ಸೋಮವಾರ, ಮೇ 23, 2011

ಬಾನಿನತ್ತ.....ಹಾರುತ್ತ...

ಅಷ್ಟಗಲ ಆಗಸದಿ
ಎಷ್ಟೊಂದು ಹಕ್ಕಿಗಳು
ಆಸೆಯಾಗುತಿದೆ 'ಹೇಗಾದರೂ ಮಾಡಿ
ಹೆಕ್ಕಬೇಕಿದೆ ಹಾದಿ'
ಹಾರಿ ಸೇರಲೇಬೇಕು ಮುಗಿಲ ಹಾದಿ   




ಬಾನ ಎತ್ತರಕೇರಿ
ಮೋಡದೊಳಗಡೆ ತೂರಿ
ಹಾರುವಾಸೆಯು ಎನಗೆ ಕಲಿಸಿ ಹೇಗೆ?
ಗೂಡನೊಂದನು ಕಟ್ಟಿ, ಕೊಕ್ಕಲ್ಲಿ ಹಿಡಿದು ರೊಟ್ಟಿ
ಕಂದಗೆ ತಂದುಣಿಸುವ ಕಲೆಯ ತಿಳಿಸಿ ಎನಗೆ






ನಿಮ್ಮಂತೆಯೇ ನಾನು
ಪಡೆಯಬೇಕಿದೆ ರೆಕ್ಕೆ
ಹಾರಬೇಕಿದೆ ದೂರ ದೂರ......
ಸಪ್ತಸಾಗರ ದಾಟಿ, ಎಲ್ಲ ಎಲ್ಲೆಯ ಮೀಟಿ
ಕಾಣಬೇಕಿದೆ ಹೊಸತು ಬದುಕ ಸಾ

ಸೋಮವಾರ, ಮೇ 16, 2011

ಬಲಾಬಲ

ಕರ್ನಾಟಕದ ಮಹಾಜನತೆಯ ದೌರ್ಭಾಗ್ಯಕ್ಕೆ ಅಂತ್ಯವೇ ಇಲ್ಲವೇನೋ ಎನ್ನಿಸುತ್ತಿದೆ. ಕರ್ನಾಟಕದ ರಾಜಕೀಯ ವಿದ್ಯಮಾನ ದಿನಕ್ಕೊಂದು, ಕ್ಷಣಕ್ಕೊಂದು ಬಣ್ಣ ಬದಲಾಯಿಸುತ್ತಿದೆ. ರಾಜಕೀಯ ರಂಗದ ಅನಿಶ್ಚಿತತೆ, ಅರಾಜಕತೆ ಮತ್ತೊಮ್ಮೆ ತನ್ನ ವಿರಾಟ್ ರೂಪದ ಪ್ರದರ್ಶನ ನೀಡಿದೆ. ಹದಿನಾರು ಶಾಸಕರ ಅನರ್ಹತೆಯ ಆದೇಶವನ್ನು ಸುಪ್ರೀಂ ಕೋರ್ಟ್ ಅನೂರ್ಜಿತಗೊಳಿಸಿದ ಬೆನ್ನಲ್ಲೇ ಆಡಳಿತ ಪಕ್ಷ, ವಿರೋಧ ಪಕ್ಷಗಳು ತಮ್ಮ ಬಲಾಬಲ ಪ್ರದರ್ಶನಕ್ಕೆ ಸಜ್ಜಾಗಿವೆ.




ಅತ್ತ ಬಿಜೆಪಿ ಹೈಕಮಾಂಡಿನ ಹಿರಿತಲೆಗಳು ಹನ್ನೊಂದು ಮಂದಿ ಬಂಡಾಯ ಶಾಸಕರಲ್ಲಿ ಹತ್ತು ಮಂದಿಯನ್ನು ಕರೆದು ಓಲೈಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವ ಯಡಿಯೂರಪ್ಪನವರ ನಾಯಕತ್ವವನ್ನು ಪ್ರಶ್ನಿಸಿ ಬಂಡೆದಿದ್ದರೋ ಅದೇ ಯಡಿಯೂರಪ್ಪನ ಮುಂದೆ ಮಂಡಿಯೂರಿ ಶರಣಾಗಿ ನೀವೇ ನಮ್ಮ ನಾಯಕ ಎನ್ನುತ್ತಾ ತಲೆಬಾಗಿ ನಿಂತ ಇವರ ಭಂಗಿ ಅಸಹ್ಯವನ್ನುಂಟು ಮಾಡುತ್ತದೆ. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುವಲ್ಲ-ಶಾಶ್ವತ ಮಿತ್ರರಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ.



ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಖುರ್ಚಿ ಉಳಿಸಿಕೊಳ್ಳುವ ಸಲುವಾಗಿ ಹೊರಾದುವುದನ್ನೇ ಆಡಳಿತ ಎಂದು ತಿಳಿದಂತಿದೆ. ಅಧಿಕಾರಕ್ಕೆ ಬಂದ ದಿನದಿಂದ ಇಂದಿನವರೆಗೂ ತಮ್ಮದೇ ಪಕ್ಷದ ನಾಯಕರಿಂದ, ಹೊರಗಿನವರಿಂದ ಪ್ರಬಲ ಪ್ರತಿರೋಧ ಎದುರಿಸುತ್ತಿದ್ದರೂ ಮುಖ್ಯಮಂತ್ರಿ ಪಟ್ಟ ಉಳಿಸಿಕೊಳ್ಳುವ ಸಲುವಾಗಿ ದಿನಕ್ಕೊಂದು ಪಟ್ಟು ಹಾಕುತ್ತಿದ್ದಾರೆ.
                            ಯಡಿಯೂರಪ್ಪನವರು ತಮ್ಮ ಕುಯುಕ್ತಿಯಿಂದ ಬಿಜೆಪಿ ಹೈಕಮಾಂಡನ್ನೇ ಹೈಜಾಕ್ ಮಾಡಿದ್ದಾರೆ. ಆಪರೇಶನ್ ಕಮಲ ಆರಂಭಿಸಿ ಹೊಸ ಬಗೆಯ ಕುದುರೆ ವ್ಯಾಪಾರವನ್ನು ಪರಿಚಯಿಸಿದ ಕೀರ್ತಿ ಯಡಿಯೂರಪ್ಪನವರದು.
ಅತ್ತ ಯಡಿಯೂರಪ್ಪನವರು ಅನರ್ಹಗೊಂಡಿದ್ದ ಹತ್ತು ಮಂದಿ ಶಾಸಕರನ್ನು ತಮ್ಮ ತೆಕ್ಕೆಗೆ ಎಳೆದುಕೊಂಡು ಮುದ್ದಾಡುತ್ತಿರುವಾಗಲೇ ಇತ್ತ ರಾಜ್ಯಪಾಲ ಹಂಸರಾಜ್ ಭಾರದ್ವಾಜರು ತಮ್ಮ ಚಾಕಚಕ್ಯತೆ ಪ್ರದರ್ಶಿಸಿದ್ದಾರೆ. ಶಾಸಕರ ಅನರ್ಹತೆ ನಿರ್ಧಾರ ತಪ್ಪು ಎಂದು ಸುಪ್ರೀಂ ಕೋರ್ಟ್ ಘೋಷಿಸಿದ ಮರುಕ್ಷಣದಿಂದಲೇ ರಾಜ್ಯಪಾಲರು ಯಡ್ಡಿಯನ್ನು ಕೆಡವಲು ಖೆಡ್ಡಾ ತೋಡಲಾರಂಭಿಸಿದರು. ಅತ್ತಲಿಂದ ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿದ್ದೇ ತಡ ಇತ್ತಲಿಂದ ರಾಜ್ಯಪಾಲರು ರಾಜ್ಯ ವಿಧಾನಸಭೆಯನ್ನು ಅಮಾನತ್ತಿನಲ್ಲಿಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಕಳಿಸಿದರು.



ರಾಜ್ಯಪಾಲರ ಈ ವರ್ತನೆಯನ್ನು ಖಂಡಿಸಿ ಬಾಯಿಬಡುಕ ಈಶ್ವರಪ್ಪ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರೂ ಬೊಬ್ಬೆ ಹಾಕುತ್ತಿದ್ದಾರೆ. ರಾಜ್ಯಪಾಲರ ಈ ಕ್ರಮ ಜನಾದೇಶಕ್ಕೆ ವಿರುದ್ಧವಾಗಿದೆ ಎಂದು ಕೂಗಾಡುತ್ತಿರುವ ಈ ನಾಯಕರು ಅಂದು ಹದಿನಾರು ಮಂದಿ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಆದೇಶವನ್ನು ಮೇಜುಕುಟ್ಟಿ ಸ್ವಾಗತಿಸಿದ್ದರು. ಈಗ ತಮ್ಮ ತಂತ್ರ ತಮಗೇ ಬೂಮರಾಂಗಿನಂತೆ ವಾಪಸ್ ಬಂದಿದೆ.



ಇವರ ರಾಜಕೀಯ ತಂತ್ರ- ಪ್ರತಿತಂತ್ರಗಳ ನಡುವೆ ಮತದಾರ ಹೈರಾಣಾಗಿದ್ದಾನೆ. ಆದರೆ ಬುದ್ಧಿವಂತನಾಗಿಲ್ಲ. ಮತ್ತೆ ಇದೇ ಜನ ಅಧಿಕಾರದ ಗದ್ದುಗೆ ಏರುತ್ತಾರೆ.....ವಿಕೃತ ನಗೆ ಬೀರುತ್ತಾರೆ. ಬನ್ನಿ ಗೆಳೆಯರೇ,

ರಾಷ್ಟ್ರಪತಿ ಭವನದಲ್ಲಿ ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರೂ, ಶಿಸ್ತಿನ (!?) ಸಿಪಾಯಿಗಳೂ ಆದ ಬಿಜೆಪಿ ಶಾಸಕರು ಪೆರೇಡ್ ಮಾಡಲಿದ್ದಾರೆ....ನೋಡಿ ಆನಂದಿಸೋಣ



ಕೊನೆಗೂ ಹತ್ತು ಮಂದಿ

ಭಿನ್ನ ಶಾಸಕರಿಗೆ ಬುದ್ಧಿ ಬಂದಿದೆಯಂತೆ

ಪ್ರಶ್ನೆಯೊಂದು ಹಾಗೇ ಉಳಿದಿದೆ

ನಮ್ಮ ಜನರಿಗೆ ಬುದ್ಧಿ ಬಂದೀತೇ !!??

ಶನಿವಾರ, ಮೇ 14, 2011

ಅ"ರಾಜಕೀಯ"

                                              ಕರ್ನಾಟಕ ರಾಜಕೀಯದಲ್ಲಿ ಮತ್ತೊಮ್ಮೆ ಅರಾಜಕತೆ, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಖುರ್ಚಿ ಮತ್ತೊಮ್ಮೆ ಅಲುಗಾಡಿದಂತೆ ಕಾಣುತ್ತಿದೆ. ಆದರೆ ಯಡಿಯೂರಪ್ಪ ಬಗ್ಗುವ ಆಸಾಮಿಯಲ್ಲ  . ಈಗಾಗಲೇ  ಅವರು ತಮ್ಮ ಸೀಟು ಉಳಿಸಿಕೊಳ್ಳಲು ಬೇಕಾದ ತಂತ್ರಗಳನ್ನು ಹೆಣೆಯುತ್ತಿದ್ದಾರೆ.
           
                                            ಬಿಜೆಪಿಯ ೧೧ ಶಾಸಕರು ಹಾಗೂ ೫ ಮಂದಿ ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಕ್ರಮವನ್ನು ಅನೂರ್ಜಿತಗೊಳಿಸಿದ ಸುಪ್ರೀಂ ಕೋರ್ಟ್ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಆಶಯ ಮೂಡಿಸಿದೆ. ಜೊತೆಜೊತೆಗೇ ಮುಂದೇನು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.

                                          ಯಡಿಯೂರಪ್ಪನವರು ತಮ್ಮ ಪಕ್ಷದ ೧೧ ಶಾಸಕರಿಗೆ ಗಾಳ ಹಾಕಲು ತಯಾರಿ ನಡೆಸಿದ್ದು ಹಣದ, ಅಧಿಕಾರದ ಆಮಿಷವೊಡ್ಡಿ ಅವರನ್ನು ತಮ್ಮ ಕಡೆಗೆ ಸೆಳೆದು"ಕೊಳ್ಳು"ವ ಪ್ರಯತ್ನದಲ್ಲಿದ್ದಾರೆ. ಅವರಿಗೆ ಇದೇನೂ ಕಷ್ಟದ ಮಾತಲ್ಲ. ಈಗಿರುವ ಸ್ಥಿತಿಗಿಂತಲೂ ಸಂಕಷ್ಟದ ಸಮಯಗಳಲ್ಲಿ ಬಚಾವಾಗಿ ಬಂದ ಅನುಭವ ಅವರಿಗಿದೆ. ಮುಖ್ಯಮಂತ್ರಿಗಳು ತಮಗಿರುವ ಹಣಬಲ, ಜನಬಲವನ್ನು
 ಉಪಚುನಾವಣೆಗಳಲ್ಲಿ, ಕಮಲದ ಆಪರೇಷನ್ನುಗಳಲ್ಲಿ ತೋರ್ಪಡಿಸಿದ್ದಾರೆ.


ಕಾವಿಯ, ಕಾಸಿನ ಬಲವಿದ್ದರೆ ಸಾಕು



ಹೈಕಮಾಂಡನ್ನೇ ಗೆಲ್ಲುವೆನು


ನೋಟಿನ ಮೂಟೆಯ ಚೆಲ್ಲಿಯಾದರೂ


ಖುರ್ಚಿಗೆ ಅಂಟಿ ಕೂರುವೆನು
 
ಎಂದು ಹೇಳುತ್ತಾ ರಾಜ್ಯವನ್ನು ಲೂಟಿ ಮಾಡುತ್ತಿರುವ ಭ್ರಷ್ಟ ಯಡ್ಡಿಯ ವರಸೆಗೆ ಬ್ರೇಕ್ ಹಾಕಲು ಸಾಧ್ಯವಾಗದೆ ಕೈಚೆಲ್ಲಿ ಕುಳಿತಿರುವ ಬಿಜೆಪಿ ಹೈಕಮಾಂಡು ಕೇಂದ್ರದ ಭ್ರಷ್ಟ ಆಡಳಿತದ ವಿರುದ್ಧ ಸಮರ ಸಾರಿದೆ. ಇದನ್ನೇನು ಹುಂಬತನ ಎನ್ನಬೇಕೋ, ವ್ಯವಸ್ಥೆಯ ದೋಷ ಎನ್ನಬೇಕೋ ತಿಳಿಯುತ್ತಿಲ್ಲ . 
 
ಇನ್ನು ಮತ್ತೊಮ್ಮೆ ಕುಮಾರಸ್ವಾಮಿಯವರಿಗೆ ಕೈತುಂಬಾ ಕೆಲಸ. ತಮ್ಮೊಡನೆ ಬರಲು ಬಯಸುವ ಶಾಸಕರನ್ನು ಗೋವಾ ಕಡಲತಡಿಯಲ್ಲಿ ನೆನೆಹಾಕಬೇಕು. ಅವರು ಕೇಳಿದಷ್ಟು ಸವಲತ್ತುಗಳನ್ನು ಪೀಕಬೇಕು. ರೆಸಾರ್ಟು ಮಾಲೀಕರುಗಳನ್ನು ಉದ್ಧಾರ ಮಾಡಬೇಕು. 
ಮೀಡಿಯಾ ಜನರಿಗಂತು ಮತ್ತೊಂದು ಹಬ್ಬ ಬಂತು. ಕ್ಷಣ ಕ್ಷಣಕ್ಕೂ ಬ್ರೇಕಿಂಗ್ ನ್ಯೂಸುಗಳು, ಚರ್ಚೆಗಳು ಮಾಡುತ್ತಾ ಟಿ ಆರ್ ಪಿ ಕಸರತ್ತಿನ ಪ್ರದರ್ಶನ. 
 



ಇವೆಲ್ಲದರ ನಡುವೆ ಹೈರಾಣಾಗುವ ಶ್ರೀಸಾಮಾನ್ಯ ತನ್ನ ನಸೀಬನ್ನು ದೂಷಿಸುತ್ತಾ ತಲೆ ಮೇಲೆ ಕೈ (ಕಾಂಗ್ರೆಸ್ಸ್ ಕೈ ಅಲ್ಲ)ಹೊತ್ತು ಕೂತು ಭ್ರಷ್ಟ ರಾಜಕಾರಣಿಗಳ ಸೋಗಲಾಡಿತನವನ್ನು ಶಪಿಸುತ್ತಾ ಕಾಯುತ್ತಾನೆ......ಬರಲಿರುವ ಚುನಾವಣೆಗಾಗಿ.....ಓಟಿಗಾಗಿ....ಗರಿಗರಿ ನೋಟಿಗಾಗಿ.......     

ಭಾನುವಾರ, ಮೇ 8, 2011

ಹಾಯ್ಕು - ಅಮ್ಮನಿಗಾಗಿ

ಮೊಲೆ ಉಣಿಸಿ

ಪ್ರೀತಿ ಮಳೆಗರೆದ

ಜೀವಕ್ಕೆ ಋಣಿ

____________________________

ಅಮ್ಮ ಎನ್ನುವ

ಎರಡಕ್ಷರದಲ್ಲಿ

ಅದೆಂಥಾ ಶಕ್ತಿ !!!


_______________________

ನಿನ್ನ ಮೊಗದ

ನಿಷ್ಕಲ್ಮಶ ನಗೆಯು

ಮಾಸದಿರಲಿ







_________________________

ತಾಯಿ ಕರುಣೆ,

ಪ್ರೀತಿ ಮುಂದೆ ದೇವರೂ

ಶರಣಾದನು

______________________________


ನಿಷ್ಕಲ್ಮಷತೆ,

ಮುಗ್ಧತೆ ನನ್ನಮ್ಮನ

ಒಡವೆಗಳು


___________________________








ಶುಕ್ರವಾರ, ಏಪ್ರಿಲ್ 29, 2011

"ಡೋಂಟ್ ಕೇರ್" ಕಾಲದಲ್ಲಿ "ವೀ ಕೇರ್"ಎಂಬ ವಿಸ್ಮಯ






ವತ್ತಿನ ದಿನಮಾನದಲ್ಲಿ ಸಾಮಾನ್ಯವಾಗಿ ಜನರು ತಮ್ಮದೇ ಆದ ಸಮಸ್ಯೆಗಳಲ್ಲಿ ನೊಂದು-ಬೆಂದು ಇತರರೆಡೆಗೆ ದಿವ್ಯ ಔದಾಸೀನ್ಯವನ್ನು ತಳೆಯುವುದು ಎಲ್ಲರೂ ಬಲ್ಲ ವಿಷಯವೇ ಸರಿ. ನಾವು ಕಛೇರಿಗೆ ಅಥವಾ ಬೇರೆಲ್ಲಾದರೂ ಹೋಗುವಾಗ ಯಾರಾದರೂ ಅಪರಿಚಿತರು ತೊಂದರೆಯಲ್ಲಿ ಸಿಲುಕಿದ್ದಾಗ ಅವರಿಗೆ ಸಹಾಯಹಸ್ತ ಚಾಚುವ ಬದಲು "ನಮಗೇಕೆ ಬೇಕು ಅವರಿವರ ಉಸಾಬರಿ" ಎಂದು ಕಂಡೂ ಕಾಣದ ಹಾಗೆ ಹೊರಡುತ್ತೇವೆ. ತೊಂದರೆಯಲ್ಲಿದ್ದಂತೆ ನಟಿಸಿ ಜನರನ್ನು ದೋಚುವ ಪುಂಡರ, ದುಷ್ಕರ್ಮಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವುದೂ ಈ ಬೆಳವಣಿಗೆಗೆ ಕಾರಣೀಭೂತವಾಗಿದೆ ಎಂಬುದು ಅತಿಶಯೋಕ್ತಿಯೇನಲ್ಲ.

ಆದರೆ ಇಂದಿಗೂ ಮಾನವೀಯ ಮುಖವನ್ನು ಹೊಂದಿ ಸಮಾಜಸೇವೆಯನ್ನೇ ಧ್ಯೇಯವನ್ನಾಗಿಸಿಕೊಂಡ ಹಲವಾರು N G O ಗಳನ್ನು ನಾವು ಕಾಣಬಹುದು.
ಅಂತಹದ್ದೇ ಒಂದು ತಾಜಾ ಉದಾಹರಣೆ "ವೀ ಕೇರ್ ಚಾರಿಟೀಸ್ (ರಿ)".
ಮೈಸೂರು ಜಿಲ್ಲೆಯ ತಿ.ನರಸೀಪುರ ರಸ್ತೆಯ ಚಿಕ್ಕಹಳ್ಳಿ ಎಂಬ ಚಿಕ್ಕ ಊರಿನ ಪ್ರಶಾಂತ ವಾತಾವರಣದಲ್ಲಿರುವ ಸಂಸ್ಥೆಯು ಮಾನಸಿಕವಾಗಿ ಅಸ್ವಸ್ಥಗೊಂಡು ಬೀದಿಗೆ ಬಿದ್ದು 'ಹುಚ್ಚ'ರೆಂದು ಸಮಾಜದಿಂದ ಅಸಡ್ಡೆಗೆ ಒಳಗಾದ ನಿರಾಶ್ರಿತ ಮಾನಸಿಕ ರೋಗಿಗಳನ್ನು ಕರೆತಂದು ಸೂಕ್ತ ಚಿಕಿತ್ಸೆ ನೀಡುವ ಜೊತೆಗೆ ಅವರನ್ನು ಸ್ವಾವಲಂಬಿಗಳನ್ನಾಗಿಸಿ ಮುಖ್ಯವಾಹಿನಿಗೆ ತರುವ ಸಲುವಾಗಿ ಕಳೆದ ಮೂರು ವರ್ಷಗಳಿಂದ ನಿರಂತರ ಶ್ರಮಿಸುತ್ತಿದೆ.
ಮಾನಸಿಕ ರೋಗಿಗಳಿಗೆ ಅಲೋಪತಿ, ಆಯುರ್ವೇದ, ಯೋಗ ಹಾಗೂ ಮನಶಾಸ್ತ್ರಗಳ ಮೂಲಕ ಚಿಕಿತ್ಸೆ ನೀಡಲೆಂದು ಪ್ರಾರಂಭಗೊಂಡ ಸಂಸ್ಥೆಯು ಕಾಲಕ್ರಮೇಣ ಕುಡಿತ,ಧೂಮಪಾನದಂತಹ ಮಾದಕ ದುಶ್ಚಟಗಳ ದಾಸರಾದವರಿಗೂ ಚಿಕಿತ್ಸೆ ನೀಡಿ ಅವರನ್ನು ಸರಿದಾರಿಗೆ ತರುವ ಕಾಯಕವನ್ನೂ ಮಾಡುತ್ತಿದೆ. 
ಸ್ವಸ್ಥ ಸಮಾಜದ ನಿರ್ಮಾಣವೇ ಧ್ಯೇಯವನ್ನಾಗಿಸಿಕೊಂಡು ದುಡಿಯುತ್ತಿರುವ ಸಮಾನ ಮನಸ್ಕ ಯುವಕರ ತಂಡಕ್ಕೆ ರೈಟ್ ಲೈವ್ಲಿ ಹುಡ್ ಪ್ರಶಸ್ತಿ ವಿಜೇತ ಡಾ.ಎಚ್.ಆರ್. ಸುದರ್ಶನ್, ಡಾ ರಾಜ್ ಗೋಪಾಲ್ ಅಂತಹ ಹಿರಿಯರು ಬೆನ್ನೆಲುಬಾಗಿ ನಿಂತು ಈ ಸಂಸ್ಥೆಯನ್ನು ಮಾದರಿ ಸಂಸ್ಥೆಯಾಗಿ ಬೆಳೆಸಿದ್ದಾರೆ.

ಮಾನಸಿಕ ರೋಗಿಗಳಿಗೆ ಪರಿಣಿತ ವೈದ್ಯರಿಂದ ಚಿಕಿತ್ಸೆ ಕೊಡಿಸುವುದರ ಜೊತೆಗೆ ಧ್ಯಾನ, ಯೋಗ ಮತ್ತು ಆಪ್ತ ಸಲಹೆಯ ಮುಖಾಂತರ ಅವರನ್ನು ಪರಿವರ್ತಿಸಲಾಗುತ್ತದೆ. ಹೀಗೆ ಗುಣಮುಖರಾದ ರೋಗಿಗಳನ್ನು ಸ್ವಾವಲಂಬಿಗಳನ್ನಾಗಿಸುವುದರ ಜೊತೆಗೆ ಪ್ಲಾಸ್ಟಿಕ್ ನಿರ್ಮೂಲನೆಯ ಪಣ ತೊಟ್ಟ  ಸಂಸ್ಥೆಯು ಇವರಿಂದ ಹತ್ತಿಯ ಕೈಚೀಲಗಳನ್ನು (ಕಾಟನ್ ಬ್ಯಾಗ್ಸ್) ತಯಾರಿಸುವ ಹಾಗೂ ಅವುಗಳನ್ನು ಮಾರುಕಟ್ಟೆಗೆ ತಲುಪಿಸುವ ಕೆಲಸದ ಜೊತೆಗೆ ಹೊಲಿಗೆ ಯಂತ್ರ ಹೊಂದಿದ ಗ್ರಾಮೀಣ ಮಹಿಳೆಯರಿಗೂ ಕಸೂತಿ ಕೆಲಸವನ್ನು ನೀಡುವ ನಿಟ್ಟಿನಲ್ಲಿ ಸಾಗಿದೆ.

ಸಂಸ್ಥೆಯ ಆಧಾರ ಸ್ತಂಭಗಳಾದ ಮನು.ಬಿ. (ಸ್ಥಾಪಕ ಹಾಗೂ ಧರ್ಮದರ್ಶಿ) ಮತ್ತು ವಿನೋದ್ (ಕಾರ್ಯದರ್ಶಿ)ಇವರುಗಳ ಪ್ರಕಾರ ಮಾನಸಿಕ ರೋಗಿಗಳಲ್ಲಿ ಹೆಚ್ಚಿನವರು ಚಿಕ್ಕ ವಯಸ್ಸಿನಲ್ಲಿ ಅವರ ಮನಸ್ಸಿನ ಮೇಲೆ ಉಂಟಾದ ಒತ್ತಡದ ಕಾರಣದಿಂದ ಚಿತ್ತವೈಕಲ್ಯದಿಂದ ನರಳುತ್ತಿದ್ದಾರೆ. ಆದ್ದರಿಂದ ಮಕ್ಕಳಿಗೆ ಚಿಕ್ಕಂದಿನಿಂದಲೇ ಒತ್ತಡ ನಿಭಾವಣೆಯ ಬಗ್ಗೆ ಸಲಹೆ,ಮಾರ್ಗದರ್ಶನ ನೀಡಿದಲ್ಲಿ ಸ್ವಲ್ಪ ಮಟ್ಟಿಗೆ ಈ ಸಮಸ್ಯೆಯನ್ನು ಹೋಗಲಾಡಿಸಬಹುದು. ಆ ಸಲುವಾಗಿ ಸಂಸ್ಥೆಯು ಕರ್ನಾಟಕದ ಯಾವುದೇ ಮೂಲೆಯ ಶಾಲೆಯವರು 'ಆಪ್ತ ಸಲಹೆ' (ಕೌನ್ಸಿಲಿಂಗ್) ನೀಡಲು ಆಹ್ವಾನಿಸಿದಲ್ಲಿ ಅಲ್ಲಿಗೆ ತೆರಳಿ ಮಕ್ಕಳಲ್ಲಿ ಒತ್ತಡ ನಿರ್ವಹಣೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ.

ಸಂಸ್ಥೆಯು ನೀಡುವ ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ ನಮ್ಮ ರಾಜ್ಯದ ಮಾನಸಿಕ ರೋಗಿಗಳಿಗಿಂತ  ಹೊರರಾಜ್ಯಗಳಿಂದ ವಲಸೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಚಿಂತಿಸಬೇಕಾಗಿದೆ. ಹೊರರಾಜ್ಯಗಳಿಂದ ಬರುವ ಸರಕು ಸಾಗಣೆ ಲಾರಿಗಳಲ್ಲಿ ಮಾನಸಿಕ ಅಸ್ವಸ್ಥರನ್ನು ಕರೆತಂದು ಕರ್ನಾಟಕದಲ್ಲಿ ಬಿಡಲಾಗುತ್ತಿದೆ. ಆದ್ದರಿಂದ ಗಡಿಭಾಗದ ಚೆಕ್ ಪೋಸ್ಟುಗಳಲ್ಲಿ ಸೂಕ್ತ ತಪಾಸಣೆ ನಡೆದಲ್ಲಿ ಇದನ್ನು ತಡೆಗಟ್ಟಬಹುದು. ಆಗ ನಮ್ಮ ರಾಜ್ಯದ ಮಾನಸಿಕ ರೋಗಿಗಳತ್ತ ಹೆಚ್ಚು ಗಮನ ನೀಡಬಹುದು.

ಸಂಸ್ಥೆಯ ಈ ಸಮಾಜ ಸೇವಾ ಕಾರ್ಯಕ್ಕೆ ಸಹಾಯಹಸ್ತ ನೀಡ ಬಯಸುವವರು ಹಾಗೂ ಸೇವೆಯ ಸದುಪಯೋಗಪಡಿಸಿಕೊಳ್ಳಬಯಸುವವರು ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ದೂ.ಸಂ. 8951136638
            8951184978
            8904423233
            9008847457

ಗುರುವಾರ, ಏಪ್ರಿಲ್ 28, 2011

ಹಾಯಿಕುಗಳು

ಮನದ ಮಾತು 
ಹೇಳಬಂದೆ....ನೀನಿಲ್ಲ
ಮಾತು ಬರಿದು 

--------------------------------------

ಕಡಲಾಳದ 
ಮುತ್ತಿಗಿಂತ ಅದ್ಭುತ 
ನೀ ಕೊಟ್ಟ 'ಮುತ್ತು'

--------------------------------------

ನಿನ್ನ ನಯನ 
ನನ್ನನ್ನೇ ನೋಡುತಿವೆ 
ಮೆಳ್ಳಗಣ್ಣೇನು!!??

-------------------------------------



ಶುಕ್ರವಾರ, ಏಪ್ರಿಲ್ 22, 2011

ಅವಳ ಮನದಾಳ-೦೩

ನೆನಪು 


ಎಲ್ಲಿರುವೆ ಓ ನಲ್ಲ 
ನೀ ಹೊರಿಸಿ ಹೋದ ನೆನಪುಗಳಮೂಟೆ 
ನಾ ಹೊರಲಾರದೇ ಹೊತ್ತಿರುವೆ 


ನನ್ನೊಡನೆ ನೀ ನಡೆದ ಹಾದಿ 
ಕೈ ಹಿಡಿದು ಬರಸೆಳೆದು ಮುತ್ತಿಟ್ಟ 
ಕ್ಷಣ ಕಣ್ಣ ಮುಂದೆ ಹಾಗೇ ಇದೆ 


ಕೊಟ್ಟಮಾತನು ತಪ್ಪಿ 
ಕಾಣೆಯಾಗಿ ಹೊರಟುಹೋದೆ 
ನಾ ಹೇಗೆ ಬದುಕಲಿ ನೀನೇ ಇಲ್ಲದೇ!!??


ಆ ನಿನ್ನ ಮೀಸೆಯಂಚಿನ ಮಂದಹಾಸ
ಮರೆಯುವುದಾದರೂ ಹೇಗೆ?
ತಿಳಿಯಲಾರದೆ ನಾನು ಚಡಪಡಿಸುತಿರುವೆ 


ನಿನ್ನ ಮರೆಯುವ ಬಗೆಯ ನೀನೇ ತಿಳಿಸು ಇನಿಯ 
ಅರಿಯದಾಗಿಹೆ ನಾನು ಮರೆವ ಬಗೆಯನ್ನು 
ಹೊರೆ ಇಳಿಸಿ ಹೊರಹೋಗು ಹೃದಯದಿಂದ 









ಗುರುವಾರ, ಏಪ್ರಿಲ್ 14, 2011

ಅವಳ ಮನದಾಳ-೦೨

ದ್ವಂದ್ವ

ಹುಡುಕುತ್ತಾ ಬಂದ ಸೋಲುಗಳು ನನ್ನ
ಜೀವಂತ ಶವವಾಗಿಸಿದವು 
ನಾ ಬದುಕಿದ್ದೇನೆ ಅಷ್ಟೇ...
ನನ್ನೊಳಗೆ ನಾನಿಲ್ಲ...


ನನ್ನೀ ಬಾಳಲ್ಲಿ ನಲ್ಲ ನೀ ಬಂದೆ 
ಬತ್ತಿಹೋದ ಹೃದಯದಲಿ ಒಲವನ್ನು ತಂದೆ
ಉಸಿರಾಯ್ತು ಪ್ರೀತಿ
ಈಗ ಅದೇ ಪ್ರೀತಿ ಉಸಿರು ಕಟ್ಟಿಸಿದೆ 


ಮಿದುವಾದ ತನು-ಮನ, ವಂಚಿಸುವ ಜನ
ಹಿತನುಡಿಯನಾಡಿ ಓಡಿಹೋದ ಗೆಳೆಯ
ಮಾಗಿದ ಮನದಲ್ಲಿ ಮೊಗ್ಗಾದ ಹರೆಯ 
ಇಂದೇಕೋ ಮನಸು ಭಿನ್ನ-ಖಿನ್ನ

ಮಣ್ಣಾಗಿ ಮಲಗುವುದು ಬಾಕಿಯುಳಿದಿರುವಾಗ
ಮತ್ತೆ ಬದುಕುವ ಕನಸ ಕಟ್ಟಿಕೊಟ್ಟ ಇನಿಯ 
ನೀ ಮರಳಿ ಬರುವೆಯಾ!!!??
ಪ್ರಶ್ನೆ ಹಾಗೆ ಉಳಿದಿದೆ, ಒಳಗೇನೋ ದ್ವಂದ್ವ 



ಮಂಗಳವಾರ, ಏಪ್ರಿಲ್ 12, 2011

ಅವಳ ಮನದಾಳ -೦೧

 ಅರ್ಪಣೆ 

ಹೃದಯಾಂತರಾಳದಲಿ ಉದಯಿಸುವುದೇ ಪ್ರೀತಿ 
ಸ್ನೇಹದ ಸಾಗರದಲಿ ಯಾನ ಆರಂಭಿಸಿ 
ಚಿಮ್ಮುತಿರುವ ತೆರೆಗಳಾ ರೀತಿ 
ಸುನಾಮಿ ಅಪ್ಪಳಿಸೀತೆ ಎಂದೊಳಗೊಳಗೆ ಭೀತಿ 
ನನ್ನ ಪ್ರೀತಿಯ ಲೇಪನ ನಿನಗಿದೋ 
ಅರ್ಪಣೆ- ಇತಿ 





ಭಾನುವಾರ, ಏಪ್ರಿಲ್ 10, 2011

ಕ್ರಿ"ಕೆಟ್ಟಾ"ಟ

               ಇನ್ನೇನು ವರ್ಲ್ಡ್ ಕಪ್ ಕ್ರಿಕೆಟ್ ಬಿಸಿ ಆರಿತು, ಕ್ರಿಕೆಟ್ ಕುರಿತಾದ ಚರ್ಚೆಗೆ ಒಂದಿಷ್ಟು ವಿರಾಮ ದೊರಕಬಹುದು ಅಂದುಕೊಳ್ಳುವಷ್ಟರಲ್ಲಿ ಐಪಿಎಲ್ ಟಿ-ಟ್ವೆಂಟಿ ಶುರುವಾಯ್ತು. ಆದರೆ ವರ್ಲ್ಡ್ ಕಪ್ ಕ್ರಿಕೆಟ್ ಹಾಗು ಐಪಿಎಲ್ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ವರ್ಲ್ಡ್ ಕಪ್ ಕ್ರಿಕೆಟ್  ಭಾಗವಹಿಸುವ ಪ್ರತಿಯೊಂದು ರಾಷ್ಟ್ರದ ಪ್ರತಿಷ್ಠೆಯ, ಅಭಿಮಾನದ ಸಂಕೇತದಂತೆ ಕಂಡರೆ ಐಪಿಎಲ್ ಒಬ್ಬ ವ್ಯಕ್ತಿಯ, ತಂಡದ ಮಾಲೀಕನ ಪ್ರತಿಷ್ಠೆಯ,ಗರ್ವದ ಸಂಕೇತವಾಗಿ ತೋರುತ್ತಿದೆ. 

             ಐಪಿಎಲ್ ಕುರಿತು ಹೀಗೆ ಹೇಳಲು ಕಾರಣವಿದೆ. ಐಪಿಎಲ್ ಇಂದು ಒಂದು ಕ್ರೀಡೆಯಾಗಿ ಕಾಣುವ ಬದಲು ವ್ಯಾಪಾರವಾಗಿ ಬದಲಾಗಿದೆ. ಆಟಗಾರರು, ಕೋಚುಗಳು ಅಷ್ಟೇ ಅಲ್ಲದೇ ವಸ್ತ್ರವಿನ್ಯಾಸಕಾರರನ್ನೂ ಬಿಕರಿಗಿಡುವ, ಖರೀದಿ ಮಾಡುವ ಖಯಾಲಿ ಇರುವ ಸಿರಿವಂತರ ಗುಂಪೇ ಇಲ್ಲಿದೆ. Its not a game, Its a Gamble- ಹೌದು, ಈ ಮಾತನ್ನು ಹೇಳಲು ದುಃಖವಾಗುತ್ತದೆ. ಹಿಂದೆ ಈ ಸಿರಿವಂತ ಜನ ಕುದುರೆ ರೇಸುಗಳಲ್ಲಿ, ಕ್ಯಾಸಿನೋಗಳಲ್ಲಿ ತಮ್ಮ ಹಣ ತೊಡಗಿಸಿ ಮೋಜು ಮಾಡುತ್ತಿದ್ದರು, ಈಗ ಐಪಿಎಲ್ ನಲ್ಲಿ ಹಣ ತೊಡಗಿಸಿ ತಮ್ಮ ಚಟ ತೀರಿಸಿಕೊಳ್ಳುತ್ತಿದ್ದಾರೆ.

                      ವಿಜಯ್ ಮಲ್ಯ ಇರಬಹುದು, ಶಾರುಖ್ ಖಾನ್ ಇರಬಹುದು, ಇಲ್ಲವೇ ಅಂಬಾನಿ ಕುಟುಂಬದವರಿರಬಹುದು ಇವರಿಗೆ ಕ್ರಿಕೆಟ್ ಬಗ್ಗೆ ಇರುವ ಅಭಿಮಾನಕ್ಕಿಂತ ಹೆಚ್ಚಾಗಿ ತಮ್ಮ ಬಳಿ ಇರುವ ಕಪ್ಪುಹಣವನ್ನು ಬೆಳ್ಳಗೆ ಮಾಡಿಕೊಳ್ಳುವ ಸುಲಭೋಪಾಯದಂತೆ ಐಪಿಎಲ್ ಗೋಚರಿಸುತ್ತಿದೆ. ಇವರಲ್ಲಿ ತಮ್ಮ ತಂಡ ಪ್ರತಿನಿಧಿಸುವ ಪ್ರಾಂತ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂಬುದಕ್ಕೆ ನಮ್ಮ (!!??) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಾಜಾ ಉದಾಹರಣೆಯಂತಿದೆ. ಒಬ್ಬ ಅಭಿಮನ್ಯು ಮಿಥುನ್ ಹೊರತುಪಡಿಸಿದರೆ ದುರ್ಬೀನು ಹಾಕಿ ಹುಡುಕಿದರೂ ಮತ್ತೊಬ್ಬ ಕರ್ನಾಟಕದ ಆಟಗಾರನೂ ತಂಡದಲ್ಲಿ ಇಲ್ಲ ಎಂದರೆ ಅದು ಕನ್ನಡಿಗರ ದುರದೃಷ್ಟವೋ ಅಥವಾ ವಿಜಯ್ ಮಲ್ಯ ಎಂಬ ಮಹಾನ್ ಕನ್ನಡಿಗನ ಕನ್ನಡ ಪ್ರೇಮವೋ ತಿಳಿಯದಾಗಿದೆ. 
 
                      ನನ್ನ ವಾದದಲ್ಲಿ ಕೆಲವರಿಗೆ ಹುಳುಕು ಕಾಣಿಸಬಹುದು. ಕೋಟ್ಯಾಂತರ ರೂಪಾಯಿಗಳನ್ನು ಬಂಡವಾಳವಾಗಿ ಹೂಡಿ ತಮ್ಮೆಲ್ಲ busy schedule ಗಳ ನಡುವೆಯೂ ಕ್ರೀಡಾಂಗಣದಲ್ಲಿ ಕುಳಿತು ತಾವು ಖರೀದಿಸಿದ ಮಾಲು (ಆಟಗಾರರು)ಗಳನ್ನು ಹುರಿದುಂಬಿಸುತ್ತಾ enjoy ಮಾಡುವ ಈ ಹಣದ ಥೈಲಿಗಳು ತಮಗಿಷ್ಟ ಬಂದ ಆಟಗಾರರನ್ನು ಖರೀದಿ ಮಾಡಿದರೆ ಇವನಿಗೇನು ಕಷ್ಟ ಎಂದು ಕೆಲವರು ಹಿಡಿಶಾಪ ಹಾಕಲೂಬಹುದು. ಆದರೆ ನನ್ನ ಸಲಹೆ ಇಷ್ಟೇ....ಐಪಿಎಲ್ ಆಡಳಿತ ಮಂಡಳಿಯವರು ದಯಮಾಡಿ ಈ ತಂಡಗಳಿಗೆ ಪ್ರಾಂತೀಯ ಹೆಸರುಗಳನ್ನು ಇಡುವ ಬದಲು ಕ್ಲಬ್ಬುಗಳನ್ನಾಗಿ ಪರಿವರ್ತಿಸಿದರೆ ನಾನೂ ಸೇರಿದಂತೆ ಯಾರೊಬ್ಬರೂ ಆಕ್ಷೇಪಣೆ ವ್ಯಕ್ತಪಡಿಸುವುದಿಲ್ಲ. ನಿಮ್ಮ ವ್ಯಾಪಾರ- (ಅ) ವ್ಯವಹಾರಗಳೂ ಸಾಂಗೋಪಾಂಗವಾಗಿ ಸಾಗುತ್ತವೆ.

                        ಕ್ರಿಕೆಟ್ ಇಂದು ಕೇವಲ ಕ್ರೀಡೆಯಾಗಿ ಉಳಿದಿಲ್ಲ. ಅದರಲ್ಲೂ ಭಾರತದಲ್ಲಿ ರಾಷ್ಟ್ರೀಯ ಕ್ರೀಡೆಯಾದ ಹಾಕಿ ಸೇರಿದಂತೆ ಬೇರಾವುದೇ ಆಟಕ್ಕೆ ಸಿಗದ ಮನ್ನಣೆ, ಪುರಸ್ಕಾರಗಳು ಕ್ರಿಕೆಟ್ ಆಟಕ್ಕೆ, ಆಟಗಾರರಿಗೆ ಲಭ್ಯ. ಯಡಿಯೂರಪ್ಪನಂಥಹ   ಮಠ-ಮಂದಿರೋದ್ಧಾರಕ ಮುಖ್ಯಮಂತ್ರಿಯೂ ಕ್ರಿಕೆಟಿಗರಿಗೆ ಸೈಟು-ಹಣ ಹಂಚಲು ನಿಂತುಬಿಡುತ್ತಾರೆ. ಪ್ರವಾಹ ಪೀಡಿತ,ಬರ ಪೀಡಿತ ನಿರಾಶ್ರಿತ ಬಡವನಿಗೆ ಸೂರು ನೀಡದ ಈ ಶೂರ ಮಹಲುಗಳಲ್ಲಿ ವಾಸಿಸುವ ಕ್ರಿಕೆಟಿಗರಿಗೆ ತುಂಡುಭೂಮಿ ಹಂಚಲು ತಯಾರಾಗುತ್ತಾನೆಂದರೆ ಕ್ರಿಕೆಟ್ ಎಂಥಹ ಸಮೂಹಸನ್ನಿ ಆಟ ಎಂದನ್ನಿಸುತ್ತದೆ. 

                            ನಮ್ಮ ನಾಡಿನಿಂದ ಇಷ್ಟೆಲ್ಲಾ ಸವಲತ್ತುಗಳು, ಪ್ರೀತಿ, ಅಭಿಮಾನ ಎಲ್ಲವನ್ನೂ ಅನುಭವಿಸುವ ನಮ್ಮ ಕ್ರಿಕೆಟಿಗರು ಮೊನ್ನೆ ನಮ್ಮ ನೆಚ್ಚಿನ ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುಧ್ಧ ಸಮರ ಸಾರಿದಾಗ ಅತ್ತ ಕಡೆ ತಲೆಹಾಕಲಿಲ್ಲ. ಏಕೆಂದರೆ ಅವರು ಐಪಿಎಲ್ ನಲ್ಲಿ ಬ್ಯುಸಿ ಆಗಿದ್ದಾರೆ.  

                              ಇಷ್ಟೆಲ್ಲಾ ಆದರೂ ನಾವು ಐಪಿಎಲ್ ನೋಡುವುದು ಮಾತ್ರ ಬಿಡುವುದಿಲ್ಲ. ಲಲಿತ್ ಮೋದಿ ಎಂಬ ಮಹಾನ್ ಭ್ರಷ್ಟ ಎಲ್ಲಿಂದಲೋ ಕದ್ದು (ಇಂಗ್ಲಿಷ್ ಕೌಂಟಿ) ತಂದು ನೆಟ್ಟ ಕ್ರಿ"ಕೆಟ್ಟಾ"ಟ ಜನರ ಮೋಜಿಗೆ, ಸಿರಿವಂತರ ಜೂಜಿಗೆ, ಕಪ್ಪು-ಬಿಳುಪಿನ ಕಣ್ಣಾಮುಚ್ಚಾಲೆಗೆ ಹೀಗೆ ಹತ್ತು-ಹಲವು ಬಗೆಯಲ್ಲಿ ಫಲ ಕೊಡುತ್ತಿದೆ. ಇಲ್ಲಿ ದೋಚಿದ ಮೋದಿ ಅಲ್ಲಿ ಮತ್ತೊಂದು ದೇಶದಲ್ಲಿ ಐಪಿಎಲ್ ನಂತೆಯೇ ಟೂರ್ನಿಯೊಂದನ್ನು ಆಯೋಜಿಸಿ ಹಣ ದೋಚುವ ಯೋಚನೆಯಲ್ಲಿ ಮಗ್ನನಾಗಿದ್ದಾನೆ. ಅದರಲ್ಲಿ ಸಫಲನೂ ಆಗುತ್ತಾನೆ. 'ಜನ ಮರುಳೋ ಜಾತ್ರೆ ಮರುಳೋ' ಎಂಬ ಗಾದೆ ಮಾತಿಗೆ ಹೊಸ ನಿದರ್ಶನ ನೀಡುತ್ತಾನೆ.

                                   ಅಯ್ಯೋ ಬರೀತಾ ಬರೀತಾ ಟೈಮು ಹೋದದ್ದೇ ತಿಳೀಲಿಲ್ಲ , ಬರ್ತೀನಿ ಟೈಮಾಯ್ತು ಟಿವಿಯಲ್ಲಿ ಐಪಿಎಲ್ ಮ್ಯಾಚಿದೆ. ಇವತ್ತು ತೆಂಡೂಲ್ಕರ್ ಸೆಹ್ವಾಗ್ ಗೆ ಪಾಠ ಕಲಿಸ್ತಾನೆ, ಯುವರಾಜ್ ಗೆದ್ದರೆ ಪ್ರೀತಿ ಜಿಂಟಾ ಮುತ್ತು ಕೊಡೋಲ್ಲ ಶಾಪ ಹಾಕ್ತಾಳೆ ಯಾಕಂದ್ರೆ ಅವನು ಈಗ ಬೇರೆ ಟೀಮು- ಇದು ಐಪಿಎಲ್ಲಿನ ಲೇಟೆಸ್ಟ್ ಥೀಮು. 
                                     
  

ಸೋಮವಾರ, ಮಾರ್ಚ್ 14, 2011

ಕುರುಡು


ಕಣ್ಣಿಲ್ಲದೇ ಕುರುಡನಾದ ಧೃತರಾಷ್ಟ್ರ
ಅವನದೇ ಭಾಗ್ಯ ನೋಡುವ ಭಯವಿಲ್ಲ
ತನ್ನೆದುರ "ಧೂರ್ತ ರಾಷ್ಟ್ರ"ವ


ಕಣ್ಣಿದ್ದೂ ಕುರುಡರು ನಾವು
ಕಂಡರೂ ಕಾಣದಂತೆ ಗಮ್ಮನೆ ಕುಳಿತಿಹೆವು ಸಹಿಸಿಕೊಳ್ಳುತ್ತಾ ಎಲ್ಲ ನೋವು


ಹೆಸರಿಗೆ ಮಾತ್ರ ಪ್ರಜಾಪ್ರಭುತ್ವ
ಪ್ರಭುಗಳು ಹೇಳಿದ್ದೆ ಇಲ್ಲಿ ತತ್ವಸ್ವಾಮಿ ಇದು ಕಲಿಯುಗ - ಕಲಿಯುವುದು ಯಾವಾಗ!!??

ಬುಧವಾರ, ಮಾರ್ಚ್ 9, 2011

ವಿಶ್ವ ಕನ್ನಡ ಸಮ್ಮೇಳನ- ಕನ್ನಡಕ್ಕೆ ಅವಹೇಳನ

ನೋಡಲು ಮರೆಯದಿರಿ....ಮಾರ್ಚ್ ೧೧ ರಿಂದ ಅಮೋಘ ಪ್ರಾರಂಭ.......ವಿಶ್ವ ಕನ್ನಡ ಸಮ್ಮೇಳನ.......ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ಸೈಟನ್ನು ಸಂಪರ್ಕಿಸಿ......ಹೆದರಬೇಕಾಗಿಲ್ಲ....ಎಲ್ಲಾ ಮಾಹಿತಿಗಳೂ ಆಂಗ್ಲ ಭಾಷೆಯಲ್ಲಿ ಲಭ್ಯ...ಜೈ ಕರ್ನಾಟಕ....ಜೈ ಭುವನೇಶ್ವರಿ.......ನಮ್ಮ ಮಾನ್ಯ ಮುಖ್ಯಮಂತ್ರಿಗಳು ಈ ಕುರಿತು ಗಮನ ಹರಿಸಿದರೆ ತಾಯಿ ಭುವನೇಶ್ವರಿ ಧನ್ಯಳಾಗುತ್ತಾಳೆ.

ಶನಿವಾರ, ಫೆಬ್ರವರಿ 26, 2011

ನನ್ನ ಹೆಡ್ಡಿಂಗು


ಇಂದಿನ "ಕನ್ನಡಪ್ರಭ" ಪತ್ರಿಕೆಯ ಎರಡನೇ ಪುಟದಲ್ಲಿ ರೈಲ್ವೆ ಬಜೆಟ್ ಕುರಿತಾಗಿ "ಓದುಗರ ಶೀರ್ಷಿಕೆ" ವಿಭಾಗದಲ್ಲಿ ನಾನು ಕೊಟ್ಟ ಹೆಡ್ ಲೈನ್. ಧನ್ಯವಾದ ಕನ್ನಡಪ್ರಭ. ವಿಶ್ವೇಶ್ವರ ಭಟ್ಟರು "ಕನ್ನಡ ಪ್ರಭ" ಸಾರಥ್ಯ ವಹಿಸಿದ ನಂತರ ಹೀಗೊಂದು ಹೊಸ ಪ್ರಯೋಗ ಪ್ರಾರಂಭಿಸಿದ್ದಾರೆ. ಸಾಮಾನ್ಯವಾಗಿ ನಾವು ಪತ್ರಿಕೆಗಳನ್ನು ಓದುವಾಗ ಅರೆ ಈ ಲೇಖನಕ್ಕೆ ಶೀರ್ಷಿಕೆ ಹೀಗಿದ್ದರೆ ಚೆನ್ನಿತ್ತು ಹಾಗಿದ್ದರೆ ಚೆನ್ನಿತ್ತು ಎಂದು ಅನ್ನಿಸುವುದು ಸಹಜ. ಹೀಗೆ ಓದುಗರ ಮನದಲ್ಲಿ ಮೂಡುವ ಶೀರ್ಷಿಕೆಗಳನ್ನು ಕ್ರೋಡೀಕರಿಸಿ ಅವುಗಳಲ್ಲಿ ಉತ್ತಮ ಶೀರ್ಷಿಕೆ ಆರಿಸಿ ಪತ್ರಿಕೆಯಲ್ಲಿ ಪ್ರಕಟಿಸುವ ಭಟ್ಟರ ಈ ಪ್ರಯತ್ನ ಪ್ರಶಂಸಾರ್ಹ.

ಗುರುವಾರ, ಫೆಬ್ರವರಿ 17, 2011

ಮಜ್ಜಿಗೆಯ ಮಹಾತ್ಮೆ


ಮಜ್ಜಿಗೆಯ ಮಹಾತ್ಮೆ ಬಲು ಚೆಂದ ಗೆಳೆಯ
ಚುರುಗುಡುವ ಬಿಸಿಲಲ್ಲಿ ಬಸವಳಿದು ಬಂದವಗೆ
ತಂಪಿನ ಇಂಪೆರೆಯುವ ಪರಮ ಪೇಯವಿದು
ದುಬಾರಿಯ ಕೋಲಾ-ಪೆಪ್ಸಿಗಳ ಎದುರು
ಹೋರಾಡುವ ಶಕ್ತಿಶಾಲಿ

ಇತಿಹಾಸದುದ್ದಕ್ಕೂ ಓದುವೆವು ನಾವು
ಬಿಳಿಯರ ದಬ್ಬಾಳಿಕೆಯ ವಿರುದ್ಧ
ಕರಿಯರ ಕ್ರಾಂತಿ
ಇಲ್ಲಿ ಎಲ್ಲವೂ ಅದಲು-ಬದಲು
ಕರಿಯರದೇ COLA-ಹಲವಿಲ್ಲಿ
ಗೆಲ್ಲಲಿ ಬೆಳ್ಳಗಿನ ತಂಪು ಮಜ್ಜಿಗೆ

ಸೋಮವಾರ, ಫೆಬ್ರವರಿ 14, 2011

ಪ್ರೇಮಾ ಗೀಮಾ ಜಾನೆದೋ


ಸಿಕ್ಕರೆ ಸ್ವರ್ಗ
ತಿಳಿದಿಲ್ಲ ನನಗೆ ಈ ದಿನದ ವಿಶೇಷ
ಪ್ರೇಮಿಗಳ ದಿನವಂತೆ ಇಂದು
ನನಗೆ ಲವ್ವಿನ ಬಗ್ಗೆ ಲವಲೇಶವೂ ಗೊತ್ತಿಲ್ಲ
ಆದರೂ ಹಾಕುತ್ತೇನೆ ಹಲವು ವೇಷ
ಇಂದಲ್ಲ ನಾಳೆ ನನ್ನವಳಾಗಬಹುದು
...ಅವಳು-ಬಿಲ್ ಗೇಟ್ಸ್ ನ ಮಗಳು

ಈ ದಿನ ಸುದಿನ
ಇಂದು " ಪ್ರೇಮಿಗಳ ದಿನ"
ಪ್ರಣಯ ಪಕ್ಷಿಗಳ ಪಾಲಿಗೆ
ಮರೆಯಲಾಗದ ದಿನ
ಹೃದಯಗಳ ಮಧುರ ಮಿಲನ
ಮುಂದುವರಿಯಲಿ ಪ್ರತಿದಿನ



ಹುಡುಕಾಟ
ಪ್ರೀತಿ ಎಂಬುದೊಂದು ಬೆರಗು
ಅನುಭವಿಸಿದಷ್ಟೂ ಹೆಚ್ಚುವುದಿದರ ಬೆಡಗು
ಹುಡುಗಾಟಕ್ಕೆ ಆರಂಭವಾಗಿ
ಹುಡುಕಾಟಕ್ಕೆ ತೊಡಗಿಸುವ ಈ ಪ್ರೀತಿ
ಬಿಡಿಸಲಾರದ ಒಗಟಿನ ರೀತಿ