ಗುರುವಾರ, ಜೂನ್ 9, 2011

ಎತ್ತ ಸಾಗಿದೆ ಪ್ರಜಾಪ್ರಭುತ್ವ !!!???

                      ಭಾರತ ದೇಶದ ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ. ಇಲ್ಲಿ ವಾಹನ ಚಲಾಯಿಸಲು ಪರವಾನಗಿ ಇಲ್ಲದಿದ್ದರೂ ಪರವಾಗಿಲ್ಲ, ಪೋಲಿಸಪ್ಪನ ಕೈಗೆ ನೂರರ ನೋಟು ತುರುಕಿ ಬಚಾವಾಗಬಹುದು. ಆದರೆ ಉಪವಾಸ ಸತ್ಯಾಗ್ರಹ ಮಾಡಲು ಅನುಮತಿ ಬೇಕು. ಇಲ್ಲದಿದ್ದರೆ ಹೆಂಗಸರು, ಮಕ್ಕಳೆಂಬ ಭೇದ ತೋರದೆ ಸದೆಬಡಿಯುತ್ತಾರೆ. ಸಾಮಾನ್ಯ ಜನರು ಏನೂ ಮಾಡಲಾಗದ ಹಂತ ತಲುಪಿದ್ದಾರೆ. ತಾವೇ ಆರಿಸಿಕಳಿಸಿದ ಮಂದಿ ತಮ್ಮ ಮೇಲೆ ದಬ್ಬಾಳಿಕೆ ಮಾಡುವುದನ್ನು ನೋಡುವ ಅಸಹಾಯಕ ಸ್ಥಿತಿ ಯಾವುದೇ ದೇಶದ ಜನರಿಗೂ ಬರಬಾರದು.
                                         ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಯು.ಪಿ.ಎ  ಸರ್ಕಾರ ಹಗರಣಗಳ ಮೇಲೆ ಹಗರಣಗಳನ್ನು ಸೃಷ್ಟಿಸುತ್ತಾ ಸಾಗಿದೆ. ಜನರು ಶಾಂತಿಯುತ ಪ್ರತಿಭಟನೆಗೆ ಮುಂದಾದರೆ ರಾತ್ರೋರಾತ್ರಿ ಪೋಲಿಸ್ ದಾಳಿಗಳಾಗುತ್ತವೆ. ಇದನ್ನು ಪ್ರಧಾನಿ ದುರದೃಷ್ಟಕರ ಎಂದರೆ ಅವರದೇ ಸಂಪುಟದ ಸಚಿವರು ಸಮರ್ಥಿಸಿಕೊಳ್ಳುತ್ತಾರೆ. ಇಂತಹ ಒಂದು ಸರ್ಕಾರವನ್ನು ಆರಿಸಿ ಕಳಿಸಿದ್ದು ನಮ್ಮ ದುರದೃಷ್ಟ ಎಂದೇ ಹೇಳಬೇಕು.
                               ಇನ್ನು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭಾಜಪ ಸರ್ಕಾರ ನಮ್ಮ ನಾಡು ಕಂಡ ಅತ್ಯಂತ ಭ್ರಷ್ಟ ಸರ್ಕಾರ ಎಂಬ ಹಣೆಪಟ್ಟಿ ಹೊಂದಿದೆ. ಇಲ್ಲಿ ಯಡಿಯೂರಪ್ಪನವರೇ ಸರ್ವಸ್ವ. ಅವರು ಹೇಳಿದ್ದಕ್ಕೆ ಎಲ್ಲರೂ ಅಸ್ತು ಎನ್ನಲೇಬೇಕು, ಇಲ್ಲದಿದ್ದರೆ ಅವರಿಗೆ ಉಳಿಗಾಲವಿಲ್ಲ. ತಮ್ಮ ಕುಯುಕ್ತಿಯಿಂದ ಹೈಕಮಾನ್ದನ್ನೇ ಅಲುಗಾಡಿಸಬಲ್ಲ ಶಕ್ತಿ ಯಡಿಯೂರಪ್ಪನವರಿಗಿದೆ.

                   ದೇಶದ ಇಂಥ ಸ್ಥಿತಿಗೆ ಕಾರಣವೇನು ಎಂದು ಯೋಚಿಸಿದರೆ ಅದು ಸುತ್ತಿ ಬಳಸಿ ನಮ್ಮತ್ತಲೇ ಬೊಟ್ಟು ಮಾಡಿ ತೋರಿಸುತ್ತದೆ.  ಹಿರಿಯ ನ್ಯಾಯವಾದಿಗಳಾದ  ಎ.ಜಿ. ನೂರಾನಿ ಅವರು " Its an illusion that India is a multi-party democracy. There is really only one party" ಎಂದು ಒಂದೆರಡು ವರ್ಷದ ಹಿಂದೆ ತಮ್ಮ ಲೇಖನವೊಂದರಲ್ಲಿ ಹೇಳಿದ್ದರು  ಇಂದಿನ ಪರಿಸ್ಥಿತಿಗೆ ಈ ಹೇಳಿಕೆ ಅತ್ಯಂತ ಮಹತ್ವದ್ದಾಗಿದೆ. ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವೆಯೇ ಎಂಬ ಅನುಮಾನ ಮೂಡುತ್ತದೆ.                              ಹೌದು, ನಾವು ಭ್ರಮೆಯಲ್ಲಿದ್ದೇವೆ. ಇಲ್ಲಿ ಇರುವುದು ಒಂದೇ ಪಕ್ಷ. ಇಲ್ಲಿ ಆಡಳಿತ ಪಕ್ಷ ಏನು ಮಾಡುತ್ತದೋ, ಏನು ಹೇಳುತ್ತದೋ ಅದೇ ಸರಿ. ವಿರೋಧಪಕ್ಷ ಹೆಸರಿಗೆ ಮಾತ್ರ ಇದೆ. ಅದಕ್ಕೆ ಕವಡೆ ಕಿಮ್ಮತ್ತಿಲ್ಲ. 
                      ಉದಾಹರಣೆಗೆ, ಇದೀಗ ದೇಶದಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಕಪ್ಪುಹಣದ ವಿಷಯವನ್ನೇ ತೆಗೆದುಕೊಂಡರೆ ಕೇಂದ್ರದಲ್ಲಿ ವಿರೋಧ ಪಕ್ಷವಾಗಿರುವ ಭಾಜಪ " ಕಪ್ಪುಹಣವನ್ನು ಕೂಡಲೇ ವಾಪಸ್ ತನ್ನಿ " ಎಂದರೆ " ನೀವು ಆಡಳಿತದಲ್ಲಿದ್ದಾಗ ಏಕೆ ಕಪ್ಪುಹಣವನ್ನು ವಾಪಸ್ ತರಲಿಲ್ಲ, ಈಗೇಕೆ ಬೊಬ್ಬೆ ಹಾಕುತ್ತೀರಿ" ಎಂದು ಕೇಂದ್ರ ಸರ್ಕಾರವು 'ಭಾಜಪ'ದ  ಬಾಯಿ ಮುಚ್ಚಿಸುತ್ತದೆ. ಇನ್ನು ರಾಜ್ಯಸರ್ಕಾರದ ವಿಷಯಕ್ಕೆ ಬಂದರೆ ಭೂಹಗರಣ, ಗಣಿಹಗರಣ ಇನ್ನಿತರ ಯಾವುದೇ ವಿಷಯ ಚರ್ಚೆಗೆ ಬಂದರೂ ವಿರೋಧ ಪಕ್ಷಗಳ ಮೇಲೆ ಹರಿಹಾಯುವ ನಮ್ಮ ಮುಖ್ಯಮಂತ್ರಿಗಳು "ನಿಮ್ಮ ಆಡಳಿತದ ಅವಧಿಯಲ್ಲಿ ನೀವು ಮಾಡಿದ್ದೇನು? ನೀವು ಲೂಟಿ ಮಾಡಿಲ್ಲವೇ, ನಾವು ಮಾಡಿದರೆ ತಪ್ಪೇನು? "ಎಂಬ ಧೋರಣೆಯ ಹೇಳಿಕೆ ನೀಡುತ್ತಾರೆ.
                               ಇವೆಲ್ಲವನ್ನೂ ನೋಡಿದಾಗ ಒಮ್ಮೊಮ್ಮೆ ಮನಸ್ಸಿಗೆ ಆಘಾತವಾಗುತ್ತದೆ. ನಾವು ಮತದಾರರು ಎಡವಿದ್ದೆಲ್ಲಿ ಎಂಬ ಪ್ರಶ್ನೆ ಏಳುತ್ತದೆ.
ಚುನಾವಣಾ ಸಮಯದಲ್ಲಿ ಮತ ಕೇಳಲು ಬರುವ ಪಕ್ಷಗಳ ಪ್ರಣಾಳಿಕೆಗಳು ವಿಭಿನ್ನವಾಗಿರುತ್ತವೆ ಹೊರತು ಆಡಳಿತದಲ್ಲಿ ಅಂತಹದ್ದೇನೂ ವ್ಯತ್ಯಾಸ ಇರುವುದಿಲ್ಲ. ಹಿಂದಿನ ಸರ್ಕಾರಗಳು ಕೈಗೊಂಡ ಯೋಜನೆಗಳಿಗೆ, ಕಾರ್ಯಕ್ರಮಗಳಿಗೆ ಅಲ್ಪ ಸ್ವಲ್ಪ ಬದಲಾವಣೆ ಮಾಡಿ, ಹೊಸ ಹೆಸರು ನೀಡಿ     " ಹೊಸ ಬಾಟಲಿಯಲ್ಲಿ ಹಳೆಯ ಮದ್ಯ" ಎಂಬಂತೆ ಆಡಳಿತ ನಡೆಸುತ್ತಾರೆ.   
ಕೆಟ್ಟದ್ದಕ್ಕೆಲ್ಲಾ ಹಿಂದಿನ ಸರ್ಕಾರವನ್ನು ದೂಷಿಸುತ್ತಾ,ಒಳ್ಳೆಯದ್ದಕ್ಕೆಲ್ಲಾ ತಮ್ಮಿಂದಲೇ ಆದದ್ದು ಎಂದು ಬೀಗುತ್ತಾ, ಖುರ್ಚಿ ಉಳಿಸಿಕೊಳ್ಳುವ ಸಲುವಾಗಿ ತಂತ್ರ-ಪ್ರತಿತಂತ್ರಗಳನ್ನು ಹೆಣೆಯುತ್ತಾ ಇದನ್ನೇ 'ಆಡಳಿತ' ಎಂದು ತಿಳಿದಿರುವುದು ಇಂದಿನ ರಾಜಕಾರಣಿಗಳ ಬೌದ್ದಿಕ ದಾರಿದ್ರ್ಯದ ಪರಮಾವಧಿ ಎನ್ನದೆ ವಿಧಿಯಿಲ್ಲ. 

