ಮಂಗಳವಾರ, ಫೆಬ್ರವರಿ 28, 2012

ಯಮನ ಜೊತೆ ಫಿಕ್ಸಿಂಗು

ಅವನು: ನಿನ್ನೆ ರಾತ್ರಿ ಕನಸಿನಲ್ಲಿ ನೀನು ಸತ್ತುಹೋಗಿದ್ದೆ
ನಾನು: ಹೌದಾ!!?? ಸತ್ತೇ ಇಲ್ವಲ್ಲ ಬಡ್ಡಿಮಗ ಅಂತ ಬೇಜಾರೆನೋ ತಮಗೆ
ಅವನು: ಇಲ್ಲ ಕಣೋ ನಿಜವಾಗಲೂ ಥರ ಕನಸು ಬಿದ್ದಿತ್ತು
ನಾನು: ನೀನು "ಜೋಗಿ" ಸ್ಟೈಲಲ್ಲಿ ನನ್ ಹೆಣದ ಮುಂದೆ ಡ್ಯಾನ್ಸ್ ಮಾಡ್ತಿದ್ಯಾ? ಅಲ್ಲ ಕಣೋ ನಾನೇನೋ ಸಾವು ಅನ್ನೋ        ವಿಷಯದ ಬಗ್ಗೆ ಒಂದು ಕವನ ಗೀಚಿದ್ರೆ ನೀನು ನನ್ನ ಸಾವಿಗೆ ಸ್ಕೆಚ್ ಹಾಕ್ತಿಯಲ್ಲೋ ಸುಂದರಾಂಗ.

ಹೀಗೇ ಸಾಗಿತ್ತು ನನ್ನ ಹಾಗೂ ನನ್ನ ಕಸಿನ್ ನರಸಿಂಹನ್ ಚಾಟಿಂಗು ಕೆಲವು ದಿನಗಳ ಹಿಂದೆ. ಅವ್ನು ಅಲ್ಲೆಲ್ಲೋ ದೂರದಲ್ಲಿ ಡೆನ್ಮಾರ್ಕಿನ ಕೋಪನ್ ಹೇಗನ್ನಲ್ಲಿ ಕುಳಿತು ನನ್ ಜೊತೆ ಹರಟುತ್ತಿದ್ದ. ಸಾವಿನ ಕುರಿತು ನಮ್ಮ ಚರ್ಚೆ ಹೀಗೆ ಹಾಸ್ಯಮಯವಾಗಿ ಸಾಗಿತ್ತು. ಅಷ್ಟರಲ್ಲಿ ಅವನು ಬೇರಾವುದೋ ಕೆಲಸದಲ್ಲಿ ಬ್ಯುಸಿ ಆದ. ಅಲ್ಲಿಗೆ ನಮ್ಮ ಚಾಟ್-ಚಟಕ್ಕೆ ಬ್ರೇಕ್ ಬಿತ್ತು.

ಎಪಿಸೋಡ್ ಇಲ್ಲಿಗೆ ಮುಗಿದಿದ್ದರೆ ಚೆನ್ನಾಗಿತ್ತು. ಆದರೆ ಸಾವು ಅನ್ನುವ ಸಬ್ಜೆಕ್ಟು ಅಷ್ಟು ಸುಲಭವಾಗಿ ಮರೆಯಾಗುವ ವಿಷಯ ಅಲ್ಲ. ಬಿಟ್ಟೆನೆಂದರೂ ಬಿಡದೇ ಕಾಡುವ ಮಾಯೆ ಸಾವು. ನಾವು ಸಾಮಾನ್ಯವಾಗಿ ಎಲ್ಲರ ಮನೇಲೂ ದಿನ ನೋಡ್ತಾನೆ ಇರ್ತೀವಿ, ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಅಥವಾ ಅಪ್ಪ/ಅಮ್ಮ ಮಗನಿಗೆ ಹೀಗೆ ತುಂಬಾ ಹತ್ತಿರದವರೇ ಎಲ್ಲಾದರು ಹೋಗಿ ಸಾಯಿ ಅಂತಾನೋ ಸತ್ತಾದರೂ ಹೋಗು ಅಂತಾನೋ ಬೈತಿರ್ತಾರೆ. ನಿಜವಾಗಿಯು ಹಾಗೇನಾದ್ರೂ ಸತ್ತರೆ ಅವರಿಗಾಗುವ ನೋವು ಅಷ್ಟಿಷ್ಟಲ್ಲ. ತೀರಾ ಹತ್ತಿರದವರು ಸತ್ತಾಗ ಅದರ ನೋವು ಮರೆಯೋಕೆ ವರ್ಷಗಳೇ ಹಿಡಿಯುತ್ತವೆ.ಇದೇ ಥರ ಅವತ್ತೆಲ್ಲಾ ನನ್ನ ಮನಸ್ಸಿನ ತುಂಬಾ ಮನುಷ್ಯ ಎಂಬ ಪ್ರಾಣಿಯ ಪ್ರಾಣದ ಬಗ್ಗೆ ತರಹೇವಾರಿ ಯೋಚನೆಗಳು ಕಾಡಿದವು.

ಅರೆ ಇದೇನಿದು ಯಾರೋ ನನ್ನ ಕಡೆಗೆ ಬರ್ತಾ ಇದ್ದಾರಲ್ಲ....ಯಾಕೋ ಎಲ್ಲಾ ಮಸುಕು ಮಸುಕಾಗಿ ಕಾಣಿಸ್ತಾ ಇದೆ. ಅಯ್ಯೋ ದೇವರೇ ಏನಪ್ಪಾ ಇದು ಯಮರಾಜ ಬಂದೇ ಬಿಟ್ಟ ಅವನ ಅದೇ ಹಳೇ ಮಾಡಲ್ ಗಾಡಿ (ಕೋಣ) ಮೇಲೆ ಕೂತ್ಕೊಂಡು.

ಯಮರಾಜ: ಎಲೈ ಯುವಕ ನಡೆ ನಡೆ ಹೊರಡೋಣ...ನರಕಕ್ಕೆ
ನಾನು: ಅಲ್ಲಾ ಗುರುವೇ ನನಗೆ ಇವಾಗಿನ್ನು ಮೂವತ್ತು ವರ್ಷ ತುಂಬಿದೆ.... ಇನ್ನು ಆಯಸ್ಸು ಬಾಕಿ ಇದೆ. ಎಲ್ಲೋ ನಿಂಗೆ ಅಡ್ರಸ್ ತಪ್ಪಿ ಹೋಗಿದೆ. ಅದರಲ್ಲಿ ನಿಂದೇನೂ ತಪ್ಪಿಲ್ಲ ಬಿಡು ಬೆಂಗಳೂರು ತುಂಬಾ ಬೆಳೆದುಬಿಡ್ತು...ಕನಫ್ಯೂಸ್ ಆಗೋದು ಕಾಮನ್ನು.
ಯಮರಾಜ: ನಿನ್ನ ಹೆಸರು ವಿಜಯ್ ಅಲ್ಲವೇ, ನಾನು ಸರಿಯಾದ ವಿಳಾಸಕ್ಕೆ ಬಂದಿದ್ದೇನೆ. ನನ್ನನ್ನು "ದಾರಿ ತಪ್ಪಿದ ಮಗ" ಎಂದು ತಿಳಿದೆಯಾ ಮೂಢ!!
ನಾನು : ಇಲ್ಲಾ ಬಾಸು ಇದೇ ಬೀದೀಲಿ ಕೊನೆ ಮನೇಲಿ ಒಬ್ರು ವಿಜಿ ಅಂತ ಇದ್ದಾರೆ..ಲೇಡಿಸು....ನೋಡಕ್ಕೂ ಚೆನ್ನಾಗಿದ್ದಾರೆ ಬಾಸು, ನೀನು ಅವರನ್ನ ಹುಡುಕ್ತಾ ಇರ್ಬೇಕು.
ಯಮರಾಜ : ನೋಡು ನೀನು ನನ್ನ ಬಳಿ ಆಟ ಕಟ್ಟಬೇಡ ನಾನು ಬಂದಿರುವುದು ನಿನಗಾಗಿ, ಮಹಿಳೆಗಾಗಿ ಅಲ್ಲ.
ನಾನು : ಅಲ್ಲಾ ಗುರು ಒಸೀ ಯೋಚನೆ ಮಾಡು, ಇಂದ್ರ ಬಡ್ಡೀಮಗ ಸ್ವರ್ಗದಲ್ಲಿ ರಂಭೆ, ಊರ್ವಶಿ, ಮೇನಕೆ ಅಂತ ಸಿಕ್ ಸಿಕ್ಕಿದ ಸುಂದರಿಯರ್ನ ಸುತ್ತಾ ಮುತ್ತಾ ಸಾಕ್ಕಂಡಿರುವಾಗ ನೀನು ಒಂದೂ ಹುಡುಗಿ ಇಲ್ದೆ ಹೆಂಗಿದ್ಯಾ ಸ್ವಾಮೀ. ಈಗಲೂ ನಿನಗೇನು ಕಮ್ಮಿ ಹೇಳು...ಒಳ್ಳೆ ಕಟ್ಟುಮಸ್ತಾಗಿ ಪೈಲ್ವಾನ್ ಇದ್ದಂಗೆ ಇದ್ದೀಯ..
ಯಮರಾಜ: ಸಾಕು ಮಾಡು ನಿನ್ನ ಹೊಗಳಿಕೆಯ ಮಾತನ್ನು, ನಿನ್ನ ಹೊಗಳಿಕೆಯ ಮಾತಿಗೆ ನಾನು ಮರುಳಾಗಲಾರೆ
ನಾನು: ಬಾಸೂ ನಾನು ಹೇಳ್ತಾ ಇರೋದು ನಿಜ ಬಾಸು....ನೀನು ಒಳ್ಳೆ ಹೀರೋ ಥರ ಇದ್ದೀಯಾ ಬಾಸು...ನಿಂಗೆ ಒಂದು ಒಳ್ಳೆ ಐಡಿಯಾ ಕೊಡ್ತೀನಿ. ನನ್ ಬದ್ಲು ವಿಜೀನ ಕರ್ಕೊಂಡು ಹೋಗು ನಾನು ಇನ್ನೊಂದಷ್ಟು ವರ್ಷ ಆದಮೇಲೆ ನಿನ್ ಹತ್ರ ಬರ್ತೀನಿ.
ಯಮರಾಜ : ನೀನು ನನಗೆ ಓಲೈಸಿ ನಿನ್ನ ಜೀವ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಡ..
ನಾನು : ಏನ್ ಗುರು ನೀನೂ ನನ್ನ ಅಪಾರ್ಥ ಮಾಡ್ಕೊಂಡು ಬಿಟ್ಟೆ ನನ್ನ. ನಂ ಆಫೀಸಲ್ಲೂ ಅಷ್ಟೇ ನಂ ಬಾಸೂ ನಿನ್ ಹಂಗೆ ನನ್ನ ಶ್ಯಾನೆ ತಪ್ಪು ತಿಳ್ಕಂಡವ್ರೆ .... ನಂಗೆ ನನ್ ಜೀವದ್ ಮೇಲೆ ಆಸೆ ಅಲ್ಲ ಅದು ನಿನ್ ಮೇಲಿರೋ ಅಭಿಮಾನ ಗುರೂ.....ನಂ ರಾಜ್ಕುಮಾರ್ ಅಣ್ಣನ್ನ ಬಿಟ್ರೆ ನಾನ್ ನಿನ್ನೆ ಲೈಕ್ ಮಾಡೋದು ಗುರು ದೇವರಾಣೆಗೂ.
ಯಮರಾಜ : ನಿನ್ನ ಹೊಗಳಿಕೆಯ ಗಾಳಕ್ಕೆ ನಾನು ಸಿಲುಕುವವನಲ್ಲ, ನಿನ್ನ ಜಾಣ್ಮೆಯನ್ನು ನನ್ನ ಮುಂದೆ ಪ್ರದರ್ಶಿಸಬೇಡ...
ನಾನು : (ಏನಪ್ಪಾ ಮಾಡೋದು ಪಾರ್ಟಿ ಯಾವುದಕ್ಕೂ ಜಗ್ತಾ ಇಲ್ಲ) ಅಲ್ಲಯ್ಯಾ ಯಮಧರ್ಮರಾಯ ನೀನೇನಾದ್ರೂ ನನಗೆ ಜೀವದಾನ ಮಾಡಿದರೆ ನಿನಗೆ ಭಾರೀ ಭರ್ಜರೀ ಉಡುಗೊರೆ ಕೊಡುತ್ತೇನೆ. ಸದ್ಯದಲ್ಲೇ ನಮ್ಮ ಕೇಂದ್ರ ಸರ್ಕಾರ ಸ್ವಿಸ್ ಬ್ಯಾಂಕಿನಲ್ಲಿ ನಮ್ಮ ಭಾರತೀಯರು ತೊಡಗಿಸಿರೋ (ಅಡಗಿಸಿರೋ) ಕಪ್ಪುಹಣ ವಾಪಸ್ ತರ್ತಾರೆ. ಹಾಗೆ ಅವರು ತಂದು ಕೊಡೋ ದುಡ್ಡನ್ನು ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೂ ಹಂಚ್ತಾರೆ......ಆಗ ನಂಗೂ ಒಂದಷ್ಟು ಲಕ್ಷಾನೋ - ಕೋಟಿನೋ ಬರುತ್ತೆ ಅದೆಲ್ಲಾ ನಿಂಗೆ ಕೊಟ್ಬಿಡ್ತೀನಿ ಈಗ ಸದ್ಯಕ್ಕೆ ನನಗೆ ಪ್ರಾಣಭಿಕ್ಷೆ ಕೊಡು ಗುರುವೇ.....

ಯಮರಾಜ : ಅಯ್ಯೋ ..... ಗುರುವೇ ನಿಂಗೆ ಕೈಮುಗೀತೀನಿ ದಯವಿಟ್ಟು ನನ್ ಜೊತೆ ಬಾ ಈಗ.... ನಿಮ್ಮ ಸರ್ಕಾರದವ್ರು ಕಪ್ಪುಹಣ ವಾಪಸ್ ತರೋ ಹೊತ್ತಿಗೆ ನಾನು ಬದುಕಿರ್ತೀನೋ ಇಲ್ವೋ ನಂಗೇ ಗೊತ್ತಿಲ್ಲಾ....ಸುಮ್ನೆ ನಡೀ.......

ಯಮರಾಜ ಜೋರಾಗಿ ನನ್ ಕಡೆ ಹಗ್ಗ (ಯಮಪಾಶ) ಎಸೆದ ....... 

>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>......................... 


ನಾನು ಕಣ್ಬಿಟ್ಟೆ ....... ಆಗ್ಲೇ ಬೆಳಿಗ್ಗೆ ಒಂಭತ್ತು ಘಂಟೆ...... ಆಫೀಸಿಗೆ ಟೈಮಾಯ್ತು...... ಬಾಸ್ ಹತ್ರ ಇವತ್ತೂ ಬೈಸ್ಕೊಬೇಕು ಛೇ !!!



ಬುಧವಾರ, ಫೆಬ್ರವರಿ 8, 2012

ಅವಿವೇಕ - ಅತಿರೇಕ

ನಾನು : ಸರ್ ನಮಸ್ಕಾರ ನಾನು ವಿಜಯ್ ಅಂತ, ವಿಜಯ್ ಹೆರಗು ನಿಮ್ಮ ಫೇಸ್ಬುಕ್ ಗೆಳೆಯ 
ವಿ.ಭಟ್ : ಹೇಳಿ ವಿಜಯ್ 
ನಾನು : ಸರ್ ನಾನು ನಿಮ್ಮ ಟಿವಿ ಚಾನೆಲ್ ನೋಡ್ತಾ ಇದ್ದೀನಿ.ನಂದೊಂದು request ನೀವು ತೋರಿಸ್ತಾ ಇರೋ     ವೀಡಿಯೊ ತುಂಬಾ ಕೆಟ್ಟದಾಗಿದೆ. blur ಆಗಿ (ಮಸುಕಾಗಿ) ತೋರಿಸಿ. 
ವಿ.ಭಟ್ : ನೀವೇನೋ blur ಆಗಿ ತೋರಿಸಿ ಅಂತೀರ, ನಾವೂ ಮೊದ್ಲು ಹಾಗೇ ತೋರಿಸ್ತಾ ಇದ್ವಿ ಆದ್ರೆ ಸಾಕಷ್ಟು ಜನ phone ಮಾಡಿ ಉಗೀತಾ ಇದಾರೆ ...... blur ಮಾಡ್ಬೇಡಿ ಹಾಗೇ ತೋರಿಸಿ ಅಂತ. 
ನಾನು : ಹಾಗಲ್ಲ ಸರ್, ಮನೆಯಲ್ಲಿ ಮಕ್ಕಳು-ಮರಿ ನೋಡ್ತಾ ಇರ್ತಾರೆ ಇಷ್ಟು ಕೀಳು ಅಭಿರುಚಿ ವೀಡಿಯೊ ತೋರಿಸಿದ್ರೆ ಹೇಗೆ?
ವಿ.ಭಟ್ : ಈಗ ಸ್ವಲ್ಪ ಮುಂಚೆ ನನಗೊಬ್ಬ ಹಿರಿಯರು call ಮಾಡಿ thanks ಹೇಳಿದ್ರು, ನಂಗೆ ಬ್ಲೂ ಫಿಲಂ ಅಂದ್ರೆ ಗೊತ್ತಿರ್ಲಿಲ್ಲ ಈಗ ನಿಮ್ ಚಾನೆಲ್ ನೋಡಿ ಗೊತ್ತಾಯ್ತು ಅಂದ್ರು. ಮೊದ್ಲು blur ಆಗಿ ತೋರಿಸಿದ್ವಿ ಈಗ detail ಆಗಿ ತೋರಿಸ್ತೀವಿ. 
ನಾನು : ನೋಡೀ ಸರ್, ಒಂದು ಜವಾಬ್ದಾರಿಯುತ ಮಾಧ್ಯಮದಲ್ಲಿರುವ ನೀವು ಹೀಗೆ ಮಾತಾಡೋದು ಸರಿಯಲ್ಲ, ಸದನದಲ್ಲಿ ಅಶ್ಲೀಲ ವೀಡಿಯೊ ನೋಡಿ ಆ ಮಿನಿಸ್ಟರುಗಳು ತಪ್ಪು ಮಾಡಿದ್ದಾರೆ ನಿಜ........ ಆದ್ರೆ ನೀವು ಅದೇ ವೀಡಿಯೊಗಳನ್ನು ಇಡೀ ಕರ್ನಾಟಕಕ್ಕೇ ತೋರಿಸ್ತಾ ಇದ್ದೀರ, ಮನೆಯಲ್ಲಿ ದೊಡ್ಡವರ - ಚಿಕ್ಕವರ ಜೊತೆ ಕುಳಿತು ನ್ಯೂಸ್ ನೋಡೋಕೆ ಮುಜುಗರ ಹಾಗೋ ಹಾಗೆ ಕ್ಲಿಪ್ಪಿಂಗ್ಸ್ ತೋರಿಸ್ತಿದ್ದೀರಲ್ಲ..... ಆ ಮಿನಿಸ್ಟರುಗಳಿಗೂ ನಿಮಗೂ ಏನು ವ್ಯತ್ಯಾಸ
ವಿ.ಭಟ್ :  ಇಲ್ಲ ನಾವು ಹಾಗೆ ತೋರಿಸದಿದ್ರೆ ಜನ ನಮಗೆ ಉಗೀತಾರೆ ಅಷ್ಟೇ 
ನಾನು : ನೋಡಿ ಸರ್ ನಿಮಗೂ ಒಬ್ಬ ಮಗ ಇದ್ದಾನೆ, ಅವನ ಜೊತೆ ಕೂತ್ಕೊಂಡು ನೋಡಬಹುದಾದ quality ನಿಮ್ಮ ವೀಡಿಯೊ ಕ್ಲಿಪ್ಪಿಂಗುಗಳಿಗೆ ಇದೆ ಅಂತ ನಿಮಗೆ ಅನ್ನಿಸಿದ್ರೆ ಧಾರಾಳವಾಗಿ ಪ್ರಸಾರ ಮಾಡಿ .......

                                  ಇಷ್ಟು ಹೇಳಿ ನಾನು ಫೋನ್ disconnect ಮಾಡಿದೆ. ಇದಿಷ್ಟೂ ನಡೆದಿದ್ದು ನಿನ್ನೆ ರಾತ್ರಿ 11 ಗಂಟೆಯ ಸಮಯದಲ್ಲಿ. ಲಕ್ಷ್ಮಣ ಸವದಿ ಹಾಗೂ ಸಿ ಸಿ ಪಾಟೀಲರ ಕೀಳು ಅಭಿರುಚಿ ಇಷ್ಟಕ್ಕೆಲ್ಲ ಕಾರಣ. ವಿಧಾನಸಭೆಯ ಕಲಾಪದ ಸಮಯದಲ್ಲಿ ಕಾಮಕೇಳಿಯ ವೀಡಿಯೊ ನೋಡುತ್ತಿದ್ದ ಈ ಪುಡಾರಿಗಳ ನಿಜ ಬಣ್ಣ ಬಯಲು ಮಾಡಿದ ಮಾಧ್ಯಮಗಳ ಕಾರ್ಯ ನಿಜಕ್ಕೂ ಶ್ಲಾಘನೀಯ. 
  
                                24  X 7 ನ್ಯೂಸ್ ಚಾನಲ್ಲುಗಳ ಸಂಖ್ಯೆ ಹೆಚ್ಚಿದಂತೆ TRP (Target rating point ) ಸಮರ ಹೆಚ್ಚುತ್ತಿದೆ. ದಿನವಿಡೀ ಬ್ರೇಕಿಂಗ್ ನ್ಯೂಸ್ ಬಿತ್ತರಿಸುವ ಅನಿವಾರ್ಯತೆ ಎದುರಿಸುತ್ತಿರುವ ನ್ಯೂಸ್ ಚಾನಲ್ಲುಗಳು ಇಂತಹ ಗಿಮಿಕ್ಕುಗಳಿಗೆ ಇಳಿಯುತ್ತವೆ. "ನೇರ, ದಿಟ್ಟ , ನಿರಂತರ" ಸುದ್ದಿ ಬಿತ್ತರಿಸುವ ಭರದಲ್ಲಿ ಮಾಧ್ಯಮಗಳಿಗೆ ಇರಬೇಕಾದ ಸಾಮಾಜಿಕ ಕಾಳಜಿ, ಪತ್ರಿಕಾ ಧರ್ಮ, ನೀತಿ ನಿಯಮಗಳನ್ನು ಮರೆಯುತ್ತವೆ. 

                                ನಿನ್ನೆ ವಿಧಾನಸಭೆಯಲ್ಲಿ ನಡೆದ ಘಟನೆ ನಿಜಕ್ಕೂ ಅಸಹ್ಯಕರ. ಆದರೆ ಇಂತಹ ಅಸಹ್ಯಗಳು ವಿಧಾನಸಭೆಯಲ್ಲಿ, ಲೋಕಸಭೆಯಲ್ಲಿ ಹಲವು ಬಾರಿ ನಡೆದಿವೆ. ಹಣದ ಆಸೆಗೆ ಬಿದ್ದು ತಮ್ಮನ್ನೇ ಮಾರಿಕೊಂಡ ಸಂಸದರು, ಲೋಕಸಭೆಯಲ್ಲಿ ಲೋಕಪಾಲ್ ಮಸೂದೆಯ ಪ್ರತಿಯನ್ನು ಹರಿದೆಸೆದ ಸಂಸದರು, ವಿಧಾನಸಭೆಯಲ್ಲಿ ಕುರ್ಚಿಗಳನ್ನು,ಚಪ್ಪಲಿಗಳನ್ನೂ ಎಸೆದಾಡಿದ ಶಾಸಕರು ....ಒಂದೆರಡಲ್ಲ ಹತ್ತಾರು ಉದಾಹರಣೆಗಳನ್ನು ನಮ್ಮ ದೇಶದ ರಾಜಕಾರಣಿಗಳು ನಮಗಾಗಿ ಇತಿಹಾಸದಲ್ಲಿ ಉಳಿಸಿದ್ದಾರೆ. 

                                ಬೇರೆಯವರು ಮಾಡಿದ ತಪ್ಪನ್ನು ತೋರಿಸುವ ಭರದಲ್ಲಿ ನಾವೂ ತಪ್ಪು ಹಾದಿ ತುಳಿಯದಂತೆ ಎಚ್ಚರವಹಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಯಾರೋ ಮಾಡಿದ ಅವಿವೇಕಕ್ಕೆ ಅತಿರೇಕದ ಸುದ್ದಿ ಬಿತ್ತರಿಸುವುದು ಸರಿಯಲ್ಲ.  ಇನ್ನಾದರೂ ನಮ್ಮ 24 X  7 ಸುದ್ದಿವಾಹಿನಿಗಳು ಎಚ್ಚೆತ್ತುಕೊಂಡು ಕೇವಲ ಮಾರುಕಟ್ಟೆ ದೃಷ್ಟಿಯಿಂದ ಹೊರಬಂದು ಮಾಧ್ಯಮಗಳ ಘನತೆಯನ್ನು ಎತ್ತಿಹಿಡಿಯಬೇಕಿದೆ.

ಶನಿವಾರ, ಜನವರಿ 28, 2012

ನಾ ಮಹಾತ್ಮನಾಗಲಿಲ್ಲ........

ಅದೊಂದು ಉದ್ಯಾನ
ಉದ್ಯಾನದೊಳಗೊಂದು
ಮಹಾತ್ಮನ ಪ್ರತಿಮೆ

ಮಹಾತ್ಮನೆಡೆಗೆ ನಿರ್ಲಿಪ್ತ ನೋಟ 
ಬೀರುತ್ತಾ ನಿಂತಿದ್ದನಲ್ಲೊಬ್ಬ ವೃದ್ದ
ತನ್ನಲ್ಲೇ ಏನನ್ನೋ ಹೇಳಿಕೊಳ್ಳುತ್ತಾ

ಅಯ್ಯಾ ನನಗೀಗ ವಯಸ್ಸು ಎಂಭತ್ತು
ನೀ ಎಂಭತ್ತರ ಹೊಸ್ತಿಲಲ್ಲೇ ಗುಂಡೇಟಿಗೆ 
ನಿನ್ನ ಗುಂಡಿಗೆಯ ಕೊಟ್ಟೆ 

ಅಷ್ಟರಲ್ಲಾಗಲೇ ನೀ 
ಮಹಾತ್ಮನಾಗಿದ್ದೆ, ಜನಮಾನಸದಲ್ಲಿ 
ಮನೆಯ ಮಾಡಿದ್ದೆ 

ನಾನಿಂದು ಬದುಕಿದ್ದೇನೆ 
ಭೂಮಿಗೆ ಭಾರವಾಗಿ, ಮನೆಯವರಿಗೆ
ಬೇಡವಾಗಿ.......ತೊಡಕಾಗಿ 

ಸತ್ವಹೀನ ನನ್ನ ಬದುಕು-
ಸತ್ಯಕ್ಕೆ ನೀನಾದೆ ಬೆಳಕು, 
ನಿನ್ನಂತೆ ನಾ ಬದುಕಲೇ ಇಲ್ಲ.....ಬದುಕಿದ್ದೇನೆ ಅಷ್ಟೇ  

"ನೀ ಮಹಾತ್ಮನಾಗದಿದ್ದರೆ ಏನಂತೆ  ನೀ 
ದುರಾತ್ಮನಾಗಲಿಲ್ಲ, ಅದಕಿಂತ ಬೇರೇನು ಬೇಕು
 ಬದುಕಿರುವವರೆಗೂ ನೀ ನಗುನಗುತಾ ಬದುಕು"

ಅಶರೀರವಾಣಿಯೊಂದು ನುಡಿದ ಹಾಗಾಗಿ
ವೃದ್ದ ತಾ ಬೆರಗಾಗಿ ಸಾಗಿದನು ಮನೆಯತ್ತ 
ಆನಂದವಾಗಿ.............






ಸೋಮವಾರ, ಡಿಸೆಂಬರ್ 26, 2011

ನಿನ್ನ ಪ್ರೇಮದ ಪರಿ.......


ಹಲವರು ಹೇಳುತ್ತಾರೆ ಪ್ರೀತಿ ಕುರುಡು
ಕೆಲವರು ಹೇಳುತ್ತಾರೆ ಪ್ರೀತಿ ಕಿವುಡು


ಪ್ರೀತಿ ಕುರುಡೋ- ಕಿವುಡೋ
ನಾನರಿಯೆ ನಲ್ಲೆ
ಒಂದಂತು ನಾ ಬಲ್ಲೆ
ನೀನಿರದ, ನಿನ್ನ ಒಲವಿರದ .
ಬದುಕು ಬರಡು - ಕನಸು ಬರಿದು


ನೀ ನನ್ನೆಡೆಗೆ ತೋರುವ 
ಅಗಾಧ ಪ್ರೀತಿಯ ಕಂಡು 
ನಾ ಬೆರಗಾದೆ
ನಿನ್ನೊಲವಿನ ಪರಿಗೆ 
ನೀ ತೋರುವ ಕಾಳಜಿಗೆ ನಾ ಮರುಳಾದೆ


ಪ್ರೀತಿ ಕುರುಡಲ್ಲ- ಕಿವುಡಲ್ಲ
ನೋಡುವ ಕಂಗಳು ಕಣ್ಣಿದ್ದೂ ಕುರುಡಾದುವಲ್ಲ 



 

ಶನಿವಾರ, ಅಕ್ಟೋಬರ್ 8, 2011

ಹೋಳಿ ಹಬ್ಬದಂದು ನಮ್ಮ ಗೋಳಿನ ಕಥೆ

ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು, ಅವತ್ತು ಹೋಳಿ ಹಬ್ಬದ ದಿನ. ಬೆಳಿಗ್ಗೆಯಿಂದಲೇ ಎಲ್ಲೆಲ್ಲೂ ಬಣ್ಣದ ಓಕುಳಿಯಾಟ. ನಾನಾಗ ಮೈಸೂರಿನ ಮಹಾರಾಜ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಸ್ಟೂಡೆಂಟು. ಮಾಮೂಲಿನಂತೆ ಆ ದಿನವೂ ಕಾಲೇಜಿಗೆ ಹೋಗಿದ್ದೆ. ಆದರೆ ಅಂದು ಕಾಲೇಜ್ ಕ್ಯಾಂಪಸ್ ಕಲರ್ ಫುಲ್ಲಾಗಿ ಕಂಗೊಳಿಸ್ತಿತ್ತು. ನಾನಾಗ ತುಂಬಾ ಸೈಲೆಂಟ್ ಹುಡ್ಗ(ಇದು ಹದಿನಾರಾಣೆ ಸತ್ಯ ಸ್ವಾಮಿ ಧರ್ಮಸ್ಥಳಕ್ಕೆ ಬೇಕಾದ್ರೂ ಬರ್ತೀನಿ,ನೀವು ನಂಬ್ಲೇಬೇಕು). ಆದ್ರೆ ನನ್ ಕ್ಲೋಸ್ ಫ್ರೆಂಡ್ ಒಬ್ಬ ಇದ್ದ ಆಂಬ್ರೋಸ್ ಅಂತ. ಅವನು ಸಖತ್ ತರ್ಲೆ. ಅವನೂ ಜೇಬಿನ ತುಂಬಾ ಬಣ್ಣದ ಪ್ಯಾಕೆಟ್ ತುಂಬಿಕೊಂಡು ಬಂದಿದ್ದ. ನಮಗೆಲ್ಲಾ ಬಳಿದು ಅವ್ನು ಬಳ್ಕೊಂಡು ಎಂಜಾಯ್ ಮಾಡಿದ. ಮಧ್ಯಾಹ್ನ ಹನ್ನೆರಡು ಘಂಟೆ ಹೊತ್ತಿಗೆ ನಾನು ಮನೆಗೆ ಹೋಗೋಣ ನಡೀ ಅಂತ ಆಂಬ್ರೋಸ್ ಜೊತೆ ಸಿಟಿ ಬಸ್ ಸ್ಟಾಂಡಿಗೆ ಹೊರಟೆ.
                         
                           ದೇವರಾಜ ಅರಸು ರಸ್ತೆ ಯಲ್ಲಿ ನಾವಿಬ್ರು ನಡ್ಕೊಂಡು ಬರ್ತಾ ಇದ್ವಿ. ಆಗ ಇಬ್ರು ಫಾರಿನ್ನರ್ಸು (ಅಚ್ಚಕನ್ನಡದಲ್ಲಿ ಪರದೇಶಿಗಳು) ನಮ್ಮ ಬಣ್ಣದ ವೇಷ ನೋಡಿ ನಮ್ ಜೊತೆ ಫೋಟೋ ತೆಗೆಸ್ಕೊಂಡರು. ನಾವು ಅವ್ರ ಹತ್ರ ಸ್ವಲ್ಪ ಟಸ್ ಪುಸ್ ಅಂತ ಇಂಗ್ಲೀಷ್ ಮಾತಾಡಿ ಮುಂದಕ್ಕೆ ಹೊರಟ್ವಿ  ಅಲ್ಲಿಂದ ಸ್ವಲ್ಪ ಮುಂದೆ ಬಂದ್ರೆ ಪ್ರಜಾವಾಣಿ ಆಫೀಸು. ಅಡ್ಡರಸ್ತೆಯಲ್ಲಿ ನಡ್ಕೊಂಡು ಹೋಗಿ ಮಹಾರಾಣಿ ಜ್ಯೂನಿಯರ್ ಕಾಲೇಜ್ ಮುಂದೆ ಬಂದ್ವಿ. ನಾನು ಆಂಬ್ರೋಸ್ ಹತ್ರ ಏನೋ ಹೇಳ್ತಾ ನಡ್ಕೊಂಡು ಹೋಗ್ತಾ ಇದ್ದೆ. ಇವನು ಹಿಂದೇನೆ ನಿಂತುಬಿಟ್ಟಿದ್ದಾನೆ. ತಿರುಗಿನೋಡಿದ್ರೆ ಮಹಾರಾಣಿ ಕಾಲೇಜ್ ಗೇಟ್ ಮುಂದೆ ನಿಂತ್ಕೊಂಡು ಯಾವ್ದೋ ಹುಡುಗಿಗೆ hoy ಹೇಳೋ ರೀತೀಲಿ ಕೈ ತೋರಿಸ್ತಾ ಇದ್ದ. ನಾನು ಹಿಂದಕ್ಕೆ ಬಂದು ಅವನ್ನ ಎಳ್ಕೊಂಡು 'ಬಾರೋ ಮಗಾ ಇವತ್ತು ಎಲ್ಲಾ ಕಡೆ ಸ್ಕ್ವಾಡ್ ಇರ್ತಾರೆ' ಅಂತ ಹೇಳ್ದೆ. ಅಷ್ಟರಲ್ಲಿ ಮಫ್ತಿಯಲ್ಲಿದ್ದ ಪೋಲಿಸ್ ಒಬ್ಬ ಬಂದು ನಮ್ಮಿಬ್ಬರನ್ನೂ ಹಿಡ್ಕೊಂಡ. ನಂಗೆ ಕೈಕಾಲು shake ಆಗೋಕೆ ಶುರುವಾಯ್ತು. 'ಸರ್ ನಂಗೇನೂ ಗೊತ್ತಿಲ್ಲ ಸರ್ ಇವ್ನು ಅದ್ಯಾರೋ ಹುಡ್ಗಿಗೆ ಕೈ ತೋರಿಸ್ತಿದ್ದ, ನಾನು ಬೇಡ ಬಾ ಅಂತ ಕರದೆ ಅಷ್ಟೇ, ಬೇಕಾದ್ರೆ ಚೆಕ್ ಮಾಡ್ಕೊಳ್ಳಿ ಸರ್ ನನ್ ಹತ್ರ ಬಣ್ಣ ಕೂಡಾ ಇಲ್ಲ ಸರ್' ಅಂತ ಪೋಲಿಸ್ ಹತ್ರ ಅಂಗಲಾಚಿದೆ. ಆಂಬ್ರೋಸ್ 'ಆ ಹುಡ್ಗಿ ನನ್ ತಂಗಿ ಸರ್' ಅಂತ ಸುಳ್ಳು ಹೇಳ್ದ. 'ಆಯ್ತು ನಡೀರಿ ಸ್ಟೇಷನ್ ಗೆ ಹೋಗೋಣ, ಅದ್ನೇ ಸಾಹೇಬ್ರ ಹತ್ರ ಹೇಳಿ ಬಿಟ್ಬಿಡ್ತಾರೆ' ಅಂತ ಹೇಳಿದ ಪೋಲಿಸ್ ಆಟೋ ಒಂದಕ್ಕೆ ನಮ್ಮಿಬ್ಬರನ್ನು ಹತ್ತಿಸಿ ತಾನೂ ಕೂತ್ಕೊಂಡ. ಆಗ ದೇವರಾಜ ಪೋಲಿಸ್ ಸ್ಟೇಷನ್ ದೇವರಾಜ ಮಾರ್ಕೆಟ್ ಬಿಲ್ಡಿಂಗ್ನಲ್ಲಿ ಇತ್ತು.  ಆಟೋ ಸೀದಾ ಹೋಗಿ ದೇವರಾಜ ಪೋಲಿಸ್ ಸ್ಟೇಷನ್ ಹತ್ರ ನಿಲ್ತು. ನಾವು ಆಟೋ ಇಂದ ಕೆಳಗೆ ಇಳಿದ್ವಿ. 'ಆಟೋದವನಿಗೆ ದುಡ್ಡು ಕೊಡು' ಅಂದ್ರು ಪೋಲಿಸ್. ನಾನು ಜೇಬಿಂದ ಹತ್ತರ ನೋಟೊಂದು ತೆಗೆದು ಆಟೋ ಡ್ರೈವರಿಗೆ ಕೊಟ್ಟೆ.ಪೋಲಿಸ್ ಜೊತೆ ನಾನು ನನ್ನ ಲೈಫಲ್ಲಿ ಮೊದಲ ಸಲ ಪೋಲಿಸ್ ಸ್ಟೇಷನ್ ಮೆಟ್ಟಿಲು ಹತ್ತಿದೆ. ಮೆಟ್ಟಿಲು ಅನ್ನೋದಕ್ಕಿಂತ 'ಮೆಟ್ಟಿಲುಗಳು' ಅಂದ್ರೆ ಸೂಕ್ತ, ಯಾಕಂದ್ರೆ ಪೋಲಿಸ್ ಸ್ಟೇಷನ್ ಇದ್ದಿದ್ದು ಮೊದಲನೇ ಮಹಡಿಯಲ್ಲಿ.
              
                  ಮನಸ್ಸಿನ ಒಳಗೆ ಅವ್ಯಕ್ತ ಭಯ. ಪೋಲಿಸ್ ಸ್ಟೇಷನ್ ಹೇಗಿರುತ್ತೆ ಅಂತ ಫಿಲ್ಮುಗಳಲ್ಲಿ ಮಾತ್ರ ನೋಡಿದ್ದ ನಂಗೆ ನಮ್ಮನ್ನು ಸೀದಾ ಒದ್ದು ಒಳಗೆ ಹಾಕ್ತಾರೆ, ಸರಳುಗಳ ಹಿಂದೆ ಸೆರೆಯಾಗಬೇಕು, ನ್ಯೂಸ್ ಪೇಪರಿನಲ್ಲಿ ಬರುತ್ತೆ ಹಾಗೇ-ಹೀಗೆ ಅಂತ ಮನಸ್ಸು ವಿಚಿತ್ರ ಯೋಚನೆಗಳಿಗೆ ಶುರು ಇಟ್ಟುಕೊಂಡ್ತು. ನಾನು ಎಡಗಾಲಿಟ್ಟು ಸ್ಟೇಷನ್ ಒಳಗೆ ಹೋದೆ. ಅದಾಗಲೇ ಏಳೆಂಟು ಹುಡುಗರನ್ನ ಬೆಂಚಿನ ಮೇಲೆ ಸಾಲಾಗಿ ಕೂರಿಸಿದ್ರು. ಎಲ್ಲಾ ಹುಡುಗ್ರು 'ಬಣ್ಣದ ವೇಷ' ಹಾಕ್ಕೊಂಡಿದ್ರು. ನಮ್ಮನ್ನೂ ಅವರ ಜೊತೆ ಕೂರೋಕೆ ಹೇಳಿದ್ರು. ನಾನು ಆಂಬ್ರೋಸ್ ಗೆ ಹಿಡಿಶಾಪ ಹಾಕ್ತಾ ಕೂತ್ಕೊಂಡೆ. ಅಕ್ಕ-ಪಕ್ಕದ ಹುಡುಗರು ನಮ್ಮ ಜೊತೆ ಕಷ್ಟ-ಸುಖ ಹಂಚಿಕೊಂಡರು.

                 ನಾನು ಅವಾಗವಾಗ 'ಸರ್ ಬಿಟ್ಬಿಡಿ ಸರ್ ಪ್ಲೀಸ್' ಅಂತ ಪೋಲೀಸರ ಹತ್ರ request ಮಾಡ್ತಾ ಇದ್ದೆ. ಅವರು ಕಿವಿ ಕೇಳದೆ ಇರೋ ಥರಾ ಓಡಾಡ್ತಾ ಇದ್ರು. ಸುಮಾರು ಒಂದು ಘಂಟೆ ಸಮಯ ಇಬ್ಬರು ದಡೂತಿ ಪೊಲೀಸರು ಬಂದವ್ರೇ 'ಎಲ್ಲೋ ಆ ಸೂ..........ಮಕ್ಕಳು procession ನಲ್ಲಿ ಅದೂ police protection ಇದ್ರೂ ಬಣ್ಣ ಹಾಕ್ತಾರೆ' ಅಂತ ಅಬ್ಬರಿಸ್ತಾ ಬಂದು ನಮ್ಮ ಹಿಂದಿನ ಸಾಲಲ್ಲಿ ಕೂತಿದ್ದ ಇಬ್ರು ಹುಡುಗರಿಗೆ ಎಗ್ಗಾ ಮಗ್ಗಾ ಚಚ್ಚಿದ್ರು......ಬಾಯಿಬಿಟ್ರೆ ಬರೀ ಕೆಟ್ಟಪದಗಳ ಸುರಿಮಳೆ. ಆ ಇಬ್ಬರು ಹುಡುಗರಲ್ಲಿ ಒಬ್ಬ ಸಣಕಲ, ಒಬ್ಬ ದಡಿಯ. ಸಣಕಲನಿಗೆ ಕಡಿಮೆ ಏಟು ದಡಿಯನಿಗೆ ಜಾಸ್ತಿ ಏಟು ಬೀಳ್ತಾ ಇತ್ತು.ಅವರಿಬ್ಬರೂ ಜಿಲ್ಲಾಧಿಕಾರಿ ಕಛೇರಿಗೆ procession ಹೊರಟಿದ್ದ ಮೆಡಿಕಲ್ ಕಾಲೇಜ್ ಸ್ಟೂಡೆಂಟುಗಳಿಗೆ ಬಣ್ಣ ಹಚ್ಚಿ ಸಿಕ್ಕಿಬಿದ್ದಿದ್ರು...ನಂಗೆ ಭಯ ಶುರುವಾಯ್ತು ನಾನು ಸ್ವಲ್ಪ ದಪ್ಪಗಿದ್ದೆ, ನನಗೆ ರಿಪೇರಿ ಸರಿಯಾಗಿ ಮಾಡ್ತಾರೆ ಅಂತ ಭಯ ಶುರುವಾಯ್ತು. ಛೇ ದೇವ್ರೇ ನನ್ನ ಈ ಕ್ಷಣ ಸಣ್ಣ ಮಾಡ್ಬಿಡು ಅಂತ ಕೇಳ್ಕೊಂಡೆ.ಆದ್ರೆ ದೇವ್ರು ಕಿವುಡಾಗಿದ್ದ. ಒಬ್ಬ ಪೋಲಿಸ್ ಬಂದು ಲಾಠಿ ಹಿಡಿದು ನಮಗೆಲ್ಲಾ ಕೈ ಮುಂದಕ್ಕೆ ಚಾಚಿಸಿ ತಲಾ ಎರಡೇಟು ಕೊಟ್ಟ. ನಂಗೆ ಸ್ಕೂಲಿನ ದಿನಗಳು ನೆನಪಾದವು ಆದ್ರೆ ಹೊಡೆತ ಜೋರಾಗಿತ್ತು.ನಮ್ಮ ಟೀಚರ್ ಯಾವಾಗಲೂ ಇಷ್ಟು ಜೋರಾಗಿ ಹೊಡೆದಿರಲಿಲ್ಲ. ಅವ್ರು ಕಾಲೇಜ್ ಹುಡುಗ್ರು ಜಾಸ್ತಿ ಹೊಡೀಬೇಡ ಅಂತ ಅಲ್ಲೇ ಇದ್ದ ಇನ್ನೊಬ್ಬ ಕಾನ್ಸ್ಟೇಬಲ್ ಹೇಳಿದ. ಸದ್ಯ ಬದುಕಿದೆವು ಅಂತ ಅಂದ್ಕೊಂಡೆ.

                  ಸಂಜೆ ಆಗ್ತಾ ಬಂತು. ಇನ್ಸಪೆಕ್ಟರ್ ಸಾಹೇಬರು ಬರಲೇ ಇಲ್ಲ. ಮನೇಲಿ ಅಪ್ಪ-ಅಮ್ಮ ಗಾಬರಿ ಆಗ್ತಾರೆ ಅಂತ ನಂಗೆ ಭಯ ಶುರುವಾಯ್ತು. ಮನೆಗೆ ಒಂದು ಫೋನ್ ಮಾಡ್ತೀನಿ ಅಂತ ಗೋಗರೆದೆ ಆದ್ರೆ ಅವರು ಒಪ್ಪಲಿಲ್ಲ. ಇನ್ಸ್ ಪೆಕ್ಟರ್ ಬಂದ್ರು ಸಂಜೆ ಏಳಕ್ಕೆ. ಆದ್ರೆ ಅವರು ನಮ್ಮನ್ನು 'ಕ್ಯಾರೇ' ಅನ್ನಲಿಲ್ಲ. ಒಂದು ಖುಷಿ ಏನಂದ್ರೆ ಅವರ ಹೆಸರೂ ವಿಜಯ್ ಕುಮಾರ್ ನನ್ ಹೆಸರೂ ವಿಜಯ್ ಕುಮಾರ್ ಆಗಿತ್ತು.

                  ರಾತ್ರಿ ಒಂಭತ್ತು ಘಂಟೆಯ ಹೊತ್ತಿಗೆ ಸ್ಟೇಷನ್ ಗೆ ಒಂದು ಫೋನ್ ಕಾಲ್ ಬಂತು. ಇನ್ಸ್ ಪೆಕ್ಟರ್ ಸಾಹೇಬ್ರು ಫೋನಲ್ಲಿ ಮಾತಾಡಿದ ಮೇಲೆ ನಮ್ಮ ಹತ್ರ ಬಂದು 'ನಿಮ್ಮಲ್ಲಿ ವಿಜಯ್ ಕುಮಾರ್ ಯಾರು? ಅಂತ ಕೇಳಿದ್ರು. ನಾನು ಎದ್ದು ನಿಂತೆ. ನನ್ನ ಸೀದಾ ಅವರ ಟೇಬಲ್ ಹತ್ರ ಕರ್ಕೊಂಡು ಹೋಗಿ ಏನು ಮಾಡಿದೆ ಅಂತ ಕೇಳಿದ್ರು. ನಾನು ನಡೆದ ವಿಷಯ ಅವರಿಗೆ ಹೇಳಿ ಇದೆಲ್ಲ ನನ್ ಫ್ರೆಂಡ್ ಇಂದ ಆಗಿದ್ದು ಅಂತ ಹೇಳ್ದೆ. ಅವರು ನಂಗೆ ಬುದ್ಧಿಮಾತು ಹೇಳಿ ಇಂಥ ಹುಡುಗರ ಸಹವಾಸ ಮಾಡಬೇಡ ಇನ್ನು ಮುಂದೆ, ಮನೆಗೆ ಹೋಗು ಅಂದ್ರು. ನಾನು ಅವರನ್ನೂ ಬಿಟ್ಬಿಡಿ ಸರ್ ಅಂತ request ಮಾಡಿ ಬಾಕಿ ಹುಡುಗರನ್ನೂ ಬಿಡಿಸಿದೆ.

                  ಸ್ಟೇಷನ್ ಇಂದ ಬಸ್ ಸ್ಟಾಂಡಿಗೆ ತಲುಪಿ ಬಸ್ ಹತ್ತಿ ಮನೆ ಸೇರೋ ಹೊತ್ತಿಗೆ ಹತ್ತೂವರೆ ಘಂಟೆ ಆಗಿತ್ತು. ಅಪ್ಪ-ಅಮ್ಮ ನನಗೋಸ್ಕರ ಕಾಯ್ತಾ ನಿಂತಿದ್ರು. ನಾನು ನಡೆದ ವಿಷಯ ಹೇಳಿದೆ. ಒಂದಷ್ಟು ಬೈದರು. ನಾಗಣ್ಣ ಅಂತ ಒಬ್ರು ಪೋಲಿಸ್ ಕಂಟ್ರೋಲ್ ರೂಮಲ್ಲಿ ಕೆಲಸ ಮಾಡ್ತಾರೆ, ಅವ್ರು ನಮ್ ಮನೆ ಹತ್ರಾನೆ ಇರೋದು. ನಮ್ಮ ತಂದೆ ಅವರನ್ನು ಭೇಟಿ ಮಾಡಿ ಮಗ ಮನೆಗೆ ಬಂದಿಲ್ಲ ಅಂತ ಹೇಳಿದ್ದಕ್ಕೆ ಅವರು ನಮ್ಮ ಕಾಲೇಜ್ ದೇವರಾಜ ಪೋಲಿಸ್ ಸ್ಟೇಷನ್ ವ್ಯಾಪ್ತಿಗೆ ಬರೋದರಿಂದ ಒಂದು ಸಲ ಪ್ರಯತ್ನ ಮಾಡೋಣ ಅಂತ ಅಲ್ಲಿಗೆ ಫೋನ್ ಮಾಡಿ ಕೇಳಿದಾಗ ನನಗೆ ಬಿಡುಗಡೆಯ ಭಾಗ್ಯ ದೊರಕಿತು ಎಂಬಲ್ಲಿಗೆ ನನ್ನ ಜೀವನದ ಒಂದು ಹೊಸ ಅನುಭವದ ಕಥೆ ಸುಖಾಂತವಾಯಿತು.

ಮಂಗಳವಾರ, ಸೆಪ್ಟೆಂಬರ್ 27, 2011

ನಿನ್ನ ಪ್ರೀತಿಗಾಗಿಯೇ

ನೀನೇ ನನ್ನ ಒಲವು 
ನೀನೇ ನನ್ನ ಉಸಿರು 
ನೀನೇ ನನ್ನ ಹೃದಯ 
ನೀ ಸಿಕ್ಕರೇ ಬಾಳು ಧನ್ಯ 

ನಿನ್ನ ಪ್ರೀತಿಗಾಗಿಯೇ ನಾ ಬಾಳುವೆ ಪ್ರಿಯೆ 
ನಿನ್ನ ಪ್ರೀತಿಗಾಗಿಯೇ ನಾ ಬಾಳುವೆ ಪ್ರಿಯೆ 

ನಿನ್ನ ಪ್ರೀತಿಯ ರಕ್ಷಣೆ ಸಾಕು 
ವರದಕ್ಷಿಣೆ ಬೇಕಿಲ್ಲ 
ನೀ ನನಗೆ ಸಿಗದೇ ಹೋದರೆ 
ಬರೀ ಶೂನ್ಯವೇ ಬಾಳೆಲ್ಲ

ನಿನ್ನ ಪ್ರೀತಿಗಾಗಿಯೇ ನಾ ಬಾಳುವೆ ಪ್ರಿಯೆ 
ನಿನ್ನ ಪ್ರೀತಿಗಾಗಿಯೇ ನಾ ಬಾಳುವೆ ಪ್ರಿಯೆ






ಮಂಗಳವಾರ, ಸೆಪ್ಟೆಂಬರ್ 13, 2011

ಹಾಗೇ ಉಳಿದ ಪ್ರಶ್ನೆ.....

                            ಅವರು 'ಭಗಿನಿ' ಹೋಟೆಲಿನ ಒಂದು ಟೇಬಲ್ಲಿನಲ್ಲಿ ಮಂದ ಬೆಳಕಿನ ಕೆಳಗೆ ಬಿಯರ್ ಜೊತೆಗೆ ಆಲೂ ಜೀರಾ ತಿನ್ನುತ್ತಾ ಮಾತಾಡ್ತಾ  ಇದ್ರು. ನಾನು ಅವರ ಮಾತನ್ನೇ ಗಮನ ಇಟ್ಟು ಕೇಳ್ತಾ ಇದ್ದೆ. ಅವರು ನಮ್ಮ ಕಂಪೆನಿಯ ಹಿರಿಯ ಅಧಿಕಾರಿಗಳಲ್ಲಿ ಒಬ್ಬರು. ಅವರ ಜೊತೆ ನಾವು ನಾಲ್ಕೈದು ಮಂದಿ ಕೂತಿದ್ವಿ. ಅವರು ನಿಮಗೆಲ್ಲಾ ಒಂದು ಪ್ರಶ್ನೆ ಕೇಳ್ತೀನಿ ಯೋಚಿಸಿ ಉತ್ತರ ಕೊಡಿ ಅಂದ್ರು.  ಅವರು ಕೇಳಿದ ಪ್ರಶ್ನೆ ಹೀಗಿದೆ.


                         ಒಂದು ಊರು. ಆ ಊರಿನ ರೈಲ್ವೇ ಹಳಿಗಳ ಮೇಲೆ ಐದು ಮಕ್ಕಳು ಆಟ ಆಡ್ತಿದ್ದಾರೆ. ಐದರಲ್ಲಿ ನಾಲ್ಕು ಮಕ್ಕಳು live trackನಲ್ಲಿ ಆಡ್ತಾ ಇದ್ರು, ಒಬ್ಬ ಹುಡುಗ ಮಾತ್ರ dead trackನಲ್ಲಿ ಆಡ್ತಿದ್ದ. ಎಕ್ಸ್ ಪ್ರೆಸ್ ರೈಲೊಂದು ವೇಗವಾಗಿ ಬರುತ್ತಿದೆ. ರೈಲ್ವೇ ಗಾರ್ಡ್ ಕೊನೇ ಕ್ಷಣದಲ್ಲಿ ಹಳಿಯ ಮೇಲೆ ಆಡ್ತಿರೋ ಮಕ್ಕಳನ್ನು ನೋಡ್ತಾನೆ. ಅವನ ಕೈಯಲ್ಲಿ ಲಿವರ್ ಇದೆ....ಅವನಿಗಿರುವ option ಎರಡು. ಮೊದಲನೆಯದು live trackನಲ್ಲಿ ಆಡ್ತಿರೋ ನಾಲ್ಕು ಮಕ್ಕಳನ್ನು ಬಚಾವು ಮಾಡುವುದು ಅಥವಾ ಎರಡನೆಯದು dead trackನಲ್ಲಿ ಆಡ್ತಿರೋ ಒಬ್ಬಹುಡುಗನನ್ನು ಉಳಿಸುವುದು.



                         ನೀವು ರೈಲ್ವೇ ಗಾರ್ಡ್ ಆಗಿದ್ದರೆ ನಿಮ್ಮ ನಿರ್ಧಾರ ಏನು!!!??? 


                     ನಾವು ಎಲ್ಲರೂ ಹೇಳಿದ ಉತ್ತರ ಮೊದಲನೆಯ option  ಆಗಿತ್ತು. ಯಾಕಂದ್ರೆ ನಮ್ಮ ಮನಸ್ಸಿನಲ್ಲಿ ಇದ್ದದ್ದು ಒಂದೇ ಉದ್ದೇಶ. ನಾಲ್ಕು ಮಕ್ಕಳ ಜೀವ ಉಳಿಸುವ ಸಲುವಾಗಿ ಒಂದು ಮಗುವಿನ ಜೀವ ಹೋದರೆ ತಪ್ಪೇನಿಲ್ಲ ಹಾಗಾಗಿ ಮೊದಲನೆಯ option ಸೂಕ್ತ ಎನ್ನಿಸಿತು. ಅದನ್ನೇ ನಾವೆಲ್ಲರೂ ಹೇಳಿದ್ವಿ.
                        dead track ನಲ್ಲಿ ಆಡುತ್ತಿದ್ದ ಹುಡುಗ ಅಲ್ಲಿ ರೈಲು ಬರುವುದಿಲ್ಲ ಎಂಬ ನಂಬಿಕೆಯ (!!??) ಮೇಲೆ ಅವನು ಅಲ್ಲಿ ಆಡುತ್ತಿದ್ದ, ಆದರೆ live track ನಲ್ಲಿ ಆಡುತ್ತಿದ್ದ ಹುಡುಗರು ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪಾದ ಸ್ಥಳದಲ್ಲಿ ಆಟವಾಡುತ್ತಿದ್ದರು. ಸೈದ್ದಾಂತಿಕವಾಗಿ ಯೋಚಿಸಿದಲ್ಲಿ dead track ನಲ್ಲಿ ಆಡುತ್ತಿದ್ದ ಹುಡುಗನ ಮೇಲೆ ರೈಲು ಹರಿದರೆ ಅದು ತಪ್ಪು. 
                        

                        ಇದನ್ನು ಪ್ರಜಾಪ್ರಭುತ್ವಕ್ಕೆ, ಬಹುಮತಕ್ಕೆ ಉದಾಹರಣೆಯಾಗಿ ಉಪಯೋಗಿಸಬಹುದು. ಇಲ್ಲಿ ಬಹುಜನರ ಅಭಿಪ್ರಾಯಕ್ಕೆ ಮಾನ್ಯತೆ. ಕೆಲವೊಮ್ಮೆ ಕೆಲವು ತಪ್ಪು ನಿರ್ಧಾರಗಳೂ ಮನ್ನಣೆಗೆ ಒಳಪಡುತ್ತವೆ. ಭ್ರಷ್ಟ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ.  ಕಡು ಭ್ರಷ್ಟ ವ್ಯಕ್ತಿಯೊಬ್ಬ ಪದೇ ಪದೇ ಚುನಾವಣೆಯಲ್ಲಿ ಜಯಿಸಿ ಮಂತ್ರಿಯಾಗುತ್ತಾನೆ. ಯಾರದೋ ತಪ್ಪಿಗೆ ಮತ್ಯಾರೋ ಶಿಕ್ಷೆ ಅನುಭವಿಸುತ್ತಾರೆ. ತಪ್ಪು ಮಾಡಿ ಜೈಲು ಸೇರಿದ ನಾಯಕ, ಜನನಾಯಕರ ಬಂಧನ ವಿರೋಧಿಸಿ ದಾಳಿಗಳಾಗುತ್ತವೆ, ಬಂದುಗಳಾಗುತ್ತವೆ.........ಆದರೆ ವ್ಯತ್ಯಾಸ ಒಂದೇ ................... ಅಲ್ಲಿ ನಾಲ್ವರ ಪ್ರಾಣವಾದರೂ ಉಳಿಯಿತು ಎಂಬ ಸಮಾಧಾನ ಇರುತ್ತದೆ............ಆದರೆ ಇಲ್ಲಿ !!!!!??????? ಪ್ರಶ್ನೆ ಹಾಗೇ ಉಳಿದಿದೆ.

ಬುಧವಾರ, ಜುಲೈ 27, 2011

ಯಡ್ಯೂರಪ್ಪನಿಗೆ ನೊಬೆಲ್ ಅವಾರ್ಡು

ಎಂದಿನಂತೆ ನಮ್ಮ ಕೆಂಚ, ಸೀನ, ಸಿದ್ದ, ನಾಣಿ ಎಲ್ಲಾರೂ ಬಂದು ಅವರ ಮಾಮೂಲಿ 'ಅಡ್ಡಾ' ರಾಮಣ್ಣನ ಟೀ ಅಂಗಡಿ ಮುಂದೆ ಕೂತ್ಕೊಂಡು ಹರಟೆ ಹೊಡೀತಾ ಇದ್ರು. ನಮ್ ಸಿದ್ದ ಅಲ್ಲಿ ಇದ್ದ ಅಂದ್ಮೇಲೆ ರಾಜಕೀಯದ ಮಾತು ಬರ್ಲೇಬೇಕು.

ಸಿದ್ದ : ಲೇ ಕೆಂಚ ಇವತ್ತು ಪೇಪರ್ ನೋಡ್ದೆನ್ಲಾ ?
ಕೆಂಚ : ಹೂ ಕನ್ಲಾ ನೋಡ್ದೆ, ಪಾಪ ನಮ್ ಯಡ್ಯೂರಪ್ನೋರಿಗೆ ಶ್ಯಾನೆ ಕಾಟ ಕೊಡ್ತಾವ್ರೆ. ಈ ಸಂತೋಷ್ ಹೆಗ್ಡೆ                 ಲೋಕಾಯುಕ್ತ      ಆದಾಗಿಂದ ನಮ್ ಸಿಎಂ ಸಾಹೇಬ್ರು ಮುಖ್ದಾಗೆ ಸಂತೋಷಾನೇ ಕಾಣಾಕಿಲ್ಲ.........ಸದ್ಯ ಇನ್ನೊಂದು ವಾರಕ್ಕೆ ಆವಯ್ಯ ರಿಟೈರ್ ಆಯ್ತಾರೆ ಇನ್ನಾರಾ ನಮ್ ಸಿಎಮ್ಮು ಸುಖವಾಗಿ ಇರ್ಬೌದು ಅಂದ್ಕೊಂಡ್ರೆ ಅದೇನೋ "ಗಣಿ ಬಾಂಬ್" ಹಾಕ್ಬಿಟ್ರಲ್ಲ ಸಂತೋಷ್ ಹೆಗ್ಡೆ ಅವ್ರು.
ಸೀನ : ಅಲ್ಲಲೇ ಕೆಂಚ ನಮ್ ಸಿಎಂ ಸಾಹೇಬ್ರು ಮುಖ್ದಾಗೆ ಯಾವಾಗ್ಲಾ ಸಂತೋಷ ನೋಡಿದ್ದೇ ನೀನು!? ಆವಯ್ಯ ಯಾವಾಗಲೂ ಮುಖ ಗಂಟ್ ಹಾಕ್ಕಂಡೆ ಇರ್ತಾರೆ....... 
ಸಿದ್ದ : ನಿಜ ಕಣ್ಲಾ ಸೀನ......ಆವಯ್ಯ ನಗೋದೇ ಕಷ್ಟ ಕಣ್ಲಾ ಅದ್ಕೆ ಅವ್ರು ಸದಾನಂದ ಗೌಡ್ರುನ್ನ ಪಕ್ಕಕ್ಕೆ ಇಟ್ಕಂಡಿದ್ರು.....ಸದಾನಂದ ಗೌಡ್ರು ಯಾವಾಗ್ಲೂ ನಗ್ತಾ ಇರ್ತಾರೆ, ಆದ್ರೆ ಈಶ್ವರಪ್ಪ ಬಂದು ಸದಾನಂದ ಗೌಡ್ರುನ್ನ ಎಬ್ಬಿಸಿ ಅವ್ರ ಸೀಟ್ನಾಗೆ ಇವ್ರು ಕುಂತ್ಕಂಬುಟ್ರು. 
ಕೆಂಚ : ಅದೇನಾರಾ ಆಗ್ಲಿ ಬುಡ್ಲಾ.....ಆದ್ರೂ ನಮ್ ಯಡ್ಯೂರಪ್ನೋರು ಇಷ್ಟೆಲ್ಲಾ ಒಳ್ಳೆ ಕೆಲ್ಸ ಮಾಡುದ್ರು ......ಆದ್ರೆ ಈ ಟಿವಿನೋರು, ಪೇಪರ್ನೋರು ನಮ್ ಸಿಎಂ ಬಗ್ಗೆ ಬರೀ ಕೆಟ್ಟದ್ದೇ ಹಾಕ್ತಾರೆ..ಭಾಳಾ ಮೋಸ.
ಸಿದ್ದ : ಸಿಎಂ ಸಾಹೇಬ್ರು ನಿಂಗೂ ಏನಾರಾ ಕಾಸು-ಗೀಸು  ಕೊಟ್ರೆನ್ಲಾ ಕೆಂಚ ....ಈಪಾಟಿ ವಹಿಸ್ಕಂತ ಇದ್ದೀಯ ಆವಯ್ಯನ್ನ.
ಕೆಂಚ : ಅದ್ಕಲ್ಲಾ ಕಣ್ಲಾ ಸಿದ್ದ....ನನ್ ಹೆಂಡ್ರು ಹುಟ್ಟಿದ ಹಬ್ಬಕ್ಕೆ ಸೀರೆ ಕೊಡ್ಸು ಅಂತ ಪ್ರಾಣ ತೆಗೀತಾ ಇದ್ಲು , ಕಾಸಿಲ್ಲ ಕಣಮ್ಮಿ ಬಾರೋ ವರ್ಷ ಕೊಡುಸ್ತೀನಿ ಅಂದ್ರೆ ಜಗಳಕ್ಕೆ ಬತ್ತಿದ್ಲು. ಅದೇ ಟೈಮ್ಗೆ ನಮ್ ಸಿಎಂ ಸಾಹೇಬ್ರು ದೇವ್ರು ಬಂದಂಗೆ ಬಂದು "ಭಾಗ್ಯಲಕ್ಷ್ಮಿ" ಸ್ಕೀಮ್ನಾಗೆ ಸೀರೆ ಹಂಚುದ್ರು . ನನ್ ಮಗ್ಳು ಸೈಕಲ್ ಕೊಡ್ಸು ಇಲ್ಲಾಂದ್ರೆ ಸ್ಕೂಲಿಗೆ ಹೋಗಕಿಲ್ಲ ಅಂತಿದ್ಲು. ನಮ್ ಯಡ್ಯೂರಪ್ನೋರು ಸೈಕಲ್ ಕೊಟ್ಟು ಪುಣ್ಯ ಕಟ್ಕಂಡರು. ಕಷ್ಟಕಾಲ್ದಾಗೆ ನಮ್ ಸಿಎಂ ಸಾಹೇಬ್ರು ದ್ಯಾವ್ರು ಬಂದಂಗೆ ಬಂದು ಸಹಾಯ ಮಾಡವ್ರೆ...ಈಗ ಅವ್ರು ಕಷ್ಟದಾಗೆ ಅವ್ರೆ, ನಾವು ಸಪೋಲ್ಟ್ ಮಾಡ್ನಿಲ್ಲ ಅಂದ್ರೆ ಸಿವ ಮೆಚ್ತಾನಾ!!
ಸಿದ್ದ : ಅಲ್ಲಾ ಕಣಲೇ ಕೆಂಚ ಸೀರೆ, ಚಡ್ಡಿ ಕೊಟ್ರು ಅಂತ ಅವ್ರು ಮಾಡಿದ್ನೆಲ್ಲ ಸರೀ ಅನ್ನಕೆ ಆಯ್ತದಾ? ಅದ್ನ ನಿಮ್ ಸಿವ ಮೆಚ್ತಾನಾ!!??
ಕೆಂಚ : ಯಡ್ಯೂರಪ್ಪ ನಮ್ 'ಧಣಿ' ಕಣ್ಲಾ ಅವ್ರು ಗಣಿ ದುಡ್ದಾರಾ ತಿನ್ಲಿ ಏನಾರಾ ತಿನ್ಲಿ ನಮ್ ಸಪೋಲ್ಟು ಮಾತ್ರ ಅವರ್ಗೆ ಕಣ್ಲಾ 
ಸೀನ : ಇನ್ನೊಂದು ಇಶ್ಯ ಪೇಪರ್ನಾಗೆ ಬಂದೈತೆ ನೋಡ್ದ ಸಿದ್ದ. ನಮ್ ಸಿಎಂ ಯಡ್ಯೂರಪ್ನೋರ್ಗೆ ನೊಬೆಲ್ ಅವಾರ್ಡ್ ಕೊಡ್ಬೇಕಿತ್ತಂತೆ.

ಅಷ್ಟೊತ್ತಂಕ ಸುಮ್ನೆ ಕುಂತಿದ್ದ ನಾಣಿ ಎದ್ದು ನಿಂತ್ಕಂಡು ಒಂದೇ ಒಂದು ಪಂಚಿಂಗ್ ಡೈಲಾಗ್ ಹೊಡ್ದ " ಇಷ್ಟೆಲ್ಲಾ ಗೋಲ್ಮಾಲ್ ಮಾಡಿರೋ ನಮ್ ಸಿಎಂಗೆ ನೊಬೆಲ್ ಅವಾರ್ಡ್ ಅಲ್ಲ NO BAIL AWARD ಕೊಡ್ಬೇಕು " ಅಂದ.

ಯಾಕೋ ವಿಷ್ಯ ಗರಂ ಆಗ್ತಾ ಇದೆ ಅಂತ ಹೆದರಿದ ಟೀ ಅಂಗಡಿ ರಾಮಣ್ಣ ನಾಲ್ಕೂ ಜನರಿಗೆ ಫ್ರೀಯಾಗಿ ಗರಮಾಗರಂ ಟೀ ಕೊಟ್ಟು ಕಳಿಸಿದ.