ಮಂಗಳವಾರ, ಅಕ್ಟೋಬರ್ 19, 2010

ಸಾವಿಗೊಂದು ಸಲಾಮು



ಸಾವಿಲ್ಲದ ಮನೆಯ ಸಾಸಿವೆಯ ತಾ ಎಂದ ಬುದ್ಧ
ಮನೆಗಳು ಸಿಕ್ಕವು, ಸಾಸಿವೆಯೂ ಸಿಕ್ಕಿತು
ಸಿಗಲೇ ಇಲ್ಲ ಸಾವಿಲ್ಲದ ಮನೆ


ಹುಡುಕಿ ಅಲೆದಳು ಆ ತಾಯಿ ಬಳಲಿ ಬಸವಳಿವವರೆಗೂ
ಸಾವೆಂಬ ಮಾಯಾವಿ ಕೈಚಾಚದ ಊರು-ಕೇರಿ
ಸಿಗಲೇ ಇಲ್ಲ, ಸಾವೇ ನೀ ಸರ್ವಾಂತರ್ಯಾಮಿ


ಬಡವ ಬಲ್ಲಿದ ಭೇದ ತೋರದ ನಿಜವಾದ
ಸಮಾಜವಾದಿ ನೀನು
ಧನವಂತ-ಧನಹೀನ ಯಾರಾದರೇನು ಬಿಡಲಾರೆ ನೀನು


ಜಾತಿ-ಉಪಜಾತಿಗಳ ಜಾಲದಲ್ಲಿ ನೀನಿಲ್ಲ
ಯಾವ ಧರ್ಮದ ಜನರೋ ನಿನಗದರ ಹಂಗಿಲ್ಲ
ದಾಕ್ಷಿಣ್ಯಗಳಿಂದ ದೂರ ನೀ ಜಾತ್ಯಾತೀತ-ಧರ್ಮಾತೀತ

ನನಗೆ ಅನಿಸುವ ಹಾಗೆ ಸಾವೇ ನೀ ಸಾವಲ್ಲ
ನೀ ಮತ್ತೊಂದರ ಹುಟ್ಟು, ಬರುವವರೆಗೂ
ನೀ ಬಿಟ್ಟುಕೊಡಲಾರೆ ನಿನ್ನ ಬರುವಿಕೆಯ ಗುಟ್ಟು

ಸಾವೇ ನಿನಗಿದೋ ನನ್ನ ಸಲಾಮು
ನಿನಗಿಲ್ಲ ಯಾರದೇ ಅಂಕೆ- ಲಗಾಮು
ಎಲ್ಲೆಡೆ ಕಾಣುತಿದೆ ನಿನ್ನದೇ ಹಸ್ತ- ಕೊಲ್ಲುವ ಕಲೆ ನಿನಗೆ ಕರಗತ

3 ಕಾಮೆಂಟ್‌ಗಳು: