್ತಾರೆ. 

ಕೆಂಚ: ಲೇ ಸೀನ ಸುಮ್ಕೆ ಟೀ ಕುಡೀಲಾ , ಅಲ್ಲಾ ಆ ಕೋತಿಗಳು ಏನ್ ಮಾಡವ್ಲಾ ನಿಂಗೆ? ಸುಮ್ಕೆ ಅವಕ್ಯಾಕೆ ಅವಮಾನ ಮಾಡ್ತೀಯ. 

ಸಿಧ್ಧ :  ಕರೆಟ್ಟಾಗಿ ಹೇಳ್ದೆ ಕಣ್ಲಾ ಕೆಂಚ, ನಿಮ್ಗೆಲ್ಲಾರ್ಗೂ ಒಂದ್ ವಿಷ್ಯ ಹೇಳ್ತೀನಿ ಕರೆಟ್ಟಾಗಿ ಕೇಳಿಸ್ಕಳ್ಳಿ . ಈ ಪಕ್ಷಾಂತರ ಅಂದ್ರೆ ಏನರ್ಥ ಅಂತ ಗೊತ್ತಾ ನಿಮ್ಗೆ? ನಮ್ ವೆಂಕಟ ಸುಬ್ಬಯ್ನೋರು ಬರೆದಿರೋ  ಕನ್ನಡ ನಿಘಂಟು ತಗಂಡು ನಾನೂ ಅರ್ಥ ಹುಡುಕ್ದೆ . ಪಕ್ಷಾಂತರ ಮಾಡು ಅಂದ್ರೆ ತ್ಯಜಿಸು, ಸಿದ್ಧಾಂತವನ್ನು ತೊರೆ ಅಂತ ಅರ್ಥ. 

 ಸಿಧ್ಧ ಏನೋ ಹೊಸ ಹೊಸ ಪದಗಳನ್ನು ಹೇಳ್ತಿದ್ರೆ ನಮ್ ಕೆಂಚ,ನಾಣಿ, ಸೀನ ಎಲ್ಲಾ ಅರ್ಥ ಆಗೇ ಹೋಯ್ತು ಅನ್ನೋ ಥರ ಬಾಯ್ ಬಾಯಿ ಬಿಟ್ಕೊಂಡು ಕೇಳಿಸ್ಕೊತಾ ಇದ್ರು. ಇದನ್ನು ನೋಡಿ ನಮ್ ಸಿಧ್ಧ ಇನ್ನೂ ಉತ್ತೇಜಿತನಾಗಿ ಖುಷಿಯಿಂದ ಇನ್ನೂ ವಿವರವಾಗಿ ಹೇಳೋಕೆ ಶುರು ಮಾಡಿದ. 

                                   ಆದ್ರೆ ನಮ್ ರಾಜಕಾರಣಿಗಳು ಒಂದು ಪಕ್ಷ ತ್ಯಜಿಸೋದೆ ಇನ್ನೇನೋ ಗಳಿಸೋಕೆ . ಇನ್ನು ಸಿದ್ಧಾಂತ ತೊರೆಯೋದು ಅನ್ನೋ ಪದಕ್ಕೆ ಅರ್ಥಾನೆ ಇಲ್ಲ. ಇವ್ರಿಗೆ ಸಿದ್ಧಾಂತ ಗೊತ್ತಿದ್ರೆ ತಾನೇ ತೊರೆಯೋ ಮಾತು.ಇನ್ನೂ ಕೆಲವರು ಇನ್ನೊಂದ್ ಥರಾ ವಿಚಿತ್ರ. ಅವ್ರು ಇರೋದು ಒಂದ್ ಪಕ್ಷ ಆದ್ರೆ ಕೆಲಸ ಮಾಡೋದು ಇನ್ನೊಂದ್ ಪಕ್ಷಕ್ಕೆ. ದಗಲ್ಬಾಜಿ ರಾಜಕೀಯ ಕಣ್ಲಾ .  ಅದ್ಕೆ ನಾನು ವೆಂಕಟ ಸುಬ್ಬಯ್ನೋರನ್ನ ಕೇಳ್ಕಳ್ಳೋದು ಇಷ್ಟೇ. ದಯವಿಟ್ಟು ನಿಮ್ ನಿಘಂಟು ತಿದ್ದುಪಡಿ ಮಾಡಿ ಅಂತ. ಯಾಕಂದ್ರೆ ನಮ್ ರಾಜಕಾರಣಿಗಳ್ನ ತಿದ್ದುಪಡಿ ಮಾಡೋದು ಶ್ಯಾನೆ ಕಷ್ಟ. 
ಕೃಪೆ: ರಘುಪತಿ ಶೃಂಗೇರಿ
ಹೀಗೇ ನಮ್ ಸಿದ್ಧ ನಾನ್ ಸ್ಟಾಪ್ ಆಗಿ ಪಕ್ಷಾಂತರದ ವಿಷಯದ ಬಗ್ಗೆ ಮಾತಾಡ್ತಿದ್ರೆ  ಈ ಕಡೆ ಪಂಚಾಯ್ತಿ ಎಲೆಕ್ಷನ್ ಗೆದ್ದ ಕ್ಯಾಂಡಿಡೇಟ್ ಗಳು ಖುಷಿಯಿಂದ "ಕೈ" "ಕೈ" ಮಿಲಾಯಿಸ್ತಾ ಸ್ವೀಟ್ ಬಾಕ್ಸ್ ಹಿಡ್ಕೊಂಡು ರಾಮಣ್ಣನ  ಅಂಗಡಿ ಕಡೆಗೆ ಬಂದು ನಮ್ಗೇ ವೋಟು ಹಾಕಿ ಗೆಲ್ಸಿದ್ದಕ್ಕೆ ಇವತ್ತು ಸ್ವೀಟ್ ತಿನ್ನಿ, ಇನ್ನು ಅಸೆಂಬ್ಲಿ ಎಲೆಕ್ಷನ್ ಬರೊತಂಕ ನಿಮ್ಕಡೆ ತಿರುಗಿ ನೋಡಾಕಿಲ್ಲ ಅಂತ ಹೇಳ್ತಾ ಇದ್ರು . ಈ ಸೀನ, ಸಿದ್ಧ, ಕೆಂಚ, ನಾಣಿ ಮಾತಾಡೋ ಮಾತು ಕೇಳಿ ಅವರೆಲ್ಲಾ ನನ್ ಅಂಗಡಿ ಮುಂದೆ ಜಗಳ ಶುರು ಮಾಡಿದ್ರೆ ಕಷ್ಟ ಅಂತ ರಾಮಣ್ಣ " ಲೇ ಮಾಡೋಕೆ ಕ್ಯಾಮೆ ಇಲ್ವಾ ಮೂದೇವಿಗಳೇ ನಿಮ್ಗೆ , ಎದ್ದು ಹೋಗ್ರಲೇ ಟೀ ಕಾಸು ಕೊಟ್ಟುಬುಟ್ಟು" ಅಂದ. ಲೆಕ್ಕ ಬರಕೋ ರಾಮಣ್ಣ ಅಸೆಂಬ್ಲಿ  ಎಲೆಕ್ಷನ್ ಮುಗಿಯೋದ್ರೊಳಗೆ ನಿಂಗೆ ಕೊಡ್ಬೇಕಾಗಿರೋ  ಹಳೆಬಾಕಿ ಎಲ್ಲಾ ಫೈಸಲ್ ಮಾಡ್ತೀವಿ ಅಂತ ನಮ್ ಸಿದ್ಧ ಸೇಮ್ ರಾಜಕಾರಣಿ ಸ್ಟೈಲಲ್ಲಿ ಆಶ್ವಾಸನೆ ಕೊಟ್ಟು ಮನೆ ಕಡೆ ಹೊರಟ. 

ಶುಕ್ರವಾರ, ಮಾರ್ಚ್ 15, 2013

ಸಿಂಪಲ್ಲಾಗ್ ಒಂದ್ ನೋವ್ ಸ್ಟೋರಿ (SONS) :)

ಚಿತ್ರ ಕೃಪೆ : ಅಂತರ್ಜಾಲ
ಸಿಂಪಲ್ಲಾಗ್ ಒಂದ್ ನೋವ್ ಸ್ಟೋರಿ ನಾನೂ ಹೇಳ್ತೀನಿ ಕೇಳಿ .......................... ಒಂದಾನೊಂದು ಊರಿನ ಒಂದು ಕಾಲೇಜಲ್ಲಿ ನಮ್ ನಾಣಿ ಮತ್ತು ನಾಗವೇಣಿ ಇಬ್ರೂ ಓದ್ತಾ ಇದ್ರು. ಇಬ್ರೂ ಅಂದ್ರೆ ಇಬ್ರೇನಾ ಅಂತ ಕೇಳ್ಬೇಡಿ ಮತ್ತೆ  :) ನಮ್ ನಾಣಿಗೆ ನಾಗವೇಣಿ ಅಂದ್ರೆ ಪಂಚಪ್ರಾಣ. ನಾಗವೇಣಿ ಅನ್ನೋ ಹೆಸರಲ್ಲಿ ಮೊದಲಕ್ಷರ ಮತ್ತು ಕೊನೆ ಅಕ್ಷರ ಸೇರಿಸಿದ್ರೆ ನಾಣಿ ಆಗುತ್ತೆ . ಅದಕ್ಕೋ ಏನೋ ನಮ್ ಹುಡುಗನ ಹಾರ್ಟ್ ಒಳಗೆ ಈ ಹುಡುಗಿ ಸೈಟ್ ತಗೊಂಡ್ ಬಿಟ್ಳು. ನಾಗವೇಣಿ ಅನ್ನೋ ಹೆಸರಲ್ಲಿ ನಾಣಿ ಇರಬಹುದು ಆದ್ರೆ ಅವಳ ಹಾರ್ಟಲ್ಲಿ ನಾಣಿ ಇದಾನಾ? ಇದು ಮಿಲಿಯನ್ ಡಾಲರ್ ಪ್ರಶ್ನೆ. ಯಾಕಂದ್ರೆ ಹುಡ್ಗೀರ ಹಾರ್ಟು ಮತ್ತು ನಮ್ ದೇವೇಗೌಡರ ಪೊಲಿಟಿಕಲ್ ಪ್ಲಾನ್ಸು ಏನು ಅಂತ ಕಂಡುಹಿಡಿಯೋದು ಶ್ಯಾನೆ ಕಷ್ಟ.

                         ಹಂಗೆಲ್ಲಾ ಆಗಿ ಹಿಂಗಾದ್ಮೇಲೆ ಒಂದ್ ಒಳ್ಳೆ ದಿನ ಬಂತು. ಅದೇನೋ ಪ್ರೇಮಿಗಳ ದಿನ ಅಂತ ಮಾಡ್ತಾರಲ್ಲ ಆ ದಿನ. ಇವತ್ತು ಹೆಂಗಾದ್ರೂ ಮಾಡಿ ನನ್ ಹಾರ್ಟ್ ಓಪನ್ ಮಾಡಿ ನಾನು ನಾಗವೇಣಿನ ಎಷ್ಟು ಲವ್ ಮಾಡ್ತೀನಿ ಅಂತ ತೋರಿಸ್ತೀನಿ ಅಂತ ನಮ್ ನಾಣಿ ಅವನ ಫ್ರೆಂಡ್ಸ್ ಹತ್ರ ಹೇಳಿ ನಾಗವೇಣಿಗಾಗಿ ಕಾಯ್ತಾ ಕಾಲೇಜ್ ಗೇಟ್ ಹತ್ರ ನಿಂತ.ನಾಗವೇಣಿ ಅವತ್ತೇ ಲೇಟಾಗಿ ಬರಬೇಕಾ!!?? ಹುಡುಗರನ್ನು ಕಾಯಿಸೋದಂದ್ರೆ ಹುಡ್ಗೀರಿಗೆ ಅದೇನೋ ಆನಂದ. ಅಂತೂ ನಾಗವೇಣಿ ಬಂದ್ಳು. ನಮ್ ನಾಣಿ ಒಂದು ಗ್ರೀಟಿಂಗ್ ಕಾರ್ಡ್ ಕೈಯಲ್ಲಿ ಹಿಡ್ಕೊಂಡು ಅವಳ ಹಿಂದ್ಹಿಂದೆ ಹೊರಟ.

 ನಾಣಿ : ಹಾಯ್ ನಾಗವೇಣಿ, ಒಂದ್ನಿಮಿಷ ನಿಂತ್ಕೋ...... ನಿಂಗೆ ಒಂದ್ ವಿಷ್ಯ ಹೇಳ್ಬೇಕು
ನಾಗವೇಣಿ : ಏನೋ? ಬೇಗ ಹೇಳು ಕ್ಲಾಸ್ ಗೆ ಹೋಗ್ಬೇಕು ಟೈಮ್ ಆಯ್ತು, ನೀವಂತೂ ಹುಡುಗ್ರು ಬಂಕ್ ಹೊಡೆಯೋದೆ ಕೆಲ್ಸ ನಿಮ್ಗೆ....
ನಾಣಿ : ಇವತ್ತು ಪ್ರೇಮಿಗಳ ದಿನ, ಅದಕ್ಕೆ ನನ್ ಲವ್ ಬಗ್ಗೆ ನಿಂಗೆ ಇವತ್ತೇ ಹೇಳ್ಬೇಕು ಅಂತ ಡಿಸೈಡ್ ಮಾಡಿದ್ದೆ.    I LOVE  YOU ..... ಪ್ಲೀಸ್ ನನ್ನ ಲವ್ ಮಾಡು
ನಾಗವೇಣಿ : ಏಯ್ ನಾಣಿ, ಹೆಂಗಿದೆ ಮೈಗೆ? ಇವೆಲ್ಲಾ ನನ್ ಹತ್ರ ಬೇಡ ಮರೀ...... ಇನ್ನೊಂದ್ಸಲ ನನ್ ಹಿಂದೆ ಲವ್ವು-ಗಿವ್ವು ಅಂತ ಬಂದ್ರೆ ಪ್ರಿನ್ಸಿಪಾಲ್ ಹತ್ರ ಕಂಪ್ಲೇಂಟ್ ಮಾಡ್ತೀನಿ.
ನಾಣಿ : (ಭಯದಿಂದ) ಬೇಡ ನಾಗವೇಣಿ, ಪ್ಲೀಸ್ ನಿಂಗೆ ಇಷ್ಟ ಇಲ್ಲ ಅಂದ್ರೆ ಓಕೆ. ನಾನು ನಿಂಗೆ ತೊಂದ್ರೆ ಕೊಡೋಲ್ಲ. ನಾವಿಬ್ರೂ ಫ್ರೆಂಡ್ಸ್ ಆಗಿ ಇದ್ಬಿಡೋಣ. ನನ್ ಲವ್ ಬೇಡ ಅಂದ್ಬಿಟ್ಟೆ ಆದ್ರೆ ಫ್ರೆಂಡ್ ಶಿಪ್ ಮಾತ್ರ ಬೇಡ ಅನ್ಬೇಡ ಪ್ಲೀಸ್.
ನಾಗವೇಣಿ : ಓಕೆ, ಆದ್ರೆ ಒಂದ್ ಕಂಡೀಶನ್. ಇನ್ನು ಯಾವತ್ತೂ ನನ್ನ ಲವ್ ಮಾಡ್ತೀನಿ ಅಂತ ಹಿಂದೆ ಸುತ್ತಬಾರ್ದು.
ನಾಣಿ : ಓಕೆ 

ಹೀಗೆ ಪ್ರೇಮಿಗಳ ದಿನದಂದು ನಮ್ ನಾಣಿ ಬರೀ ಪ್ರೇಮಿಯಿಂದ ಭಗ್ನಪ್ರೇಮಿಯಾಗಿ ಬದಲಾದ. ಹೀಗೇ ದಿನಗಳು ಉರುಳಿದವು.ನಮ್ ನಾಣಿ ನಾಗವೇಣಿ ಜೊತೆ ಒಳ್ಳೆ ಸ್ನೇಹಿತನಾಗಿ ಇದ್ದ.  ಅವತ್ತೊಂದಿನ ನಾಗವೇಣಿ ನಮ್ ನಾಣಿ ಹತ್ರ ಬಂದು ಟೆಕ್ಸ್ಟ್ ಬುಕ್ ಕೇಳಿ ತಗೊಂಡು ಹೋದ್ಳು. ಎರಡು ದಿನ ಬಿಟ್ಟು ಅವಳು ನಾಣಿಯ ಟೆಕ್ಸ್ಟ್ ಬುಕ್ ವಾಪಸ್ ಕೊಟ್ಳು. ಬುಕ್ ವಾಪಸ್ ಕೊಡುವಾಗ ಅದರೊಳಗೆ ಒಂದು ಲೆಟರ್ ಬರೆದಿಟ್ಟು ಕೊಟ್ಟಳು. ಆದ್ರೆ ಆ ಲೆಟರ್ ಬಗ್ಗೆ ನಾಣಿಗೆ ಏನೂ ಹೇಳಲಿಲ್ಲ. ಹೌದು ಅದು ಬರೀ ಲೆಟರ್ ಅಲ್ಲ ..... ಲವ್ ಲೆಟರ್ ......... ನಮ್ ನಾಣಿಗಾಗಿ ನಾಗವೇಣಿ ಬರೆದ ಲವ್ ಲೆಟರ್ .......... " ನಲ್ಮೆಯ ನಾಣಿ, ನೀನು ಅವತ್ತು ಪ್ರೇಮಿಗಳ ದಿನ ನನ್ ಹತ್ರ ಬಂದು ಪ್ರಪೋಸ್ ಮಾಡಿದಾಗ ನಂಗೆ ಸಖತ್ ಖುಷಿ ಆಯ್ತು. ಆದ್ರೆ ನಿಂಗೆ ಸ್ವಲ್ಪ ಸತಾಯಿಸಿ, ಕಾಯಿಸಿ ಆಮೇಲೆ ನನ್ ಲವ್ ಬಗ್ಗೆ ನಿಂಗೆ ಹೇಳೋಣ ಅಂತ ಸುಮ್ನೆ ಡ್ರಾಮಾ ಮಾಡಿದೆ. ನಿಜ ಹೇಳ್ತೀನಿ ನೀನಂದ್ರೆ ನಂಗೂ ಸಖತ್ ಇಷ್ಟ ಕಣೋ, ಪ್ಲೀಸ್ ಲವ್ ಮೀ" ಹೀಗಂತ ಬರೆದು ಆ ಬುಕ್ ಒಳಗಿಟ್ಟು ಲೆಟರ್ ಕೊಟ್ಟು ಇದನ್ನು ನೋಡಿದ್ಮೇಲೆ ಅವನ ರೀ ಆಕ್ಷನ್ ಹೇಗಿರುತ್ತೆ ಅಂತ ಕಲ್ಪನೆ ಮಾಡ್ತಾ ಮನೆಗೆ ಹೋದ್ಳು. ಮಾರನೇ ದಿನ ಆಯ್ತು, ತಿಂಗಳು ಕಳೀತು ........... ನಮ್ ನಾಣಿಯಿಂದ ನೋ ರೀ ಆಕ್ಷನ್. ಅವ್ನು ನಾಗವೇಣಿ ಜೊತೆ ಮಾಮೂಲಾಗಿ ಫ್ರೆಂಡ್ ಥರಾನೇ ಇದ್ದ.

ಇದೆಲ್ಲಾ ಆಗಿ ವರ್ಷಗಳು ಕಳೆದವು. ನಾಗವೇಣಿ ಕಾಲೇಜ್ ಮುಗಿಸಿ ಅಪ್ಪ ತೋರಿಸಿದ ಫಾರಿನ್ ಹುಡುಗನ ಜೊತೆ ಮದುವೆ ಮಾಡ್ಕೊಂಡು ಅಮೆರಿಕಾಗೆ ಹಾರಿ ಹೋದ್ಳು. ಆದ್ರೆ ನಮ್ ನಾಣಿ ಅವಳದೇ ನೆನಪಲ್ಲಿ ಇವತ್ತಿಗೂ ಮದುವೆ ಆಗ್ದೇ ದೇವದಾಸ್ ಥರ ಗಡ್ಡ ಬಿಟ್ಕೊಂಡು ತಿರುಗ್ತಾ ಇದ್ದಾನೆ.


ಈ  ಕಥೆಯ  ನೀತಿ ಏನಪ್ಪಾಅಂದ್ರೆ ----------------------------------------------------------------------------------------------------------------..........................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................
-----------------------------------------------------------------------------------------------------------------
ಹುಡುಗರು ಟೆಕ್ಸ್ಟ್ ಬುಕ್ ತೆಗೆದು ನೋಡೋಲ್ಲಾ :) :) :) :) 

ಭಾನುವಾರ, ಮಾರ್ಚ್ 10, 2013

ಮರಳಿ ಬಾ ಅರಳಿ ಬಾ .............

ನಲ್ಲೆ ನಿನ್ನ ಹುಸಿಕೋಪ ಇನ್ನೆಷ್ಟು ದಿನ
ಮನ್ನಿಸಿ ನನ್ನೆಲ್ಲ ತಪ್ಪುಗಳ ಪ್ರೀತಿಸೆನ್ನ

ಅಂದು ನೀ ನನ್ನೊಂದಿಗೆ ಇಟ್ಟ ಪ್ರತಿಹೆಜ್ಜೆ ಗುರುತು
ಎದೆಯಲ್ಲಿ ಅಚ್ಚೊತ್ತಿದೆ, ಹೇಗೆ ಬದುಕಲಿ ಮರೆತು ?

ನಿನಗೆ ಕೊಟ್ಟ ಮಾತುಗಳ ನಾ ಉಳಿಸಿಕೊಳ್ಳಲಿಲ್ಲ
ನಿನಗಾದ ಅಗಾಧ ನೋವಿನ ಅರಿವೆನಗಿಲ್ಲದಿಲ್ಲ

ಪರಿಸ್ಥಿತಿಗಳ ಪಿತೂರಿಯ ಬಲಿಪಶುವು ನಾನು
ಆದರೂ ನೀನಿರದೆ ಇರಲಾರೆ ಇನ್ನು

ನೀನೆನ್ನ ಒಡನಾಡಿ,  ಬದುಕಬೇಕಿದೆ ಒಡಗೂಡಿ
ಓಡದಿರು ನೀನೆಂದು  ಹೃದಯದಿಂದೆನ್ನ ಹೊರದೂಡಿ

ನಿನ್ನದೇ ನೆನಪುಗಳ ಮೆರವಣಿಗೆ ನನ್ನೆದೆಯ ಒಳಗೆ
ಬಂದೆನ್ನ ಬಂಧಿಸಿ  ತೀರಿಸು ವಿರಹದ ಬೇಗೆ

ಬುಧವಾರ, ಫೆಬ್ರವರಿ 6, 2013

"ಸಹಬಾಳ್ವೆ - ಸಿಹಿಬಾಳ್ವೆ"


ಇಂದೇಕೋ ಕುವೆಂಪು ಬಹಳವಾಗಿ ಕಾಡುತ್ತಿದ್ದಾರೆ.
 ಓ ನನ್ನ ಚೇತನ,
ಆಗು ನೀ ಅನಿಕೇತನ!
ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗ೦ತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!


 "ಮನುಜ ಮತ ವಿಶ್ವಪಥ" ಎಂದು ಜಗತ್ತಿಗೆ ಸಾರಿಹೇಳಿದ ಆ ಹಿರಿಯ ಜೀವಕ್ಕೆ ನಮೋನ್ನಮಃ. ಧರ್ಮದ ಹೆಸರಿನಲ್ಲಿ ವಿಷ ಬೀಜ ಬಿತ್ತುತ್ತಾ, ತಮ್ಮ ಪಾಡಿಗೆ ತಾವಿರುವ ಜನರನ್ನು ಉದ್ರಿಕ್ತಗೊಳಿಸಿ ಅವರನ್ನು ಮುಂದೆ ಬಿಟ್ಟು ಹಿಂದೆ ನಿಂತು ತಮಾಷೆ ನೋಡುವ ಓವೈಸಿ, ತೊಗಾಡಿಯ, ಮುತಾಲಿಕ್ ರಂತಹ ಮತಾಂಧರಿಗೆ ಇಂದು ಕುವೆಂಪುರವರ ಈ ವಿಶ್ವಮಾನವ ಸಂದೇಶವನ್ನು ಅರ್ಥಮಾಡಿಸಬೇಕಿದೆ. ಇಲ್ಲದಿದ್ದರೆ ಇಂತಹ ಮತ್ತಷ್ಟು ವಿಷಜಂತುಗಳು ಹುಟ್ಟಿಕೊಂಡು ಸಮಾಜದ ನೆಮ್ಮದಿಯನ್ನು ಹಾಳುಗೆಡವುತ್ತವೆ.

ಎಲ್ಲೋ ಹುಡುಕಿದೆ ಇಲ್ಲದ ದೇವರ
 ಕಲ್ಲು ಮಣ್ಣುಗಳ ಗುಡಿಯೊಳಗೆ
 ಇಲ್ಲೇ ಇರುವ ಪ್ರೀತಿ ಸ್ನೇಹಗಳ
 ಗುರುತಿಸದಾದೆವು ನಮ್ಮೊಳಗೆಎಂಬ ಕವಿ ಗೋಪಾಲಕೃಷ್ಣ ಅಡಿಗರ ಆಶಯದಂತೆ ಬದುಕೋಣ. "ಸಹಬಾಳ್ವೆ - ಸಿಹಿಬಾಳ್ವೆ" ಎಂದು ಜಗತ್ತಿಗೆ ಸಾರಿಹೇಳೋಣ