ಸೋಮವಾರ, ಸೆಪ್ಟೆಂಬರ್ 6, 2010

ಗುರುಗಳನ್ನು ನೆನೆಯುತ್ತಾ.....


ಗೆಳೆಯರೇ,
ಸವಿ ಸವಿ ನೆನಪು ಲೇಖನ ಬರೆದಾಗಿನಿಂದ ನನ್ನ ಶಾಲಾ ದಿನಗಳ ನೆನಪು ಬಿಡದೆ ಕಾಡ್ತಾ ಇದೆ. ಅದನ್ನು ನಿಮ್ಮ ಜೊತೆ ಹಂಚಿಕೊಂಡು ಖುಷಿ ಪಡೋ ಆಸೆ. ನಿಮಗೂ ಇಷ್ಟ ಆಗುತ್ತೆ ಅಂತ ಅಂದುಕೊಂಡಿದ್ದೀನಿ.
ನಾನು ಆಗ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಏಳನೇ ಕ್ಲಾಸಿನಲ್ಲಿ ಓದ್ತಾ ಇದ್ದೆ. ಅಲ್ಲಿ ನಮ್ಮ ಇಂಗ್ಲಿಷ್ ಮೇಷ್ಟ್ರು ಶಿವಲಿಂಗಪ್ಪ ಅಂತ ಅವರ ಹೆಸರು. ನಮ್ಮ ಇಂಗ್ಲಿಷ್ ಪಾಠಗಳಲ್ಲಿ THE RAT SNAKE ಅಂತ ಒಂದು ಪಾಠ ಇತ್ತು. ಅದರಲ್ಲಿ ಒಂದು ಸಾಲು ಹೀಗಿತ್ತು "The snake is in the bush" ಅಂದರೆ ಹಾವು ಪೊದೆಯ ಒಳಗಿತ್ತು ಅಂತ. ಆದರೆ ಅದು ನಮ್ಮ ಮೇಷ್ಟ್ರ ಬಾಯಲ್ಲಿ ಬೇರೆಯೇ ಅರ್ಥವನ್ನು ಹೇಳಿಸಿತ್ತು. ಮ್ ಮೇಷ್ಟ್ರು ಹೇಳಿದ್ ಪ್ರಕಾರ ಅದರ ಅರ್ಥ "ಹಾವು ಬುಸ್ಸ್ ಎಂದು ಬುಸುಗುಟ್ಟಿತು". ಇದನ್ನು ಕೇಳಿ ನಮಗೆ ಒಳಗೊಳಗೇ ನಗು. ನಕ್ಕಿದ್ದು ಗೊತ್ತಾದರೆ ಬೆತ್ತ ರುಚಿ ಕಟ್ಟಿಟ್ಟ ಬುತ್ತಿ. ಒಟ್ಟಾರೆ ಎಲ್ಲಾ "ನಾಗಲೀಲೆ".
ನಾನು ಮೈಸೂರಿನಲ್ಲಿ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ನಮ್ಮ ಸ್ಕೂಲಿನ ಹೆಡ್ ಮಾಸ್ತರ್ ಆಗಿದ್ದವರು ನಮ್ಮ ಸಮಾಜ ಶಾಸ್ತ್ರ ಟೀಚರ್ ಚಂದ್ರಶೇಖರ್ ಅವರು. ಅವರ ಪಾಠ ಕೇಳೋದಂದ್ರೆ ನಮಗೆ ಸಖತ್ ಮಜಾ ಇರ್ತಿತ್ತು. ಏನಪ್ಪಾ ಇವ್ನು ಪಾಠ ಕೇಳೋದು
ಮಜಾ ಇತ್ತು ಅಂತ ಬುರುಡೆ ಬಿಡ್ತಾನೆ ಅಂತ ಅಂದ್ಕೊಂಡ್ರಾ !!?? ಅಲ್ಲೇ ಇರೋದು ವಿಶೇಷ. ಅವರು "ಸಾಮಾನ್ಯವಾಗಿ" ಮತ್ತು "ಇರತಕ್ಕಿರತಕ್ಕಂತ" ಈ ಎರಡು ಪದಗಳನ್ನು ಧಾರಾಳವಾಗಿ ತಮ್ಮ ಪಾಠದ ಮಧ್ಯೆ ಬಳಸುತ್ತಿದ್ದರು. ಅವರ ಕ್ಲಾಸಿನಲ್ಲಿ ನಮ್ಮದು ಡಬಲ್ ಆಕ್ಟಿಂಗು. ಒಂದು ಸ್ಟೂಡೆಂಟು ಇನ್ನೊಂದು ಸ್ಕೋರರ್ರು. ನಾನು ಹಾಗೂ ನನ್ನ ಲಾಸ್ಟ್ ಬೆಂಚಿನ ಗೆಳೆಯರು ನಮ್ಮ ಮೇಷ್ಟ್ರು ಒಂದು ಪೀರಿಯಡ್ಡಿನಲ್ಲಿ ಎಷ್ಟು ಸಲ ಈ ಪದಗಳನ್ನು ಉಪಯೋಗಿಸುತ್ತಾರೆ ಅಂತ ಲೆಕ್ಕ ಹಾಕ್ತಾ ಇದ್ವಿ. ನಮ್ ಮೇಷ್ಟ್ರು ಮಾಸ್ಟರ್ ಬ್ಲಾಸ್ಟರ್ ಸಚಿನ್ ಥರ ಸೆಂಚುರಿಗಳನ್ನು ಬಾರಿಸ್ತಿದ್ರು.
ಈ ಥರ ಪಾಠದ ಜೊತೆಗೆ ನಮಗೆ ಮನೋರಂಜನೆಯನ್ನೂ ಒದಗಿಸಿದ ಗುರುಗಳನ್ನು ನೆನೆಯುತ್ತಾ ಇಲ್ಲಿ ಇನ್ನೊಂದು ವಿಷಯ ಹೇಳೋಕೆ ಇಷ್ಟ ಪಡ್ತೀನಿ. ಇಲ್ಲಿ ಯಾರನ್ನೂ ವ್ಯಂಗ್ಯ ಮಾಡುವ, ಆಡಿಕೊಳ್ಳುವ ಉದ್ದೇಶ ನನ್ನದಲ್ಲ. ಶಿಕ್ಷಕರ ದಿನದ ಮರುದಿನ (ಯಾಕಂದ್ರೆ ನೆನ್ನೆ ಸಂಡೆ ಆಲ್ವಾ ಆಫೀಸು ರಜಾ......ಅರ್ಥ ಆಯಿತು ಅಂದ್ಕೋತೀನಿ) ನನ್ನ ಗುರುಗಳನ್ನು ನೆನೆಯುತ್ತಾ ಈ ಲೇಖನ. ದಯಮಾಡಿ ಯಾರೂ ಗುರ್ರ್ ಅನ್ನಬೇಡಿ.
ನಿಮ್ಮವ,

ವಿಜಯ್ ಹೆರಗು

2 ಕಾಮೆಂಟ್‌ಗಳು: