ಸೀನ : ಏನ್ ಭಟ್ರೇ ಚೆನ್ನಾಗಿದ್ದೀರಾ? ಹೆಂಗೈತೆ ಬಿಜಿನೆಸ್ಸು?
ಭಟ್ರು : ನೀವೆಲ್ಲ
ಬಂದು ಟೀ ಕುಡ್ದು ಪುಕ್ಸಟ್ಟೆ ಪೇಪರ್ ಓದ್ಕಂಡು ಲೆಕ್ಕ ಬರಸೀ ಬರಸೀ ನನ್ ಬುಕ್
ತುಂಬೋಯ್ತು, ಈ ಹಾಳ್ ಹೊಟ್ಟೆ ಮಾತ್ರ ತುಂಬಲಿಲ್ಲ ಕಣ್ಲಾ ಸೀನ ....... ಅದಿರ್ಲಿ
ಎಲ್ಲಲಾ ಹಳೇ ಬಾಕಿ?
ಸೀನ : ಅಯ್ಯೋ ಕೊಡ್ತೀವಿ ಸುಮ್ಕಿರ್ರಿ ಭಟ್ರೇ, ರೂಪಾಯ್ ರೇಟು ಬಿದ್ದೋಗಿ ನಮ್ ದೇಸಾನೇ
ಸಾಲ ಮಾಡ್ಕಂಡ್ ಐತೆ ಇನ್ನು ನನ್ದು ನಿಮ್ದು ಯಾತರ ಲೆಕ್ಕ .... ಒಸೀ ಪೇಪರ್ ಕೊಡಿ
ಇತ್ಲಾಗೆ
ಭಟ್ರು : "ಓಸೀ ಪೇಪರ್" ಒಸೀ ಯಾಕೆ ಪೂರಾನೆ ತಗೋ ...... ನೀ ಓದಿ ಉದ್ಧಾರ ಮಾಡೋದು ಅಷ್ಟರಲ್ಲೇ ಐತೆ
------------------------------
------------------------------
-
ಸೀನ ಫುಲ್ ಇಂಟರೆಸ್ಟ್ ಆಗಿ ಪೇಪರ್ ಓದ್ತಿದ್ದಾನೆ ಅಷ್ಟರಲ್ಲಿ ನಮ್ ನಾಣಿ ಎಂಟ್ರಿ
ನಾಣಿ : ಏನ್ಲಾ ಸೀನ ನಂಗಿಂತ ಮುಂಚೆನೇ ಬಂದು ಕುಂತಿದ್ದೀಯ ಇವತ್ತು.
ಸೀನ
: ಹ್ಞೂ ಕಣ್ಲಾ ಇತ್ತೀಚಿಗೆ ಯಾಕೋ ರಾತ್ರಿ ಹೊತ್ತು ಸರಿಯಾಗಿ ನಿದ್ದೇನೆ ಬತ್ತಿಲ್ಲ
ಕಣ್ಲಾ, ಅದ್ಯಾವ್ದೋ ಲೂಸಿಯಾ ಮಾತ್ರೆ ಬಂದೈತಂತೆ!? ಎಲ್ಲ್ ಸಿಗ್ತದೆ ಅಂತ ನಿಂಗೇನಾರ
ಗೊತ್ತಾ?
ನಾಣಿ : ಲೇ ಲೂಸ್ ಮೂದೇವಿ ಅದು ಪಿಚ್ಚರ್ ಹೆಸ್ರು ಕಣ್ಲಾ ಆ ಥರ ಮಾತ್ರೆ ಸಿಗೋದೂ ಒಂಥರಾ ಕನಸು ಕಣ್ಲಾ
ಸೀನ : ಈ ಪಿಚ್ಚರ್ನವ್ರು ಇನ್ನೂ ಏನೇನೆಲ್ಲಾ ಸ್ಟೋರಿ ತಗೀತಾರೋ ಗೊತ್ತಿಲ್ಲ, ಒಂಥರಾ ಕಾಸೂ ಹಾಳು ತಲೇನೂ ಬೋಳು ಕಣ್ಲಾ ಜನಗಳ್ದು ........
ನಾಣಿ : ಆ ಪಿಚ್ಚರ್ ನೋಡೋಕೆ ಮೊನ್ನೆ ನಾನೂ ಕೆಂಚ ಇಬ್ರೂ ಹೋಗಿದ್ದೋ, ನಾವು ಪಿಚ್ಚರ್ ನೋಡೋಕೆ ಹೋಗಿದ್ದು ನಿಜಾನಾ ಇಲ್ಲಾ ಕನಸಾ ಅಂತ ಇನ್ನೂ ಕನ್ಫ್ಯೂಸ್ ಆಗೇ ಇದ್ದೀನಿ ಕಣ್ ಸೀನಾ
ಸೀನ : ನನ್ನಂತ ಬುದ್ವಂತನ್ನ ಜೊತೆಗೆ ಕರ್ಕಂಡು ಹೋಗಿದ್ರೆ ನಾನು ಸ್ಟೋರಿ ಏನು ಅಂತ ಅರ್ಥ ಮಾಡ್ಕಂಡು ನಿಮಗೂ ಹೇಳ್ತಿದ್ದೆ, ನನ್ನೇ ಬುಟ್ಬುಟ್ಟು ಹೋಗಿದೀರಲ್ಲ ಬಡ್ದೆತ್ತವೆ ನೀವು
ನಾಣಿ : ಅದೊಂದ್ ಬಾಕಿ ಇತ್ತು ನೋಡು ನಮ್ಗೆ, ಅದೇನೋ ಅಂತಾರಲ್ಲ "ಏನೋ ಬಂದು ತಲೇಗ್ ಒಡೀತು" ಹಂಗಾಗಿರದು ನಮ್ ಕಥೆ ನೀನೂ ಬಂದಿದ್ರೆ
ಸೀನ : ಯಾಕ್ಲಾ ಹಂಗಂತೀಯ!!?? ಹೋಗ್ಲಿ ಬುಡು, ಈ ಪಿಚ್ಚರ್ ಅಂದಾಗ ಗೆಪ್ತಿಗ್ ಬಂತು. ನಮ್ ಮುಂಗಾರು ಮಳೆ ಪಿಚ್ಚರ್ ತೆಗದ್ನಲ್ಲ ಕೃಷ್ಣಪ್ಪ ಆವಯ್ಯ ನಮ್ ಗೌಡ್ರು ಪಕ್ಸಕ್ಕೆ ಪ್ರೆಸಿಡೆಂಟ್ ಆಗ್ಬುಟ್ನoತೆ!?
ನಾಣಿ : ಲೇ ನಿನ್ ಬುದ್ದಿಗ್ ನನ್ ಹಳೇ ಯಕ್ಕಡ ಹಾಕಾ, ಅದ್ಕೇ ದೊಡ್ಡೋರ್ ಏಳದು ಒಸೀ ಜನರೇಟರ್ ನಾಲೆಜ್ ಇರ್ಬೇಕು ಅಂತ. ಆ ಕೃಷ್ಣಪ್ಪನೇ ಬ್ಯಾರೆ ಈ ಕೃಷ್ಣಪ್ಪನೇ ಬ್ಯಾರೆ ಕಣ್ಲಾ
ಸೀನ : ಹೌದೇನ್ಲಾ ನಾಣಿ ನಾನು ಆ ಪಿಚ್ಚರ್ ಕ್ರಿಷ್ಣಪ್ಪನೆ ಅಂತಿದ್ದೆ ಕಣ್ಲಾ
ನಾಣಿ : ಲೇ ಸೀನಾ ಗುಬಾಲ್ ನನ್ಮಗ್ನೇ ಆ ಕೃಷ್ಣಪ್ಪ ಈ. ಕೃಷ್ಣಪ್ಪ , ಈ ಕೃಷ್ಣಪ್ಪ ಎ. ಕೃಷ್ಣಪ್ಪ ಗೊತ್ತಾಯ್ತಾ ?
