ಭಾನುವಾರ, ಏಪ್ರಿಲ್ 10, 2011

ಕ್ರಿ"ಕೆಟ್ಟಾ"ಟ

               ಇನ್ನೇನು ವರ್ಲ್ಡ್ ಕಪ್ ಕ್ರಿಕೆಟ್ ಬಿಸಿ ಆರಿತು, ಕ್ರಿಕೆಟ್ ಕುರಿತಾದ ಚರ್ಚೆಗೆ ಒಂದಿಷ್ಟು ವಿರಾಮ ದೊರಕಬಹುದು ಅಂದುಕೊಳ್ಳುವಷ್ಟರಲ್ಲಿ ಐಪಿಎಲ್ ಟಿ-ಟ್ವೆಂಟಿ ಶುರುವಾಯ್ತು. ಆದರೆ ವರ್ಲ್ಡ್ ಕಪ್ ಕ್ರಿಕೆಟ್ ಹಾಗು ಐಪಿಎಲ್ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ವರ್ಲ್ಡ್ ಕಪ್ ಕ್ರಿಕೆಟ್  ಭಾಗವಹಿಸುವ ಪ್ರತಿಯೊಂದು ರಾಷ್ಟ್ರದ ಪ್ರತಿಷ್ಠೆಯ, ಅಭಿಮಾನದ ಸಂಕೇತದಂತೆ ಕಂಡರೆ ಐಪಿಎಲ್ ಒಬ್ಬ ವ್ಯಕ್ತಿಯ, ತಂಡದ ಮಾಲೀಕನ ಪ್ರತಿಷ್ಠೆಯ,ಗರ್ವದ ಸಂಕೇತವಾಗಿ ತೋರುತ್ತಿದೆ. 

             ಐಪಿಎಲ್ ಕುರಿತು ಹೀಗೆ ಹೇಳಲು ಕಾರಣವಿದೆ. ಐಪಿಎಲ್ ಇಂದು ಒಂದು ಕ್ರೀಡೆಯಾಗಿ ಕಾಣುವ ಬದಲು ವ್ಯಾಪಾರವಾಗಿ ಬದಲಾಗಿದೆ. ಆಟಗಾರರು, ಕೋಚುಗಳು ಅಷ್ಟೇ ಅಲ್ಲದೇ ವಸ್ತ್ರವಿನ್ಯಾಸಕಾರರನ್ನೂ ಬಿಕರಿಗಿಡುವ, ಖರೀದಿ ಮಾಡುವ ಖಯಾಲಿ ಇರುವ ಸಿರಿವಂತರ ಗುಂಪೇ ಇಲ್ಲಿದೆ. Its not a game, Its a Gamble- ಹೌದು, ಈ ಮಾತನ್ನು ಹೇಳಲು ದುಃಖವಾಗುತ್ತದೆ. ಹಿಂದೆ ಈ ಸಿರಿವಂತ ಜನ ಕುದುರೆ ರೇಸುಗಳಲ್ಲಿ, ಕ್ಯಾಸಿನೋಗಳಲ್ಲಿ ತಮ್ಮ ಹಣ ತೊಡಗಿಸಿ ಮೋಜು ಮಾಡುತ್ತಿದ್ದರು, ಈಗ ಐಪಿಎಲ್ ನಲ್ಲಿ ಹಣ ತೊಡಗಿಸಿ ತಮ್ಮ ಚಟ ತೀರಿಸಿಕೊಳ್ಳುತ್ತಿದ್ದಾರೆ.

                      ವಿಜಯ್ ಮಲ್ಯ ಇರಬಹುದು, ಶಾರುಖ್ ಖಾನ್ ಇರಬಹುದು, ಇಲ್ಲವೇ ಅಂಬಾನಿ ಕುಟುಂಬದವರಿರಬಹುದು ಇವರಿಗೆ ಕ್ರಿಕೆಟ್ ಬಗ್ಗೆ ಇರುವ ಅಭಿಮಾನಕ್ಕಿಂತ ಹೆಚ್ಚಾಗಿ ತಮ್ಮ ಬಳಿ ಇರುವ ಕಪ್ಪುಹಣವನ್ನು ಬೆಳ್ಳಗೆ ಮಾಡಿಕೊಳ್ಳುವ ಸುಲಭೋಪಾಯದಂತೆ ಐಪಿಎಲ್ ಗೋಚರಿಸುತ್ತಿದೆ. ಇವರಲ್ಲಿ ತಮ್ಮ ತಂಡ ಪ್ರತಿನಿಧಿಸುವ ಪ್ರಾಂತ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂಬುದಕ್ಕೆ ನಮ್ಮ (!!??) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಾಜಾ ಉದಾಹರಣೆಯಂತಿದೆ. ಒಬ್ಬ ಅಭಿಮನ್ಯು ಮಿಥುನ್ ಹೊರತುಪಡಿಸಿದರೆ ದುರ್ಬೀನು ಹಾಕಿ ಹುಡುಕಿದರೂ ಮತ್ತೊಬ್ಬ ಕರ್ನಾಟಕದ ಆಟಗಾರನೂ ತಂಡದಲ್ಲಿ ಇಲ್ಲ ಎಂದರೆ ಅದು ಕನ್ನಡಿಗರ ದುರದೃಷ್ಟವೋ ಅಥವಾ ವಿಜಯ್ ಮಲ್ಯ ಎಂಬ ಮಹಾನ್ ಕನ್ನಡಿಗನ ಕನ್ನಡ ಪ್ರೇಮವೋ ತಿಳಿಯದಾಗಿದೆ. 
 
                      ನನ್ನ ವಾದದಲ್ಲಿ ಕೆಲವರಿಗೆ ಹುಳುಕು ಕಾಣಿಸಬಹುದು. ಕೋಟ್ಯಾಂತರ ರೂಪಾಯಿಗಳನ್ನು ಬಂಡವಾಳವಾಗಿ ಹೂಡಿ ತಮ್ಮೆಲ್ಲ busy schedule ಗಳ ನಡುವೆಯೂ ಕ್ರೀಡಾಂಗಣದಲ್ಲಿ ಕುಳಿತು ತಾವು ಖರೀದಿಸಿದ ಮಾಲು (ಆಟಗಾರರು)ಗಳನ್ನು ಹುರಿದುಂಬಿಸುತ್ತಾ enjoy ಮಾಡುವ ಈ ಹಣದ ಥೈಲಿಗಳು ತಮಗಿಷ್ಟ ಬಂದ ಆಟಗಾರರನ್ನು ಖರೀದಿ ಮಾಡಿದರೆ ಇವನಿಗೇನು ಕಷ್ಟ ಎಂದು ಕೆಲವರು ಹಿಡಿಶಾಪ ಹಾಕಲೂಬಹುದು. ಆದರೆ ನನ್ನ ಸಲಹೆ ಇಷ್ಟೇ....ಐಪಿಎಲ್ ಆಡಳಿತ ಮಂಡಳಿಯವರು ದಯಮಾಡಿ ಈ ತಂಡಗಳಿಗೆ ಪ್ರಾಂತೀಯ ಹೆಸರುಗಳನ್ನು ಇಡುವ ಬದಲು ಕ್ಲಬ್ಬುಗಳನ್ನಾಗಿ ಪರಿವರ್ತಿಸಿದರೆ ನಾನೂ ಸೇರಿದಂತೆ ಯಾರೊಬ್ಬರೂ ಆಕ್ಷೇಪಣೆ ವ್ಯಕ್ತಪಡಿಸುವುದಿಲ್ಲ. ನಿಮ್ಮ ವ್ಯಾಪಾರ- (ಅ) ವ್ಯವಹಾರಗಳೂ ಸಾಂಗೋಪಾಂಗವಾಗಿ ಸಾಗುತ್ತವೆ.

                        ಕ್ರಿಕೆಟ್ ಇಂದು ಕೇವಲ ಕ್ರೀಡೆಯಾಗಿ ಉಳಿದಿಲ್ಲ. ಅದರಲ್ಲೂ ಭಾರತದಲ್ಲಿ ರಾಷ್ಟ್ರೀಯ ಕ್ರೀಡೆಯಾದ ಹಾಕಿ ಸೇರಿದಂತೆ ಬೇರಾವುದೇ ಆಟಕ್ಕೆ ಸಿಗದ ಮನ್ನಣೆ, ಪುರಸ್ಕಾರಗಳು ಕ್ರಿಕೆಟ್ ಆಟಕ್ಕೆ, ಆಟಗಾರರಿಗೆ ಲಭ್ಯ. ಯಡಿಯೂರಪ್ಪನಂಥಹ   ಮಠ-ಮಂದಿರೋದ್ಧಾರಕ ಮುಖ್ಯಮಂತ್ರಿಯೂ ಕ್ರಿಕೆಟಿಗರಿಗೆ ಸೈಟು-ಹಣ ಹಂಚಲು ನಿಂತುಬಿಡುತ್ತಾರೆ. ಪ್ರವಾಹ ಪೀಡಿತ,ಬರ ಪೀಡಿತ ನಿರಾಶ್ರಿತ ಬಡವನಿಗೆ ಸೂರು ನೀಡದ ಈ ಶೂರ ಮಹಲುಗಳಲ್ಲಿ ವಾಸಿಸುವ ಕ್ರಿಕೆಟಿಗರಿಗೆ ತುಂಡುಭೂಮಿ ಹಂಚಲು ತಯಾರಾಗುತ್ತಾನೆಂದರೆ ಕ್ರಿಕೆಟ್ ಎಂಥಹ ಸಮೂಹಸನ್ನಿ ಆಟ ಎಂದನ್ನಿಸುತ್ತದೆ. 

