ಶುಕ್ರವಾರ, ಆಗಸ್ಟ್ 27, 2010

ಕಲೆಗಾರ


ಬದುಕುವುದೇ ಒಂದು ಕಲೆ- ನೀನೆ ಕಲೆಗಾರ
ಭಾವನೆಗಳು ಹೊರಹೊಮ್ಮಿದರೆ ನೀನೇ ಕವಿ
ಸ್ನೇಹ,ಪ್ರೀತಿ ಗಳಿಸಿದರೆ ನೀನೇ ಸಾಹುಕಾರ
ಆಸೆ ಇದ್ದರೇ ಬದುಕು ಸಹಜ-ಸುಂದರ



ಮಂಗಳವಾರ, ಆಗಸ್ಟ್ 24, 2010

ಸವಿ ಸವಿ ನೆನಪು....



ಆ ದಿನಗಳು ನನ್ನ ಪಾಲಿನ ಅತ್ಯಂತ ಸಂಭ್ರಮದ ದಿನಗಳು. ನಾನು ಆಗ ಮೈಸೂರಿನಲ್ಲಿ ಹತ್ತನೇ ಕ್ಲಾಸಿನಲ್ಲಿ ಓದುತ್ತಿದ್ದೆ. ದಿನ ಬೆಳಿಗ್ಗೆ ಐದಕ್ಕೇ ಎದ್ದು ನಾನು , ಪೂಜಾರಿ (ಸಿದ್ದರಾಜ), ಲಾಡು (ಮಹಾದೇವಪ್ಪ), ಹೊಟ್ಟೆ (ಮಹಾದೇವ) ನಾಲ್ವರೂ ಸೈಕಲ್ ಹತ್ತಿ ನಿರ್ಜನ ರಸ್ತೆಗಳಲ್ಲಿ ಒಬ್ಬರನ್ನೊಬ್ಬರು ಓವರ್ಟೇಕ್ ಮಾಡುತ್ತಾ ಏದುಸಿರು ಬಿಡುತ್ತಾ ಹೊರಟರೆ ಸೀದಾ ನಮ್ಮ ಲಿಂಗರಾಜ್ ಮಾಸ್ತರ ಮನೆಯ ಮುಂದೆ ನಿಲ್ಲುತ್ತಿತ್ತು ನಮ್ಮ ಸವಾರಿ.