                     ಒಟ್ಟಾರೆಯಾಗಿ ನಾನು ಹೇಳಬಯಸುವುದೇನೆಂದರೆ ನಮ್ಮ ದೇಶದಲ್ಲಿಯೂ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳ ಕುರಿತಾಗಿ ಸಾರ್ವಜನಿಕ ಚರ್ಚೆಗಳಾಗಬೇಕಿದೆ. ಈ ಪದ್ಧತಿ ಅಮೇರಿಕಾ ಸೇರಿದಂತೆ ಹಲವು ದೇಶಗಳಲ್ಲಿದ್ದು ಇಲ್ಲಿಯೂ ಇಂತಹ ಚರ್ಚೆ ನಡೆದರೆ ಮತದಾರನನ್ನು ಜಾಗೃತನಾಗಿಸಲು ನೆರವಾಗುತ್ತದೆ.



           

                    

2 ಕಾಮೆಂಟ್‌ಗಳು:

  1. vijay sir,thumba chennagide lekhana.namma deshada sthithi chennagi bimbisidira..democracy is the freedom to elect our own dictators..this is exactly right !!!

    ಪ್ರತ್ಯುತ್ತರಅಳಿಸಿ
  2. Hello Vijay,

    Your article pretty much expresses the mood of the entire nation. But I have some reservations. I dont think democracy has been such a failure..... we have progressed a lot, but still a long way to go.... many milestones to cross.
    Democracy progresses in stages. It takes some time for it to reach a maturity. Remember
    "Democracy is a form of government that ensures that people are governed no better than they deserve". Whatever has happened in the past 61 years, we deserve it every inch.

    ಪ್ರತ್ಯುತ್ತರಅಳಿಸಿ