ಬುಧವಾರ, ಜೂನ್ 15, 2011

ಕನ್ನಡ ನಾಡೆಂಬ ಕರುಣೆಯ ಬೀಡೂ, ರಾಬಿನ್ ಚುಗ್ ಎಂಬ ಅವಿವೇಕಿಯೂ

ಪ್ರಿಯ ಗೆಳೆಯರೇ, 

                     "ರಾಬಿನ್ ಚುಗ್", ಈಗ ಈ ಹೆಸರು ಅಂತರ್ಜಾಲ ಬಳಕೆದಾರರಿಗೆ ಅದರಲ್ಲೂ ಫೇಸ್ಬುಕ್  ಬಳಸುವ ಕನ್ನಡಿಗರಿಗೆ ಪರಿಚಿತ ಹೆಸರು. ಈತನ ಹೆಸರು ಕೇಳಿದೊಡನೆ ಕೆಲವರಲ್ಲಿ ರೋಷ ಉಕ್ಕಿಬರುತ್ತದೆ. ಕೈಗೆ ಸಿಕ್ಕರೆ ನಾಲ್ಕೇಟು ತದುಕಬೇಕು ಅಂತ ಹಲವರಿಗೆ ಆಸೆಯಿದೆ. ಸಮಾಜದಲ್ಲಿ ಹಲವಾರು ಜನ ತಮ್ಮ ಒಳ್ಳೆಯ ಕೆಲಸಗಳಿಗೆ, ಒಳ್ಳೆಯ ಮಾತುಗಳಿಗೆ ಪ್ರಚಾರ ಗಳಿಸಿದರೆ ಇನ್ನು ಕೆಲವರು ಕೆಟ್ಟ ಕೆಲಸಗಳು ಮತ್ತು ಕೆಟ್ಟ ಮಾತುಗಳಿಂದ ಪ್ರಚಾರ ಗಳಿಸುತ್ತಾರೆ. ಹೀಗೆ ತಾನು ಬಳಸಿದ ಕೆಟ್ಟ ಮಾತಿನಿಂದ ಕುಖ್ಯಾತಿ ಗಳಿಸಿದವನು ರಾಬಿನ್ ಚುಗ್.
                   
               ಕೆಲವು ದಿನಗಳ ಹಿಂದೆ ಕನ್ನಡಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಯುತ ಮುಖ್ಯಮಂತ್ರಿ ಚಂದ್ರುರವರು ಕರ್ನಾಟಕ ಸರ್ಕಾರಕ್ಕೆ ಕಳುಹಿಸಿದ ೨೭ ಶಿಫಾರಸುಗಳಲ್ಲಿ  "ವಲಸಿಗರು ಒಂದು ವರ್ಷದ ಅವಧಿಯ ಒಳಗೆ ಕನ್ನಡ ಕಲಿಯಬೇಕು ಹಾಗೂ ಏಳನೇ ತರಗತಿ ಹಂತದ ಕನ್ನಡ ಪರೀಕ್ಷೆ ಪಾಸು ಮಾಡಬೇಕು" ಎಂಬುದು ಅತ್ಯಂತ ಪ್ರಮುಖವಾದ ಹಾಗೂ ವಿವಾದಾತ್ಮಕವಾದ ಶಿಫಾರಸು. 
                      
               ಈ  ಶಿಫಾರಸು ಎಷ್ಟರ ಮಟ್ಟಿಗೆ ಸೂಕ್ತ? ಇದರ ಸಾಧಕ-ಬಾಧಕಗಳೇನು? ಇದನ್ನು ಜಾರಿಗೊಳಿಸಲು ಸಾಧ್ಯವೇ? ಇದರಿಂದ ಕರ್ನಾಟಕದ ಹೊರಗೆ ನೆಲೆಸಿರುವ ಕನ್ನಡಿಗರು ಎದುರಿಸಬಹುದಾದ ಸವಾಲುಗಳೇನು? ಎಂಬೆಲ್ಲಾ ಪ್ರಶ್ನೆಗಳು ಕಣ್ಣ ಮುಂದೆ ನಿಲ್ಲುತ್ತವೆ.
                    ಇದನ್ನೆಲ್ಲಾ ಒತ್ತಟ್ಟಿಗಿಟ್ಟು ರಾಬಿನ್ ಚುಗ್ ಎಂಬ ಈ ರಾಜಾಸ್ಥಾನೀ ಯುವಕನ ಬಗ್ಗೆ ಮಾತನಾಡೋಣ. ವಿದ್ಯಾಭ್ಯಾಸದ ಸಲುವಾಗಿ ಸುಮಾರು ೫ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ತದನಂತರ ಇಲ್ಲಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. 'ಬೆಂಗಳೂರ್ ಮಿರರ್' ಎಂಬ ರದ್ದಿ ಪತ್ರಿಕೆಯೊಂದು ಕನ್ನಡಾಭಿವೃದ್ಧಿ ಪ್ರಾಧಿಕಾರದ ಈ ಶಿಫಾರಸ್ಸನ್ನು ವಲಸಿಗರನ್ನು ಪ್ರಚೋದಿಸುವ ರೀತಿಯಲ್ಲಿ ವರದಿ ಮಾಡಿ ವಲಸಿಗರಿಗೆ ಇನ್ನು ಬೆಂಗಳೂರಿನಲ್ಲಿ ಉಳಿಗಾಲವಿಲ್ಲ ಎಂಬಂತೆ ಬಿಂಬಿಸಿ ಸುದ್ದಿ ನೀಡಿತು. ಇದನ್ನು ತನ್ನ ಫೇಸ್ಬುಕ್ ಪ್ರೊಫೈಲಿನಲ್ಲಿ ಶೇರ್ ಮಾಡಿದ ರಾಬಿನ್ ಚುಗ್ "F**K OFF" ಎಂದು ಪ್ರತಿಕ್ರಿಯೆ ನೀಡಿದ. ಇದೇ ತರಹದ ಹಾಗೂ ಇದಕ್ಕಿಂತ ಕೆಳಮಟ್ಟದ ಪ್ರತಿಕ್ರಿಯೆಗಳು ಬೆಂಗಳೂರ್ ಮಿರರ್ ಪತ್ರಿಕೆಯ ಅಂತರ್ಜಾಲ ಆವೃತ್ತಿಯಲ್ಲಿದೆ. ಇದರ ಕೊಂಡಿ ಇಲ್ಲಿದೆ.http://www.bangaloremirror.com
/index.aspx?page=article&sectid=10&contentid=201106072011060

               ಹೀಗೆ ಕೀಳುದರ್ಜೆಯ ಪ್ರತಿಕ್ರಿಯೆಯೊಂದನ್ನು ನೀಡಿದ ರಾಬಿನ್ ತನ್ನ ಸ್ನೇಹಿತರು ಹಾಗೂ ಸಹೋದ್ಯೋಗಿಗಳಿಂದಲೇ ಉಗಿಸಿಕೊಂಡಿದ್ದಾನಾದರೂ ಆ ಪ್ರತಿಕ್ರಿಯೆಯನ್ನು ಅಥವಾ ಪೋಸ್ಟ್ ಅನ್ನು ತೆಗೆದುಹಾಕಿರಲಿಲ್ಲ. ನಂತರದಲ್ಲಿ ಬಂದ ವ್ಯಾಪಕ ಟೀಕೆ ಹಾಗೂ ಬೆದರಿಕೆಗಳಿಗೆ ತಲೆಬಾಗಿ ಕೊನೆಗೆ ಆ ಪೋಸ್ಟನ್ನು ತೆಗೆದ ಹಾಗೂ ಕ್ಷಮೆಯಾಚಿಸಿದ. ಇಷ್ಟರ ವೇಳೆಗೆ ಆತನ ಕಚೇರಿಯ ವಿಳಾಸ, ಮೊಬೈಲ್ ಸಂಖ್ಯೆ, ಮಿಂಚಂಚೆ ವಿಳಾಸ ಎಲ್ಲೆಡೆ ಹರಡಿತ್ತು. ನನಗೂ ಸಹ ಗೆಳೆಯ ಸಾಗರ್ ರಾಜ್ ಮುಖಾಂತರ ಆತನ ಮೊಬೈಲ್ ನಂಬರ್ ಸಿಕ್ಕಿತು. ಇಷ್ಟರಲ್ಲಾಗಲೇ ಅವನು ಮೊಬೈಲ್ ಸ್ವಿಚ್ ಆಫ್ ಮಾಡಿರಬಹುದು ಎಂದುಕೊಂಡೇ ಕರೆ ಮಾಡಿದೆ. ಎರಡು ರಿಂಗ್ ಆದಮೇಲೆ ಫೋನ್ ತೆಗೆದ. ನಾನು ಅವನಿಗೆ ಮೊದಲು ಕೇಳಿದ ಪ್ರಶ್ನೆ "ನಿನಗೆ ಕನ್ನಡ ಬರುತ್ತಾ? ಅದಕ್ಕವನು ಸ್ವಲ್ಪ ಸ್ವಲ್ಪ ಗೊತ್ತು ಅಂತ ಹೇಳಿದ. ಕನ್ನಡ ನಾಡಿಗೆ ಬಂದು, ಕನ್ನಡದ ಜನರ ಮಧ್ಯೆ ಇದ್ದು, ಕನ್ನಡಿಗರ ಅನ್ನ ತಿಂದು ಇಲ್ಲಿನ ನೀರು ಕುಡಿದು ಜೀವನ ಸಾಗಿಸುತ್ತಿರುವ ನೀನು ಕನ್ನಡಿಗರನ್ನು ಪ್ರತಿನಿಧಿಸುವ ಸಂಸ್ಥೆಯೊಂದರ ಕುರಿತು ಹೀಗೆ ಹೀನ ಪದ ಪ್ರಯೋಗ ಮಾಡಿದ್ದು ಎಷ್ಟು ಸರಿ ಎಂದು ದಬಾಯಿಸಿದೆ. ಅದಕ್ಕವನು " ಇಲ್ಲ ಸರ್, ನನ್ನ ಉದ್ದೇಶ ಆ ಶಿಫಾರಸ್ಸನ್ನು ವಿರೋಧಿಸುವುದಷ್ಟೇ ಆಗಿತ್ತು, ಆದರೆ ನಾನು ಬಳಸಿದ ಶಬ್ದದ ಬಗ್ಗೆ ನನಗೆ ಪಶ್ಚಾತ್ತಾಪ ಇದೆ" ಎಂದ. 

