ಗುರುವಾರ, ಏಪ್ರಿಲ್ 28, 2011
ಶುಕ್ರವಾರ, ಏಪ್ರಿಲ್ 22, 2011
ಅವಳ ಮನದಾಳ-೦೩
ನೆನಪು
ಎಲ್ಲಿರುವೆ ಓ ನಲ್ಲ
ನೀ ಹೊರಿಸಿ ಹೋದ ನೆನಪುಗಳಮೂಟೆ
ನಾ ಹೊರಲಾರದೇ ಹೊತ್ತಿರುವೆ
ನನ್ನೊಡನೆ ನೀ ನಡೆದ ಹಾದಿ
ಕೈ ಹಿಡಿದು ಬರಸೆಳೆದು ಮುತ್ತಿಟ್ಟ
ಕ್ಷಣ ಕಣ್ಣ ಮುಂದೆ ಹಾಗೇ ಇದೆ
ಕೊಟ್ಟಮಾತನು ತಪ್ಪಿ
ಕಾಣೆಯಾಗಿ ಹೊರಟುಹೋದೆ
ನಾ ಹೇಗೆ ಬದುಕಲಿ ನೀನೇ ಇಲ್ಲದೇ!!??
ಆ ನಿನ್ನ ಮೀಸೆಯಂಚಿನ ಮಂದಹಾಸ
ಮರೆಯುವುದಾದರೂ ಹೇಗೆ?
ತಿಳಿಯಲಾರದೆ ನಾನು ಚಡಪಡಿಸುತಿರುವೆ
ನಿನ್ನ ಮರೆಯುವ ಬಗೆಯ ನೀನೇ ತಿಳಿಸು ಇನಿಯ
ಅರಿಯದಾಗಿಹೆ ನಾನು ಮರೆವ ಬಗೆಯನ್ನು
ಹೊರೆ ಇಳಿಸಿ ಹೊರಹೋಗು ಹೃದಯದಿಂದ
ಗುರುವಾರ, ಏಪ್ರಿಲ್ 14, 2011
ಅವಳ ಮನದಾಳ-೦೨
ದ್ವಂದ್ವ
ಹುಡುಕುತ್ತಾ ಬಂದ ಸೋಲುಗಳು ನನ್ನ
ಜೀವಂತ ಶವವಾಗಿಸಿದವು
ನಾ ಬದುಕಿದ್ದೇನೆ ಅಷ್ಟೇ...
ನನ್ನೊಳಗೆ ನಾನಿಲ್ಲ...
ನನ್ನೀ ಬಾಳಲ್ಲಿ ನಲ್ಲ ನೀ ಬಂದೆ
ಬತ್ತಿಹೋದ ಹೃದಯದಲಿ ಒಲವನ್ನು ತಂದೆ
ಉಸಿರಾಯ್ತು ಪ್ರೀತಿ
ಈಗ ಅದೇ ಪ್ರೀತಿ ಉಸಿರು ಕಟ್ಟಿಸಿದೆ
ಮಿದುವಾದ ತನು-ಮನ, ವಂಚಿಸುವ ಜನ
ಹಿತನುಡಿಯನಾಡಿ ಓಡಿಹೋದ ಗೆಳೆಯ
ಮಾಗಿದ ಮನದಲ್ಲಿ ಮೊಗ್ಗಾದ ಹರೆಯ
ಇಂದೇಕೋ ಮನಸು ಭಿನ್ನ-ಖಿನ್ನ
ಮಣ್ಣಾಗಿ ಮಲಗುವುದು ಬಾಕಿಯುಳಿದಿರುವಾಗ
ಮತ್ತೆ ಬದುಕುವ ಕನಸ ಕಟ್ಟಿಕೊಟ್ಟ ಇನಿಯ
ನೀ ಮರಳಿ ಬರುವೆಯಾ!!!??
