ಶನಿವಾರ, ಫೆಬ್ರವರಿ 26, 2011

ನನ್ನ ಹೆಡ್ಡಿಂಗು


ಇಂದಿನ "ಕನ್ನಡಪ್ರಭ" ಪತ್ರಿಕೆಯ ಎರಡನೇ ಪುಟದಲ್ಲಿ ರೈಲ್ವೆ ಬಜೆಟ್ ಕುರಿತಾಗಿ "ಓದುಗರ ಶೀರ್ಷಿಕೆ" ವಿಭಾಗದಲ್ಲಿ ನಾನು ಕೊಟ್ಟ ಹೆಡ್ ಲೈನ್. ಧನ್ಯವಾದ ಕನ್ನಡಪ್ರಭ. ವಿಶ್ವೇಶ್ವರ ಭಟ್ಟರು "ಕನ್ನಡ ಪ್ರಭ" ಸಾರಥ್ಯ ವಹಿಸಿದ ನಂತರ ಹೀಗೊಂದು ಹೊಸ ಪ್ರಯೋಗ ಪ್ರಾರಂಭಿಸಿದ್ದಾರೆ. ಸಾಮಾನ್ಯವಾಗಿ ನಾವು ಪತ್ರಿಕೆಗಳನ್ನು ಓದುವಾಗ ಅರೆ ಈ ಲೇಖನಕ್ಕೆ ಶೀರ್ಷಿಕೆ ಹೀಗಿದ್ದರೆ ಚೆನ್ನಿತ್ತು ಹಾಗಿದ್ದರೆ ಚೆನ್ನಿತ್ತು ಎಂದು ಅನ್ನಿಸುವುದು ಸಹಜ. ಹೀಗೆ ಓದುಗರ ಮನದಲ್ಲಿ ಮೂಡುವ ಶೀರ್ಷಿಕೆಗಳನ್ನು ಕ್ರೋಡೀಕರಿಸಿ ಅವುಗಳಲ್ಲಿ ಉತ್ತಮ ಶೀರ್ಷಿಕೆ ಆರಿಸಿ ಪತ್ರಿಕೆಯಲ್ಲಿ ಪ್ರಕಟಿಸುವ ಭಟ್ಟರ ಈ ಪ್ರಯತ್ನ ಪ್ರಶಂಸಾರ್ಹ.

ಗುರುವಾರ, ಫೆಬ್ರವರಿ 17, 2011

ಮಜ್ಜಿಗೆಯ ಮಹಾತ್ಮೆ


ಮಜ್ಜಿಗೆಯ ಮಹಾತ್ಮೆ ಬಲು ಚೆಂದ ಗೆಳೆಯ
ಚುರುಗುಡುವ ಬಿಸಿಲಲ್ಲಿ ಬಸವಳಿದು ಬಂದವಗೆ
ತಂಪಿನ ಇಂಪೆರೆಯುವ ಪರಮ ಪೇಯವಿದು
ದುಬಾರಿಯ ಕೋಲಾ-ಪೆಪ್ಸಿಗಳ ಎದುರು
ಹೋರಾಡುವ ಶಕ್ತಿಶಾಲಿ

ಇತಿಹಾಸದುದ್ದಕ್ಕೂ ಓದುವೆವು ನಾವು
ಬಿಳಿಯರ ದಬ್ಬಾಳಿಕೆಯ ವಿರುದ್ಧ
ಕರಿಯರ ಕ್ರಾಂತಿ
ಇಲ್ಲಿ ಎಲ್ಲವೂ ಅದಲು-ಬದಲು
ಕರಿಯರದೇ COLA-ಹಲವಿಲ್ಲಿ
ಗೆಲ್ಲಲಿ ಬೆಳ್ಳಗಿನ ತಂಪು ಮಜ್ಜಿಗೆ

ಸೋಮವಾರ, ಫೆಬ್ರವರಿ 14, 2011

ಪ್ರೇಮಾ ಗೀಮಾ ಜಾನೆದೋ


ಸಿಕ್ಕರೆ ಸ್ವರ್ಗ
ತಿಳಿದಿಲ್ಲ ನನಗೆ ಈ ದಿನದ ವಿಶೇಷ
ಪ್ರೇಮಿಗಳ ದಿನವಂತೆ ಇಂದು
ನನಗೆ ಲವ್ವಿನ ಬಗ್ಗೆ ಲವಲೇಶವೂ ಗೊತ್ತಿಲ್ಲ
ಆದರೂ ಹಾಕುತ್ತೇನೆ ಹಲವು ವೇಷ
ಇಂದಲ್ಲ ನಾಳೆ ನನ್ನವಳಾಗಬಹುದು
...ಅವಳು-ಬಿಲ್ ಗೇಟ್ಸ್ ನ ಮಗಳು

ಈ ದಿನ ಸುದಿನ
ಇಂದು " ಪ್ರೇಮಿಗಳ ದಿನ"
ಪ್ರಣಯ ಪಕ್ಷಿಗಳ ಪಾಲಿಗೆ
ಮರೆಯಲಾಗದ ದಿನ
ಹೃದಯಗಳ ಮಧುರ ಮಿಲನ
ಮುಂದುವರಿಯಲಿ ಪ್ರತಿದಿನಹುಡುಕಾಟ
ಪ್ರೀತಿ ಎಂಬುದೊಂದು ಬೆರಗು
ಅನುಭವಿಸಿದಷ್ಟೂ ಹೆಚ್ಚುವುದಿದರ ಬೆಡಗು
ಹುಡುಗಾಟಕ್ಕೆ ಆರಂಭವಾಗಿ
ಹುಡುಕಾಟಕ್ಕೆ ತೊಡಗಿಸುವ ಈ ಪ್ರೀತಿ
ಬಿಡಿಸಲಾರದ ಒಗಟಿನ ರೀತಿಗುರುವಾರ, ಫೆಬ್ರವರಿ 3, 2011

ಆಳರಸನ ಅಳುಕು


ದೊರೆಯೇ ನಿನಗೂ ಬಂದಿತೆ ದರವೇಶಿ ಸ್ಥಿತಿ
ಕಾಡುತಿಹುದೇ ತಲೆ ಉರುಳುವ ಭೀತಿ


ಅಲ್ಲಿ ದೂರದಲಿ ಪಿರಮಿಡ್ಡಿನೂರಿನಲಿ
ಭೋರ್ಗರೆದು ಭುಗಿಲೆದ್ದಿದೆ ಜನಸಾಗರ
ಇಲ್ಲಿ ನಮ್ಮೂರಿನಲ್ಲಿ ಆಳುವರಸನಿಗೆ ಏನೋ ಅಳುಕು
ದಿನಕೊಂದು ನಾಟಕ- ಹುಡುಕಿದರೆ ಬರೀ ಹುಳುಕು

ತಂತ್ರಗಳ ಹೆಣೆದು ವಿರೋಧಿಗಳನ್ನು ಹಣಿಯುವ
ತಾಂತ್ರಿಕನು ನೀನು
ಯಂತ್ರ-ತಂತ್ರ ಮಾಟ-ಮಂತ್ರಗಳ ಭಯವೇಕೆ ಇನ್ನು

ಇತ್ತ ದೊರೆಸಾನಿ (!?) ಕೊರಗುವಳು
ಎಲ್ಲಿಂದಲೋ ಬಂತೆನಗೆ ಬೆದರಿಕೆಯ ಕರೆ
ಅಶರೀರವಾಣಿ ಮಾಡಿತ್ತು ದೂರವಾಣಿ
ಎಷ್ಟು ಖರೆಯೋ ಎಷ್ಟು ಸರಿಯೋ ಬಲ್ಲವನೊಬ್ಬನೇ ದೊರೆ

ಆಳುವ ನಿಮಗೇ ಇರುವಾಗ ಇಷ್ಟೊಂದು ಅಳುಕು
ಇನ್ನೆಲ್ಲಿ ಹಸನಾಗುವುದು ಪ್ರಜೆಗಳಾ ಬದುಕು
ಇನ್ನೆಷ್ಟು ದಿನ ತಾನೇ ಸಹಿಸಿಯಾರು ಜನ
ದಂಗೆಯೇಳುವ ಮುನ್ನ ತಿದ್ದಿಕೊಂಡರೆ ಚೆನ್ನ


ಶುಕ್ರವಾರ, ಡಿಸೆಂಬರ್ 31, 2010

ಹಗುರಾಯ್ತು ಮನನಲ್ಲೆ ನಾ ಅಂದುಕೊಂಡಿದ್ದೆ
ನನ್ನ ದುಃಖ ಸಾಗರದಷ್ಟು ಆಳ-ಅಗಲ
ನಿನ್ನೊಡನೆ
ಹಂಚಿಕೊಂಡ ಒಡನೆ
ಮನಸಾಯ್ತು
ಹಗುರ- ನಿರಾಳ

ಏನು ಮಾಯೆಯೋ, ಎಂಥಾ ಮೋಡಿಯೋ
ನಾನಂತು
ಅರಿಯೆ ನಲ್ಲೆ
ನಿನ್ನ
ಮುದ್ದಾದ ಮೊಗವ ಕಂಡೊಡನೆ ನಾನು
ಮರೆಯುವೆನು
ಎಲ್ಲ ನೋವ

ನನಗಾಗಿ ನೀನು- ನಿನಗಾಗಿ ನಾನು
ಬಾಳೋಣ ಕೊನೆಯವರೆಗೂ
ಸ್ವರ್ಗಕ್ಕೆ ಕಿಚ್ಚು ಹಚ್ಚೋಣ ನಾವು
ಬಾ ಸೇರು ನನ್ನ ತೋಳು

ಗುರುವಾರ, ಡಿಸೆಂಬರ್ 30, 2010

ನಮ್ಮ ಸಿಂಹ


ದೇಹ ದೂರಾದರೇನು, ವರುಷ ನೂರಾದರೂನು
ಮರೆಯಲಾರೆವು ಎಂದೆಂದು ನಿನ್ನನ್ನು
ಸಾಹಸ ಸಿಂಹ ಎಂದು ನೀಡಿಹೆವು ಬಿರುದು
ಆದರೂ ನಿನ್ನ ಮನಸು ಹೂವಂತೆ ಮೃದು
ಕನ್ನಡ ನಾಡಿಗೊಬ್ಬನೇ "ವಿಷ್ಣುವರ್ಧನ"
ಮತ್ತೊಮ್ಮೆ ಜನಿಸು ನೀ ಕರುನಾಡಲ್ಲೆ
ನಿನಗಿದೋ ನನ್ನ ನುಡಿ-ನಮನ

ಮಂಗಳವಾರ, ನವೆಂಬರ್ 16, 2010

ಕಂತಿನ ಕುರಿತೊಂದು ಅಂತೆ-ಕಂತೆ

ವಿಮೆ ಮಾಡಿಸುವಾಗ ನೀವು ಗಮನಿಸಿರಬಹುದಾದ ಒಂದು ಕಹಿ ಸತ್ಯ ಏನೆಂದರೆ ಮನುಷ್ಯ ತನ್ನ "ಬಾಡಿ"ಗೆ (ದೇಹಕ್ಕೆ) ವಿಮೆ ಮಾಡಿಸುವಾಗ ಆತನ ವಯಸ್ಸು ಹೆಚ್ಚಿದಂತೆ ಕಂತಿನ (ಪ್ರೀಮಿಯಂ) ಹಣ ಹೆಚ್ಚುತ್ತಾ ಹೋಗುತ್ತದೆ. ಆದರೆ ತನ್ನ ಗಾಡಿಗೆ (ವಾಹನಕ್ಕೆ) ವಿಮೆ ಮಾಡಿಸುವಾಗ ಅದರ ವಯಸ್ಸು ಹೆಚ್ಚಿದಂತೆ ಕಂತಿನ ಹಣ ಕಡಿಮೆಯಾಗುತ್ತದೆ!!!!

