ಶನಿವಾರ, ಅಕ್ಟೋಬರ್ 8, 2011

ಹೋಳಿ ಹಬ್ಬದಂದು ನಮ್ಮ ಗೋಳಿನ ಕಥೆ

ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು, ಅವತ್ತು ಹೋಳಿ ಹಬ್ಬದ ದಿನ. ಬೆಳಿಗ್ಗೆಯಿಂದಲೇ ಎಲ್ಲೆಲ್ಲೂ ಬಣ್ಣದ ಓಕುಳಿಯಾಟ. ನಾನಾಗ ಮೈಸೂರಿನ ಮಹಾರಾಜ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಸ್ಟೂಡೆಂಟು. ಮಾಮೂಲಿನಂತೆ ಆ ದಿನವೂ ಕಾಲೇಜಿಗೆ ಹೋಗಿದ್ದೆ. ಆದರೆ ಅಂದು ಕಾಲೇಜ್ ಕ್ಯಾಂಪಸ್ ಕಲರ್ ಫುಲ್ಲಾಗಿ ಕಂಗೊಳಿಸ್ತಿತ್ತು. ನಾನಾಗ ತುಂಬಾ ಸೈಲೆಂಟ್ ಹುಡ್ಗ(ಇದು ಹದಿನಾರಾಣೆ ಸತ್ಯ ಸ್ವಾಮಿ ಧರ್ಮಸ್ಥಳಕ್ಕೆ ಬೇಕಾದ್ರೂ ಬರ್ತೀನಿ,ನೀವು ನಂಬ್ಲೇಬೇಕು). ಆದ್ರೆ ನನ್ ಕ್ಲೋಸ್ ಫ್ರೆಂಡ್ ಒಬ್ಬ ಇದ್ದ ಆಂಬ್ರೋಸ್ ಅಂತ. ಅವನು ಸಖತ್ ತರ್ಲೆ. ಅವನೂ ಜೇಬಿನ ತುಂಬಾ ಬಣ್ಣದ ಪ್ಯಾಕೆಟ್ ತುಂಬಿಕೊಂಡು ಬಂದಿದ್ದ. ನಮಗೆಲ್ಲಾ ಬಳಿದು ಅವ್ನು ಬಳ್ಕೊಂಡು ಎಂಜಾಯ್ ಮಾಡಿದ. ಮಧ್ಯಾಹ್ನ ಹನ್ನೆರಡು ಘಂಟೆ ಹೊತ್ತಿಗೆ ನಾನು ಮನೆಗೆ ಹೋಗೋಣ ನಡೀ ಅಂತ ಆಂಬ್ರೋಸ್ ಜೊತೆ ಸಿಟಿ ಬಸ್ ಸ್ಟಾಂಡಿಗೆ ಹೊರಟೆ.
                         
                           ದೇವರಾಜ ಅರಸು ರಸ್ತೆ ಯಲ್ಲಿ ನಾವಿಬ್ರು ನಡ್ಕೊಂಡು ಬರ್ತಾ ಇದ್ವಿ. ಆಗ ಇಬ್ರು ಫಾರಿನ್ನರ್ಸು (ಅಚ್ಚಕನ್ನಡದಲ್ಲಿ ಪರದೇಶಿಗಳು) ನಮ್ಮ ಬಣ್ಣದ ವೇಷ ನೋಡಿ ನಮ್ ಜೊತೆ ಫೋಟೋ ತೆಗೆಸ್ಕೊಂಡರು. ನಾವು ಅವ್ರ ಹತ್ರ ಸ್ವಲ್ಪ ಟಸ್ ಪುಸ್ ಅಂತ ಇಂಗ್ಲೀಷ್ ಮಾತಾಡಿ ಮುಂದಕ್ಕೆ ಹೊರಟ್ವಿ  ಅಲ್ಲಿಂದ ಸ್ವಲ್ಪ ಮುಂದೆ ಬಂದ್ರೆ ಪ್ರಜಾವಾಣಿ ಆಫೀಸು. ಅಡ್ಡರಸ್ತೆಯಲ್ಲಿ ನಡ್ಕೊಂಡು ಹೋಗಿ ಮಹಾರಾಣಿ ಜ್ಯೂನಿಯರ್ ಕಾಲೇಜ್ ಮುಂದೆ ಬಂದ್ವಿ. ನಾನು ಆಂಬ್ರೋಸ್ ಹತ್ರ ಏನೋ ಹೇಳ್ತಾ ನಡ್ಕೊಂಡು ಹೋಗ್ತಾ ಇದ್ದೆ. ಇವನು ಹಿಂದೇನೆ ನಿಂತುಬಿಟ್ಟಿದ್ದಾನೆ. ತಿರುಗಿನೋಡಿದ್ರೆ ಮಹಾರಾಣಿ ಕಾಲೇಜ್ ಗೇಟ್ ಮುಂದೆ ನಿಂತ್ಕೊಂಡು ಯಾವ್ದೋ ಹುಡುಗಿಗೆ hoy ಹೇಳೋ ರೀತೀಲಿ ಕೈ ತೋರಿಸ್ತಾ ಇದ್ದ. ನಾನು ಹಿಂದಕ್ಕೆ ಬಂದು ಅವನ್ನ ಎಳ್ಕೊಂಡು 'ಬಾರೋ ಮಗಾ ಇವತ್ತು ಎಲ್ಲಾ ಕಡೆ ಸ್ಕ್ವಾಡ್ ಇರ್ತಾರೆ' ಅಂತ ಹೇಳ್ದೆ. ಅಷ್ಟರಲ್ಲಿ ಮಫ್ತಿಯಲ್ಲಿದ್ದ ಪೋಲಿಸ್ ಒಬ್ಬ ಬಂದು ನಮ್ಮಿಬ್ಬರನ್ನೂ ಹಿಡ್ಕೊಂಡ. ನಂಗೆ ಕೈಕಾಲು shake ಆಗೋಕೆ ಶುರುವಾಯ್ತು. 'ಸರ್ ನಂಗೇನೂ ಗೊತ್ತಿಲ್ಲ ಸರ್ ಇವ್ನು ಅದ್ಯಾರೋ ಹುಡ್ಗಿಗೆ ಕೈ ತೋರಿಸ್ತಿದ್ದ, ನಾನು ಬೇಡ ಬಾ ಅಂತ ಕರದೆ ಅಷ್ಟೇ, ಬೇಕಾದ್ರೆ ಚೆಕ್ ಮಾಡ್ಕೊಳ್ಳಿ ಸರ್ ನನ್ ಹತ್ರ ಬಣ್ಣ ಕೂಡಾ ಇಲ್ಲ ಸರ್' ಅಂತ ಪೋಲಿಸ್ ಹತ್ರ ಅಂಗಲಾಚಿದೆ. ಆಂಬ್ರೋಸ್ 'ಆ ಹುಡ್ಗಿ ನನ್ ತಂಗಿ ಸರ್' ಅಂತ ಸುಳ್ಳು ಹೇಳ್ದ. 'ಆಯ್ತು ನಡೀರಿ ಸ್ಟೇಷನ್ ಗೆ ಹೋಗೋಣ, ಅದ್ನೇ ಸಾಹೇಬ್ರ ಹತ್ರ ಹೇಳಿ ಬಿಟ್ಬಿಡ್ತಾರೆ' ಅಂತ ಹೇಳಿದ ಪೋಲಿಸ್ ಆಟೋ ಒಂದಕ್ಕೆ ನಮ್ಮಿಬ್ಬರನ್ನು ಹತ್ತಿಸಿ ತಾನೂ ಕೂತ್ಕೊಂಡ. ಆಗ ದೇವರಾಜ ಪೋಲಿಸ್ ಸ್ಟೇಷನ್ ದೇವರಾಜ ಮಾರ್ಕೆಟ್ ಬಿಲ್ಡಿಂಗ್ನಲ್ಲಿ ಇತ್ತು.  ಆಟೋ ಸೀದಾ ಹೋಗಿ ದೇವರಾಜ ಪೋಲಿಸ್ ಸ್ಟೇಷನ್ ಹತ್ರ ನಿಲ್ತು. ನಾವು ಆಟೋ ಇಂದ ಕೆಳಗೆ ಇಳಿದ್ವಿ. 'ಆಟೋದವನಿಗೆ ದುಡ್ಡು ಕೊಡು' ಅಂದ್ರು ಪೋಲಿಸ್. ನಾನು ಜೇಬಿಂದ ಹತ್ತರ ನೋಟೊಂದು ತೆಗೆದು ಆಟೋ ಡ್ರೈವರಿಗೆ ಕೊಟ್ಟೆ.ಪೋಲಿಸ್ ಜೊತೆ ನಾನು ನನ್ನ ಲೈಫಲ್ಲಿ ಮೊದಲ ಸಲ ಪೋಲಿಸ್ ಸ್ಟೇಷನ್ ಮೆಟ್ಟಿಲು ಹತ್ತಿದೆ. ಮೆಟ್ಟಿಲು ಅನ್ನೋದಕ್ಕಿಂತ 'ಮೆಟ್ಟಿಲುಗಳು' ಅಂದ್ರೆ ಸೂಕ್ತ, ಯಾಕಂದ್ರೆ ಪೋಲಿಸ್ ಸ್ಟೇಷನ್ ಇದ್ದಿದ್ದು ಮೊದಲನೇ ಮಹಡಿಯಲ್ಲಿ.
              
                  ಮನಸ್ಸಿನ ಒಳಗೆ ಅವ್ಯಕ್ತ ಭಯ. ಪೋಲಿಸ್ ಸ್ಟೇಷನ್ ಹೇಗಿರುತ್ತೆ ಅಂತ ಫಿಲ್ಮುಗಳಲ್ಲಿ ಮಾತ್ರ ನೋಡಿದ್ದ ನಂಗೆ ನಮ್ಮನ್ನು ಸೀದಾ ಒದ್ದು ಒಳಗೆ ಹಾಕ್ತಾರೆ, ಸರಳುಗಳ ಹಿಂದೆ ಸೆರೆಯಾಗಬೇಕು, ನ್ಯೂಸ್ ಪೇಪರಿನಲ್ಲಿ ಬರುತ್ತೆ ಹಾಗೇ-ಹೀಗೆ ಅಂತ ಮನಸ್ಸು ವಿಚಿತ್ರ ಯೋಚನೆಗಳಿಗೆ ಶುರು ಇಟ್ಟುಕೊಂಡ್ತು. ನಾನು ಎಡಗಾಲಿಟ್ಟು ಸ್ಟೇಷನ್ ಒಳಗೆ ಹೋದೆ. ಅದಾಗಲೇ ಏಳೆಂಟು ಹುಡುಗರನ್ನ ಬೆಂಚಿನ ಮೇಲೆ ಸಾಲಾಗಿ ಕೂರಿಸಿದ್ರು. ಎಲ್ಲಾ ಹುಡುಗ್ರು 'ಬಣ್ಣದ ವೇಷ' ಹಾಕ್ಕೊಂಡಿದ್ರು. ನಮ್ಮನ್ನೂ ಅವರ ಜೊತೆ ಕೂರೋಕೆ ಹೇಳಿದ್ರು. ನಾನು ಆಂಬ್ರೋಸ್ ಗೆ ಹಿಡಿಶಾಪ ಹಾಕ್ತಾ ಕೂತ್ಕೊಂಡೆ. ಅಕ್ಕ-ಪಕ್ಕದ ಹುಡುಗರು ನಮ್ಮ ಜೊತೆ ಕಷ್ಟ-ಸುಖ ಹಂಚಿಕೊಂಡರು.