ಪ್ರಶ್ನೆ ಹಾಗೆ ಉಳಿದಿದೆ, ಒಳಗೇನೋ ದ್ವಂದ್ವ
ಮಂಗಳವಾರ, ಏಪ್ರಿಲ್ 12, 2011
ಭಾನುವಾರ, ಏಪ್ರಿಲ್ 10, 2011
ಕ್ರಿ"ಕೆಟ್ಟಾ"ಟ
ಇನ್ನೇನು ವರ್ಲ್ಡ್ ಕಪ್ ಕ್ರಿಕೆಟ್ ಬಿಸಿ ಆರಿತು, ಕ್ರಿಕೆಟ್ ಕುರಿತಾದ ಚರ್ಚೆಗೆ ಒಂದಿಷ್ಟು ವಿರಾಮ ದೊರಕಬಹುದು ಅಂದುಕೊಳ್ಳುವಷ್ಟರಲ್ಲಿ ಐಪಿಎಲ್ ಟಿ-ಟ್ವೆಂಟಿ ಶುರುವಾಯ್ತು. ಆದರೆ ವರ್ಲ್ಡ್ ಕಪ್ ಕ್ರಿಕೆಟ್ ಹಾಗು ಐಪಿಎಲ್ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ವರ್ಲ್ಡ್ ಕಪ್ ಕ್ರಿಕೆಟ್ ಭಾಗವಹಿಸುವ ಪ್ರತಿಯೊಂದು ರಾಷ್ಟ್ರದ ಪ್ರತಿಷ್ಠೆಯ, ಅಭಿಮಾನದ ಸಂಕೇತದಂತೆ ಕಂಡರೆ ಐಪಿಎಲ್ ಒಬ್ಬ ವ್ಯಕ್ತಿಯ, ತಂಡದ ಮಾಲೀಕನ ಪ್ರತಿಷ್ಠೆಯ,ಗರ್ವದ ಸಂಕೇತವಾಗಿ ತೋರುತ್ತಿದೆ.
ಐಪಿಎಲ್ ಕುರಿತು ಹೀಗೆ ಹೇಳಲು ಕಾರಣವಿದೆ. ಐಪಿಎಲ್ ಇಂದು ಒಂದು ಕ್ರೀಡೆಯಾಗಿ ಕಾಣುವ ಬದಲು ವ್ಯಾಪಾರವಾಗಿ ಬದಲಾಗಿದೆ. ಆಟಗಾರರು, ಕೋಚುಗಳು ಅಷ್ಟೇ ಅಲ್ಲದೇ ವಸ್ತ್ರವಿನ್ಯಾಸಕಾರರನ್ನೂ ಬಿಕರಿಗಿಡುವ, ಖರೀದಿ ಮಾಡುವ ಖಯಾಲಿ ಇರುವ ಸಿರಿವಂತರ ಗುಂಪೇ ಇಲ್ಲಿದೆ. Its not a game, Its a Gamble- ಹೌದು, ಈ ಮಾತನ್ನು ಹೇಳಲು ದುಃಖವಾಗುತ್ತದೆ. ಹಿಂದೆ ಈ ಸಿರಿವಂತ ಜನ ಕುದುರೆ ರೇಸುಗಳಲ್ಲಿ, ಕ್ಯಾಸಿನೋಗಳಲ್ಲಿ ತಮ್ಮ ಹಣ ತೊಡಗಿಸಿ ಮೋಜು ಮಾಡುತ್ತಿದ್ದರು, ಈಗ ಐಪಿಎಲ್ ನಲ್ಲಿ ಹಣ ತೊಡಗಿಸಿ ತಮ್ಮ ಚಟ ತೀರಿಸಿಕೊಳ್ಳುತ್ತಿದ್ದಾರೆ.
ವಿಜಯ್ ಮಲ್ಯ ಇರಬಹುದು, ಶಾರುಖ್ ಖಾನ್ ಇರಬಹುದು, ಇಲ್ಲವೇ ಅಂಬಾನಿ ಕುಟುಂಬದವರಿರಬಹುದು ಇವರಿಗೆ ಕ್ರಿಕೆಟ್ ಬಗ್ಗೆ ಇರುವ ಅಭಿಮಾನಕ್ಕಿಂತ ಹೆಚ್ಚಾಗಿ ತಮ್ಮ ಬಳಿ ಇರುವ ಕಪ್ಪುಹಣವನ್ನು ಬೆಳ್ಳಗೆ ಮಾಡಿಕೊಳ್ಳುವ ಸುಲಭೋಪಾಯದಂತೆ ಐಪಿಎಲ್ ಗೋಚರಿಸುತ್ತಿದೆ. ಇವರಲ್ಲಿ ತಮ್ಮ ತಂಡ ಪ್ರತಿನಿಧಿಸುವ ಪ್ರಾಂತ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂಬುದಕ್ಕೆ ನಮ್ಮ (!!??) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಾಜಾ ಉದಾಹರಣೆಯಂತಿದೆ. ಒಬ್ಬ ಅಭಿಮನ್ಯು ಮಿಥುನ್ ಹೊರತುಪಡಿಸಿದರೆ ದುರ್ಬೀನು ಹಾಕಿ ಹುಡುಕಿದರೂ ಮತ್ತೊಬ್ಬ ಕರ್ನಾಟಕದ ಆಟಗಾರನೂ ತಂಡದಲ್ಲಿ ಇಲ್ಲ ಎಂದರೆ ಅದು ಕನ್ನಡಿಗರ ದುರದೃಷ್ಟವೋ ಅಥವಾ ವಿಜಯ್ ಮಲ್ಯ ಎಂಬ ಮಹಾನ್ ಕನ್ನಡಿಗನ ಕನ್ನಡ ಪ್ರೇಮವೋ ತಿಳಿಯದಾಗಿದೆ.
ನನ್ನ ವಾದದಲ್ಲಿ ಕೆಲವರಿಗೆ ಹುಳುಕು ಕಾಣಿಸಬಹುದು. ಕೋಟ್ಯಾಂತರ ರೂಪಾಯಿಗಳನ್ನು ಬಂಡವಾಳವಾಗಿ ಹೂಡಿ ತಮ್ಮೆಲ್ಲ busy schedule ಗಳ ನಡುವೆಯೂ ಕ್ರೀಡಾಂಗಣದಲ್ಲಿ ಕುಳಿತು ತಾವು ಖರೀದಿಸಿದ ಮಾಲು (ಆಟಗಾರರು)ಗಳನ್ನು ಹುರಿದುಂಬಿಸುತ್ತಾ enjoy ಮಾಡುವ ಈ ಹಣದ ಥೈಲಿಗಳು ತಮಗಿಷ್ಟ ಬಂದ ಆಟಗಾರರನ್ನು ಖರೀದಿ ಮಾಡಿದರೆ ಇವನಿಗೇನು ಕಷ್ಟ ಎಂದು ಕೆಲವರು ಹಿಡಿಶಾಪ ಹಾಕಲೂಬಹುದು. ಆದರೆ ನನ್ನ ಸಲಹೆ ಇಷ್ಟೇ....ಐಪಿಎಲ್ ಆಡಳಿತ ಮಂಡಳಿಯವರು ದಯಮಾಡಿ ಈ ತಂಡಗಳಿಗೆ ಪ್ರಾಂತೀಯ ಹೆಸರುಗಳನ್ನು ಇಡುವ ಬದಲು ಕ್ಲಬ್ಬುಗಳನ್ನಾಗಿ ಪರಿವರ್ತಿಸಿದರೆ ನಾನೂ ಸೇರಿದಂತೆ ಯಾರೊಬ್ಬರೂ ಆಕ್ಷೇಪಣೆ ವ್ಯಕ್ತಪಡಿಸುವುದಿಲ್ಲ. ನಿಮ್ಮ ವ್ಯಾಪಾರ- (ಅ) ವ್ಯವಹಾರಗಳೂ ಸಾಂಗೋಪಾಂಗವಾಗಿ ಸಾಗುತ್ತವೆ.
ಕ್ರಿಕೆಟ್ ಇಂದು ಕೇವಲ ಕ್ರೀಡೆಯಾಗಿ ಉಳಿದಿಲ್ಲ. ಅದರಲ್ಲೂ ಭಾರತದಲ್ಲಿ ರಾಷ್ಟ್ರೀಯ ಕ್ರೀಡೆಯಾದ ಹಾಕಿ ಸೇರಿದಂತೆ ಬೇರಾವುದೇ ಆಟಕ್ಕೆ ಸಿಗದ ಮನ್ನಣೆ, ಪುರಸ್ಕಾರಗಳು ಕ್ರಿಕೆಟ್ ಆಟಕ್ಕೆ, ಆಟಗಾರರಿಗೆ ಲಭ್ಯ. ಯಡಿಯೂರಪ್ಪನಂಥಹ ಮಠ-ಮಂದಿರೋದ್ಧಾರಕ ಮುಖ್ಯಮಂತ್ರಿಯೂ ಕ್ರಿಕೆಟಿಗರಿಗೆ ಸೈಟು-ಹಣ ಹಂಚಲು ನಿಂತುಬಿಡುತ್ತಾರೆ. ಪ್ರವಾಹ ಪೀಡಿತ,ಬರ ಪೀಡಿತ ನಿರಾಶ್ರಿತ ಬಡವನಿಗೆ ಸೂರು ನೀಡದ ಈ ಶೂರ ಮಹಲುಗಳಲ್ಲಿ ವಾಸಿಸುವ ಕ್ರಿಕೆಟಿಗರಿಗೆ ತುಂಡುಭೂಮಿ ಹಂಚಲು ತಯಾರಾಗುತ್ತಾನೆಂದರೆ ಕ್ರಿಕೆಟ್ ಎಂಥಹ ಸಮೂಹಸನ್ನಿ ಆಟ ಎಂದನ್ನಿಸುತ್ತದೆ.
ನಮ್ಮ ನಾಡಿನಿಂದ ಇಷ್ಟೆಲ್ಲಾ ಸವಲತ್ತುಗಳು, ಪ್ರೀತಿ, ಅಭಿಮಾನ ಎಲ್ಲವನ್ನೂ ಅನುಭವಿಸುವ ನಮ್ಮ ಕ್ರಿಕೆಟಿಗರು ಮೊನ್ನೆ ನಮ್ಮ ನೆಚ್ಚಿನ ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುಧ್ಧ ಸಮರ ಸಾರಿದಾಗ ಅತ್ತ ಕಡೆ ತಲೆಹಾಕಲಿಲ್ಲ. ಏಕೆಂದರೆ ಅವರು ಐಪಿಎಲ್ ನಲ್ಲಿ ಬ್ಯುಸಿ ಆಗಿದ್ದಾರೆ.
ಇಷ್ಟೆಲ್ಲಾ ಆದರೂ ನಾವು ಐಪಿಎಲ್ ನೋಡುವುದು ಮಾತ್ರ ಬಿಡುವುದಿಲ್ಲ. ಲಲಿತ್ ಮೋದಿ ಎಂಬ ಮಹಾನ್ ಭ್ರಷ್ಟ ಎಲ್ಲಿಂದಲೋ ಕದ್ದು (ಇಂಗ್ಲಿಷ್ ಕೌಂಟಿ) ತಂದು ನೆಟ್ಟ ಕ್ರಿ"ಕೆಟ್ಟಾ"ಟ ಜನರ ಮೋಜಿಗೆ, ಸಿರಿವಂತರ ಜೂಜಿಗೆ, ಕಪ್ಪು-ಬಿಳುಪಿನ ಕಣ್ಣಾಮುಚ್ಚಾಲೆಗೆ ಹೀಗೆ ಹತ್ತು-ಹಲವು ಬಗೆಯಲ್ಲಿ ಫಲ ಕೊಡುತ್ತಿದೆ. ಇಲ್ಲಿ ದೋಚಿದ ಮೋದಿ ಅಲ್ಲಿ ಮತ್ತೊಂದು ದೇಶದಲ್ಲಿ ಐಪಿಎಲ್ ನಂತೆಯೇ ಟೂರ್ನಿಯೊಂದನ್ನು ಆಯೋಜಿಸಿ ಹಣ ದೋಚುವ ಯೋಚನೆಯಲ್ಲಿ ಮಗ್ನನಾಗಿದ್ದಾನೆ. ಅದರಲ್ಲಿ ಸಫಲನೂ ಆಗುತ್ತಾನೆ. 'ಜನ ಮರುಳೋ ಜಾತ್ರೆ ಮರುಳೋ' ಎಂಬ ಗಾದೆ ಮಾತಿಗೆ ಹೊಸ ನಿದರ್ಶನ ನೀಡುತ್ತಾನೆ.