ಮಂಗಳವಾರ, ಅಕ್ಟೋಬರ್ 19, 2010

ಸಾವಿಗೊಂದು ಸಲಾಮುಸಾವಿಲ್ಲದ ಮನೆಯ ಸಾಸಿವೆಯ ತಾ ಎಂದ ಬುದ್ಧ
ಮನೆಗಳು ಸಿಕ್ಕವು, ಸಾಸಿವೆಯೂ ಸಿಕ್ಕಿತು
ಸಿಗಲೇ ಇಲ್ಲ ಸಾವಿಲ್ಲದ ಮನೆ


ಹುಡುಕಿ ಅಲೆದಳು ಆ ತಾಯಿ ಬಳಲಿ ಬಸವಳಿವವರೆಗೂ
ಸಾವೆಂಬ ಮಾಯಾವಿ ಕೈಚಾಚದ ಊರು-ಕೇರಿ
ಸಿಗಲೇ ಇಲ್ಲ, ಸಾವೇ ನೀ ಸರ್ವಾಂತರ್ಯಾಮಿ


ಬಡವ ಬಲ್ಲಿದ ಭೇದ ತೋರದ ನಿಜವಾದ
ಸಮಾಜವಾದಿ ನೀನು
ಧನವಂತ-ಧನಹೀನ ಯಾರಾದರೇನು ಬಿಡಲಾರೆ ನೀನು


ಜಾತಿ-ಉಪಜಾತಿಗಳ ಜಾಲದಲ್ಲಿ ನೀನಿಲ್ಲ
ಯಾವ ಧರ್ಮದ ಜನರೋ ನಿನಗದರ ಹಂಗಿಲ್ಲ
ದಾಕ್ಷಿಣ್ಯಗಳಿಂದ ದೂರ ನೀ ಜಾತ್ಯಾತೀತ-ಧರ್ಮಾತೀತ

ನನಗೆ ಅನಿಸುವ ಹಾಗೆ ಸಾವೇ ನೀ ಸಾವಲ್ಲ
ನೀ ಮತ್ತೊಂದರ ಹುಟ್ಟು, ಬರುವವರೆಗೂ
ನೀ ಬಿಟ್ಟುಕೊಡಲಾರೆ ನಿನ್ನ ಬರುವಿಕೆಯ ಗುಟ್ಟು

ಸಾವೇ ನಿನಗಿದೋ ನನ್ನ ಸಲಾಮು
ನಿನಗಿಲ್ಲ ಯಾರದೇ ಅಂಕೆ- ಲಗಾಮು
ಎಲ್ಲೆಡೆ ಕಾಣುತಿದೆ ನಿನ್ನದೇ ಹಸ್ತ- ಕೊಲ್ಲುವ ಕಲೆ ನಿನಗೆ ಕರಗತ

ಸೋಮವಾರ, ಸೆಪ್ಟೆಂಬರ್ 27, 2010

ಹೋಗಿಬಾ ಗೆಳತಿ..............


ನಲ್ಲೆ ನೀ ಹೇಳಿದೆ-ನಮ್ಮಿಬ್ಬರ ಪ್ರೀತಿ ಅವಿವೇಕ,ದುಡುಕು
ಆದರೆ ನನಗಂತೂ ಆ ಪ್ರೀತಿಯೇ ಬದುಕು

ನೀ ಸಿಗದಿದ್ದರೂ ನಲ್ಲೆ
ಮತ್ತೊಬ್ಬಳ ನಾ ಒಲ್ಲೆ
ಸಾಕೆನಗೆ ನಿನ್ನ ಮುಗುಳ್ನಗೆಯ
ಸವಿಯಾದ ನೆನಪು......

ಹೋಗುವುದಾದರೆ ಹೋಗಿಬಿಡು ಮತ್ತೆ ಬಾರದಿರು ನೀ ಇತ್ತ
ಕದಡಿ ಕಂಗೆಡಿಸಬೇಡ ಇರುವುದೊಂದೇ ಚಿತ್ತ

ಬದುಕಾಗಿ ನೀ ಬಂದೆ ಬೆಳಕನ್ನು ನೀ ತಂದೆ
ಕಾರಣವ ಹೇಳದೇ ನೀ ಮರೆಯಾಗಿ ಹೋದೆ

ಸೋಲು ಅಪಮಾನ ಹೊಸತಲ್ಲ ನನಗೆ
ಸಾವೆಂಬ
ಸಂಗಾತಿ ಕೈಹಿಡಿವವರೆಗೆ
ನಿನ್ನನ್ನೇ ನೆನೆಯುತ್ತ ಬದುಕಿರುವೆ ಹೀಗೆ.....

ಗುರುವಾರ, ಸೆಪ್ಟೆಂಬರ್ 23, 2010

ನಮ್ ದ್ಯಾವೇಗೌಡ್ರು


ಪ್ರಿಯ ಗೆಳೆಯರೇ,


ಈಟ್ ಕ್ರಿಕೆಟ್, ಸ್ಲೀಪ್ ಕ್ರಿಕೆಟ್, ಡ್ರಿಂಕ್ ಕ್ರಿಕೆಟ್ ಅನ್ನುವ ಜಾಹೀರಾತು ನಿಮಗೆಲ್ಲ ನೆನಪಿರಬೇಕು. ಆದರೆ ಇವರ ವಿಷಯದಲ್ಲಿ ಸ್ವಲ್ಪ ಅದಲು ಬದಲಾಗುತ್ತೆ, ಇವರದು ಈಟ್ ಪಾಲಿಟಿಕ್ಸ್, ಸ್ಲೀಪ್ ಪಾಲಿಟಿಕ್ಸ್, ಡ್ರಿಂಕ್ ಪಾಲಿಟಿಕ್ಸ್. ಯಾರ ಬಗ್ಗೆ ಮಾತಾಡ್ತಾ ಇದ್ದೀನಿ ಗೊತ್ತಾಯ್ತಾ ನಮ್ ದೇವೇಗೌಡರ ಬಗ್ಗೆ. ಹೌದು, ದೇವೇಗೌಡರು ಈ ದೇಶ ಕಂಡ ಪಕ್ಕಾ ರಾಜಕಾರಣಿ. ಇವರು ಜಾತ್ಯಾತೀತ,ಧರ್ಮಾತೀತ ವ್ಯಕ್ತೀನಾ ಅಂತ ನಂಗೆ ಗೊತ್ತಿಲ್ಲ. ಆದರೆ ಗ್ರಾಮ ಪಂಚಾಯ್ತಿ ಎಲೆಕ್ಷನ್ನಿಂದ ಪಾರ್ಲಿಮೆಂಟ್ ಎಲೆಕ್ಷನ್ ವರೆಗೂ ಯಾವುದೇ ಎಲೆಕ್ಷನ್ ನಡೆದರೂ ಭೇದಭಾವ ತೋರಿಸದೆ ಸಕ್ರಿಯವಾಗಿ ಭಾಗವಹಿಸುವ ಏಕೈಕ ನಾಯಕ ದೇವೇಗೌಡರು. ಯಾವುದೇ ಸಭೆ- ಸಮಾರಂಭ ಎಲ್ಲೇ ಆಗಲಿ ಸದಾ ಕಾಲ "ದೇಶ"ದ ಕುರಿತು ಚಿಂತನೆ (ಮೀಡಿಯಾದವರು ಅದನ್ನು ನಿದ್ದೆ ಅಂತ ಕರೀತಾರೆ) ನಡೆಸೋ ಮಹಾನ್ ವ್ಯಕ್ತಿ ಇವರು.

ಕರ್ನಾಟಕದಲ್ಲಿ ಎಂಥೆಂಥ ಮಹಾನ್ ರಾಜಕಾರಣಿಗಳು ಜನ್ಮ ತಳೆದಿದ್ದರು ಕೂಡಾ ಅವರ್ಯಾರಿಗೂ ಪ್ರಧಾನಿ ಹುದ್ದೆಯ ಹತ್ತಿರಕ್ಕೂ ಸುಳಿಯೋದು ಸಾಧ್ಯ ಆಗಲಿಲ್ಲ. ಆದರೆ ನಮ್ಮ ದೇವೇಗೌಡರಿಗೆ ಮಾತ್ರ ಇದು ಬಯಸದೇ ಬಂದ ಭಾಗ್ಯ. ಅಷ್ಟೆಲ್ಲ ಹಿರಿಯ,ಮುತ್ಸದ್ದಿ ರಾಜಕಾರಣಿಗಳು ಇದ್ದರೂ ದೇವೇಗೌಡರು ಪ್ರಧಾನಿ ಆಗಿದ್ದು ಹೇಗೆ? ನಿಜವಾಗಲೂ ಅವರಿಗೆ ಅಷ್ಟು ಕೆಪಾಸಿಟಿ ಇತ್ತಾ? ಅಥವಾ ಅಲ್ಲೇನಾದ್ರೂ ಭಾರೀ ಹಣದ ಗೋಲ್ಮಾಲ್ ನಡೆದಿತ್ತಾ!!!!????

ನೋಡಿ (ಓದಿ) ಬ್ರೇಕ್ ನಂತರ ಅಲ್ಲಲ್ಲಾ....ಮುಂದಿನ ಪ್ಯಾರಾದಲ್ಲಿ.....


ದೇವೇಗೌಡರು ಪ್ರಧಾನಿ ಆಗಿದ್ದಾಗ ಒಂದೆರಡು ಜೋಕುಗಳು ಚಾಲ್ತಿಯಲ್ಲಿ ಇದ್ದವು. ಇದನ್ನು ನಿಮ್ಮಲ್ಲಿ ಕೆಲವರು ಈಗಾಗಲೇ ಕೇಳಿರಬಹುದು,ಓದಿರಬಹುದು. ಮೊದಲೇ ಗೊತ್ತಿದ್ದರೆ ಮೆಲುಕು ಹಾಕಿ, ಗೊತ್ತಿಲ್ಲದಿದ್ದರೆ ಓದಿನೋಡಿ.