                 ನಾನು ಅವಾಗವಾಗ 'ಸರ್ ಬಿಟ್ಬಿಡಿ ಸರ್ ಪ್ಲೀಸ್' ಅಂತ ಪೋಲೀಸರ ಹತ್ರ request ಮಾಡ್ತಾ ಇದ್ದೆ. ಅವರು ಕಿವಿ ಕೇಳದೆ ಇರೋ ಥರಾ ಓಡಾಡ್ತಾ ಇದ್ರು. ಸುಮಾರು ಒಂದು ಘಂಟೆ ಸಮಯ ಇಬ್ಬರು ದಡೂತಿ ಪೊಲೀಸರು ಬಂದವ್ರೇ 'ಎಲ್ಲೋ ಆ ಸೂ..........ಮಕ್ಕಳು procession ನಲ್ಲಿ ಅದೂ police protection ಇದ್ರೂ ಬಣ್ಣ ಹಾಕ್ತಾರೆ' ಅಂತ ಅಬ್ಬರಿಸ್ತಾ ಬಂದು ನಮ್ಮ ಹಿಂದಿನ ಸಾಲಲ್ಲಿ ಕೂತಿದ್ದ ಇಬ್ರು ಹುಡುಗರಿಗೆ ಎಗ್ಗಾ ಮಗ್ಗಾ ಚಚ್ಚಿದ್ರು......ಬಾಯಿಬಿಟ್ರೆ ಬರೀ ಕೆಟ್ಟಪದಗಳ ಸುರಿಮಳೆ. ಆ ಇಬ್ಬರು ಹುಡುಗರಲ್ಲಿ ಒಬ್ಬ ಸಣಕಲ, ಒಬ್ಬ ದಡಿಯ. ಸಣಕಲನಿಗೆ ಕಡಿಮೆ ಏಟು ದಡಿಯನಿಗೆ ಜಾಸ್ತಿ ಏಟು ಬೀಳ್ತಾ ಇತ್ತು.ಅವರಿಬ್ಬರೂ ಜಿಲ್ಲಾಧಿಕಾರಿ ಕಛೇರಿಗೆ procession ಹೊರಟಿದ್ದ ಮೆಡಿಕಲ್ ಕಾಲೇಜ್ ಸ್ಟೂಡೆಂಟುಗಳಿಗೆ ಬಣ್ಣ ಹಚ್ಚಿ ಸಿಕ್ಕಿಬಿದ್ದಿದ್ರು...ನಂಗೆ ಭಯ ಶುರುವಾಯ್ತು ನಾನು ಸ್ವಲ್ಪ ದಪ್ಪಗಿದ್ದೆ, ನನಗೆ ರಿಪೇರಿ ಸರಿಯಾಗಿ ಮಾಡ್ತಾರೆ ಅಂತ ಭಯ ಶುರುವಾಯ್ತು. ಛೇ ದೇವ್ರೇ ನನ್ನ ಈ ಕ್ಷಣ ಸಣ್ಣ ಮಾಡ್ಬಿಡು ಅಂತ ಕೇಳ್ಕೊಂಡೆ.ಆದ್ರೆ ದೇವ್ರು ಕಿವುಡಾಗಿದ್ದ. ಒಬ್ಬ ಪೋಲಿಸ್ ಬಂದು ಲಾಠಿ ಹಿಡಿದು ನಮಗೆಲ್ಲಾ ಕೈ ಮುಂದಕ್ಕೆ ಚಾಚಿಸಿ ತಲಾ ಎರಡೇಟು ಕೊಟ್ಟ. ನಂಗೆ ಸ್ಕೂಲಿನ ದಿನಗಳು ನೆನಪಾದವು ಆದ್ರೆ ಹೊಡೆತ ಜೋರಾಗಿತ್ತು.ನಮ್ಮ ಟೀಚರ್ ಯಾವಾಗಲೂ ಇಷ್ಟು ಜೋರಾಗಿ ಹೊಡೆದಿರಲಿಲ್ಲ. ಅವ್ರು ಕಾಲೇಜ್ ಹುಡುಗ್ರು ಜಾಸ್ತಿ ಹೊಡೀಬೇಡ ಅಂತ ಅಲ್ಲೇ ಇದ್ದ ಇನ್ನೊಬ್ಬ ಕಾನ್ಸ್ಟೇಬಲ್ ಹೇಳಿದ. ಸದ್ಯ ಬದುಕಿದೆವು ಅಂತ ಅಂದ್ಕೊಂಡೆ.

                  ಸಂಜೆ ಆಗ್ತಾ ಬಂತು. ಇನ್ಸಪೆಕ್ಟರ್ ಸಾಹೇಬರು ಬರಲೇ ಇಲ್ಲ. ಮನೇಲಿ ಅಪ್ಪ-ಅಮ್ಮ ಗಾಬರಿ ಆಗ್ತಾರೆ ಅಂತ ನಂಗೆ ಭಯ ಶುರುವಾಯ್ತು. ಮನೆಗೆ ಒಂದು ಫೋನ್ ಮಾಡ್ತೀನಿ ಅಂತ ಗೋಗರೆದೆ ಆದ್ರೆ ಅವರು ಒಪ್ಪಲಿಲ್ಲ. ಇನ್ಸ್ ಪೆಕ್ಟರ್ ಬಂದ್ರು ಸಂಜೆ ಏಳಕ್ಕೆ. ಆದ್ರೆ ಅವರು ನಮ್ಮನ್ನು 'ಕ್ಯಾರೇ' ಅನ್ನಲಿಲ್ಲ. ಒಂದು ಖುಷಿ ಏನಂದ್ರೆ ಅವರ ಹೆಸರೂ ವಿಜಯ್ ಕುಮಾರ್ ನನ್ ಹೆಸರೂ ವಿಜಯ್ ಕುಮಾರ್ ಆಗಿತ್ತು.