ಅಯ್ಯೋ ಬರೀತಾ ಬರೀತಾ ಟೈಮು ಹೋದದ್ದೇ ತಿಳೀಲಿಲ್ಲ , ಬರ್ತೀನಿ ಟೈಮಾಯ್ತು ಟಿವಿಯಲ್ಲಿ ಐಪಿಎಲ್ ಮ್ಯಾಚಿದೆ. ಇವತ್ತು ತೆಂಡೂಲ್ಕರ್ ಸೆಹ್ವಾಗ್ ಗೆ ಪಾಠ ಕಲಿಸ್ತಾನೆ, ಯುವರಾಜ್ ಗೆದ್ದರೆ ಪ್ರೀತಿ ಜಿಂಟಾ ಮುತ್ತು ಕೊಡೋಲ್ಲ ಶಾಪ ಹಾಕ್ತಾಳೆ ಯಾಕಂದ್ರೆ ಅವನು ಈಗ ಬೇರೆ ಟೀಮು- ಇದು ಐಪಿಎಲ್ಲಿನ ಲೇಟೆಸ್ಟ್ ಥೀಮು.
ಸೋಮವಾರ, ಮಾರ್ಚ್ 14, 2011
ಬುಧವಾರ, ಮಾರ್ಚ್ 9, 2011
ವಿಶ್ವ ಕನ್ನಡ ಸಮ್ಮೇಳನ- ಕನ್ನಡಕ್ಕೆ ಅವಹೇಳನ
ನೋಡಲು ಮರೆಯದಿರಿ....ಮಾರ್ಚ್ ೧೧ ರಿಂದ ಅಮೋಘ ಪ್ರಾರಂಭ.......ವಿಶ್ವ ಕನ್ನಡ ಸಮ್ಮೇಳನ.......ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ಸೈಟನ್ನು ಸಂಪರ್ಕಿಸಿ......ಹೆದರಬೇಕಾಗಿಲ್ಲ....ಎಲ್ಲಾ ಮಾಹಿತಿಗಳೂ ಆಂಗ್ಲ ಭಾಷೆಯಲ್ಲಿ ಲಭ್ಯ...ಜೈ ಕರ್ನಾಟಕ....ಜೈ ಭುವನೇಶ್ವರಿ.......ನಮ್ಮ ಮಾನ್ಯ ಮುಖ್ಯಮಂತ್ರಿಗಳು ಈ ಕುರಿತು ಗಮನ ಹರಿಸಿದರೆ ತಾಯಿ ಭುವನೇಶ್ವರಿ ಧನ್ಯಳಾಗುತ್ತಾಳೆ.
ಶನಿವಾರ, ಫೆಬ್ರವರಿ 26, 2011
ನನ್ನ ಹೆಡ್ಡಿಂಗು
ಇಂದಿನ "ಕನ್ನಡಪ್ರಭ" ಪತ್ರಿಕೆಯ ಎರಡನೇ ಪುಟದಲ್ಲಿ ರೈಲ್ವೆ ಬಜೆಟ್ ಕುರಿತಾಗಿ "ಓದುಗರ ಶೀರ್ಷಿಕೆ" ವಿಭಾಗದಲ್ಲಿ ನಾನು ಕೊಟ್ಟ ಹೆಡ್ ಲೈನ್. ಧನ್ಯವಾದ ಕನ್ನಡಪ್ರಭ. ವಿಶ್ವೇಶ್ವರ ಭಟ್ಟರು "ಕನ್ನಡ ಪ್ರಭ" ಸಾರಥ್ಯ ವಹಿಸಿದ ನಂತರ ಹೀಗೊಂದು ಹೊಸ ಪ್ರಯೋಗ ಪ್ರಾರಂಭಿಸಿದ್ದಾರೆ. ಸಾಮಾನ್ಯವಾಗಿ ನಾವು ಪತ್ರಿಕೆಗಳನ್ನು ಓದುವಾಗ ಅರೆ ಈ ಲೇಖನಕ್ಕೆ ಶೀರ್ಷಿಕೆ ಹೀಗಿದ್ದರೆ ಚೆನ್ನಿತ್ತು ಹಾಗಿದ್ದರೆ ಚೆನ್ನಿತ್ತು ಎಂದು ಅನ್ನಿಸುವುದು ಸಹಜ. ಹೀಗೆ ಓದುಗರ ಮನದಲ್ಲಿ ಮೂಡುವ ಶೀರ್ಷಿಕೆಗಳನ್ನು ಕ್ರೋಡೀಕರಿಸಿ ಅವುಗಳಲ್ಲಿ ಉತ್ತಮ ಶೀರ್ಷಿಕೆ ಆರಿಸಿ ಪತ್ರಿಕೆಯಲ್ಲಿ ಪ್ರಕಟಿಸುವ ಭಟ್ಟರ ಈ ಪ್ರಯತ್ನ ಪ್ರಶಂಸಾರ್ಹ.
ಗುರುವಾರ, ಫೆಬ್ರವರಿ 17, 2011
ಸೋಮವಾರ, ಫೆಬ್ರವರಿ 14, 2011
ಪ್ರೇಮಾ ಗೀಮಾ ಜಾನೆದೋ
ಸಿಕ್ಕರೆ ಸ್ವರ್ಗ
ತಿಳಿದಿಲ್ಲ ನನಗೆ ಈ ದಿನದ ವಿಶೇಷ
ಪ್ರೇಮಿಗಳ ದಿನವಂತೆ ಇಂದು
ನನಗೆ ಲವ್ವಿನ ಬಗ್ಗೆ ಲವಲೇಶವೂ ಗೊತ್ತಿಲ್ಲ
ಆದರೂ ಹಾಕುತ್ತೇನೆ ಹಲವು ವೇಷ
ಇಂದಲ್ಲ ನಾಳೆ ನನ್ನವಳಾಗಬಹುದು
...ಅವಳು-ಬಿಲ್ ಗೇಟ್ಸ್ ನ ಮಗಳು
ಈ ದಿನ ಸುದಿನ
ಇಂದು " ಪ್ರೇಮಿಗಳ ದಿನ"
ಪ್ರಣಯ ಪಕ್ಷಿಗಳ ಪಾಲಿಗೆ
ಮರೆಯಲಾಗದ ದಿನ
ಹೃದಯಗಳ ಮಧುರ ಮಿಲನ
ಮುಂದುವರಿಯಲಿ ಪ್ರತಿದಿನ
ಹುಡುಕಾಟ
ಪ್ರೀತಿ ಎಂಬುದೊಂದು ಬೆರಗುಅನುಭವಿಸಿದಷ್ಟೂ ಹೆಚ್ಚುವುದಿದರ ಬೆಡಗು
ಹುಡುಗಾಟಕ್ಕೆ ಆರಂಭವಾಗಿ
ಹುಡುಕಾಟಕ್ಕೆ ತೊಡಗಿಸುವ ಈ ಪ್ರೀತಿ
ಬಿಡಿಸಲಾರದ ಒಗಟಿನ ರೀತಿ
ಗುರುವಾರ, ಫೆಬ್ರವರಿ 3, 2011