                  ಕನ್ನಡಿಗರು ಉದಾರ ಹೃದಯಿಗಳು. ಇದು ನಮ್ಮ ವಿಶೇಷತೆಯೂ ಹೌದು ಜೊತೆಗೇ ವೀಕ್ನೆಸ್ ಕೂಡಾ. ನಾವು ಕನ್ನಡಿಗರು ಅಂಗಡಿಗೆ ಬಂದ ವಲಸಿಗ ಗಿರಾಕಿಯನ್ನು ಅವರದೇ ಭಾಷೆಯಲ್ಲಿ ಅಥವಾ ಹಿಂದಿ, ಇಂಗ್ಲೀಷಿನಲ್ಲಿ ಮಾತಾಡಿಸುತ್ತೇವೆ. ವಿಳಾಸ ಹುಡುಕುತ್ತಾ ಬಂದ ಹೊರಗಿನವರಿಗೆ ಅವರದೇ ಭಾಷೆಯಲ್ಲಿ ಅಡ್ರೆಸ್ ಹೇಳುತ್ತೇವೆ. ಅವರಿಗೆ ಅತಿಯಾದ ಪ್ರಾಮುಖ್ಯತೆ ನೀಡುತ್ತೇವೆ. ಅವರ ಅನುಕೂಲಕ್ಕಾಗಿ ನಮ್ಮ ಜೀವನಶೈಲಿಯನ್ನೇ ಬದಲಾಯಿಸಿಕೊಳ್ಳುತ್ತೇವೆ. ಇದನ್ನು ನಮ್ಮ ದೌರ್ಬಲ್ಯ ಎಂದು ಭಾವಿಸುವ ನಿನ್ನಂತಹ ಮಂದಿ ಹೀಗೆ ದುರುಪಯೋಗ ಪಡಿಸಿಕೊಳ್ಳುವುದು ಎಷ್ಟು ಸರಿ ಎಂದು ದಬಾಯಿಸಿದೆ. ಮತ್ತೊಮ್ಮೆ ತನ್ನ ತಪ್ಪಿಗಾಗಿ ಕ್ಷಮೆ ಕೇಳಿದ ಆತ ಇನ್ನೆಂದೂ ತಾನು ಈ ರೀತಿ ವರ್ತಿಸುವುದಿಲ್ಲ ಎಂದು ಅಲವತ್ತುಕೊಂಡ. ನಿನಗೆ ಆಸಕ್ತಿಯಿದ್ದಲ್ಲಿ ನಾನು ನಿನಗೆ ಕನ್ನಡ ಕಳಿಸಿಕೊಡುತ್ತೇನೆ ಎಂದು ಆತನಿಗೆ ಹೇಳಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಆತ ಕನ್ನಡ ಕಲಿಯಬೇಕೆಂಬ ಆಸೆ ತನಗೂ ಇದೆ ಎಂದು ಹೇಳಿದ. ಮತ್ತೇಕೆ ನೀನು ಆ ಶಿಫಾರಸ್ಸನ್ನು ವಿರೋಧಿಸಿದೆ ಎಂದು ಕೇಳಿದೆ.   
ಅದಕ್ಕೆ ಆತನ ಪ್ರತಿಕ್ರಿಯೆ ಹೀಗಿತ್ತು " ನಾನು ಕಳೆದ ೫ ವರ್ಷಗಳಿಂದ ಬೆಂಗಳೂರಿನಲ್ಲಿದ್ದೇನೆ. ನನ್ನ ಅವಶ್ಯಕತೆಗೆ ತಕ್ಕಷ್ಟು ಮಟ್ಟಿಗಿನ ಕನ್ನಡ ಕಲಿತಿದ್ದೇನೆ.ಇದನ್ನು ನಾನು ನನ್ನ ಅವಶ್ಯಕತೆಗಾಗಿ ಕಲಿತಿದ್ದೇನೆ ಹೊರತು ಯಾರದೇ ಒತ್ತಾಯಕ್ಕಲ್ಲ. ಯಾರಾದರೂ ನನ್ನ ಬೆನ್ನ ಹಿಂದೆ ನಿಂತು ಲಾಠಿ ಹಿಡಿದು ಕನ್ನಡ ಕಲಿ ಎಂದಿದ್ದರೆ ಕಲಿಯಲು ಸಾಧ್ಯವಾಗುತ್ತಿರಲಿಲ್ಲ. ಒಂದು ವರ್ಷದಲ್ಲಿ ಕನ್ನಡ ಕಲಿಯಬೇಕೆಂಬುದನ್ನು, ಏಳನೇ ತರಗತಿಯ ತತ್ಸಮಾನ ಕನ್ನಡ ಪರೀಕ್ಷೆ ಪಾಸು ಮಾಡಬೇಕು ಎಂಬುದನ್ನು ನಾನು ವಿರೋಧಿಸಿದೆ." 

                ರಾಬಿನ್ ಹೇಳಿದ ಈ ಮಾತುಗಳನ್ನು ಕೇಳಿದ ನಂತರ ಈತನ ಮಾತುಗಳಲ್ಲೂ ಸತ್ಯವಿದೆ ಎನ್ನಿಸಿತು. ಕರ್ನಾಟಕಕ್ಕೆ ಉದ್ಯೋಗ ಅರಸಿ, ಬದುಕು ಕಟ್ಟಿಕೊಳ್ಳಲು ಬಂದಿರುವ ಜನರಲ್ಲಿ ಕೇವಲ ವಿದ್ಯಾವಂತರು, ಅಕ್ಷರಸ್ಥರೆ ಇಲ್ಲ. ಅನಕ್ಷರಸ್ಥರು, ಅವಿದ್ಯಾವಂತರೂ ಇದ್ದಾರೆ. ಅವರುಗಳು ಏನು ಮಾಡಬೇಕು? ಹೊರರಾಜ್ಯಗಳಲ್ಲಿ ನೆಲೆಸಿರುವ ಕನ್ನಡಿಗರಿಗೂ ಆಯಾ ರಾಜ್ಯಗಳ ಸರ್ಕಾರ ಇಂತಹುದೇ ಕಾನೂನು ಜಾರಿಗೆ ತಂದರೆ ನಾವು ಒಪ್ಪುವುದು ಸಾಧ್ಯವೇ? ಎಂದು ನನ್ನ ಮನಸ್ಸು ಕೇಳುತ್ತಿತ್ತು. ಆದರೆ ರಾಬಿನ್ ಪ್ರತಿಕ್ರಿಯಿಸಲು ಉಪಯೋಗಿಸಿದ ಭಾಷೆಗೆ ನನ್ನ ವಿರೋಧ ಇದ್ದೇ ಇದೆ. ಆದಕ್ಕೆ ನಾನು ಅವನಿಗೊಂದು ಸಲಹೆ ನೀಡಿದೆ. ನಿನಗೆ ಬರುವ ಎಲ್ಲಾ ಮೊಬೈಲ್ ಕರೆಗಳನ್ನೂ ಸ್ವೀಕರಿಸಬೇಕು, ಯಾವುದೇ ಕಾರಣಕ್ಕೂ ಮೊಬೈಲ್ ಸ್ವಿಚ್ ಆಫ್ ಮಾಡಬಾರದು, ಎಲ್ಲಾ ಕರೆಗಳು, ಮಿಂಚಂಚೆಗಳಿಗೂ ಉತ್ತರಿಸಬೇಕು, ಎಲ್ಲರಲ್ಲಿ ಕ್ಷಮಾಪಣೆ ಕೇಳಬೇಕು.....ಇದೇ ನಿನ್ನ ತಪ್ಪಿಗೆ ಶಿಕ್ಷೆ ಎಂದು ಭಾವಿಸು ಎಂದೆ. ನನ್ನ ಮಾತನ್ನು ಒಪ್ಪಿದ ಅವನು ಈಗಾಗಲೇ ಅದೇ ರೀತಿಯಲ್ಲಿ ವರ್ತಿಸುತ್ತಿದ್ದು ಲಿಖಿತರೂಪದಲ್ಲಿ ಕೂಡಾ ಕ್ಷಮೆ ಯಾಚಿಸಿದ್ದಾನೆ. "ಪಶ್ಚಾತಾಪಕ್ಕಿಂಥ ದೊಡ್ಡ ಶಿಕ್ಷೆ ಮತ್ತೊಂದಿಲ್ಲ" ಎಂದು ಹಿರಿಯರು ಹೇಳುತ್ತಾರೆ. ಅದಕ್ಕಾಗಿ ನನ್ನೆಲ್ಲಾ ಸಹೃದಯೀ ಮಿತ್ರರಲ್ಲಿ ನನ್ನ ಮನವಿ ಏನೆಂದರೆ ಈ ವಿಷಯವನ್ನು ಇಲ್ಲಿಗೆ ಸಮಾಪ್ತಿಗೊಳಿಸೋಣ. 
                     
                ಕನ್ನಡ ನಾಡನ್ನು ಪ್ರತಿನಿಧಿಸುವ ಸಂಸ್ಥೆಯೊಂದರ ಕುರಿತು ಅವಹೇಳನಕಾರಿ ಮಾತನ್ನಾಡಿದ ಅದೇ ವ್ಯಕ್ತಿಗೆ ಕನ್ನಡ ಕಲಿಸಿ ಕನ್ನಡ ನಾಡಿನ ಬಗ್ಗೆ ಹೆಮ್ಮೆಯ ಮಾತಾಡುವಂತೆ ಮಾಡುವ ಬಯಕೆ ಇದೆ. ನಿಮ್ಮ ಸಹಕಾರ, ಬೆಂಬಲ ಇರಲಿ. 



                 ವಿವಾದಕ್ಕೆ ಕಾರಣವಾದ ಪೋಸ್ಟ್ 
                                                                                                                               ಕ್ಷಮಾಪಣಾ ಪತ್ರ 
    

7 ಕಾಮೆಂಟ್‌ಗಳು:

  1. ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ Influx ಹೆಚ್ಚು ಇದೆ. ಬಹುಷಃ ಮಹಾರಾಷ್ಟ್ರದ ನಂತರ ನಮ್ಮ ರಾಜ್ಯಕ್ಕೆ ವಲಸಿಗರು ಹೆಚ್ಚು ಬರುತ್ತಿದ್ದಾರೆ.

    ಪ್ರತ್ಯುತ್ತರಅಳಿಸಿ
  2. sagar i agree with u....in B;lore most of the people are from outside Karnataka only,,even being educated they are not eager to learn Kannada atleast something...

    anyhow Vijay sir,nice article!!!

    ಪ್ರತ್ಯುತ್ತರಅಳಿಸಿ
  3. ತುಂಬಾ ಸಹನೆಯಿಂದ ಕೇಳಿದ್ದೀರಿ ಆತನಿಗೆ
    ಅದೆ ಸಮಯಕ್ಕೆ ನಾನಿದ್ದೀದ್ದರೆ..... ಹ್ಹ... ಹ್ಹ.... ಹ್ಹ....
    ಒಳ್ಳೇಯ ಲೇಖನ ಮತ್ತು ಇದನ್ನ ಎಲ್ಲರೂ ಓದಿದರೆ ಸ್ವಲ್ಪ ಮಟ್ಟಗಾದರೂ ಇನ್ನೊಬ್ಬರಿಗೆ ಕನ್ನಡ ಕಲಿಸಲು ಸಹಾಯವಾಗಬಹುದು

    ಪ್ರತ್ಯುತ್ತರಅಳಿಸಿ
  4. ತುಂಬಾ ಸಹನೆಯಿಂದ ಕೇಳಿದ್ದೀರಿ ಆತನಿಗೆ
    ಅದೆ ಸಮಯಕ್ಕೆ ನಾನಿದ್ದೀದ್ದರೆ..... ಹ್ಹ... ಹ್ಹ.... ಹ್ಹ....
    ಒಳ್ಳೇಯ ಲೇಖನ ಮತ್ತು ಇದನ್ನ ಎಲ್ಲರೂ ಓದಿದರೆ ಸ್ವಲ್ಪ ಮಟ್ಟಗಾದರೂ ಇನ್ನೊಬ್ಬರಿಗೆ ಕನ್ನಡ ಕಲಿಸಲು ಸಹಾಯವಾಗಬಹುದು

    ಪ್ರತ್ಯುತ್ತರಅಳಿಸಿ
  5. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನನ್ನ ಧನ್ಯವಾದಗಳು. ಪ್ರತಿಯೊಂದು ಘಟನೆಯನ್ನೂ ತುಲನೆ ಮಾಡುವ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ.

    ಪ್ರತ್ಯುತ್ತರಅಳಿಸಿ