ಸರಿಸುಮಾರು ನಾಲ್ಕು ಕಿಲೋಮೀಟರುಗಳ ನಮ್ಮ ಸೈಕಲ್ ಯಾತ್ರೆಯ ನಂತರ ಎರಡು ಗಂಟೆಗಳ ಕಾಲ ಪಾಠ ಪ್ರವಚನ ನಡೆಯುತ್ತಿತ್ತು. ಮತ್ತೆ ಬೆಳಗಿನ ಎಂಟು ಘಂಟೆಗೆ ನಾವು ಪಾಠದ ಮನೆಯಿಂದ ವಾಪಸ್ ಸೈಕಲ್ ಹತ್ತಿ ಹೊರಡುತ್ತಿದ್ದೆವು. ಆದರೆ
ವಾಪಸ್ ಬರಬೇಕಾದರೆ ದಾರಿಯಲ್ಲಿ ಸಿಗುವ "ಫಲಹಾರ ದರ್ಶಿನಿ" (ಮೈಸೂರಿನ ವಿದ್ಯಾರಣ್ಯ ಪುರಂ ಸ್ಟರ್ಲಿಂಗ್ ಟಾಕೀಸ್ ಎದುರು) ಆಗೊಮ್ಮೆ ಈಗೊಮ್ಮೆ ನಮ್ಮ ಸೈಕಲ್ಗೆ ಬ್ರೇಕ್ ಹಾಕಿಸುತ್ತಿತ್ತು. ಮೈಸೂರಿನ ಹಲವು ಒಳ್ಳೆಯ ಹೊಟೇಲುಗಳಲ್ಲಿ ಇದೂ ಒಂದು. ಇಲ್ಲಿ ಕಾಯಿ ಚಟ್ನಿ ತುಂಬಾ ಫೇಮಸ್ಸು. ನಾವು ನಮ್ಮ ಹತ್ತಿರ ಇದ್ದ ಪುಡಿಗಾಸನ್ನೆಲ್ಲ ಸೇರಿಸಿ ಒಬ್ಬೊಬ್ಬರಿಗೆ ಎರಡೆರಡು ಇಡ್ಲಿ ತಗೊಂಡು ರೌಂಡು ಟೇಬಲ್ಲಿನಲ್ಲಿ ತಿನ್ನುತ್ತಾ ಇದ್ವಿ. ಚಟ್ನಿ ಎಷ್ಟು ಸೂಪರ್ ಅಂದರೆ ಎರಡು ಇಡ್ಲಿಗೆ ಆರೇಳು ಕಪ್ ಚಟ್ನಿ ಖಾಲಿ. ಒಂದು ಅರ್ಥದಲ್ಲಿ ಚಟ್ನಿ ಜೊತೆಗೆ ಇಡ್ಲಿ ನೆಂಚಿಕೊಂಡು ತಿಂತಾ ಇದ್ವಿ. ನೀವು ನಂಬ್ತಿರೋ ಇಲ್ಲವೋ ಅದು ಸೆಲ್ಫ್ ಸರ್ವೀಸ್ ಹೋಟೆಲ್ ಆದ್ದರಿಂದ ಒಂದು ಟ್ರೇನಲ್ಲಿ ಚಟ್ನಿ ಕಪ್ಪುಗಳನ್ನ ಜೋಡಿಸಿ ಇಟ್ಟಿರುತ್ತಿದ್ರು. ನಾವು ಹೋಗಿ ಚಟ್ನಿ ತಂದು ತಿಂದು ಖಾಲಿ ಮಾಡ್ತಾ ಇದ್ವಿ. ಅದರ ಜೊತೆಗೆ ಎಲ್ಲಿ ಕ್ಲೀನಿಂಗ್ ಹುಡುಗ ನೋಡಿಯಾನೋ ಎಂಬ ಭಯ ಬೇರೆ. ಆಮೇಲೆ ಅವನು ನಮ್ಮ ತಿನ್ನಾಟ ನೋಡಿ ಓನರ್ ಹತ್ರ ಹೇಳಿದ್ರೆ ಅವರು ಹೆಚ್ಚಿಗೆ ದುಡ್ಡು ಕೇಳ್ತಾರೋ ಅಂತ ನಮಗೆ ಪೀಕಲಾಟ. ನಾವು ತಿಂದ ಚಟ್ನಿಯ ಖಾಲಿ ಕಪ್ಪುಗಳನ್ನು ಪಕ್ಕದ ಟೇಬಲ್ಲಿಗೆ ಶಿಫ್ಟು ಮಾಡಿ ಏನೂ ಗೊತ್ತೇ ಇಲ್ಲದ ಹಾಗೆ ಸೈಲೆಂಟ್ ಆಗಿ ಹೊರಗೆ ಬಂದು ಸೈಕಲ್ ಹತ್ತಿ ಸಾಗುತ್ತಿತ್ತು ನಮ್ಮ ಸವಾರಿ ಮನೆಯ ಕಡೆಗೆ.
ಆ ನೆನಪುಗಳೇ ಹಾಗೆ, ಮಧುರ ಮನೋಹರ. ಅದು ನಮ್ಮದೇ ಲೋಕ.....ಅವರಿವರ ಚಿಂತೆ ನಮಗ್ಯಾಕ...ಅನ್ನೋ ಹಾಗೆ. ಯಾವುದೋ ಎಫ್ ಎಂ ಚಾನಲ್ನಲ್ಲಿ ಒಂದು ಜಾಹಿರಾತು ಬರುತ್ತೆ ಬದುಕು ರಿವೈಂಡ್ ಆಗೋ ಹಾಗಿದ್ರೆ ಅಂತ ನಿಜವಾಗ್ಲೂ ಹಾಗಿದ್ರೆ ದೇವ್ರೇ ನಂಗೆ ನನ್ನ ಬಾಲ್ಯ ಕೊಡು ಅಂತ ಕೇಳ್ತೀನಿ.

ಇವನದ್ಯಾಕೋ ಓವರ್ ಆಯಿತು ಅಂತೀರಾ......

ಶುಕ್ರವಾರ, ಆಗಸ್ಟ್ 13, 2010

ದೇವರೇ.......

ನನ್ನೆದೆಯ ಬೇಗುದಿಯ ಹೇಳಿಕೊಳ್ಳಲಿ ಹೇಗೆ?
ದೇವರೂ ಕುಳಿತಿಹನು ಜಾಣ ಕಿವುಡನ ಹಾಗೆ
ತಾಳಲಾರೆನು ಬೇಗೆ - ಕೇಳಿಕೊಳ್ಳುವೆ ನಿನಗೆ
ಯಾವ ಜನ್ಮದ ಹಗೆ ನನ್ನ ಮೇಲೆ ನಿನಗೆ

ಶನಿವಾರ, ಆಗಸ್ಟ್ 7, 2010

ಸ್ವತಂತ್ರ- ಅತಂತ್ರ


ಬಂದು ನಿಂತಿದೆ ಮತ್ತೊಂದು ಆಗಸ್ಟ್ ಹದಿನೈದು
ನೆನಪು ಮಾಡಿಸುತಿದೆ ನಮ್ಮದು ಸ್ವತಂತ್ರ ನಾಡೆಂದು
ಮರೆತು ಹೋಗಿದೆ ನಮಗೆ ನಮ್ಮ ಹಿರಿಯರ ಹೋರಾಟದ ಬದುಕು
ನಮಗೆ ನಮ್ಮದೇ ನೂರಾರು ಚಿಂತೆ-ವ್ಯಥೆ


ಹೆಸರಿಗಷ್ಟೇ ಸ್ವಾತಂತ್ರ್ಯ ಇಂದಿಗೂ ನಾವು ಗುಲಾಮರೇ
ಹಿಡಿ ಅನ್ನಕ್ಕಾಗಿ, ಉಡು ಬಟ್ಟೆಗಾಗಿ ನಿಲ್ಲದ ಆಕ್ರಂದನ
ನೋಟು ಕೊಟ್ಟು ಓಟು ಪಡೆದು ನಮ್ಮನಾಳುವ ದೊರೆಗಳೇ
ನಿಮಗಿಂತ ಆ ಬ್ರಿಟಿಷರೇ ನೂರು ಪಟ್ಟು ಮಿಗಿಲು


ದಯಮಾಡಿ ನಮಗಿನ್ನು ಕೊಟ್ಟುಬಿಡಿ ಸ್ವಾತಂತ್ರ್ಯ
ಸಾಕಾಗಿದೆ ನಮಗೆ ಗುಲಾಮಗಿರಿಯ ಬದುಕು
ದುಡ್ಡು ಮಾಡಿದ್ದು,ಸುಳ್ಳು ಹೇಳಿದ್ದು ಸಾಕುಮಾಡಿ
ಬಡಜನರ ಬದುಕಿಗೆ ಬುಡ್ಡಿ ದೀಪದಷ್ಟಾದರೂ ಬೆಳಕು ನೀಡಿ


ಶುಕ್ರವಾರ, ಜುಲೈ 30, 2010

ಗುಮ್ಮನಂಥ ಮನಸು



ಮಗುವಾಗು ಮಗುವಾಗು ಓ ಮನಸೇ ಮಗುವಾಗು
ನಗುವಾಗು ನಗುವಾಗು ಸವಿಯಾದ ನಗುವಾಗು
ಗುಮ್ಮನಂಥ ಈ ಮನದೆ ನೂರಾರು

ದೂರಾಲೋಚನೆ-ದುರಾಲೋಚನೆ


ಕ್ಷಣಚಿತ್ತ ಕ್ಷಣಪಿತ್ತ ಹೊಯ್ದಾಟ ಅತ್ತಿತ್ತ
ಎಂದು ಕೊನೆ ಇದಕೆ ಈ ಮನದ ತೊಳಲಾಟಕೆ
ಗುಮ್ಮನಂಥಾಗದಿರು ಮನವೇ

ನೀ ಮಗುವಾಗು.......ಮಗುವಾಗು.....ನಗುವಾಗು.....

ಮಂಗಳವಾರ, ಜುಲೈ 27, 2010

ನಾಡ ರಕ್ಷಣೆಯೋ ಇಲ್ಲ ಭಕ್ಷಣೆಯೋ !!!!!!????????


ಗೆಳೆಯರೇ,
ಕನ್ನಡ ನಾಡು ಕಂಡ ಹೆಮ್ಮೆಯ ಸಾಹಿತಿಗಳಾದ ಯು.ಆರ್.ಅನಂತ ಮೂರ್ತಿ, ಬರಗೂರು ರಾಮಚಂದ್ರಪ್ಪ ಇಂಥಹವರಿಗೂ ರಾಜಕೀಯದ ಗೀಳು ಹತ್ತಿದೆಯೆಂದರೆ ಈ ನಾಲ್ಕಕ್ಷರದ ಕ್ಷೇತ್ರಕ್ಕೆ ಎಷ್ಟೊಂದು ಮಹತ್ವ ಇದೆ ಎಂಬ ಅಂದಾಜು ಮಾಡಬಹುದು. ಈ ಮಹತ್ವಕ್ಕೆ ಕಾರಣ ಹಣ ಅಂದರೆ ಅತಿಶಯೋಕ್ತಿ ಅಲ್ಲ.
ನಾಡ ರಕ್ಷಣೆಗಾಗಿ (!!??) ನಡಿಗೆ ಹೊರಟಿರುವ ಕಾಂಗ್ರೆಸ್ಸಿಗರ ಬೆಂಬಲಕ್ಕೆ ನಮ್ಮ ಈ ಸಾಹಿತಿಗಳು ಟೊಂಕ ಕಟ್ಟಿ ನಿಂತಿದ್ದಾರೆ. ಸ್ವಾಮೀ ಸಾಹಿತಿಗಳೇ ಸ್ವಲ್ಪ ಯೋಚಿಸಿನೋಡಿ ನಮ್ಮ ನಾಡನ್ನು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಆಳಿದ ಇವರು ಎಷ್ಟರ ಮಟ್ಟಿಗೆ ನಾಡ ರಕ್ಷಣೆ ಮಾಡಿದ್ದಾರೆ? ಇಲ್ಲಿ ನನಗೆ ಬಿಜೆಪಿ ಬೆಂಬಲಿಸಿ ಮಾತನಾಡುವ ಹಂಬಲ ಇಲ್ಲ. ದುಡ್ಡು ಬಾಚುವ ವಿಷಯದಲ್ಲಿ ಪ್ರಸ್ತುತದ ರಾಜಕಾರಣಿಗಳು ನಾ ಮುಂದು ತಾ ಮುಂದು ಎಂದು ಮುನ್ನುಗ್ಗುತ್ತಾರೆ. ಹೀಗಿರುವಾಗ ಇವರಿಂದ ನಾಡ ರಕ್ಷಣೆ ಹೇಗೆ ಸಾಧ್ಯ!!!??? ನಿಮ್ಮಗಳ (ಸಾಹಿತಿಗಳ) ಬಗ್ಗೆ ಕನ್ನಡಿಗರಿಗೆ ಅಪಾರ ಗೌರವವಿದೆ. ದಯಮಾಡಿ ಅದಕ್ಕೆ ಧಕ್ಕೆ ತರಬೇಡಿ.... ಸಾಹಿತ್ಯ ಕೃಷಿಯಲ್ಲಿ ತೊಡಗಿ ನಮ್ಮ ನಾಡಿನ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿ ಎಂದು ಸಮಸ್ತ ಕನ್ನಡಿಗರ ಪರವಾಗಿ ಕೋರುವ

ವಿಜಯ್ ಹೆರಗು

ಸೋಮವಾರ, ಜುಲೈ 26, 2010

ಬರೆಯುವ ಮುನ್ನ

ಪ್ರಿಯ ಗೆಳೆಯರೇ,
ನನ್ನ ಈ ಹೊಸ ವರಸೆಗೆ ಸ್ಪೂರ್ತಿಯಾದದ್ದು ಗೆಳೆಯ ವಿನಯ್. ಅವನು ಈಗ ದೂರದ ದುಬೈನಲ್ಲಿ ನೆಲೆಸಿದ್ದಾನೆ. ಕೆಲವು ತಿಂಗಳುಗಳ ಮೊದಲು ನಮ್ಮ ಜೊತೆ ಕೆಲಸ ಮಾಡುತ್ತಿದ್ದ ಬೆಂಗಳೂರಲ್ಲಿ. ಪಾಪ ಈಗ ಮರಳುಗಾಡಿನ ಬಿಸಿಲಲ್ಲಿ ಮೈ ಕಾಯಿಸುತ್ತಿದ್ದಾನೆ. ಅವನು ಬರೆದ ಬ್ಲಾಗು ಓದಿ ಹೊಟ್ಟೆಕಿಚ್ಚು ಹೆಚ್ಚಿ ನಾನೂ ಬರೆಯೋಕೆ ಶುರು ಮಾಡಿದೆ. ಇನ್ನು ನನ್ನ ಅನಿಸಿಕೆಗಳು, ಮನದ ಮಾತುಗಳು, ಕವಿತೆ ಸಾಲುಗಳು ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಬರೆಯುವ ಆಸೆ ನನ್ನದು.....ಓದುವ ಕಷ್ಟ ನಿಮ್ಮದು.....ನಿಮ್ಮ ಅಭಿಪ್ರಾಯಗಳು, ಟೀಕೆಗಳು, ವಿಮರ್ಶೆಗಳಿಗೆ ಸದಾ ಸ್ವಾಗತ ....ಇದು ಬರೀ ಸ್ವಗತ....ಮುಂದೈತೆ ಮಾರಿಹಬ್ಬ....