ಮೊದಲ ಜೋಕು:

ದೆಹಲಿಯ ಪ್ರಖ್ಯಾತ ಹೋಟೆಲೊಂದರ ಸಭಾಭವನದಲ್ಲಿ ಯುನೈಟೆಡ್ ಫ್ರಂಟ್ ನಾಯಕರುಗಳಾದ ಜ್ಯೋತಿಬಸು, ಲಾಲು ಪ್ರಸಾದ್ ಯಾದವ್,ಹರ್ಕಿಶನ್ ಸಿಂಗ್ ಸುರ್ಜೀತ್, ದೇವೇಗೌಡ ಮುಂತಾದ ಪ್ರಖ್ಯಾತ ನಾಯಕರೆಲ್ಲ ಆ ಸಭೆಯಲ್ಲಿ ಸೇರಿದ್ದರು. ಪ್ರಧಾನಿ ಹುದ್ದೆಗೆ ಯಾರನ್ನು ತರಬೇಕು ಅನ್ನೋ ವಿಷಯದ ಬಗ್ಗೆ ಚರ್ಚೆ ನಡೆದಿತ್ತು. ಜ್ಯೋತಿಬಸು ಹೆಸರು ಎಲ್ಲರ ಬಾಯಲ್ಲೂ ಬಂತಾದರೂ ಅವರು ಸ್ವತಃ ಒಪ್ಪಲಿಲ್ಲ. ಇದೆ ವೇಳೆ ದೆಹಲಿಯ ಭಯಂಕರ ಬಿಸಿಲ ಅಬ್ಬರಕ್ಕೆ ಬಸವಳಿದಿದ್ದ ನಮ್ಮ ಲಾಲೂ ಯಾದವರಿಗೆ ಮೊಸರುವಡೆ (ತೈರುವಡೆ) ತಿನ್ನುವ ಹಂಬಲ ಆಯಿತು. ಸರಿ ಮೊದಲೇ ಆವಯ್ಯ ಸ್ಟ್ರೈಟ್ ಫಾರ್ವರ್ಡ್ ಆಸಾಮಿ ಸೀದಾ ಎದ್ದು ನಿಂತುಕೊಂಡು "ಅರೆ ದಹೀ ವಡಾ ಲಾವೋ, ದಹೀ ವಡಾ ಲಾವೋ" ಅಂತ ಕೂಗಿದರು. ಅಲ್ಲಿ ಸೇರಿದ್ದ ವಯೋ ವೃದ್ದ ನಾಯಕರಿಗೆ "ದಹೀ ವಡಾ" ಅಂದಿದ್ದು ದೇವೇಗೌಡ ಅಂತ ಕೇಳಿಸಿ ನಮ್ಮ ಗೌಡ್ರು ಪ್ರಧಾನಿ ಗದ್ದುಗೆ ಏರುವ ಅವಕಾಶ ಸಿಕ್ತು.

ಎರಡನೇ ಜೋಕು:

ಪಾರ್ಲಿಮೆಂಟಿನ ಬಳಿ ಸೇರಿದ್ದ ಯುನೈಟೆಡ್ ಫ್ರಂಟಿನ ನಾಯಕರುಗಳು ಗೊಂದಲದ ಸ್ಥಿತಿಯಲ್ಲಿದ್ದಾರೆ. ಜ್ಯೋತಿಬಸುರಂತಹ ಹಿರಿಯ ನಾಯಕರು ಪ್ರಧಾನಿ ಹುದ್ದೆ ನನಗೆ ಬೇಡ ಅಂತ ಹೇಳಿ ಇವರನ್ನೆಲ್ಲ ಗೊಂದಲದಲ್ಲಿ ಸಿಲುಕಿಸಿದ್ದಾರೆ. ಮುಂದಿನ ಹಾದಿ ಏನು? ಯಾರನ್ನು ಸರ್ವ ಸಮ್ಮತ ನಾಯಕನನ್ನಾಗಿ ಆರಿಸುವುದು ಅಂಥ ಎಲ್ಲ ನಾಯಕರೂ ಯೋಚನೆ ಮಾಡ್ತಾ ಇದ್ದಾರೆ. ಹೀಗೆ ಎಲ್ಲರೂ ಚಿಂತಾಮಗ್ನರಾಗಿದ್ದಾಗ ಒನ್ಸ್ ಎಗೈನ್ ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕ ಲಾಲೂಜಿ ಅಲ್ಲಿಗೆ ಬಂದರು. ವಾತಾವರಣವನ್ನು ತಿಳಿಯಾಗಿಸುವ ಸಲುವಾಗಿ ಒಂದು ಹಿಂದಿ ಗಾದೆ ಹೇಳಿದರು " ಘೋಡಾ ಹೇ ಮೈದಾನ್ ಹೇ, ಆಪ್ ಲೋಗ ಆರಾಮ್ ಸೆ ರಹೋ " ಅಂದ್ರು. ಹಿರಿಯ ನಾಯಕರೊಬ್ಬರಿಗೆ "ಘೋಡಾ" ಅಂದದ್ದು "ಗೌಡ" ಅಂತ ಕೇಳಿಸಿ ದೇವೇಗೌಡರು ಪ್ರಧಾನಿ ಆದರು.


ಶನಿವಾರ, ಸೆಪ್ಟೆಂಬರ್ 18, 2010

ಲೈಫು ಇಷ್ಟೇನಾ?


ಡಿಯರ್ ಫ್ರೆಂಡ್ಸ್,
ನಿನ್ನೆ ಅಂದ್ರೆ ಶುಕ್ರವಾರದ ದಿವಸ ನಾನು ಹಾಗೂ ನನ್ ಫ್ರೆಂಡ್ ನಾಗರಾಜ ಇಬ್ಬರೂ ಯೋಗರಾಜ್ ಭಟ್ರ "ಪಂಚರಂಗಿ" ಸಿನೆಮಾ ನೋಡೋಣಾಂತ ಕೆ.ಆರ್.ಪುರಂನಲ್ಲಿರೋ ಕೃಷ್ಣಾ ಟಾಕೀಸಿಗೆ ಹೋದ್ವಿ. ನನಗಂತೂ ಫಿಲಂ ಇಷ್ಟ ಆಯ್ತು. ಎರಡು ಗಂಟೆ ಹೇಗೆ ಕಳೀತು ಅಂತಾನೆ ಗೊತ್ತಾಗ್ಲಿಲ್ಲ ಅಷ್ಟು ಎಂಟರ್ಟೈನಿಂಗ್ ಆಗಿತ್ತು.
ಪಿಕ್ಚರ್ ನೋಡಿ ಹೊರಗೆ ಬಂದು ಬೈಕ್ ಹತ್ತೋಣ ಅಂದ್ರೆ ಬೈಕು ಪಂಕ್ಚರ್ ಆಗಿದೆ. "ಪಂಚರಂಗಿ" ನೋಡಿದ್ದಾಯ್ತು ಈಗ "ಪಂಚರಂಗ್ಡಿ" ಹುಡುಕು ಅಂತ ಗೆಳೆಯನಿಗೆ ಹೇಳಿದೆ. ಪಂಕ್ಚರ್ ಆಗಿರೋ ಬೈಕುಗಳು,ತಳ್ಳಿಕೊಂಡು ಹೋಗ್ತಿರೋ ನಾವುಗಳು, ಪಂಕ್ಚರ್ ಅಂಗಡಿ ಹುಡುಕ್ತಿರೋ ಕಣ್ಣುಗಳು.......ಹೀಗೇ ಸಾಗಿತ್ತು ರಸ್ತೆಯುದ್ದಕ್ಕೂ ನನ್ನ ವಾಕ್ ಲಹರಿ, ಎಲ್ಲಾ ಭಟ್ರ ಡೈಲಾಗ್ ಪ್ರಭಾವ.
ಅಂತೂ ಸ್ವಲ್ಪ ದೂರ ಬೈಕು ತಳ್ಳಿದ ಮೇಲೆ (ತಳ್ಳಿದ್ದು ನಾನಲ್ಲ ನಾಗರಾಜ) ಒಂದು ಪಂಕ್ಚರ್ ಅಂಗಡಿ ಸಿಕ್ತು. ಅಂಗಡಿಯವನು ಪಂಕ್ಚರ್ ಹಾಕುತ್ತಿದ್ದ, ನಾವು ಫಿಲಂ ಕುರಿತು ವಿಮರ್ಶೆ ಮಾಡ್ತಾ ಇದ್ವಿ. ಅಷ್ಟರಲ್ಲಿ ಒಬ್ಬ ಹನ್ನೆರಡರಿಂದ ಹದಿನಾಲ್ಕು ವರ್ಷದ ಹುಡುಗ ಅಂಗಡಿ ಹತ್ತಿರ ನಡೆದು ಬಂದ....ಅದರಲ್ಲೇನಪ್ಪ ಸ್ಪೆಷಲ್ ಅಂತೀರಾ!!?? ಅವನು ಬರಿಗಾಲಲ್ಲಿ ಬರಲಿಲ್ಲ ಮರಗಾಲಲ್ಲಿ ಬಂದ. ಮೂರಡಿ ಉದ್ದದ ಆ ಹುಡುಗ ಆರೇಳು ಅಡಿ ಉದ್ದದ ಮರದ ತುಂಡನ್ನು ಕಾಲಿಗೆ ಕಟ್ಟಿಕೊಂಡು ಬಂದಿದ್ದ. ತನ್ನ ದೇಹದ ಮೇಲೆ ಅದ್ಭುತವಾಗಿ ಸಮತೋಲನ ಸಾಧಿಸುತ್ತಾ ಅಂಗಡಿಯ ಕಡೆ ಬಂದ ಅವನು ಅಂಗಡಿ ಮಾಲೀಕನಿಗೆ ಸಲಾಮು ಹೊಡೆದು ಭಿಕ್ಷೆಯ ಹಣಕ್ಕಾಗಿ ಕೈಚಾಚಿದ. ಅಂಗಡಿಯವನು ಎರಡು ರೂಪಾಯಿಯ ಬಿಲ್ಲೆಯೊಂದನ್ನು ತೋರಿಸುತ್ತಾ ಇದನ್ನು ಎಸೀತೀನಿ ಕ್ಯಾಚ್ ಹಿಡ್ಕೋ ಅಂತ ಎಸೆದ. ಆ ಹುಡುಗ ಅಷ್ಟೆತ್ತರದಲ್ಲಿ ಆ ದುಡ್ಡನ್ನು ಕ್ಯಾಚ್ ಹಿಡಿದು ಅಂಗಡಿಯವನಿಗೆ ಮತ್ತೊಮ್ಮೆ ಸಲಾಮು ಹೊಡೆದು ಮುಂದಿನ ಅಂಗಡಿಯತ್ತ ಹೆಜ್ಜೆ ಹಾಕಿದ. ನಾನೂ ಸೇರಿದಂತೆ ಅಲ್ಲಿದ್ದ ಬಹುತೇಕ ಜನ ಅವನನ್ನೇ ಅಚ್ಚರಿಯಿಂದ ನೋಡುತ್ತಾ ಇದ್ದರು.
ನನ್ನ ಮನಸ್ಸಿನಲ್ಲಿ ನೂರೆಂಟು ಪ್ರಶ್ನೆಗಳು ಪ್ರವಾಹದೋಪಾದಿಯಲ್ಲಿ ಧುಮ್ಮಿಕ್ಕಿತು.
ಈ ಹುಡುಗ ಯಾರಾದ್ರು ಶ್ರೀಮಂತರ ಮನೇಲಿ ಹುಟ್ಟಿದ್ದರೆ ಇವನ ಈ ಪ್ರತಿಭೆ ಬೀದಿ ಪಾಲಾಗುತ್ತಿತ್ತಾ? ನಿಜವಾಗಲು ಇವನ ಪೋಷಕರು ಶ್ರೀಮಂತರಾಗಿದ್ದಿದ್ದರೆ ಇವನನ್ನು ವ್ಯಾಪಾರದ ಸರಕಿನಂತೆ ಬಳಸುತ್ತಿದ್ದರೇನೋ? ಅಥವಾ ಇವನು ಶ್ರೀಮಂತರ ಮನೇಲಿ ಹುಟ್ಟಿದ್ದರೆ ಇವನ ಕಾಲಿನ ಕಲೆ ಕರಗತವಾಗುತ್ತಿರಲಿಲ್ವೇನೋ? ಇಷ್ಟು ಒಳ್ಳೆಯ ಪ್ರತಿಭೆ ಇರುವ ಈ ಹುಡುಗ ಭಿಕ್ಷೆ ಬೇಡಿ ಬದುಕಬೇಕಾ? ಲೈಫು ಇಷ್ಟೇನಾ............................!!!!!!!!!????????

ಗುರುವಾರ, ಸೆಪ್ಟೆಂಬರ್ 16, 2010

ಹನಿ-ಮಿನಿ

ಮನೆಗೆ ಲೇಟಾಗಿ ಬಂದಾಗ
ಹೆಂಡತಿ ಹಾಕುವಳು ಛೀಮಾರಿ
ಗಂಡ ಮನದಲ್ಲೇ ಅಂದುಕೊಳ್ಳುವನು
ಛೀ "ಮಾರಿ"ಈಗ ಎಲ್ಲದರಲ್ಲೂ ಲೇಡೀಸೆ ಮುಂದು
ಪಾರ್ಟಿಯಲ್ಲಿ ಹೇಳುತ್ತಾರೆ
ಲೇಡೀಸ್ ಅಂಡ್ ಜೆಂಟಲ್ ಮ್ಯಾನ್ ಎಂದು


ಎಲ್ಲ ಪರೀಕ್ಷೆಗಳಲ್ಲೂ ಲೇಡೀಸೆ ಫಸ್ಟ್
ಆದರೂ ಕೂಡ ನಮ್ ಹುಡುಗರೇ
ಸಖತ್ ಇಂಟೆಲ್ "ಜೆಂಟ್ಸ್"ಸೋಮವಾರ, ಸೆಪ್ಟೆಂಬರ್ 6, 2010

ಗುರುಗಳನ್ನು ನೆನೆಯುತ್ತಾ.....