                  ರಾತ್ರಿ ಒಂಭತ್ತು ಘಂಟೆಯ ಹೊತ್ತಿಗೆ ಸ್ಟೇಷನ್ ಗೆ ಒಂದು ಫೋನ್ ಕಾಲ್ ಬಂತು. ಇನ್ಸ್ ಪೆಕ್ಟರ್ ಸಾಹೇಬ್ರು ಫೋನಲ್ಲಿ ಮಾತಾಡಿದ ಮೇಲೆ ನಮ್ಮ ಹತ್ರ ಬಂದು 'ನಿಮ್ಮಲ್ಲಿ ವಿಜಯ್ ಕುಮಾರ್ ಯಾರು? ಅಂತ ಕೇಳಿದ್ರು. ನಾನು ಎದ್ದು ನಿಂತೆ. ನನ್ನ ಸೀದಾ ಅವರ ಟೇಬಲ್ ಹತ್ರ ಕರ್ಕೊಂಡು ಹೋಗಿ ಏನು ಮಾಡಿದೆ ಅಂತ ಕೇಳಿದ್ರು. ನಾನು ನಡೆದ ವಿಷಯ ಅವರಿಗೆ ಹೇಳಿ ಇದೆಲ್ಲ ನನ್ ಫ್ರೆಂಡ್ ಇಂದ ಆಗಿದ್ದು ಅಂತ ಹೇಳ್ದೆ. ಅವರು ನಂಗೆ ಬುದ್ಧಿಮಾತು ಹೇಳಿ ಇಂಥ ಹುಡುಗರ ಸಹವಾಸ ಮಾಡಬೇಡ ಇನ್ನು ಮುಂದೆ, ಮನೆಗೆ ಹೋಗು ಅಂದ್ರು. ನಾನು ಅವರನ್ನೂ ಬಿಟ್ಬಿಡಿ ಸರ್ ಅಂತ request ಮಾಡಿ ಬಾಕಿ ಹುಡುಗರನ್ನೂ ಬಿಡಿಸಿದೆ.

                  ಸ್ಟೇಷನ್ ಇಂದ ಬಸ್ ಸ್ಟಾಂಡಿಗೆ ತಲುಪಿ ಬಸ್ ಹತ್ತಿ ಮನೆ ಸೇರೋ ಹೊತ್ತಿಗೆ ಹತ್ತೂವರೆ ಘಂಟೆ ಆಗಿತ್ತು. ಅಪ್ಪ-ಅಮ್ಮ ನನಗೋಸ್ಕರ ಕಾಯ್ತಾ ನಿಂತಿದ್ರು. ನಾನು ನಡೆದ ವಿಷಯ ಹೇಳಿದೆ. ಒಂದಷ್ಟು ಬೈದರು. ನಾಗಣ್ಣ ಅಂತ ಒಬ್ರು ಪೋಲಿಸ್ ಕಂಟ್ರೋಲ್ ರೂಮಲ್ಲಿ ಕೆಲಸ ಮಾಡ್ತಾರೆ, ಅವ್ರು ನಮ್ ಮನೆ ಹತ್ರಾನೆ ಇರೋದು. ನಮ್ಮ ತಂದೆ ಅವರನ್ನು ಭೇಟಿ ಮಾಡಿ ಮಗ ಮನೆಗೆ ಬಂದಿಲ್ಲ ಅಂತ ಹೇಳಿದ್ದಕ್ಕೆ ಅವರು ನಮ್ಮ ಕಾಲೇಜ್ ದೇವರಾಜ ಪೋಲಿಸ್ ಸ್ಟೇಷನ್ ವ್ಯಾಪ್ತಿಗೆ ಬರೋದರಿಂದ ಒಂದು ಸಲ ಪ್ರಯತ್ನ ಮಾಡೋಣ ಅಂತ ಅಲ್ಲಿಗೆ ಫೋನ್ ಮಾಡಿ ಕೇಳಿದಾಗ ನನಗೆ ಬಿಡುಗಡೆಯ ಭಾಗ್ಯ ದೊರಕಿತು ಎಂಬಲ್ಲಿಗೆ ನನ್ನ ಜೀವನದ ಒಂದು ಹೊಸ ಅನುಭವದ ಕಥೆ ಸುಖಾಂತವಾಯಿತು.

5 ಕಾಮೆಂಟ್‌ಗಳು:

  1. ಏನ್ಮಾಡೋದು ಗಿರೀಶ್, ನಾವ್ ಬೇಡ ಅಂದ್ರೂ ನಮ್ ಪೋಲಿಸ್ನೋರು ಅತಿಥಿ ಸತ್ಕಾರ ಮಾಡದೇ ಹಾಗೇ ಕಳಿಸೋಲ್ಲ.....

    ಪ್ರತ್ಯುತ್ತರಅಳಿಸಿ