ಶನಿವಾರ, ಸೆಪ್ಟೆಂಬರ್ 18, 2010

ಲೈಫು ಇಷ್ಟೇನಾ?


ಡಿಯರ್ ಫ್ರೆಂಡ್ಸ್,
ನಿನ್ನೆ ಅಂದ್ರೆ ಶುಕ್ರವಾರದ ದಿವಸ ನಾನು ಹಾಗೂ ನನ್ ಫ್ರೆಂಡ್ ನಾಗರಾಜ ಇಬ್ಬರೂ ಯೋಗರಾಜ್ ಭಟ್ರ "ಪಂಚರಂಗಿ" ಸಿನೆಮಾ ನೋಡೋಣಾಂತ ಕೆ.ಆರ್.ಪುರಂನಲ್ಲಿರೋ ಕೃಷ್ಣಾ ಟಾಕೀಸಿಗೆ ಹೋದ್ವಿ. ನನಗಂತೂ ಫಿಲಂ ಇಷ್ಟ ಆಯ್ತು. ಎರಡು ಗಂಟೆ ಹೇಗೆ ಕಳೀತು ಅಂತಾನೆ ಗೊತ್ತಾಗ್ಲಿಲ್ಲ ಅಷ್ಟು ಎಂಟರ್ಟೈನಿಂಗ್ ಆಗಿತ್ತು.
ಪಿಕ್ಚರ್ ನೋಡಿ ಹೊರಗೆ ಬಂದು ಬೈಕ್ ಹತ್ತೋಣ ಅಂದ್ರೆ ಬೈಕು ಪಂಕ್ಚರ್ ಆಗಿದೆ. "ಪಂಚರಂಗಿ" ನೋಡಿದ್ದಾಯ್ತು ಈಗ "ಪಂಚರಂಗ್ಡಿ" ಹುಡುಕು ಅಂತ ಗೆಳೆಯನಿಗೆ ಹೇಳಿದೆ. ಪಂಕ್ಚರ್ ಆಗಿರೋ ಬೈಕುಗಳು,ತಳ್ಳಿಕೊಂಡು ಹೋಗ್ತಿರೋ ನಾವುಗಳು, ಪಂಕ್ಚರ್ ಅಂಗಡಿ ಹುಡುಕ್ತಿರೋ ಕಣ್ಣುಗಳು.......ಹೀಗೇ ಸಾಗಿತ್ತು ರಸ್ತೆಯುದ್ದಕ್ಕೂ ನನ್ನ ವಾಕ್ ಲಹರಿ, ಎಲ್ಲಾ ಭಟ್ರ ಡೈಲಾಗ್ ಪ್ರಭಾವ.
ಅಂತೂ ಸ್ವಲ್ಪ ದೂರ ಬೈಕು ತಳ್ಳಿದ ಮೇಲೆ (ತಳ್ಳಿದ್ದು ನಾನಲ್ಲ ನಾಗರಾಜ) ಒಂದು ಪಂಕ್ಚರ್ ಅಂಗಡಿ ಸಿಕ್ತು. ಅಂಗಡಿಯವನು ಪಂಕ್ಚರ್ ಹಾಕುತ್ತಿದ್ದ, ನಾವು ಫಿಲಂ ಕುರಿತು ವಿಮರ್ಶೆ ಮಾಡ್ತಾ ಇದ್ವಿ. ಅಷ್ಟರಲ್ಲಿ ಒಬ್ಬ ಹನ್ನೆರಡರಿಂದ ಹದಿನಾಲ್ಕು ವರ್ಷದ ಹುಡುಗ ಅಂಗಡಿ ಹತ್ತಿರ ನಡೆದು ಬಂದ....ಅದರಲ್ಲೇನಪ್ಪ ಸ್ಪೆಷಲ್ ಅಂತೀರಾ!!?? ಅವನು ಬರಿಗಾಲಲ್ಲಿ ಬರಲಿಲ್ಲ ಮರಗಾಲಲ್ಲಿ ಬಂದ. ಮೂರಡಿ ಉದ್ದದ ಆ ಹುಡುಗ ಆರೇಳು ಅಡಿ ಉದ್ದದ ಮರದ ತುಂಡನ್ನು ಕಾಲಿಗೆ ಕಟ್ಟಿಕೊಂಡು ಬಂದಿದ್ದ. ತನ್ನ ದೇಹದ ಮೇಲೆ ಅದ್ಭುತವಾಗಿ ಸಮತೋಲನ ಸಾಧಿಸುತ್ತಾ ಅಂಗಡಿಯ ಕಡೆ ಬಂದ ಅವನು ಅಂಗಡಿ ಮಾಲೀಕನಿಗೆ ಸಲಾಮು ಹೊಡೆದು ಭಿಕ್ಷೆಯ ಹಣಕ್ಕಾಗಿ ಕೈಚಾಚಿದ. ಅಂಗಡಿಯವನು ಎರಡು ರೂಪಾಯಿಯ ಬಿಲ್ಲೆಯೊಂದನ್ನು ತೋರಿಸುತ್ತಾ ಇದನ್ನು ಎಸೀತೀನಿ ಕ್ಯಾಚ್ ಹಿಡ್ಕೋ ಅಂತ ಎಸೆದ. ಆ ಹುಡುಗ ಅಷ್ಟೆತ್ತರದಲ್ಲಿ ಆ ದುಡ್ಡನ್ನು ಕ್ಯಾಚ್ ಹಿಡಿದು ಅಂಗಡಿಯವನಿಗೆ ಮತ್ತೊಮ್ಮೆ ಸಲಾಮು ಹೊಡೆದು ಮುಂದಿನ ಅಂಗಡಿಯತ್ತ ಹೆಜ್ಜೆ ಹಾಕಿದ. ನಾನೂ ಸೇರಿದಂತೆ ಅಲ್ಲಿದ್ದ ಬಹುತೇಕ ಜನ ಅವನನ್ನೇ ಅಚ್ಚರಿಯಿಂದ ನೋಡುತ್ತಾ ಇದ್ದರು.
ನನ್ನ ಮನಸ್ಸಿನಲ್ಲಿ ನೂರೆಂಟು ಪ್ರಶ್ನೆಗಳು ಪ್ರವಾಹದೋಪಾದಿಯಲ್ಲಿ ಧುಮ್ಮಿಕ್ಕಿತು.
ಈ ಹುಡುಗ ಯಾರಾದ್ರು ಶ್ರೀಮಂತರ ಮನೇಲಿ ಹುಟ್ಟಿದ್ದರೆ ಇವನ ಈ ಪ್ರತಿಭೆ ಬೀದಿ ಪಾಲಾಗುತ್ತಿತ್ತಾ? ನಿಜವಾಗಲು ಇವನ ಪೋಷಕರು ಶ್ರೀಮಂತರಾಗಿದ್ದಿದ್ದರೆ ಇವನನ್ನು ವ್ಯಾಪಾರದ ಸರಕಿನಂತೆ ಬಳಸುತ್ತಿದ್ದರೇನೋ? ಅಥವಾ ಇವನು ಶ್ರೀಮಂತರ ಮನೇಲಿ ಹುಟ್ಟಿದ್ದರೆ ಇವನ ಕಾಲಿನ ಕಲೆ ಕರಗತವಾಗುತ್ತಿರಲಿಲ್ವೇನೋ? ಇಷ್ಟು ಒಳ್ಳೆಯ ಪ್ರತಿಭೆ ಇರುವ ಈ ಹುಡುಗ ಭಿಕ್ಷೆ ಬೇಡಿ ಬದುಕಬೇಕಾ? ಲೈಫು ಇಷ್ಟೇನಾ............................!!!!!!!!!????????

3 ಕಾಮೆಂಟ್‌ಗಳು: