ಮಂಗಳವಾರ, ಮೇ 7, 2013

ಓ ನನ್ನ ಮಗುವೇ ...............


ಮಡಿದ ವೀರಯೋಧನ ಶವವು ಮನೆಯಂಗಳಕೆ ಬಂದಿತ್ತು
 ಅಳಲಿಲ್ಲ ಅವಳು, ಬವಳಿ ಬೀಳಲೂ ಇಲ್ಲ
ಸುತ್ತಲೂ ನೆರೆದಿದ್ದ ಗೆಳತಿಯರು ಹೇಳಿದರು
ಕಣ್ಣೀರ್ಗರೆಯಬೇಕು ಅವಳು, ಇಲ್ಲದಿರೆ ಉಳಿಯಳು

ಅಲ್ಲಿದ್ದ ಜನರೆಲ್ಲ ಹಿತಮಿತದಿ  ಅವನ ಗುಣಗಾನ
ಮಾಡಿದರು 
ಪ್ರೀತಿಗೆ ಅರ್ಹ ಎಂದವನ ಹೊಗಳಿದರು
ನಿಜವಾದ ಗೆಳೆಯ, ಶ್ರೇಷ್ಠ ಶತ್ರು ಎಂದು ಕೊಂಡಾಡಿದರು
ಅವಳು ಮಾತ್ರ ಮಾತಾಡಲಿಲ್ಲ, ನಿಂತಲ್ಲಿಂದ ಅಲುಗಾಡಲಿಲ್ಲ

ಅಲ್ಲಿಯೇ ನಿಂತಿದ್ದ ಕನ್ಯೆಯೊಬ್ಬಳು ತಾನು
ಯೋಧನ ಶವದೆಡೆಗೆ ಮುಂದಡಿಯ ಇಟ್ಟಳು
 ಮುಚ್ಚಿದ್ದ ಹೊದಿಕೆಯನು ತೆರೆದಳು
ಆಗಲೂ ಅವಳು ಅಳಲಿಲ್ಲ, ತೋಯಲಿಲ್ಲ

ಅಲ್ಲಿಯೇ ಕುಳಿತಿದ್ದ ತೊಂಭತ್ತರ ಮುದುಕಿ
ಅವನ ಕಂದಮ್ಮನನ್ನು ತಂದಿವಳ ಮಡಿಲಲ್ಲಿ ಇಡಲು
ಬಿಸಿಲ್ಗಾಲದಲಿ  ಬಿರುಗಾಳಿ ಬಂದಂತೆ ಹರಿಸಿದಳು ಅಶ್ರುಧಾರೆ
"ಓ ನನ್ನ ಮಗುವೇ ................ ನಾ ನಿನಗಾಗಿ ಉಳಿವೆ
ನಿನಗಾಗಿ ಉಳಿವೆ"

ಮೂಲ : ಆಲ್ಫ್ರೆಡ್ ಟೆನ್ನಿಸನ್
ಅನುವಾದ : ವಿಜಯ್ ಹೆರಗು

5 ಕಾಮೆಂಟ್‌ಗಳು:

  1. ಮನ ಮಿಡಿಯುವ ಶ್ರೇಷ್ಟ ಪದ ಪುಂಜ....

    ಪ್ರತ್ಯುತ್ತರಅಳಿಸಿ
  2. ಮನ ಮಿಡಿಯುವ ಯುದ್ಧ ಸಂಬಂಧೀ ಕವನ. ಆಲ್ಫ್ರೆಡ್ ಟೆನ್ನಿಸನ್ ಅವರ ಬಗ್ಗೆ ಓದಿದ್ದೆ. ಅವರನ್ನು ಈ ಮೂಲಕ ಪರಿಚಯಿಸಿದ ನಿಮಗೆ ಶರಣು. ಧನ್ಯವಾದಗಳು ಗೆಳೆಯ ಭಾವಾನುವಾದ ಮನ ಮಿಡಿಯುವಂತಿದೆ.

    ಪ್ರತ್ಯುತ್ತರಅಳಿಸಿ