ಸೀನ : ಏನ್ಲಾ ಇದು ಅ ಆ ಇ ಈ ಏಳ್ತಾ ಇದೀಯಾ, ಕಲಿಯೋ ಟೈಮಲ್ಲೇ ಕಲೀನಿಲ್ಲ ನಾವು..... ನೀನು ಇವಾಗ ಕಲ್ಸಕ್ ಬಂದಿದ್ದೀಯ. ಒಸೀ ಕರೆಟ್ಟಾಗಿ ಅರ್ಥ ಆಗಂಗೆ ಏಳಿ ಪುಣ್ಯ ಕಟ್ಕಳ್ಳ
ನಾಣಿ : ನಿಂಗೆ ಅರ್ಥ ಮಾಡ್ಸೋ ಹೊತ್ಗೆ "ಮುಂಗಾರು ಮಳೆ ಭಾಗ-೨" ಬಂದು ತೋಪೆದ್ದ್ ಓಗಿರ್ತದೆ ಬುಡು. ಆದ್ರೆ ಒಂದಂತೂ ಮೋಸ ಕಣ್ಲಾ.
ಸೀನ : ಏನ್ಲಾ ಅದು!?
ನಾಣಿ : ಅಲ್ಲಾ ನಮ್ ದೊಡ್ ಗೌಡ್ರು ಈ ಸಲ ಯಾರ್ತಾವಾನೂ ಭವಿಸ್ಯ ಕೇಳ್ದೆ ಅಧ್ಯಕ್ಸರ್ನ ಆಯ್ಕೆ ಮಾಡುದ್ರಾ ಅಂತ ನಂಗೆ ಒಸೀ ಡೌಟ್ ಅದೇ ಕಣ್ಲಾ
ಸೀನ : ಅದ್ಯಾಕಪ್ಪ ನಿಂಗೆ ಅಂತ ಡೌಟು!? ನಿನ್ ಕೋಳಿ ಕೇಳಿ ನಮ್ ಗೌಡ್ರು ಮಸಾಲೆ ರುಬ್ಬೇಕಿತ್ತಾ!?
ನಾಣಿ : ಇಲ್ಲಾ ಕಣಲೇ, ಅವೆಲ್ಲ ರಾಜ್ಕೀಯದ್ ನ್ಯಾಕು ನಿನ್ನಂತ ಎಳ್ಸುಗಳ್ಗೆ ಅರ್ಥಾ ಆಗಕಿಲ್ಲ. ಇವಾಗ ಒಸೀ ಯೋಚ್ನೆ ಮಾಡು , ಕಾಂಗ್ರೆಸ್ ಅಧ್ಯಕ್ಸರು ಯಾರು ಪರಮೇಶ್ವರ್, ಬಿಜೆಪಿ ಅಧ್ಯಕ್ಸರು ಯಾರು ಪ್ರಹ್ಲಾದ್ ಜೋಷಿ..... ಇಬ್ರ್ ಹೆಸ್ರೂ "P" ಅಕ್ಸರದಿಂದ ಸುರು ಆಯ್ತದೆ ಆಲ್ವಾ ಇವ್ರೂ ಅದೇ ಅಕ್ಸರದಿಂದ ಸುರು ಆಗೋ ಎಸ್ರು ಇರೋರ್ಗೆ ಅಧ್ಯಕ್ಸರ ಸೀಟ್ ಕೊಡ್ಬೇಕಿತ್ತು ಅಂತ ನನ್ ಲೆಕ್ಕಾಚಾರ.
ಸೀನ : ಅಂತವ್ರ್ ಯಾರವ್ರೋ ಜೆಡಿಎಸ್ನಾಗೆ!? ಪಿ ಜಿ ಆರ್ ಸಿಂಧ್ಯಾನಾ!?
ನಾಣಿ : ನೀನೊಳ್ಳೆ ಚೆನ್ನಾಗ್ ಹೇಳ್ದೆ ಕಣ್ಲಾ, ಆವಯ್ಯ ಕನಕ್ಪುರದಾಗೆ ಪಕ್ಸ ಕಟ್ಟೋದ್ ಕಷ್ಟ ಇನ್ನು........
ಸೀನ : ಮತ್ತೆ ಇನ್ಯಾರ್ಲಾ!?
ನಾಣಿ : ಇಲ್ವೇನ್ಲಾ ನಮ್ ಯುವ ನಾಯಕ ............ ರೇವಣ್ಣನ ಮಗ ಪ್ರಜ್ವಲ್ ಗೌಡ
ಸೀನ : ಏನ್ಲಾ ರೇವಣ್ಣನ್ ಮಗ ಅಷ್ಟು ಪೇಮಸ್ಸಾ!?
ನಾಣಿ : ಅಯ್ಯೋ ಪೇಮಸ್ ಆಗಿಲ್ಲ ಅಂದ್ರೆ ಪೇಮಸ್ ಮಾಡನ ಬುಡ್ಲಾ, ಇವಾಗ ಮೊನ್ನೆ ನಮ್ ದುನಿಯಾ ವಿಜೀದು "ಜಯಮ್ಮನ ಮಗ" ಅನ್ನೋ ಪಿಚ್ಚರ್ ಬಂದಿತ್ತು ........ ನಮ್ ಕುಮಾರಣ್ಣ ಹೆಂಗಿದ್ರೂ ಪ್ರೊಡ್ಯೂಸರ್ರು, ನಮ್ ಭಟ್ರ ಡೈರೆಕ್ಸನ್ನಾಗೆ "ರೇವಣ್ಣನ ಮಗ" ಅನ್ನೋ ಪಿಚ್ಚರ್ ತಗಿಯೋದು. ಹೆಂಗದೆ ನನ್ ಏಡ್ಯಾ :)
ಸೀನ : ಅಲ್ಲಾ ನಮ್ ಭಟ್ರು ಟೀ ಕಾಪಿ ಮಾಡೋದೇ ಈ ಚಂದ ಇನ್ನು ಪಿಚ್ಚರ್ ಡೈರೆಕ್ಸನ್ ಎಂಗ್ಲಾ ನಾಣಿ !?
ನಾಣಿ : ಲೇ ಗುಬಾಲ್, ಭಟ್ರು ಅಂದ್ರೆ ಈ ಭಟ್ರಲ್ಲ ....... ಯೋಗ್ರಾಜ್ ಭಟ್ರು ಕಣಲೇ
ಅಷ್ಟು ಹೊತ್ತು ಸುಮ್ಮನಿದ್ದ ಭಟ್ಟರು ರಾಂಗ್ ಆದ್ರು. ಇನ್ನೂ ಸುಮ್ಮನಿದ್ರೆ ಇವ್ರು ನನ್ ಬುಡಕ್ಕೇ ಬಿಸಿ ಮುಟ್ಟಿಸ್ತಾರೆ ಅಂತ ಅವರೂ ಅಖಾಡಕ್ಕೆ ಎಂಟ್ರಿ ಆದ್ರು.
ಭಟ್ರು : ಲೇ ಅಲಾಲ್ ಟೋಪಿ ನನ್ಮಕ್ಳ ಮಾಡೋಕೆ ಕ್ಯಾಮೆ ಇಲ್ವೇನ್ಲಾ ನಿಮ್ಗೆ? ನಿಮ್ಗೇನ್ಲಾ ಗೊತ್ತು ನಮ್ ದ್ಯಾವೇಗೌಡ್ರ್ ಬಗ್ಗೆ, ಅವ್ರು ಏನೇ ಯೋಚ್ನೆ ಮಾಡುದ್ರು ಕಮ್ಮಿ ಅಂದ್ರೂ ಐದ್ಹತ್ತು ವರ್ಸ ಮುಂದಿಂದು ಯೋಚನೆ ಮಾಡ್ತಾರೆ ಕಣ್ರೋ
ನಾಣಿ : ಏನ್ ಭಟ್ರೇ ಹಂಗಂದ್ರೆ, ನಮ್ ರೇವಣ್ಣನ ಮಗ ರಾಜ್ಯಾಧ್ಯಕ್ಸ ಆಗೋಕೆ ಲಾಯಕ್ಕಲ್ಲ ಅಂತೀರಾ
ಭಟ್ರು : ನಾನು ಹಂಗೆಲ್ಲಿ ಹೇಳಿದ್ನೋ , ಗೌಡ್ರ್ ಲೆಕ್ಕಾಚಾರಾನೆ ಬ್ಯಾರೆ. ಇವಾಗ ನಮ್ ರಾಷ್ಟ್ರಪತಿ ಯಾರಪ್ಪಾ ಪ್ರಣವ್ ಮುಖರ್ಜೀ ತಾನೇ
ನಾಣಿ : ಹೌದು
ಭಟ್ರು : ಅವ್ರಗಿಂತ ಮುಂಚೆ ಆಯಮ್ಮ ಪ್ರತಿಭಾ ಪಾಟೀಲು ರಾಷ್ಟ್ರಪತಿ ಆಗಿದ್ರು
ನಾಣಿ : ಓಹ್ .......... ಅರ್ಥಾ ಆಯ್ತು ಭಟ್ರೇ ................. ಅಲ್ಲಿಗೆ ನಮ್ ಮುಂದಿನ ರಾಷ್ಟ್ರಪತಿ ಪ್ರಜ್ವಲ್ ಗೌಡ್ರು ಅಂದಂಗಾಯ್ತು. ನೀವೂ ಭಲೇ ಐನಾತಿ ಭಟ್ರೇ ಬುಡಿ
ಭಟ್ರು : ನಾನು ಐನಾತಿ ಅನ್ನೋದ್ನ ನೀನೇನ್ಲಾ ನಂಗೆ ಏಳದು ........... ನಂಗೆ ಯಾವತ್ತೋ ಗೊತ್ತು ......... ಹಳೇ ಬಾಕಿ ಚುಕ್ತಾ ಮಾಡ್ತೀನಿ ಅಂದಿದ್ದಲ್ಲ ತಗೀ ಕಾಸು
ನಾಣಿ : ಲೆಕ್ಕ ಹಾಕಿ ಮಡಗಿರಿ ಭಟ್ರೇ ............ ನಮ್ ಗೌಡ್ರು ಮೊಮ್ಮಗ ರಾಷ್ಟ್ರಪತಿ ಆಯ್ತಿದ್ದಂಗೆ ಕೊಟ್ಬುಡ್ತೀನಿ ........... ಬಾರ್ಲಾ ಸೀನ "ಜಯಮ್ಮನ ಮಗ" ಪಿಚ್ಚರ್ ನೋಡ್ಕಂಬರಣ
ಹೀಗ್ ಹೇಳಿ ನಾಣಿ ಮತ್ತು ಸೀನ ಅಲ್ಲಿಂದ ಎಸ್ಕೇಪ್ ಆದ್ರು. ಭಟ್ರು ಲೆಕ್ಕದ ಬುಕ್ಕು ಪಕ್ಕಕ್ಕೆ ತೆಗೆದಿಟ್ರು.
|
ಚಿತ್ರಕೃಪೆ : ದಿ ಹಿಂದೂ ಪತ್ರಿಕೆ |