ಗೆಳೆಯರೇ,
ಸವಿ ಸವಿ ನೆನಪು ಲೇಖನ ಬರೆದಾಗಿನಿಂದ ನನ್ನ ಶಾಲಾ ದಿನಗಳ ನೆನಪು ಬಿಡದೆ ಕಾಡ್ತಾ ಇದೆ. ಅದನ್ನು ನಿಮ್ಮ ಜೊತೆ ಹಂಚಿಕೊಂಡು ಖುಷಿ ಪಡೋ ಆಸೆ. ನಿಮಗೂ ಇಷ್ಟ ಆಗುತ್ತೆ ಅಂತ ಅಂದುಕೊಂಡಿದ್ದೀನಿ.
ನಾನು ಆಗ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಏಳನೇ ಕ್ಲಾಸಿನಲ್ಲಿ ಓದ್ತಾ ಇದ್ದೆ. ಅಲ್ಲಿ ನಮ್ಮ ಇಂಗ್ಲಿಷ್ ಮೇಷ್ಟ್ರು ಶಿವಲಿಂಗಪ್ಪ ಅಂತ ಅವರ ಹೆಸರು. ನಮ್ಮ ಇಂಗ್ಲಿಷ್ ಪಾಠಗಳಲ್ಲಿ THE RAT SNAKE ಅಂತ ಒಂದು ಪಾಠ ಇತ್ತು. ಅದರಲ್ಲಿ ಒಂದು ಸಾಲು ಹೀಗಿತ್ತು "The snake is in the bush" ಅಂದರೆ ಹಾವು ಪೊದೆಯ ಒಳಗಿತ್ತು ಅಂತ. ಆದರೆ ಅದು ನಮ್ಮ ಮೇಷ್ಟ್ರ ಬಾಯಲ್ಲಿ ಬೇರೆಯೇ ಅರ್ಥವನ್ನು ಹೇಳಿಸಿತ್ತು. ಮ್ ಮೇಷ್ಟ್ರು ಹೇಳಿದ್ ಪ್ರಕಾರ ಅದರ ಅರ್ಥ "ಹಾವು ಬುಸ್ಸ್ ಎಂದು ಬುಸುಗುಟ್ಟಿತು". ಇದನ್ನು ಕೇಳಿ ನಮಗೆ ಒಳಗೊಳಗೇ ನಗು. ನಕ್ಕಿದ್ದು ಗೊತ್ತಾದರೆ ಬೆತ್ತ ರುಚಿ ಕಟ್ಟಿಟ್ಟ ಬುತ್ತಿ. ಒಟ್ಟಾರೆ ಎಲ್ಲಾ "ನಾಗಲೀಲೆ".
ನಾನು ಮೈಸೂರಿನಲ್ಲಿ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ನಮ್ಮ ಸ್ಕೂಲಿನ ಹೆಡ್ ಮಾಸ್ತರ್ ಆಗಿದ್ದವರು ನಮ್ಮ ಸಮಾಜ ಶಾಸ್ತ್ರ ಟೀಚರ್ ಚಂದ್ರಶೇಖರ್ ಅವರು. ಅವರ ಪಾಠ ಕೇಳೋದಂದ್ರೆ ನಮಗೆ ಸಖತ್ ಮಜಾ ಇರ್ತಿತ್ತು. ಏನಪ್ಪಾ ಇವ್ನು ಪಾಠ ಕೇಳೋದು
ಮಜಾ ಇತ್ತು ಅಂತ ಬುರುಡೆ ಬಿಡ್ತಾನೆ ಅಂತ ಅಂದ್ಕೊಂಡ್ರಾ !!?? ಅಲ್ಲೇ ಇರೋದು ವಿಶೇಷ. ಅವರು "ಸಾಮಾನ್ಯವಾಗಿ" ಮತ್ತು "ಇರತಕ್ಕಿರತಕ್ಕಂತ" ಈ ಎರಡು ಪದಗಳನ್ನು ಧಾರಾಳವಾಗಿ ತಮ್ಮ ಪಾಠದ ಮಧ್ಯೆ ಬಳಸುತ್ತಿದ್ದರು. ಅವರ ಕ್ಲಾಸಿನಲ್ಲಿ ನಮ್ಮದು ಡಬಲ್ ಆಕ್ಟಿಂಗು. ಒಂದು ಸ್ಟೂಡೆಂಟು ಇನ್ನೊಂದು ಸ್ಕೋರರ್ರು. ನಾನು ಹಾಗೂ ನನ್ನ ಲಾಸ್ಟ್ ಬೆಂಚಿನ ಗೆಳೆಯರು ನಮ್ಮ ಮೇಷ್ಟ್ರು ಒಂದು ಪೀರಿಯಡ್ಡಿನಲ್ಲಿ ಎಷ್ಟು ಸಲ ಈ ಪದಗಳನ್ನು ಉಪಯೋಗಿಸುತ್ತಾರೆ ಅಂತ ಲೆಕ್ಕ ಹಾಕ್ತಾ ಇದ್ವಿ. ನಮ್ ಮೇಷ್ಟ್ರು ಮಾಸ್ಟರ್ ಬ್ಲಾಸ್ಟರ್ ಸಚಿನ್ ಥರ ಸೆಂಚುರಿಗಳನ್ನು ಬಾರಿಸ್ತಿದ್ರು.
ಈ ಥರ ಪಾಠದ ಜೊತೆಗೆ ನಮಗೆ ಮನೋರಂಜನೆಯನ್ನೂ ಒದಗಿಸಿದ ಗುರುಗಳನ್ನು ನೆನೆಯುತ್ತಾ ಇಲ್ಲಿ ಇನ್ನೊಂದು ವಿಷಯ ಹೇಳೋಕೆ ಇಷ್ಟ ಪಡ್ತೀನಿ. ಇಲ್ಲಿ ಯಾರನ್ನೂ ವ್ಯಂಗ್ಯ ಮಾಡುವ, ಆಡಿಕೊಳ್ಳುವ ಉದ್ದೇಶ ನನ್ನದಲ್ಲ. ಶಿಕ್ಷಕರ ದಿನದ ಮರುದಿನ (ಯಾಕಂದ್ರೆ ನೆನ್ನೆ ಸಂಡೆ ಆಲ್ವಾ ಆಫೀಸು ರಜಾ......ಅರ್ಥ ಆಯಿತು ಅಂದ್ಕೋತೀನಿ) ನನ್ನ ಗುರುಗಳನ್ನು ನೆನೆಯುತ್ತಾ ಈ ಲೇಖನ. ದಯಮಾಡಿ ಯಾರೂ ಗುರ್ರ್ ಅನ್ನಬೇಡಿ.
ನಿಮ್ಮವ,

ವಿಜಯ್ ಹೆರಗು

ರೀ ಸ್ವಲ್ಪ ನಗ್ತೀರಾ...

ಅತಿಯಾದ ಫ್ಯಾಷನ್ ಅಂದ್ರೆ ಲುಂಗಿಗೆ ಜಿಪ್ ಹಾಕಿಸೋದು
ಅತಿಯಾ ಸೋಮಾರಿತನ ಅಂದ್ರೆ ಬೆಳಿಗ್ಗೆ ವಾಕಿಂಗ್ ಹೋಗುವಾಗ ಡ್ರಾಪ್ ಕೇಳೋದು
ಅತಿಯಾದ ದಡ್ಡತನ ಅಂದ್ರೆ ಖಾಲಿ ಪೇಪರ್ ಜೆರಾಕ್ಸ ಮಾಡಿಸೋದು
ಅತಿಯಾದ ಪ್ರಾಮಾಣಿಕತೆ ಅಂದ್ರೆ ಗರ್ಭಿಣಿ ಹೆಂಗಸು ಬಸ್ಸಲ್ಲಿ ಒಂದೂವರೆ ಟಿಕೆಟ್ ತಗೊಳ್ಳೋದು
ಅತಿಯಾದ ಭರವಸೆ ಅಂದ್ರೆ ೯೯ ವರ್ಷದ ಅಜ್ಜಿ/ಅಜ್ಜ ಲೈಫ್ ಟೈಮ್ ರೀಚಾರ್ಜ್ ಮಾಡಿಸೋದು
-ಸಂಗ್ರಹ

ಶುಕ್ರವಾರ, ಆಗಸ್ಟ್ 27, 2010

ಕಲೆಗಾರ


ಬದುಕುವುದೇ ಒಂದು ಕಲೆ- ನೀನೆ ಕಲೆಗಾರ
ಭಾವನೆಗಳು ಹೊರಹೊಮ್ಮಿದರೆ ನೀನೇ ಕವಿ
ಸ್ನೇಹ,ಪ್ರೀತಿ ಗಳಿಸಿದರೆ ನೀನೇ ಸಾಹುಕಾರ
ಆಸೆ ಇದ್ದರೇ ಬದುಕು ಸಹಜ-ಸುಂದರ