ಆಳರಸನ ಅಳುಕು
ದೊರೆಯೇ ನಿನಗೂ ಬಂದಿತೆ ದರವೇಶಿ ಸ್ಥಿತಿ
ಕಾಡುತಿಹುದೇ ತಲೆ ಉರುಳುವ ಭೀತಿ
ತಂತ್ರಗಳ ಹೆಣೆದು ವಿರೋಧಿಗಳನ್ನು ಹಣಿಯುವ
ತಾಂತ್ರಿಕನು ನೀನು
ಯಂತ್ರ-ತಂತ್ರ ಮಾಟ-ಮಂತ್ರಗಳ ಭಯವೇಕೆ ಇನ್ನು
ಆಳುವ ನಿಮಗೇ ಇರುವಾಗ ಇಷ್ಟೊಂದು ಅಳುಕು
ಇನ್ನೆಲ್ಲಿ ಹಸನಾಗುವುದು ಪ್ರಜೆಗಳಾ ಬದುಕು
ಇನ್ನೆಷ್ಟು ದಿನ ತಾನೇ ಸಹಿಸಿಯಾರು ಜನ
ದಂಗೆಯೇಳುವ ಮುನ್ನ ತಿದ್ದಿಕೊಂಡರೆ ಚೆನ್ನ
ಕಾಡುತಿಹುದೇ ತಲೆ ಉರುಳುವ ಭೀತಿ
ಅಲ್ಲಿ ದೂರದಲಿ ಪಿರಮಿಡ್ಡಿನೂರಿನಲಿ
ಭೋರ್ಗರೆದು ಭುಗಿಲೆದ್ದಿದೆ ಜನಸಾಗರ
ಇಲ್ಲಿ ನಮ್ಮೂರಿನಲ್ಲಿ ಆಳುವರಸನಿಗೆ ಏನೋ ಅಳುಕು
ದಿನಕೊಂದು ನಾಟಕ- ಹುಡುಕಿದರೆ ಬರೀ ಹುಳುಕು
ಭೋರ್ಗರೆದು ಭುಗಿಲೆದ್ದಿದೆ ಜನಸಾಗರ
ಇಲ್ಲಿ ನಮ್ಮೂರಿನಲ್ಲಿ ಆಳುವರಸನಿಗೆ ಏನೋ ಅಳುಕು
ದಿನಕೊಂದು ನಾಟಕ- ಹುಡುಕಿದರೆ ಬರೀ ಹುಳುಕು
ತಂತ್ರಗಳ ಹೆಣೆದು ವಿರೋಧಿಗಳನ್ನು ಹಣಿಯುವ
ತಾಂತ್ರಿಕನು ನೀನು
ಯಂತ್ರ-ತಂತ್ರ ಮಾಟ-ಮಂತ್ರಗಳ ಭಯವೇಕೆ ಇನ್ನು
ಇತ್ತ ದೊರೆಸಾನಿ (!?) ಕೊರಗುವಳು
ಎಲ್ಲಿಂದಲೋ ಬಂತೆನಗೆ ಬೆದರಿಕೆಯ ಕರೆ
ಅಶರೀರವಾಣಿ ಮಾಡಿತ್ತು ದೂರವಾಣಿ
ಎಷ್ಟು ಖರೆಯೋ ಎಷ್ಟು ಸರಿಯೋ ಬಲ್ಲವನೊಬ್ಬನೇ ದೊರೆ
ಎಲ್ಲಿಂದಲೋ ಬಂತೆನಗೆ ಬೆದರಿಕೆಯ ಕರೆ
ಅಶರೀರವಾಣಿ ಮಾಡಿತ್ತು ದೂರವಾಣಿ
ಎಷ್ಟು ಖರೆಯೋ ಎಷ್ಟು ಸರಿಯೋ ಬಲ್ಲವನೊಬ್ಬನೇ ದೊರೆ
ಆಳುವ ನಿಮಗೇ ಇರುವಾಗ ಇಷ್ಟೊಂದು ಅಳುಕು
ಇನ್ನೆಲ್ಲಿ ಹಸನಾಗುವುದು ಪ್ರಜೆಗಳಾ ಬದುಕು
ಇನ್ನೆಷ್ಟು ದಿನ ತಾನೇ ಸಹಿಸಿಯಾರು ಜನ
ದಂಗೆಯೇಳುವ ಮುನ್ನ ತಿದ್ದಿಕೊಂಡರೆ ಚೆನ್ನ
ಶುಕ್ರವಾರ, ಡಿಸೆಂಬರ್ 31, 2010
ಹಗುರಾಯ್ತು ಮನ
ಗುರುವಾರ, ಡಿಸೆಂಬರ್ 30, 2010
ನಮ್ಮ ಸಿಂಹ
ಮಂಗಳವಾರ, ನವೆಂಬರ್ 16, 2010
ಕಂತಿನ ಕುರಿತೊಂದು ಅಂತೆ-ಕಂತೆ
ವಿಮೆ ಮಾಡಿಸುವಾಗ ನೀವು ಗಮನಿಸಿರಬಹುದಾದ ಒಂದು ಕಹಿ ಸತ್ಯ ಏನೆಂದರೆ ಮನುಷ್ಯ ತನ್ನ "ಬಾಡಿ"ಗೆ (ದೇಹಕ್ಕೆ) ವಿಮೆ ಮಾಡಿಸುವಾಗ ಆತನ ವಯಸ್ಸು ಹೆಚ್ಚಿದಂತೆ ಕಂತಿನ (ಪ್ರೀಮಿಯಂ) ಹಣ ಹೆಚ್ಚುತ್ತಾ ಹೋಗುತ್ತದೆ. ಆದರೆ ತನ್ನ ಗಾಡಿಗೆ (ವಾಹನಕ್ಕೆ) ವಿಮೆ ಮಾಡಿಸುವಾಗ ಅದರ ವಯಸ್ಸು ಹೆಚ್ಚಿದಂತೆ ಕಂತಿನ ಹಣ ಕಡಿಮೆಯಾಗುತ್ತದೆ!!!!
ಮಂಗಳವಾರ, ಅಕ್ಟೋಬರ್ 19, 2010
ಸಾವಿಗೊಂದು ಸಲಾಮು
ಸಾವಿಲ್ಲದ ಮನೆಯ ಸಾಸಿವೆಯ ತಾ ಎಂದ ಬುದ್ಧ
ಮನೆಗಳು ಸಿಕ್ಕವು, ಸಾಸಿವೆಯೂ ಸಿಕ್ಕಿತು
ಸಿಗಲೇ ಇಲ್ಲ ಸಾವಿಲ್ಲದ ಮನೆ
ಹುಡುಕಿ ಅಲೆದಳು ಆ ತಾಯಿ ಬಳಲಿ ಬಸವಳಿವವರೆಗೂ
ಸಾವೆಂಬ ಮಾಯಾವಿ ಕೈಚಾಚದ ಊರು-ಕೇರಿ
ಸಿಗಲೇ ಇಲ್ಲ, ಸಾವೇ ನೀ ಸರ್ವಾಂತರ್ಯಾಮಿ
ಬಡವ ಬಲ್ಲಿದ ಭೇದ ತೋರದ ನಿಜವಾದ
ಸಮಾಜವಾದಿ ನೀನು
ಧನವಂತ-ಧನಹೀನ ಯಾರಾದರೇನು ಬಿಡಲಾರೆ ನೀನು
ಜಾತಿ-ಉಪಜಾತಿಗಳ ಜಾಲದಲ್ಲಿ ನೀನಿಲ್ಲ
ಯಾವ ಧರ್ಮದ ಜನರೋ ನಿನಗದರ ಹಂಗಿಲ್ಲ
ದಾಕ್ಷಿಣ್ಯಗಳಿಂದ ದೂರ ನೀ ಜಾತ್ಯಾತೀತ-ಧರ್ಮಾತೀತ
ನನಗೆ ಅನಿಸುವ ಹಾಗೆ ಸಾವೇ ನೀ ಸಾವಲ್ಲ
ನೀ ಮತ್ತೊಂದರ ಹುಟ್ಟು, ಬರುವವರೆಗೂ
ನೀ ಬಿಟ್ಟುಕೊಡಲಾರೆ ನಿನ್ನ ಬರುವಿಕೆಯ ಗುಟ್ಟು
ಸಾವೇ ನಿನಗಿದೋ ನನ್ನ ಸಲಾಮು
ನಿನಗಿಲ್ಲ ಯಾರದೇ ಅಂಕೆ- ಲಗಾಮು
ಎಲ್ಲೆಡೆ ಕಾಣುತಿದೆ ನಿನ್ನದೇ ಹಸ್ತ- ಕೊಲ್ಲುವ ಕಲೆ ನಿನಗೆ ಕರಗತ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)