                            ನಮ್ಮ ನಾಡಿನಿಂದ ಇಷ್ಟೆಲ್ಲಾ ಸವಲತ್ತುಗಳು, ಪ್ರೀತಿ, ಅಭಿಮಾನ ಎಲ್ಲವನ್ನೂ ಅನುಭವಿಸುವ ನಮ್ಮ ಕ್ರಿಕೆಟಿಗರು ಮೊನ್ನೆ ನಮ್ಮ ನೆಚ್ಚಿನ ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುಧ್ಧ ಸಮರ ಸಾರಿದಾಗ ಅತ್ತ ಕಡೆ ತಲೆಹಾಕಲಿಲ್ಲ. ಏಕೆಂದರೆ ಅವರು ಐಪಿಎಲ್ ನಲ್ಲಿ ಬ್ಯುಸಿ ಆಗಿದ್ದಾರೆ.  

                              ಇಷ್ಟೆಲ್ಲಾ ಆದರೂ ನಾವು ಐಪಿಎಲ್ ನೋಡುವುದು ಮಾತ್ರ ಬಿಡುವುದಿಲ್ಲ. ಲಲಿತ್ ಮೋದಿ ಎಂಬ ಮಹಾನ್ ಭ್ರಷ್ಟ ಎಲ್ಲಿಂದಲೋ ಕದ್ದು (ಇಂಗ್ಲಿಷ್ ಕೌಂಟಿ) ತಂದು ನೆಟ್ಟ ಕ್ರಿ"ಕೆಟ್ಟಾ"ಟ ಜನರ ಮೋಜಿಗೆ, ಸಿರಿವಂತರ ಜೂಜಿಗೆ, ಕಪ್ಪು-ಬಿಳುಪಿನ ಕಣ್ಣಾಮುಚ್ಚಾಲೆಗೆ ಹೀಗೆ ಹತ್ತು-ಹಲವು ಬಗೆಯಲ್ಲಿ ಫಲ ಕೊಡುತ್ತಿದೆ. ಇಲ್ಲಿ ದೋಚಿದ ಮೋದಿ ಅಲ್ಲಿ ಮತ್ತೊಂದು ದೇಶದಲ್ಲಿ ಐಪಿಎಲ್ ನಂತೆಯೇ ಟೂರ್ನಿಯೊಂದನ್ನು ಆಯೋಜಿಸಿ ಹಣ ದೋಚುವ ಯೋಚನೆಯಲ್ಲಿ ಮಗ್ನನಾಗಿದ್ದಾನೆ. ಅದರಲ್ಲಿ ಸಫಲನೂ ಆಗುತ್ತಾನೆ. 'ಜನ ಮರುಳೋ ಜಾತ್ರೆ ಮರುಳೋ' ಎಂಬ ಗಾದೆ ಮಾತಿಗೆ ಹೊಸ ನಿದರ್ಶನ ನೀಡುತ್ತಾನೆ.

                                   ಅಯ್ಯೋ ಬರೀತಾ ಬರೀತಾ ಟೈಮು ಹೋದದ್ದೇ ತಿಳೀಲಿಲ್ಲ , ಬರ್ತೀನಿ ಟೈಮಾಯ್ತು ಟಿವಿಯಲ್ಲಿ ಐಪಿಎಲ್ ಮ್ಯಾಚಿದೆ. ಇವತ್ತು ತೆಂಡೂಲ್ಕರ್ ಸೆಹ್ವಾಗ್ ಗೆ ಪಾಠ ಕಲಿಸ್ತಾನೆ, ಯುವರಾಜ್ ಗೆದ್ದರೆ ಪ್ರೀತಿ ಜಿಂಟಾ ಮುತ್ತು ಕೊಡೋಲ್ಲ ಶಾಪ ಹಾಕ್ತಾಳೆ ಯಾಕಂದ್ರೆ ಅವನು ಈಗ ಬೇರೆ ಟೀಮು- ಇದು ಐಪಿಎಲ್ಲಿನ ಲೇಟೆಸ್ಟ್ ಥೀಮು. 
                                     
  

1 ಕಾಮೆಂಟ್‌:

  1. Kurudu Kaanchaana....... Ellarannu kunistaa idee... aste... Cricket eega dodda janara chata teeraskolo hosa maarga aste...nanagantu ee reetiya belavanigeinda cricket nodo chatave bittogide... jana mallo jaatre mallooo enno conclusionge baro haag aagide annodakke vishaadavide..!!!

    ಪ್ರತ್ಯುತ್ತರಅಳಿಸಿ